Site icon Vistara News

Prerane : ನಾಯಕತ್ವಕ್ಕಾಗಿ ಅಧ್ಯಾತ್ಮಿಕ ಪ್ರಜ್ಞೆ

bhagavad gita prerane

bhagavad gita prerane

ಜಿ ನಾಗರಾಜ
ಅಧ್ಯಾತ್ಮವೆಂದೊಡನೆಯೇ ಪ್ರಾಪಂಚಿಕ ಜೀವನದಿಂದ ದೂರವಿರುವಿಕೆ, ವಿರಕ್ತಿ, ತ್ಯಾಗಗಳೇ ಮನಸ್ಸಿಗೆ ಬರುತ್ತವೆ. ಅಧ್ಯಾತ್ಮಿಕ ಪ್ರಜ್ಞೆ ವೈರಾಗ್ಯವನ್ನುಂಟು ಮಾಡುವುದು, ಕೆಲವರನ್ನು ಪ್ರಾಪಂಚಿಕ ಜೀವನದಿಂದ ವಿರಕ್ತ ಜೀವನಕ್ಕೆ ಆಕರ್ಷಿಸುವುದು ಸತ್ಯವಾದರೂ ಸಹ ಎಲ್ಲರಿಗೂ ಹಾಗೆಯೇ ಆಗುತ್ತದೆಂದೇನಿಲ್ಲ. ಪ್ರಾಪಂಚಿಕ ವ್ಯವಹಾರಗಳ ನಡುವೆ ಇದ್ದುಕೊಂಡೂ ಸಹ ಅಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬಹುದು. ಇಂತಹ ಸನ್ನಿವೇಶಗಳಲ್ಲಿ ಅಧ್ಯಾತ್ಮ ಪ್ರಜ್ಞೆ ಪ್ರಾಪಂಚಿಕ ಜೀವನಕ್ಕೂ ಪೋಷಕವಾಗಿರುತ್ತದೆ.

ಇದಕ್ಕಿರುವ ಸರ್ವೋತ್ಕೃಷ್ಟ ಉದಾಹರಣೆಯೆಂದರೆ ಕೃಷ್ಣಾರ್ಜುನರ ಸಂವಾದ (ಭಗವದ್ಗೀತೆ). ಇಲ್ಲಿ ಶ್ರೀಕೃಷ್ಣ ಪರಮಾತ್ಮನ ಗೀತೋಪದೇಶದಿಂದ ಪ್ರಬೋಧಗೊಂಡ ಅರ್ಜುನನ ಅಧ್ಯಾತ್ಮ ಪ್ರಜ್ಞೆ, ಆತ ಏಕ ಮನಸ್ಸಿನಿಂದ ಯುದ್ಧಮಾಡುವಂತೆ ಮಾಡಿತು. ಶ್ರೀ ಡಿ.ವಿ.ಗುಂಡಪ್ಪನವರ ಭಗವದ್ಗೀತಾಧಾರಿತ ಗ್ರಂಥವಾದ ಜೀವನಧರ್ಮಯೋಗವು ಭಗವದ್ಗೀತೆಯು ಪ್ರಾಪಂಚಿಕ ಜೀವನವನ್ನು ಚೆನ್ನಾಗಿಟ್ಟುಕೊಳ್ಳುವುದಕ್ಕೆ ಪೋಷಕವಾಗಿದೆಯೆಂಬುದನ್ನು ಸಾರುತ್ತದೆ.

ಇನ್ನು ಕಾರ್ಪೊರೇಟ್ ವಲಯದಲ್ಲಿ ಈ ವಿಷಯ ಸ್ಪಿರಿಚುಯಲ್ ಇಂಟಲಿಜೆನ್ಸ್ (Spritiual Intelligence) ಎನ್ನುವ ಶೀರ್ಷಿಕೆಯಲ್ಲಿ ಚಾಲ್ತಿಗೆ ಬರುತ್ತಿದೆ. ನಾಯಕತ್ವದ ಸ್ಥಾನಗಳನ್ನು ನಿರ್ವಹಿಸುವುದಕ್ಕೆ ಈ ಸ್ಪಿರಿಚುಯಲ್ ಇಂಟಲಿಜೆನ್ಸ್ ಅಗತ್ಯ ಎಂದು ಪ್ರಭಾವೀ ಮ್ಯಾನೇಜ್ಮೆಂಟ್ ವಿದ್ಯಾಲಯಗಳು ಗುರುತಿಸಿ ಸಾರಲಿಕ್ಕೆ ಆರಂಭಿಸಿವೆ. ಏನಿದು ಸ್ಪಿರಿಚುಯಲ್ ಇಂಟಲಿಜೆನ್ಸ್ ಅಥವಾ ಅಧ್ಯಾತ್ಮಿಕ ಪ್ರಜ್ಞೆ? ನಾಯಕತ್ವ ನಿರ್ವಹಣೆಗೆ ಏಕೆ ಬೇಕು ಈ ಸ್ಪಿರಿಚುಯಲ್ ಇಂಟಲಿಜೆನ್ಸ್? ಯಾರು ಹೀಗೆ ಹೇಳುತ್ತಿದ್ದಾರೆ ಎನ್ನುವುದನ್ನು ವಿವರವಾಗಿ ಪರಾಮರ್ಶೆ ಮಾಡೋಣ.

ಅಧ್ಯಾತ್ಮ ಪ್ರಜ್ಞೆಯ ಒಂದು ಮುಖ್ಯ ಭಾಗವೆಂದರೆ, ನಾನು ಯಾರು? ನನ್ನ ಗುರಿ ಏನು? ನನ್ನತನವರಿತು, ನನ್ನಗುರಿಯನ್ನರಿತು ಯಾವ ಯಾವ ಸನ್ನಿವೇಶಗಳಿಗೆ ನಾನು ಹೇಗೆ ಪ್ರತಿಕ್ರಿಯಿಸಬೇಕು? ಯಾವ ಸನ್ನಿವೇಶಗಳಲ್ಲಿ ನನ್ನ ಕರ್ತವ್ಯವೇನು ಎಂದು ನಿಶ್ಚಯ ಮಾಡಿ ಕಾರ್ಯರೂಪಕ್ಕೆ ತಂದು ಯಶಸ್ಸನ್ನು ಕಾಣುವ ಒಂದು ನಡೆಯನ್ನು ಇಂದು ಅಧ್ಯಾತ್ಮ ಪ್ರಜ್ಞೆ ಎಂದು ಗುರುತಿಸುತ್ತಿದ್ದಾರೆ. ಅದು ಇಂದಿನ ಪ್ರಾಪಂಚಿಕ ವ್ಯವಹಾರ ಕ್ಷೇತ್ರದಲ್ಲಿ ಹೇಗೆ ಅನ್ವಯವಾಗುತ್ತದೆಂದು ನೋಡೋಣ.

ಒಮ್ಮೆ ಕೋಕಕೋಲ ಸಂಸ್ಥೆಯು ಪೇಯಗಳ ಮಾರುಕಟ್ಟೆಯ ಅದ್ವಿತೀಯ ಸ್ವಾಮ್ಯವನ್ನು ಹೊಂದಿತ್ತು. ಪೆಪ್ಸಿ ಸಂಸ್ಥೆಯು ಮಾರುಕಟ್ಟೆಗೆ ಇಳಿದ ನಂತರ ಕೋಕಕೋಲಾದ ಗಣನೀಯ ಮಾರುಕಟ್ಟೆ ಪಾಲನ್ನು ತನ್ನದಾಗಿ ಮಾಡಿಕೊಂಡು ಬಿಟ್ಟಿತು. ಇದರಿಂದ ವ್ಯಗ್ರಗೊಂಡ ಕೋಕಕೋಲದ ನಾಯಕತ್ವ ತಂಡ ಈ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಆಲೋಚಿಸುತ್ತಿರುವಾಗ ಕೋಕಕೋಲಾದ ನಾಯಕರು (ಸಿಇಓ) ತಮ್ಮ ತಂಡದ ಸದಸ್ಯರಿಗೆ ಬಿರುಸಿನ ಚಿಂತನೆ ನಡೆಸಿ ನಿಮ್ಮ ಐಡಿಯಾಗಳನ್ನು ಪಟ್ಟಿ ಮಾಡಿ ಎಂದು ಹೇಳಿ ತಾವು ಹೊರನಡೆದು ಮತ್ತೆ ಮುಕ್ಕಾಲು ಗಂಟೆಯ ನಂತರ ಮತ್ತೆ ಸಭೆಗೆ ಬಂದರು. ಅಷ್ಟರಲ್ಲಿ ತಂಡದವರು ತಮ್ಮ ಕಾರ್ಯಾವಳಿಯನ್ನು ಪಟ್ಟಿ ಮಾಡಿದ್ದರು. ಆ ಪಟ್ಟಿಯಲ್ಲಿ ಪೆಪ್ಸಿ ಪಾಲಾಗಿದ್ದ ಮಾರುಕಟ್ಟೆ ಪಾಲನ್ನು ತಿರುಗೆ ತಮ್ಮದಾಗಿಸಿಕೊಳ್ಳುವುದು ಹೇಗೆನ್ನುವ ಬಗ್ಗೆ ನಾನಾ ತಂತ್ರಗಳಿದ್ದವು.

ಅದನ್ನು ನೋಡಿದ ಸಿಇಓ., ʻʻನೋಡಿ ಇಲ್ಲಿ ನೀವು ಪಟ್ಟಿ ಮಾಡಿರುವ ತಂತ್ರಗಳೆಲ್ಲದರ ಹಿಂದೆ ಮಾರುಕಟ್ಟೆಯ ಒಟ್ಟಳತೆ ನಿಗದಿತ ಆ ಪರಿಧಿಯೊಳಗೇ ನಾವು ಪೆಪ್ಸಿಯಿಂದ ನಮ್ಮ ಪಾಲನ್ನು ಪುನಃ ಪಡೆಯುವುದು ಹೇಗೆಂದು ಚಿಂತಿಸುತ್ತಿದ್ದೀರಿ. ಆದರೆ, ಮೂಲತಃ ನಮ್ಮ ಗುರಿಯೇನು, ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಗುರಿಯತ್ತ ಸಾಗುವುದು ಹೇಗೆಂದು ಯೋಚಿಸಬೇಕು. ಪಪ್ಸಿಯಿಂದಾಗಿ ಮಾರುಕಟ್ಟೆ ಪಾಲು ಕಡಿಮೆಯಾಗಿ ನಮ್ಮ ಆದಾಯ ಕಡಿಮೆಯಾಗಿದೆ. ಆದುದರಿಂದ ನಮ್ಮ ಆದಾಯವನ್ನು ಮತ್ತೆ ಹೆಚ್ಚಿಸಿಕೊಳ್ಳುವುದು ಹೇಗೆಂದು ಯೋಚಿಸಬೇಕೇ ಹೊರತು ಪೆಪ್ಸಿಯ ಪಾಲನ್ನೇ ಕಸಿದುಕೊಳ್ಳಬೇಕು ಅಂದುಕೊಂಡರೆ ಅದು ಬಹಳ ಸೀಮಿತ ಚಿಂತನೆಯಾಗುತ್ತದೆ. ಆದಾಯ ಹೆಚ್ಚಿಸಿಕೊಳ್ಳಬೇಕೆಂದರೆ, ಪೆಪ್ಸಿಯ ಪಾಲನ್ನು ಪುನಃ ಕಸಿಯವುದು ಒಂದು ಮಾರ್ಗವಷ್ಟೇ! ಆದರೆ ಅದು ಬಹಳ ದುರ್ಗಮವಾಗಿ ಕಾಣುತ್ತದೆ. ಅದರ ಬದಲು ಮಾರುಕಟ್ಟೆಯ ಗಾತ್ರವನ್ನೇ ಹೆಚ್ಚಿಸುವುದು ಹೇಗೆಂದು ನೋಡಿ. ಮಾರುಕಟ್ಟೆಯನ್ನೇ ವಿಸ್ತರಿಸಿದರೆ ನಮಗಿರುವ ಶೇಕಡವಾರು ಪಾಲಿನಲ್ಲೇ ನಮ್ಮ ಆದಾಯವೂ ಹೆಚ್ಚುತ್ತದೆ. ಆದಾಯ ಹೆಚ್ಚಿಸುವುದು ನಮ್ಮ ಗುರಿ ಅಷ್ಟೇ ಹೊರತು ಪೆಪ್ಸಿಯೊಂದಿಗೆ ಸೆಣೆಸುವುದಲ್ಲʼʼ ಎಂದರು.

ನಂತರ ಮತ್ತೊಮ್ಮೆ ಚಿಂತನಾ ಸಭೆ ನಡೆಸಿದ ತಂಡ, ಕೊಕಕೋಲ, ನೀರು, ಹಣ್ಣಿನ ರಸ, ಮುಂತಾದ ಅನೇಕ ಪೇಯಗಳನ್ನು ಮಾರುಕಟ್ಟೆಗೆ ತಂದು ಅದರಿಂದಾಗಿ ಮಾರುಕಟ್ಟೆಯು ವಿಸ್ತರಿಸಿ ಕೋಕಕೋಲದ ಆದಾಯವೂ ಹೆಚ್ಚಿತು.

ಇಲ್ಲಿ, ಪೆಪ್ಸಿ ತಂದೊಡ್ಡಿದ ಪರಿಸ್ಥಿತಿಯ ಸೆಳೆತಕ್ಕೆ ಒಳಗಾಗಿ ಪೆಪ್ಸಿಯೊಡನೆ ಸೆಣೆಸಾಟ ಎನ್ನುವ ಸುಳಿಗೆ ಸಿಲುಕದೇ ತಮ್ಮ ಮೂಲಗುರಿ ಏನೆನ್ನುವುದನ್ನು ಸ್ಪಷ್ಟವಾಗಿಟ್ಟುಕೊಂಡು ಅದಕ್ಕೆ ಬದ್ಧರಾಗಿ ಕಾರ್ಯಾಚರಣೆ ರೂಪಿಸಿ ಇಂದಿಗೂ ವರ್ಧಿಸುತ್ತಿರುವ ಒಂದು ವಾಣಿಜ್ಯ ಸಂಸ್ಥೆಯನ್ನಾಗಿ ಕೋಕಕೋಲ ಸಂಸ್ಥೆಯನ್ನು ಉಳಿಸಿಕೊಂಡರು. ಇಲ್ಲಿ ತಮ್ಮ ಮೂಲಗುರಿಯ ಬಗ್ಗೆ ಇರುವ ಸ್ಪಷ್ಟತೆ, ಅದರ ಬಗ್ಗೆ ಬದ್ದತೆ ಇತ್ಯಾದಿಯನ್ನು ಸ್ಪಿರಿಚುಯಲ್ ಇಂಟಲಿಜೆನ್ಸ್ ಎಂದು ಪರಿಗಣಿಸುತ್ತಾರೆ. ಕೋಕಕೋಲ ನಾಯಕರಿಗೆ ಭಗವದ್ಗೀತೆಯಿಂದ ಈ ಸ್ಪಿರಿಚುಯಲ್ ಇಂಟಲಿಜೆನ್ಸ್ ಬಂದಿತೋ ಇಲ್ಲವೋ ತಿಳಿಯದು. ಆದರೆ ಕೋಕಕೋಲ ನಾಯಕರು ಸ್ಪಿರಿಚುಯಲ್ ಇಂಟಲಿಜೆನ್ಸ್ ಅನ್ನು ಮೆರೆದಿರುವುದಂತೂ ಉಂಟು.

ಇನ್ನೊಂದು ಉದಾಹರಣೆಯೆಂದರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಅವರು ಅತ್ಯಂತ ಯಶಸ್ವೀ ನಾಯಕರಲ್ಲೊಬ್ಬರು. ಅವರು ಭಗವದ್ಗೀತೆಯ “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ” ಎನ್ನುವ ವಾಕ್ಯವನ್ನು ಅಕ್ಷರಶಃ ಪಾಲಿಸುತ್ತಿದ್ದರು. ಪ್ರತಿಯೊಂದು ಪಂದ್ಯದಲ್ಲಿಯೂ ಅವರ ಸಂಪೂರ್ಣ ಅಂಟು ಪ್ರಯತ್ನದೊಂದಿಗೆ ಇರುತ್ತಿತ್ತು. ಫಲಿತಾಂಶದ ಕಡೆಗೆ ಅಂಟಿಕೊಳ್ಳದೇ ಅತ್ಯುತ್ತಮ ಪ್ರಯತ್ನವನ್ನೇ ಪಡಬೇಕೆಂಬ ಅವರ ನೀತಿಯಿಂದಾಗಿ ಬಹಳ ಕ್ಲಿಷ್ಟಕರ ಪಂದ್ಯಗಳಲ್ಲಿಯೂ, ಸೋಲುವಂತಹ ಪಂದ್ಯಗಳಲ್ಲಿಯೂ ಅವರು ಒತ್ತಡಕ್ಕೊಳಗಾಗದೇ, ಸ್ಥಿಮಿತದಲ್ಲಿದ್ದು ಉತ್ತಮ ಪ್ರಯತ್ನವನ್ನು ಪಟ್ಟು ಪಂದ್ಯವನ್ನು ಗೆಲ್ಲುತ್ತಿದ್ದರು.

ಫಲಕ್ಕಿಂತ ಹೆಚ್ಚಿಗೆ ಪ್ರಯತ್ನಕ್ಕೆ ಆಂಟಿಕೊಳ್ಳುವುದೂ ಸಹ ಸ್ಪಿರಿಚುಯಲ್ ಇಂಟಲಿಜೆನ್ಸ್ ನ ಒಂದು ಅಂಶವೇ ಎನ್ನುವುದು ಇಲ್ಲಿ ಗಣನೀಯ.

ಈ ಸ್ಪಿರಿಚುಯಲ್ ಇಂಟಲಿಜೆನ್ಸ್ ಅನ್ನು ಹೇಗೆ ವರ್ಧಿಸಿಕೊಳ್ಳುವುದು? ಇದಕ್ಕೆ ನಾನಾ ಮಾರ್ಗಗಳಿದ್ದರೂ ಭಗವದ್ಗೀತೆಯ ಅನುಸಂಧಾನವು ಸ್ಪಿರಿಚುಯಲ್ ಇಂಟಲಿಜೆನ್ಸ್ ಅನ್ನು ಹೆಚ್ಚಿಸಿಕೊಳ್ಳುವುದಕ್ಕಿರುವ ಅತ್ಯುತ್ತಮ ಸಾಧನ. ಕೋಕಕೋಲ ಸಿಇಓ ಅವರೇ ಆಗಲಿ, ಧೋನಿಯೇ ಆಗಲಿ ಭಗವದ್ಗೀತೆ ಓದಿದ್ದರೋ ಇಲ್ಲವೋ ತಿಳಿಯದು. ಆದರೆ ಅಂತಹ ನಾಯಕತ್ವದ ಸ್ಥಾನದಲ್ಲಿರುವವರಿಗೆ ಪಾಠ ಮಾಡುವ ನಾಯಕತ್ವ ಕ್ಷೇತ್ರದ ಅತ್ಯಂತ ಪ್ರಭಾವೀ ಬರಹಗಾರರಾದ ಸ್ಟೀಫನ್ ಕವೆ ಅವರು ತಮ್ಮ ಪ್ರಭಾವೀ ಪುಸ್ತಕವಾದ “The seven habits of highly effective people” ಭಗವದ್ಗೀತೆಯಿಂದ ಪ್ರೇರಿತವಾಗಿದೆಯೆಂದು ಸ್ಪಷ್ಟವಾಗಿ ನುಡಿದಿದ್ದಾರೆ.

ಒಂದು ಕಾಲದಲ್ಲಿ “Fortune 500” ಪಟ್ಟಿಯ ಐನೂರು ಸಂಸ್ಥೆಗಳಲ್ಲಿ ಮುನ್ನೂರೈವತ್ತಕಿಂತ ಹೆಚ್ಚು ಸಂಸ್ಥೆಗಳು ಸ್ಟೀಫನ್ ಕವೆ ಅವರ ಪುಸ್ತಕವನ್ನು ತಮ್ಮ ನಾಯಕತ್ವ ತರಬೇತಿ ಪಠ್ಯದಲ್ಲಿ ಅಳವಡಿಸಿಕೊಂಡಿದ್ದರು. ಹೀಗೆ ಪರೋಕ್ಷವಾಗಿ ಭಗವದ್ಗೀತೆಯ ಪ್ರಭಾವವು ಕಾರ್ಪೊರೇಟ್ ಕ್ಷೇತ್ರದ ನಾಯಕರನ್ನು ಹೇಗೆ ಪ್ರಭಾವಗೊಳಿಸಿತ್ತು ಎಂದು ತಿಳಿಯುತ್ತದೆ.

ಹೀಗೆ ವಿಶ್ವಮಾನ್ಯವಾಗಿರುವ ಭಗವದ್ಗೀತೆ ಅನುಸಂಧಾನ ಮಾಡಿ ನಮ್ಮ ಅಧ್ಯಾತ್ಮಿಕ ಪ್ರಜ್ಞೆಯನ್ನು ಹೆಚ್ಚಿಸಿಕೊಂಡು, ಅದರಿಂದಾಗಿ ನಮ್ಮ ಅಧ್ಯಾತ್ಮ ಸಾಧನೆಗೂ ನೆರವು ಪಡೆದು ಪ್ರಾಪಂಚಿಕ ಜೀವನವನ್ನೂ ಚೆನ್ನಾಗಿಸಿಕೊಳ್ಳೋಣ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನು ಓದಿ : Prerane : ಐಕ್ಯತೆಯನ್ನು ಅರಸುವ ಹಂಬಲ

Exit mobile version