Site icon Vistara News

Prerane | ಸಂಸಾರದಲ್ಲಿ ಸಮಸ್ಯೆಯನ್ನು ಪರಿಹಾರಮಾಡಿಕೊಳ್ಳುವುದು ಹೇಗೆ?

spiritual thoughts

ಶ್ರೀ ಕೈವಲ್ಯಾನಂದ ಸರಸ್ವತೀ
ಒಂದು ಹಳ್ಳಿಯಲ್ಲಿ ಒಬ್ಬ ನಾಸ್ತಿಕ, ಇನ್ನೊಬ್ಬ ಆಸ್ತಿಕ ಇಬ್ಬರೂ ಇರುತ್ತಿದ್ದರಂತೆ. ಇವರಿಬ್ಬರಿಂದ ಹಳ್ಳಿಯಲ್ಲಿದ್ದ ಜನರೆಲ್ಲ ಬೇಸರಪಟ್ಟಿದ್ದರಂತೆ. ಇವರಿಬ್ಬರಿಂದ ಹಳ್ಳಿಯ ಜನಕ್ಕೆ ಬಹಳ ಕಷ್ಟವಾಗುತ್ತಿತ್ತಂತೆ. ದಿನವೆಲ್ಲ ಆಸ್ತಿಕನು ದೇವರಿದ್ದಾನೆ ಎಂದು ಹೇಳುತ್ತಿದ್ದನು. ನಾಸ್ತಿಕನು ಇಡೀ ದಿವಸ ಆಸ್ತಿಕವಿಚಾರವನ್ನು ತಿರಸ್ಕಾರ ಮಾಡುತ್ತಿದ್ದನಂತೆ. ಹಳ್ಳಿಯ ಜನರು ಬಹಳ ಕಷ್ಟ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದರು. ಯಾರನ್ನೂ ಅನುಸರಿಸುವುದು. ಒಬ್ಬನನ್ನು ಅನುಸರಿಸಿದರೆ; ಇನ್ನೊಬ್ಬನಿಗೆ ಕೋಪ.

ಆಗ ಹಳ್ಳಿಯವರೆಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದರು. ನಿಮ್ಮಿಬ್ಬರಲ್ಲಿ ನಾವು ಯಾರನ್ನಾದರೂ ಒಬ್ಬರನ್ನು ಅನುಸರಿಸಬಹುದು. ಆದ್ದರಿಂದ ನೀವಿಬ್ಬರೂ ಗ್ರಾಮಸ್ಥರ ಎದುರಿನಲ್ಲಿ ವಾಗ್ವಾದ ಮಾಡಿ. ಇದರಲ್ಲಿ ಯಾರು ಗೆಲ್ಲುತ್ತೀರೋ ಅವರನ್ನು ಅನುಸರಿಸುತ್ತೇವೆ. ನೀವಿಬ್ಬರೂ ಸುಮ್ಮಸುಮ್ಮನೆ ನಮ್ಮಗಳ ತಲೆ ತಿನ್ನಬೇಡಿ, ಹಾಳು
ಮಾಡಬೇಡಿ’ ಎಂದರು. ಪೂರ್ಣಿಮೆಯ ದಿವಸ ರಾತ್ರಿ ಈ ಸಭೆಯನ್ನು ವ್ಯವಸ್ಥೆ ಮಾಡಿದರು.

ಹಳ್ಳಿಯಲ್ಲಿದ್ದವರೆಲ್ಲ ಒಂದು ಕಡೆ ಸೇರಿದ್ದಾರೆ. ಆಸ್ತಿಕನು ತನ್ನ ಆಸ್ತಿಕ ಸಿದ್ಧಾಂತಗಳನ್ನು ಹೇಳಿ, ಅವುಗಳ ಆಧಾರದ ಮೇಲೆ ನಾಸ್ತಿಕ ಸಿದ್ಧಾಂತವನ್ನು ತಿರಸ್ಕರಿಸಿದನು. ನಾಸ್ತಿಕನು ತನ್ನ ಸಿದ್ಧಾಂತಗಳನ್ನು ಹೇಳಿ, ಯಾವ ರೀತಿ ಆಸ್ತಿಕತೆ ಸರಿಯಲ್ಲ ಎಂಬುದನ್ನು ವಿವರಿಸುತ್ತಾ ತೆಗೆದುಹಾಕಿದನು. ಪರಿಣಾಮ ಏನು ಫಲಿಸಿತೆಂದರೆ, ಸೂರ್ಯೋದಯದ
ಹೊತ್ತಿಗೆ ಆಸ್ತಿಕನು ನಾಸ್ತಿಕನಾದನು, ನಾಸ್ತಿಕನು ಆಸ್ತಿಕನಾದನು. ಈ ರೀತಿ ಪುನಃ ಹಳ್ಳಿಯಲ್ಲಿ ಒಬ್ಬ ನಾಸ್ತಿಕ, ಆಸ್ತಿಕ ಉಳಿದರು. ಹಳ್ಳಿಯ ಜನರ ಸಮಸ್ಯೆ ಪುನಃ ಅದೇ ರೀತಿ ಉಳಿಯಿತು.

ಸಂಸಾರದಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ನಾವು ಮಾಡುವ ಪ್ರಯತ್ನವೂ ಇಂತಹ ಫಲವನ್ನೇ ತಂದುಕೊಡುತ್ತದೆ. ಪುನಃ ಸಮಸ್ಯೆ, ದುಃಖ ಮುಂದುವರಿಯುತ್ತದೆ. ಏಕೆಂದರೆ ಅಹಂಕಾರ, ಮಮಕಾರವೇ ಸಮಸ್ಯೆ.

ಸಾಂಸಾರಿಕ ಸುಖ

ಹಿಂದಿನ ಕಾಲದಲ್ಲಿ ಶವವನ್ನು ಭುಜಗಳ ಮೇಲೆ ಹೊತ್ತು ಸ್ಮಶಾನಕ್ಕೆ ಹೋಗುತ್ತಿದ್ದರು. ಅದೊಂದು ಪುಣ್ಯ ಕಾರ್ಯವೆಂಬ ಅಭಿಪ್ರಾಯವೂ ಇತ್ತು. ಏಕೆಂದರೆ ಹೆಣ ಹೊರುವಾಗ, ಹೊರುವವರಿಗೆ ತಮ್ಮ ಸಾವಿನ ಸ್ಮರಣೆ ಬಂದು, ಎಚ್ಚೆತ್ತುಕೊಂಡು
ಸಾವಿಲ್ಲದೆ ತಮ್ಮ ಸ್ವರೂಪವನ್ನು ತಿಳಿಯುವ ಆಕಾಂಕ್ಷೆ ಬರುವ ಅವಕಾಶವದು. ಆದರೆ ಈಗ ವಾಹನದಲ್ಲಿ ಸಾಗಿಸುತ್ತಾರೆ. ಇರಲಿ!

ಶವವನ್ನು ಹೊರುವಾಗ, ಸ್ವಲ್ಪ ಸ್ವಲ್ಪ ದೂರದಲ್ಲಿ ಭುಜಕ್ಕೆ ನೋವಾದಾಗ ಮತ್ತೊಂದು ಭುಜಕ್ಕೆ ಬದಲಾಯಿಸಿಕೊಳ್ಳುತ್ತಿದ್ದರು. ಆಗ ಸ್ವಲ್ಪ ಸುಖವೆನಿಸುತ್ತಿತ್ತು. ಆದರೆ ತಾನು ಹೊತ್ತಿರುವ ಭಾರ ಕಮ್ಮಿಯಾಗಿದೆಯಾ? ಅಂದರೆ ಇಲ್ಲ. ಭಾರ ಹಾಗೆಯೇ ಇದೆ. “ಭಾರ ಇನ್ನೊಂದು ಭುಜಕ್ಕೆ ಹೋಗಿದೆ. ನನಗೆ ಸುಖವಾಗಿದೆ’ ಎಂದು ತಾನೇ ಭಾರವನ್ನು ಹೊರುತ್ತಿದ್ದಾನೆ. ಯಾವ ಭಾರವೂ ಕಮ್ಮಿಯಾಗಲಿಲ್ಲ. ಭಾರ ತನ್ನನ್ನು ಬಿಟ್ಟು ಹೋಗಲಿಲ್ಲ. ಆದರೂ ಈಗೇನೋ ಸುಖವಾಗಿದೆ ಎಂದು ಭ್ರಮಿಸುತ್ತಾನೆ.

ಸಂಸಾರದಲ್ಲಿ ನಾವು ಸುಖಕ್ಕಾಗಿ ಮಾಡುವ ಪ್ರಯತ್ನ ಪಡೆಯುವ ಸುಖವೆಲ್ಲವೂ ಇದೇ ರೀತಿಯೇ ಆಗಿದೆ.
ಸಾಂಸಾರಿಕ ಸುಖ ಕೇವಲ ಭ್ರಮೆ. ಕೇವಲ ಹೊರೆಯನ್ನೇ ಸುಖವೆಂದುಕೊಳ್ಳುವಿಕೆ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

Exit mobile version