ಗಣೇಶ ಭಟ್ಟ
ಅದೊಂದು ಗುರುಕುಲ. ಅಲ್ಲಿ ಓದುತಿದ್ದ ನಾಲ್ವರು ಶಿಷ್ಯರು ಗುರುಕುಲ ವಿದ್ಯಾಭ್ಯಾಸದ ಕೊನೇಯ ವರ್ಷದಲ್ಲಿದ್ದರು. ಸೈಕಲ್ ಮೇಲೆ ಒಡಾಡಿಕೊಂಡಿದ್ದ ಅವರಿಗೆ ಗುರು ಒಂದು ಪರೀಕ್ಷೆ ಮಾಡಲು ಮುಂದಾದರು. ನಾಲ್ವರಲ್ಲಿ ಮೊದಲ ಶಿಷ್ಯನನ್ನು ಕರೆದು ಆತನಿಗೆ ‘‘ನೀನು ಸೈಕಲ್ ಅನ್ನುಯಾಕೆ ಹೊಡೆಯುವೆ?’’ ಎನ್ನುವ ಒಂದೇ ಒಂದು ಪ್ರಶ್ನೆಯನ್ನು ಕೇಳಿದರು.
ಅದಕ್ಕೆ ಆತ–‘‘ದಿನಸಿ ಮುಂತಾದ ಸಾಮಾನುಗಳನ್ನು ತಲೆಯ ಮೇಲೆ ಹೊರಬೇಕಾಗಿತ್ತು. ಆದರೆ ಸೈಕಲ್ ಇರುವುದರಿಂದ ಅದರ ಮೇಲಿಟ್ಟು ಸಾಗಿಸಬಹುದು. ಸೈಕಲ್‌ನಿಂದ ನನಗೆ ಈ ರೀತಿಯ ಉಪಯೋಗವಿದೆ. ಅದಕ್ಕಾಗಿ ನಾನು ಸೈಕಲ್ ತುಳಿಯುವೆ’’ಎಂದ.
ಗುರು ಆತನಿಗೆ ಹೇಳಿದರು: ‘‘ನೀನು ತುಂಬಾ ಬುದ್ಧಿವಂತ. ನಿನ್ನ ಶರೀರ ಯಾವಾಗಲೂ ಈ ಕಾರಣದಿಂದ ಆರೋಗ್ಯವಾಗಿರುವುದು’’ಎಂದರು.
ಎರಡನೇ ಶಿಷ್ಯ ಗುರುವಿನ ಆ ಪ್ರಶ್ನೆಗೆ ಹೀಗೆ ಉತ್ತರಿಸಿದ; ‘‘ನಾನು ಸೈಕಲ್ ಮೇಲೆ ಸವಾರಿ ಮಾಡುವಾಗ ಪ್ರಕೃತಿಯ ಸೊಬಗು ನೋಡಲು ದೊರಕುವುದು. ನಾನು ಅದರಿಂದ ಸಂತೋಷಗೊಳ್ಳುವೆನುʼʼ ಎಂದನು.
ಗುರು ಆತನಿಗೆ: “ನೀನು ಈ ಸುಂದರ ಪ್ರಕೃತಿಯನ್ನು ಹೀಗೆ ದಿನವೂ ಆಸ್ವಾದಿಸುತ್ತಿದ್ದಲ್ಲಿಯಾವಾಗಲೂ ಸುಖವಾಗಿ ಇರುವೆʼʼ ಎಂದರು.
ಮೂರನೇ ಶಿಷ್ಯ ಹೇಳಿದ; “ನಾನು ಸೈಕಲ್ ಹೊಡಯುವಾಗಯಾವಾಗಲೂ ಭಗವಂತನ ಸಚ್ಚಿಂತನೆಯನ್ನು ಮಾಡಲು ಅನುಕೂಲವಾಗುವುದರಿಂದ ನನಗೆ ಸೈಕಲ್ ತುಳಿಯುವುದು ಇಷ್ಟವಾಗುವುದುʼʼ ಎಂದನು.
ಗುರು ಆತನಿಗೆ; “ನಿನ್ನದು ಎಲ್ಲೆಲ್ಲೂ ಭಗವಂತನ ಇರುವಿಕೆಯನ್ನು ಕಾಣುವ, ಸಂಶೋಧಿಸುವ ಮನಸ್ಸು, ನಿನ್ನ ಏಕಾಗ್ರತೆ ಯಾವಾಗಲೂ ಹೀಗೆಯೇ ಇರಲಿʼʼ ಎಂದರು.
ನಾಲ್ಕನೇ ಶಿಷ್ಯ ಹೀಗೆ ಉತ್ತರಿಸಿದ; “ಸೈಕಲ್ ತುಳಿಯುವುದರಿಂದ ನನಗೆ ಆತ್ಮಸಂತೋಷ ಉಂಟಾಗುವುದು ಆ ಕಾರಣಕ್ಕೆ ನಾನು ಸೈಕಲ್ ಹೊಡೆಯುವೆʼʼ ಎಂದನು.
ಗುರು ಆ ಶಿಷ್ಯನ ಉತ್ತರದಿಂದ ಸಂತೋಷಗೊಂಡು; “ನಾವು ಯಾವುದೇ ಕೆಲಸ ಮಾಡುವುದಿದ್ದರೂ ಪೂರ್ಣ ಮನಸ್ಸಿನಿಂದ, ಏಕಾಗ್ರತೆಯಿಂದ ಮಾಡಬೇಕು. ಅದರಿಂದ ನಮಗೆ ಆ ಕಾರ್ಯದಲ್ಲಿ ಪೂರ್ಣಜಯ, ಯಶಸ್ಸು ದೊರಕುವುದು. ನಿನಗೂ ಹಾಗೆ ಆಗಲಿʼʼ ಎಂದು ಹಾರೈಸಿದರು.
ಒಪ್ಪಿಕೊಂಡ ಕೆಲಸ-ಕಾರ್ಯವನ್ನು ಮನಸ್ಸಿಲ್ಲದ ಮನಸ್ಸಿನಿಂದ ಮಾಡಿದರೆ, ಅನ್ಯ ಮನಸ್ಕರಾಗಿ ಅಥವಾ ಅರೆ ಮನಸ್ಸಿನಿಂದ ಮಾಡಿದರೆ ಆ ಕೆಲಸವೇ ನಮಗೆ ಕಿರಿಕಿರಿ ಎನ್ನಿಸುವುದರಲ್ಲಿ ಸಂದೇಹವಿಲ್ಲ. ಅದರ ಬದಲು ಯಾವುದೇ ಕೆಲಸವಾಗಲಿ ನಾವು ಮಾಡುವ ಕೆಲಸದಲ್ಲಿ ಪೂರ್ಣ ಮನಸ್ಸಿಟ್ಟು ಮಾಡಿದಲ್ಲಿ ಪೂರ್ಣಜಯ, ಯಶಸ್ಸಿನ ಜೊತೆ ಜೊತೆಗೆ ಆ ಕೆಲಸದಿಂದ ಸಂಪೂರ್ಣವಾದ ಆನಂದವನ್ನೂ ಪಡೆಯಬಹುದು.
– ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)
ಇದನ್ನೂ ಓದಿ | Prerane | ಸುಖವೆಂಬುದೂ ದುಃಖವೇ