Site icon Vistara News

Prerane | ಸತ್ಯದ ದಾರಿ, ಉದ್ಧಾರದ ರಹದಾರಿ

Prerane

ಗಣೇಶ ಭಟ್ಟ
ನಮಗೆ ಹಾನಿಯಾಗುವುದಿದ್ದರೆ, ಸೋಲಾಗುವುದಿದ್ದರೆ, ಒಟ್ಟಿನಲ್ಲಿ ತೊಂದರೆ ಯಾಗುವುದಿದ್ದರೆ, ನಮ್ಮ ಜೀವನದ ಬಹುತೇಕ ಸಂದರ್ಭಗಳಲ್ಲಿ ನಾವು ಸತ್ಯ ನುಡಿ ಯುವುದಕ್ಕಿಂತಲೂ, ಸುಳ್ಳನ್ನೇ ನುಡಿಯುತ್ತೇವೆ. ಇನ್ನು ಲೋಕದಲ್ಲಿ ಸತ್ಯ, ಪ್ರಾಮಾಣಿಕ ಮಾರ್ಗಗಳಲ್ಲಿ ಸಾಗುವವರ ಬದುಕಿಗಿಂತ ಸುಳ್ಳು, ದಗಲ್ಬಾಜಿ, ಬಾನಗಡಿ ಮಾಡುವವರ ಬದುಕು ಉತ್ತಮವಾಗಿರುವುದನ್ನು ಕಾಣುತ್ತೇವೆ. ಹಾಗಾಗಿಯೇ ವ್ಯಕ್ತಿ ಸತ್ಯದಗುಡಿಸಲಿ ಗಿಂತ ಸುಳ್ಳಿನ ಅರಮನೆ ಲೇಸು ಎಂದು ಬಯಸುವುದರಲ್ಲಿ ತಪ್ಪೇನಿಲ್ಲ, ಎನ್ನಿಸಿದರೂ ಇದು ಸರಿಯಾದ ಕ್ರಮವಲ್ಲ.

ಸತ್ಯ ನುಡಿಯುವವನಿಗೆ ತಾನು ನುಡಿಯುವ ಸತ್ಯದಕಾರಣದಿಂದಾಗಿ ಆತ್ಮಸ್ಥೈರ್ಯ ವಿರುವುದು, ಮನಃಶಾಂತಿ ಯಿರುವುದು, ಆತ್ಮ ಸಂತೋಷವಿರುವುದು. ಸುಳ್ಳಾಡುವವನಿಗೆ ಇವೆಲ್ಲಾ ಸಿಗುತ್ತದೆ ಎಂದು ಹೇಳಲಾಗದು. ನಮ್ಮ ಪ್ರಾಚೀನ ಪರಂಪರೆ, ಇತಿಹಾಸವನ್ನು ಅವಲೋಕಿಸಿದರೂ ಸತ್ಯಕ್ಕೇ ಜಯ, ಧರ್ಮಕ್ಕೇ ವಿಜಯ ಎಂದು ಅರಿವಿಗೆ ಬರುವುದು. ನಮ್ಮೇಲ್ಲಾ ಧರ್ಮಗ್ರಂಥಗಳು, ಗುರು-ಹಿರಿಯರೂ ಸಹ ಇದನ್ನೇ ಸಾರಿದ್ದಾರೆ. ಒಟ್ಟಿನಲ್ಲಿ ಸತ್ಯವನ್ನು ಅನುಸರಿಸಿ ನೆಡೆದರೆ ಜೀವನದಲ್ಲಿ ಯಶಸ್ಸು ಉಂಟಾಗುವುದು, ಸಾರ್ಥಕವಾಗುವುದು.

ಒಬ್ಬ ಕಳ್ಳನಿದ್ದ, ಆ ಕಳ್ಳ ನಗರದ ಶ್ರೀಮಂತನ ಮನೆ ಕಳ್ಳತನ ಮಾಡಿ, ಹಿಂತಿರುಗುವಾಗ ಒಂದೆಡೆ ಜನ ಸೇರಿರುವ ಪ್ರದೇಶಕ್ಕೆ ಬಂದು, ಜನರ ನಡುವೆಯೇ ಕುಳಿತ. ಅದು ಸಂತರು ನೆಡೆಸಿಕೊಡುವ ಪ್ರವಚನ ಸಭೆಯಾಗಿತ್ತು. ಸಂತರು ಪ್ರವಚನ ಮಾಡುತ್ತಾ-‘ಮನುಷ್ಯ ಸತ್ಯದ ಬದುಕು ಸಾಗಿಸಬೇಕು, ಇನ್ನೊಬ್ಬರಿಗೆ ಉಪಕಾರ ಮಾಡಬೇಕು, ಇದರಿಂದಲೇ ವ್ಯಕ್ತಿಯ ಉದ್ಧಾರವಾಗುವುದು’ ಎಂದರು. ಈ ನುಡಿಗಳು ಕಳ್ಳನ ಮೇಲೆ ತುಂಬಾ ಪ್ರಭಾವ ಬೀರಿತು.

ಸಂತರು ಪ್ರವಚನ ಮುಗಿಸಿದ ಮೇಲೆ ಕಳ್ಳ ನೇರವಾಗಿ ಅವರಿದ್ದಲ್ಲಿಗೆ ತೆರಳಿ ಕೇಳಿದ- “ನಾನು ಯಾವಾಗಲೂ ಕೆಟ್ಟ ಕೆಲಸಗಳನ್ನೇ ಮಾಡಿರುವೆ. ನನ್ನ ಉದ್ಧಾರವೂ ಆಗುವುದೇ? ನಾನೆಂದಿಗೂ ಕಳ್ಳತನ ಬಿಡಲಾರೆ. ಯಾಕೆಂದರೆ ಅದರ ಹೊರತಾಗಿ ಮತ್ತೇನೂ ನನಗೆ ಬರುವುದಿಲ್ಲ.ʼʼ ಎಂದ. ಅದಕ್ಕೆ ಸಂತರು ಹೇಳಿದರು-‘ಎಂದಿಗೂ ಸತ್ಯವನ್ನು ಬಿಡ ಬೇಡ. ನಿನ್ನ ಉದ್ಧಾರವಾಗುವುದು.’ ಎಂದರು.

ಮರುದಿನ ಕಳ್ಳ ರಾಜಭವನಕ್ಕೆ ಕಳ್ಳತನ ಮಾಡಲು ತೆರಳಿದ. ಅಲ್ಲಿಯ ಕಾವಲುಗಾರನಿಗೆ ಹೇಳಿದ-‘ನಾನಿಲ್ಲಿ ಕಳುವು ಮಾಡಲು ಬಂದಿರುವೆ’. ಕಾವಲುಗಾರ ಅಂದು ಕೊಂಡ; ಯಾವುದೇ ಕಳ್ಳ ಈ ರೀತಿಯಲ್ಲಿ ಹೇಳಲಾರ, ಖಂಡಿತವಾಗಿಯೂ ತಮಾಷೆ ಮಾಡುತ್ತಿರುವ. ಕಾವಲುಗಾರ ಕಳ್ಳನನ್ನು ಒಳಗೆ ಬಿಟ್ಟ. ನೇರವಾಗಿ ಅರಮನೆಯ ಭಂಡಾರವನ್ನು ಪ್ರವೇಶಿಸಿ, ಆಭರಣಗಳುಳ್ಳ ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಹೊರಟ. ಕಾವಲುಗಾರ ತಡೆದು ಕೇಳಿದ- “ಏನನ್ನು ತೆಗೆದುಕೊಂಡು ಹೋಗುತ್ತಿರುವೆ?.’ʼ ಕಳ್ಳ ಹೇಳಿದ-‘‘ನಾನಿದನ್ನು ಕದ್ದು ತೆಗೆದುಕೊಂಡು ಹೋಗುತ್ತಿರುವೆ.’’

ಕಾವಲುಗಾರ ಯೋಚಿಸಿದ; “ಈತ ನಿಜವಾಗಿಯೂ ಯಾವುದೋ ಸಿದ್ಧಪುರುಷನೇ ಇರಬೇಕು”ಎಂದು. ಆತನನ್ನು ಹೊರ ಹೋಗಲು ಬಿಟ್ಟ. ಆದರೆ ಅರಮನೆಯ ಭಂಡಾರದಲ್ಲಿ ಕಳ್ಳತನವಾದ ಸಂಗತಿ ರಾಜನಿಗೆ ತಿಳಿಯಿತು. ಕಾವಲುಗಾರನ ಮಾತಿನ ಮೂಲಕ ಕಳ್ಳನನ್ನು ಹಿಡಿದು, ರಾಜನ ಎದುರಿಗೆ ತಂದು ನಿಲ್ಲಿಸಿದರು. ವಿಚಾರಿಸಿ ಸತ್ಯದಿಂದ ಕೂಡಿದ ಕಳ್ಳನ ಮಾತನ್ನು ಕೇಳಿದ ರಾಜನು- ‘‘ನೀನು ಬುದ್ಧಿವಂತ ಕಳ್ಳನೆ ಹೌದು. ಹಾಗೆ ಸತ್ಯವಂತನೂ ಕೂಡ. ಇನ್ನು ಮುಂದೆ ನೀನು ಕಳ್ಳತನಮಾಡುವ ಅವಶ್ಯಕತೆ ಇಲ್ಲ. ಈ ಅರಮನೆಯಲ್ಲಿಯೇ ಉದ್ಯೋಗ ಮಾಡುವೇಯಂತೆ’’ಎಂದ. ಸಂತ ಹೇಳಿದಂತೆ ಕಳ್ಳ ಸತ್ಯನುಡಿಯನ್ನಾ ಶ್ರಯಿಸಿ ಉದ್ಧಾರವಾದ.

ಸೂನೃತ ಸರ್ವ ಶಾಸ್ತ್ರಾರ್ಥ ನಿಶ್ಚಿತ ಜ್ಞಾನ ಶೋಭಿತಮ್|
ಭೂಷಣಂ ಸರ್ವ ವಚಸಾಂ ಲಜ್ಜೇವಕುಲ ಯೋಷಿತಾಮ್||

ಇದರ ಅರ್ಥ ಎಷ್ಟೇ ಜ್ಞಾನಿಯಾಗಿದ್ದರೂ ಸತ್ಯನುಡಿಯದಿದ್ದರೆ ಅವನ ಜ್ಞಾನ ವ್ಯರ್ಥ. ಸತ್ಯನುಡಿಯುವ ಜ್ಞಾನಕ್ಕೇ ಒಂದು ಶೋಭೆ. ಹೇಗೆ ಕುಲಸ್ತ್ರೀಗೆ ಲಜ್ಜೆಯು ಭೂಷಣವೋ ಹಾಗೆಯೇ ಮಾತಿಗೆ ಸತ್ಯವು ಭೂಷಣವಾಗಿದೆ.

ಸತ್ಯವನ್ನು ಮಾತನಾಡುತ್ತಾ ಬದುಕುವುದು ದೊಡ್ಡ ಗುಣವಾಗಿದೆ. ಅದೋಂದು ವ್ರತವೇ ಸರಿ. ಸತ್ಯದ ಮಾರ್ಗವು ನಮ್ಮನ್ನು ಕೆಟ್ಟ ಕೆಲಸ ಮಾಡುವುದರಿಂದ ತಡೆಯುತ್ತದೆ. ಸತ್ಯವಂತನು ಶಾಂತಿ -ಸಂತೋಷ-ನೆಮ್ಮದಿಯಿಂದ ಬದುಕುವನು. ಆತನು ಭಗವಂತನಿಗೂ ಪ್ರೀತಿಪಾತ್ರವಾಗುವನು.

– ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)

ಇದನ್ನೂ ಓದಿ | Prerane | ಸಂಸಾರದಲ್ಲಿ ಸಮಸ್ಯೆಯನ್ನು ಪರಿಹಾರಮಾಡಿಕೊಳ್ಳುವುದು ಹೇಗೆ?

Exit mobile version