Site icon Vistara News

Prerane : ಜೀವನ ದರ್ಶನ ವೈವಿಧ್ಯ

prerane morning spiritual thoughts in kannada

ಜೀವನ ದರ್ಶನ

ಸೌಮ್ಯಾ ಪ್ರದೀಪ್
ಒಂದು ಸೊಂಪಾಗಿಬೆಳೆದಿರುವ ತೆಂಗಿನ ಮರಗಳ ತೋಟದ ಬಳಿ ಸಾಗುತ್ತಿರುವ ಬಾಯಾರಿದ ಒಬ್ಬ ದಾರಿಹೋಕನಿಗೆ ತೆಂಗಿನಮರವನ್ನು ನೋಡಿ ಇದರಲ್ಲಿ ಎಷ್ಟೊಂದು ಎಳನೀರಿದೆ! ಅದನ್ನು ಕುಡಿದು ಬಾಯಾರಿಕೆ ಹೋಗಲಾಡಿಸಿ ಕೊಳ್ಳಬಹುದೆಂದು ಅವನದೃಷ್ಟಿ ಎಳನೀರಿನ ಮೇಲಿರುತ್ತದೆ, ಕಸ ಗುಡಿಸುವವನಿಗೆ ಇದರಲ್ಲಿ ಎಷ್ಟೊಂದು ಗರಿಗಳಿವೆ ಅದರಿಂದ ಒಳ್ಳೆ ಪೊರಕೆಮಾಡಿಕೊಳ್ಳಬಹುದು, ಗುಡಿಸಲು ಅನುಕೂಲವಾಗುತ್ತದೆ! ಎಂದೆನಿಸುತ್ತದೆ, ಆಯುರ್ವೇದ ವೈದ್ಯನಿಗೆ ಮರದ ಹೊಂಬಾಳೆ ಮೇಲೆದೃಷ್ಟಿ ಹರಿದು ಅದನ್ನು ಔಷಧಿಗೆ ಬಳಸಬಹುದೆಂದೆನಿಸುತ್ತದೆ!

ಹೀಗೆ ಎಲ್ಲರೂ ತಮಗೆ ಬೇಕಾದ ಪ್ರಯೋಜನದ ದೃಷ್ಟಿಯಿಂದ ಮರವನ್ನುನೋಡುತ್ತಾರೆ. ಆದರೆ ವ್ಯವಸಾಯಗಾರನ ಲಕ್ಷ್ಯ ಮಾತ್ರ ತೆಂಗಿನಮರದ ಬೇರಿನೆಡೆಗೇ ಇರುತ್ತದೆ. ಬೇರಿಗೆ ಚೆನ್ನಾಗಿ ಆರೈಕೆಮಾಡಿದರೆ ಇಡೀ ವೃಕ್ಷವೇ ಚೆನ್ನಾಗಿರುತ್ತದೆoಬುದು ಅವನ ನೋಟ, ಒಂದೇ ವಿಷಯದ ಬಗ್ಗೆ ಅನೇಕರು ತಮ್ಮ ಪ್ರಕೃತಿಗನುಗುಣವಾಗಿ ನಾನಾ ರೀತಿಯ ನೋಟವನ್ನು ಹೊಂದುತ್ತಾರೆ ಎಂಬುದನ್ನು ಶ್ರೀರಂಗ ಮಹಾಗುರುಗಳು ಹೀಗೆ ಅನೇಕ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ.

ಅಂತೆಯೇ ಮಾನವ ಜೀವನದ ಬಗ್ಗೆಯೂ ಅನೇಕ ಸ್ತರದ ಜನರು ತಮ್ಮದೇ ಆದ ದರ್ಶನವನ್ನು ಇಟ್ಟುಕೊಂಡಿರುತ್ತಾರೆ, ದಿನನಿತ್ಯದ ಕೂಲಿಯನ್ನು ನಂಬಿ ಬದುಕುವವರು, ಇಂದಿನ ಹೊಟ್ಟೆಪಾಡಾದರೆ ಸಾಕು, ಸಾರ್ಥಕ ಜೀವನವೆಂದೂ, ಅದಕ್ಕಿಂತ ಸ್ವಲ್ಪಮೇಲ್ವರ್ಗದವರು ಸ್ವಲ್ಪ ಉಳಿತಾಯ, ಒಳ್ಳೆಯ ಬಟ್ಟೆ, ಮನೆ ಬಾಡಿಗೆಗೆ ವ್ಯವಸ್ಥೆಯಾದರೆ ಸಾರ್ಥಕವೆಂದೂ ಅದಕ್ಕಿಂತ ಇನ್ನೂಆರ್ಥಿಕವಾಗಿ ಸಧೃಢರಾಗಿರುವವರು ಸ್ವಂತ ಮನೆ, ಕಾರು, ಹೆಚ್ಚಿನ ಉಳಿತಾಯ, ವಿದೇಶಗಳಿಗೆ ಪ್ರವಾಸ ಇತ್ಯಾದಿಯಾಗಿ ಅವರವರ ಮಟ್ಟಕ್ಕೆ ತಕ್ಕಂತೆ ಸಾರ್ಥಕ ಜೀವನದ ಪರಿಕಲ್ಪನೆ ಇಟ್ಟುಕೊಂಡಿರುತ್ತಾರೆ.

ಆದರೆ ಅಂತರ್ಬಾಹ್ಯ ದೃಷ್ಟಿಯನ್ನು ಹೊಂದಿದ್ದ ಮಹರ್ಷಿಗಳಜೀವನ ದರ್ಶನ, ಪೂರ್ಣವಾದ ಜೀವನದರ್ಶನ. ಹೇಗೆ ಬೀಜದಿಂದ ಆರಂಭವಾದ ಮರದ ಜೀವನ ಅಂಕುರ, ಕಾಂಡ, ಹೂವು,ಕಾಯಿ ಇತ್ಯಾದಿಯಾಗಿ ವಿಕಾಸಗೊಂಡು ಬೀಜದಲ್ಲಿಯೇ ಹೋಗಿ ನಿಂತಾಗ ಪೂರ್ಣವಾಗುತ್ತದೆಯೋ ಅಂತೆಯೇ ಪರಮಾತ್ಮನಿಂದ ಪ್ರಾರಂಭವಾದ ನಮ್ಮ ಜೀವನ- ಬಾಲ್ಯ, ಯೌವನ ಇತ್ಯಾದಿಯಾಗಿ ಜೀವನದ ಎಲ್ಲಾ ಅವಸ್ಥೆಗಳನ್ನು ದಾಟಿ ಮತ್ತೆ ಹೋಗಿ ಪರಮಾತ್ಮನಲ್ಲಿಯೇ ನೆಲೆ ನಿಂತಾಗ ಪೂರ್ಣವಾದ ಹಾಗೂ ಸಾರ್ಥಕವಾದ ಜೀವನವಾಗುತ್ತದೆ ಎಂಬುದನ್ನು ತಪಸ್ಯೆಯಿಂದರಿತು ಅದಕ್ಕನುಗುಣವಾದ ಜೀವನ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ.

ರಘುವಂಶ ಮಹಾಕಾವ್ಯದಲ್ಲಿ ಕಾಳಿದಾಸನು ರಘುವಂಶದ ರಾಜರ ಜೀವನ ವ್ಯವಸ್ಥೆಯನ್ನು ಹೀಗೆ ಚಿತ್ರಿಸಿದ್ದಾನೆ- ಅವರು ಬಾಲ್ಯದಲ್ಲಿಯೇಜೀವನಕ್ಕೆ ಬೇಕಾದಂತಹ ಸಮಗ್ರವಾದ ವಿದ್ಯೆಯನ್ನು ಅಭ್ಯಸಿಸುತ್ತಿದ್ದರು, ಯೌವನದಲ್ಲಿ ಧರ್ಮಕ್ಕೆ ಅವಿರೋಧವಾದ ವಿಷಯ ಸುಖಗಳನ್ನು ಅನುಭವಿಸುತ್ತಿದ್ದರು, ವಾರ್ಧಕ್ಯದಲ್ಲಿ ಮುನಿಗಳಂತೆ ಆತ್ಮಚಿಂತನೆಯನ್ನು ನಡೆಸುತ್ತಾ ಅಂತ್ಯದಲ್ಲಿ ಯೋಗಮಾರ್ಗದಿಂದ ಶರೀರವನ್ನು ತ್ಯಜಿಸಿ ಜೀವವನ್ನು ಭಗವಂತನಲ್ಲಿ ನೆಲೆಗೊಳಿಸುತ್ತಿದ್ದರು ಎಂದು ವರ್ಣಿಸಿದ್ದಾನೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಜ್ಞಾನಿಗಳು ಹಾಕಿಕೊಟ್ಟ ಜೀವನದ ಯೋಜನೆಯ ಸಂವಿಧಾನವನ್ನು ಮಹಾಕವಿಯಾದ ಕಾಳಿದಾಸನ ಈ ಮಾತು ಬಹು ಸ್ಫುಟವಾಗಿ, ಸಾರವತ್ತಾಗಿ ಪ್ರತಿಬಿಂಬಿಸುತ್ತದೆಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.

– ಲೇಖಕರು ಸಂಸ್ಕೃತಿ ಚಿಂತಕಿ
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane Column : ನೀವು ಆಧುನಿಕ ಸೌಲಭ್ಯಗಳ ದೂರುದಾರ ಆಗಬೇಡಿ, ಹೊಸ ತಂತ್ರಜ್ಞಾನಗಳ ಬಳಕೆದಾರ ಆಗಿಬಿಡಿ!

Exit mobile version