Site icon Vistara News

Prerane : ಅಕರ್ಮ ಕಲೆಯ ಕುರಿತು ನಿಮಗೆಷ್ಟು ಗೊತ್ತು?

prerane morning spiritual thoughts in kannada about akarma

prerane

ಶ್ರೀ ಕೈವಲ್ಯಾನಂದ ಸರಸ್ವತೀ
ಕರ್ಮ ಚತುರತೆಯನ್ನು ಬಯಸುತ್ತದೆ. ಅದೇ ರೀತಿ ಅಕರ್ಮ; ಕರ್ಮ ಮಾಡದಿರುವಿಕೆಯೂ ಸಹ ಚತುರತೆಯನ್ನು ಬಯಸುತ್ತದೆ. ಕರ್ಮದ ಚತುರತೆ ಮೇಲ್ಬಾಗದಲ್ಲಿದೆ. ಅಕರ್ಮದ ಚತುರತೆಯು ನಿಮ್ಮ ಅಸ್ತಿತ್ವದಲ್ಲೇ ಹುದುಗಿದೆ, ಅಡಗಿದೆ. ಕರ್ಮದ ಚತುರತೆಯು ಸುಲಭವಾಗಿ ಕಲಿಯಬಹುದು. ಮತ್ತೊಬ್ಬರಿಂದ ಎರವು ಪಡೆಯಬಹುದು. ಒಬ್ಬನಿಗೆ ವಿದ್ಯಾಭ್ಯಾಸದಿಂದ ಕಲಿಸಬಹದು. ಏಕೆಂದರೆ ಕರ್ಮ ಒಂದು ತಂತ್ರ, ಅದು ನಿಮ್ಮ ಅಸ್ಥಿತ್ವವಲ್ಲ. ಅದು ಕೆಲವರ ಒಂದು ಕಲೆ-ಕಲಾ ಕೌಶಲ್ಯ.

ಆದರೆ ಅಕರ್ಮದ ತಂತ್ರ ಅಥವಾ ಚತುರತೆ, ಒಂದು ತಂತ್ರವೇ ಅಲ್ಲ. ಯಾರಿಂದಲೂ ಕಲಿಯಲಾಗದು, ಹೇಳಿಕೊಡಲಾಗದು, ನೀವು ಬೆಳೆದಂತೆ ಅದೂ ಬೆಳೆಯುತ್ತದೆ. ನಿಮ್ಮ ಅಂತರ್ ಬೆಳವಣಿಗೆಯ ಜೊತೆಗೆ ಬೆಳೆಯುತ್ತದೆ. ಅದು ಒಂದು ಅರಳುವಿಕೆ. ಬಾಹ್ಯದಿಂದ ಅದಕ್ಕಾಗಿ ಏನೂ ಮಾಡಲಾಗದು. ಅಂತರಂಗದಿಂದ ವಿಕಸಿತವಾಗಬೇಕು.

ಕರ್ಮದ ಚತುರತೆ ಬಾಹ್ಯದಿಂದ ಬರುತ್ತದೆ. ಅಂತರಂಗವನ್ನು ಪ್ರವೇಶಿಸುತ್ತದೆ. ಅಕರ್ಮದ ಚತುರತೆ ಒಳಗಿನಿದಲೇ ಬರುತ್ತದೆ. ಬಾಹ್ಯಕ್ಕೆ ಪ್ರವಹಿಸುತ್ತದೆ. ಅವುಗಳ ಆಯಾಮ ಪೂರ್ಣವಾಗಿ ಭಿನ್ನ. ವ್ಯತಿರೇಕವಾದ ದಿಶೆಯಲ್ಲಿ ವಿರುದ್ಧ.

ಒಬ್ಬ ಅಪರಿಪೂರ್ಣನಾಗಿದ್ದು ಕರ್ಮದ ತಂತ್ರದಲ್ಲಿ ಪೂರ್ಣತೆಯನ್ನು ಪಡೆಯಬಹದು. ಆತ್ಮಜ್ಞಾನ ಪಡೆಯುವವರೆಗೂ ಒಬ್ಬ ಅಪರಿಪೂರ್ಣವಾಗಿಯೇ ಇರುತ್ತಾನೆ. ಆತ್ಮ ಜ್ಞಾನಕ್ಕೆ ಮುನ್ನ ಒಬ್ಬನಿಂದ-ಒಬ್ಬನಲ್ಲಿ ಪ್ರಾವೀಣ್ಯತೆಯನ್ನು ನಿರೀಕ್ಷಿಸಬಹುದು. ಇರುವಿಕೆಯಲ್ಲಿ (ಒಬ್ಬ ಇರುವ ರೀತಿಯಲ್ಲಿ) ಪರಿಪೂರ್ಣತೆಯನ್ನು ನಿರೀಕ್ಷಿಸಲಾಗದು. ಆದರೆ ಒಂದು ಚತುರತೆಯಲ್ಲಿ ಅದನ್ನು ನಿರೀಕ್ಷಿಸಬಹುದು. ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಅಕರ್ಮದ ತಂತ್ರದ ವಿಕಸಿತವು ಹೇಗೆ?.

ಧ್ಯಾನ ಮಾಡುವವನು ವ್ಯವಹಾರದಲ್ಲಿ ಇರಲಾಗದು. ವ್ಯವಹಾರದಲ್ಲಿ ಇರುವವನು ಧ್ಯಾನಮಾಡಲಾಗದು-ಎಂಬುದು ಸರಿಯಲ್ಲ. ಜೀವನವನ್ನೆ ಧ್ಯಾನವಾಗಿ ಮಾಡಿಕೊಳ್ಳಬೇಕು. ಆಧ್ಯಾತ್ಮ, ಜೀವನ ಇವು ಬೇರೆಯಲ್ಲ. ಆದ ಕಾರಣ ಏನನ್ನು ಮಾಡಿದರೂ ಧ್ಯಾನ ಪೂರ್ವಕವಾಗಿ ಮಾಡಬಹುದು. ಏನನ್ನು ಬಿಟ್ಟು ಹೋಗುವ ಅವಶ್ಯಕತೆ ಇಲ್ಲ. ಜೀವನವನ್ನು ನಿರಾಕರಿಸುವ ಅವಶ್ಯಕತೆ ಇಲ್ಲ. ಸಂಸಾರದಲ್ಲಿದ್ದು ಸನ್ಯಾಸಿಯಾಗಬೇಕು.

ಆದರೆ ಅಹಂಕಾರ ಅಡ್ಡಿಯಾಗಿದೆ. ಅಹಂಕಾರವು ನಿಜವಲ್ಲ. ಆತ್ಮವು ನಿಜ. ಇದು ತಿಳಿದಿಲ್ಲ. ನಾನೆಂಬ ಭಾವನೆಯಿಲ್ಲದೆ ವ್ಯವಹಾರ ಸಾಧ್ಯವಿಲ್ಲ. ಈಗ ಯಾವ ಕೇಂದ್ರದಿಂದ ವ್ಯವಹಾರ ನಡೆಯಬೇಕು. “ನಾನು” ಎಂಬುದೊಂದು ಬೇಕಾಗಿದೆ. ಸತ್ಯವಲ್ಲದಿದ್ದರೂ ಸಹಾಯಕವಾಗುತ್ತದೆ. ಆತ್ಮನನ್ನು ತಿಳಿಯುವವರೆಗೂ ಅಹಂಕಾರದೊಂದಿಗೆ ಜೀವಿಸಬೇಕು.

ಅಹಂಕಾರವೆಂದರೆ ಆತ್ಮಕ್ಕೆ ಬದಲಿ. ಆತ್ಮವಂಚಕ. ಆತ್ಮ ಗೊತ್ತಿಲ್ಲವಾದ ಕಾರಣ, ತನ್ನದೇ ಒಂದು ಆತ್ಮವನ್ನು (ಅಹಂಕಾರವನ್ನು) ಸೃಷ್ಟಿಸಿಕೊಳ್ಳುತ್ತೇವೆ. ಇದೊಂದು ಮಾನಸಿಕ ಸೃಷ್ಟಿ. ಅಹಂಕಾರ ಕೃತಕವಾದದ್ದರಿಂದ ಕೃತಕವಾದ ಆಧಾರ ಬೇಕು. ಇತರರ ಮೇಲೆ ಆಧಾರ ಪಡುತ್ತದೆ. ಇತರರು ಏನು ಹೇಳುವರೊ ಅದೇ ಆಹಾರ. ಇತರರ ಗಮನವೇ ಆಹಾರ. ಹಿಮಾಲಯಕ್ಕೆ ಹೋದರೂ ಇತರರ ಗಮನವನ್ನು ಬಯಸುತ್ತದೆ. ಇತರರ ಹೊಗಳಿಕೆ, ತೆಗಳಿಕೆಗಳ ಮೇಲೆ ಹಿಗ್ಗುತ್ತದೆ. ಕುಗ್ಗುತ್ತದೆ. ವಾಸ್ತವಿಕವಾಗಿ ಹಿಮಾಲಯಕ್ಕೆ ಹೋಗಲಾಗದು.

ಇತರರ ಗಮನದ ಅವಶ್ಯಕತೆ ಬಿದ್ದು ಹೋದಂದು ಎಲ್ಲಿದ್ದರೂ ಹಿಮಾಲಯದಲ್ಲಿ ಇದ್ದಂತೆ.

ಕರ್ಮ ಮಾಡಿದಾಗ ಕರ್ತ, ಅಹಂಕಾರವಿದೆ. ಅಕರ್ಮದ ಕಲೆ ಯಾವುದು? ಶರೀರಿಕವಾಗಿ ಕರ್ಮ ನಡೆಯುತ್ತದೆ. ಫಲವೂ ಬರುತ್ತದೆ. ಇವು ಇಲ್ಲಿ ಮುಖ್ಯವಲ್ಲ. ಮುಖ್ಯ ವಿಷಯವೆಂದರೆ ಒಳಗೆ ಕರ್ತ ಇರಬಾರದು. ಮೂಲವು ಮುಖ್ಯ. ಕರ್ಮ ನಡೆಯುತ್ತಿರುವಾಗ ಅಹಂಕಾರವಿರಬಾರದು. ಅಹಂಕಾರವು ಇಲ್ಲವೇ ಇಲ್ಲವೇನೊ ಎಂಬಂತ್ತಿರಬೇಕು. ಸಂಪೂರ್ಣವಾಗಿ ಅಹಂಕಾರ ಶೂನ್ಯವಾಗಿರಬೇಕು. ಕರ್ತನಿಲ್ಲದ ಕರ್ಮ ತನಗೆ ತಾನು ನಡೆಯಬೇಕು. ಆಗ ಅಹಂಕಾರವಿರುವುದಿಲ್ಲ. ಇಡೀ ವ್ಯವಹಾರದೊಂದಿಗೆ ಎಷ್ಟರಮಟ್ಟಿಗೆ ಹೊಂದಾಣಿಕೆ ಇದೆಯೆಂದರೆ ವಿಭಾಗವೆಲ್ಲವೂ ಬಿದ್ದು ಹೋಗಿದೆ. ಅಹಂಕಾರವು ಕಳೆದುಹೋಗಿದೆ. ಕರ್ಮ ಕರ್ತ ಇವುಗಳು ಎರಡಲ್ಲ. ನಾನು ಕರ್ತ, ಇದು ನಾ ಮಾಡುವ ಕರ್ಮ ಎಂಬ ವಿಭಾಗವು ತುಸು ಮಾತ್ರವೂ ಇಲ್ಲವಾಗಬೇಕು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇದು ಯಾವಾಗ ಸಾಧ್ಯವಾಗುವುದು? ಒಂದು ರೀತಿಯಲ್ಲಿ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಿ, ಇನ್ನೂ ನನ್ನಿಂದ ಸಾಧ್ಯವಿಲ್ಲ ಎಂಬ ಸ್ಥಿತಿಗೆ ಬಂದಾಗ ಇದು ಸಾಧಿತವಾಗುವುದು. ಅಹಂ ಇಲ್ಲವಾದಾಗ ಆತ್ಯಂತಿಕ ಪೂರ್ಣತೆ ಆವಿರ್ಭವಿಸುವುದು. ನೀನು ಎಂದೂ ದೇವರನ್ನು ಸಂದರ್ಶಿಸಲಾಗದು. ಏಕೆಂದರೆ ದೇವರು ಬಂದಾಗ ನೀನು (ಅಹಂಕಾರ) ಇರುವುದಿಲ್ಲ. ಅಹಂಕಾರವಿರುವವರೆಗೂ, ಆತನು ಬರಲಾರ. ನೀನಿರುವವರೆಗೂ ಆತನು ಬರಲಾರ (ಅಹಂಕಾರವೇ) ನಿನಗೆ ನೀನೇ ಅಡ್ಡಿ.


ನಾನು ದಿವಸದ 24 ಗಂಟೆಗಳು ವಿಶ್ರಾಂತಿಯನ್ನು ಪಡೆಯುತ್ತಿದ್ದೇನೆ. ಆದಕಾರಣ ನಿದ್ರೆ ಎಂಬುದೇ ಕಷ್ಟ, ನಾನು ವಿಶ್ರಾಂತಿಯನ್ನು ಪಡೆಯುತ್ತಿದ್ದೇನೆ, ಅಲ್ಲ ನಾನೇ ವಿಶ್ರಾಂತಿ. (ನಿದ್ದೆ ಎಂಬುದು ವಾಸ್ತವಿಕವಾಗಿ ವಿಶ್ರಾಂತಿಯೇ. “ನಾನೇ ವಿಶ್ರಾಂತಿ” ಎಂಬ ಅರ್ಥದಲ್ಲಿ ನಿದ್ದೆ ಎಂಬುದು ಕಷ್ಟ ಎನ್ನಲಾಗಿದೆ). ನಾನು ನಗುತ್ತಾ ಆನಂದವಾಗಿದ್ದೇನೆ, ನಿಮ್ಮನ್ನೂ ಆನಂದವಾಗಿಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನೂ ಓದಿ : Navavidha Bhakti : ಭಕ್ತಿಯ ಪರಾಕಾಷ್ಠೆಗೆ ಕೀರ್ತನವೆಂಬ ಸಾಧನ

Exit mobile version