ಶ್ರೀ ಕೈವಲ್ಯಾನಂದ ಸರಸ್ವತೀ
ಉಪನಿಷತ್ತಗಳಲ್ಲಿ ಕೇವಲ ಹತ್ತು ಆಥವಾ ಹನ್ನೆರಡು ಉಪನಿಷತ್ತುಗಳು ಮಾತ್ರ ವೇದಗಳಲ್ಲಿ ಇರುವಂತೆ ಕಂಡು ಬರುತ್ತವೆ. ಆದರೆ 128 ಉಪನಿಷತ್ತುಗಳ ಪುಸ್ತಕಗಳು ಉಪಲಬ್ದಿಯಲ್ಲಿವೆ. ಇವುಗಳನ್ನು ಯಾರೋ ಮಹನೀಯರು, ವೇದಗಳಲ್ಲಿರುವ ಉಪನಿಷತ್ತುಗಳ ತತ್ವವನ್ನು ಅರಿತು, ಅವರ ಮಾತಿನಲ್ಲೇ ಆ ತತ್ವವನ್ನು ತಿಳಿಸಲು ಬರೆದಿರಬಹುದೆನಿಸುತ್ತದೆ. ಆ ಮಾತುಗಳು ಕೆಲವು ತತ್ವಕ್ಕೆ ಸಮ್ಮತವೂ, ಕೆಲವು ಭಿನ್ನತೆಯುಳ್ಳದ್ದಾಗಿಯೂ ಇರಬಹುದು. ತತ್ವಕ್ಕೆ ವಿರೋಧವಿಲ್ಲದವುಗಳನ್ನು ಚಿಂತನೆ ಮಾಡಿ, ಅರ್ಥಮಾಡಿಕೊಂಡು, ಸ್ವ ಸ್ವರೂಪದಲ್ಲಿ ನಿಲ್ಲಲು ಪ್ರಯತ್ನ ಮಾಡುವುದರಲ್ಲಿ ಯಾವ ದೋಷವೂ ಇಲ್ಲ.
ಅಂತಹ ಉಪನಿಷತ್ತುಗಳಲ್ಲಿ ಆತ್ಮ ಪೂಜೋಪನಿಷತ್ತೆಂಬುದೊಂದು. ಆತ್ಮ ಪೂಜೆ ಎಂದಾಗ ಬಹಳ ಜನ ಶರೀರಕೆಲ್ಲಾ ವಿಭೂತಿ ಬಳಿಯುವುದು ʻʻಓಂ ಆತ್ಮನೇ ನಮಃ’’ ಇತ್ಯಾದಿಯಾಗಿ ಮಂತ್ರಗಳನ್ನು ಹೇಳಿಕೊಂಡು ತಮ್ಮ ತಲೆಯ ಮೇಲೆ ಹೂವು ಇಟ್ಟುಕೊಳ್ಳುವುದು, ಎದೆಗೆ ಆರತಿ ಮಾಡಿಕೊಳ್ಳುವುದು-ಮೊದಲಾದ ಚೇಷ್ಠೆಗಳನ್ನು ಮಾಡುತ್ತಾರೆ. ಆದರೆ ಇದರಿಂದ ʻಆತ್ಮಪೂಜೆ’ ಯಾಗದು. (ಯಾವುದಾದರೂ ಶುಭಕಾರ್ಯಕ್ಕೆ ಮುನ್ನ ಶರೀರ ಶುದ್ದಿಯಾಗಬೇಕೆನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ).
ನಿಜವಾದ ಆತ್ಮಪೂಜೆ ಎಂದರೆ ಏನೆಂಬುದನ್ನು ಈಗ ಚಿಂತಿಸೋಣ. ಆತ್ಮ ಪೂಜೋಪನಿಷತ್ತಿನಲ್ಲಿ ಮೊದಲನೇಯ ಮಂತ್ರ, ʻʻತಸ್ಯ ನಿಶ್ಚಿಂತನಂ ಧ್ಯಾನಮ್’’ ಕಡಿವಡೆಯದ ಅದರ ಚಿಂತನೆ ಧ್ಯಾನ. ನಾವುಗಳು ಪ್ರಪಂಚದ ಮೂರು ಆಯಾಮಗಳಲ್ಲಿ ಜೇವಿಸುತ್ತೇವೆ. ನಾನು ನನ್ನದು ಎಂಬುವುದೊಂದು ವಸ್ತುಗಳ ಪ್ರಪಂಚ. ನಾನು ನನ್ನ ಮನೆ, ನಾನು ನನ್ನ ಪೀಠೊಪಕರಣಗಳು, ನಾನು ನನ್ನ ಸಂಪತ್ತು ಇತ್ಯಾದಿ. ಇದು ನಾನು ನನ್ನದು ಎಂಬ ಸಾಮ್ರಾಜ್ಯ ವಸ್ತುಗಳ ಸಾಮ್ರಾಜ್ಯವು ನನ್ನನ್ನು ಸುತ್ತುವರಿದಿರುತ್ತದೆ. ಮತ್ತೊಂದು ಆಯಾಮವಿದೆ. ನಾನು ನನ್ನವರು, ನಾನು ಹಾಗೂ ನನ್ನ ಪ್ರೇಯಸಿ, ನಾನು ಮತ್ತು ನನ್ನ ಮಿತ್ರ, ನಾನು ಹಾಗೂ ನನ್ನ ಕುಟುಂಬ- ಇದು ವ್ಯಕ್ತಿಗಳನ್ನೊಳಗೊಂಡ ಪ್ರಪಂಚ, ಎರಡನೆಯ ಸಾಮ್ರಾಜ್ಯ. ಸದಾ ಈ ಎರಡು ಕ್ಷೇತ್ರಗಳ ಚಿಂತೆ ಇರುತ್ತದೆ. ಧ್ಯಾನವೆಂದರೆ ನನ್ನ ವಸ್ತುಗಳ ಚಿಂತನೆಯೂ ಅಲ್ಲ.
ಅಥವಾ ನನಗೆ ಸಂಬಂಧಿಸಿದವರ ಚಿಂತನೆಯೂ ಅಲ್ಲ. ಅದರ ಎಂದಾಗ ಇವುಗಳ ಚಿಂತನೆಯಲ್ಲ. ಅದು ವ್ಯಕ್ತಿಯಲ್ಲ ಅಥವಾ ಇದು ಎಂದು ವಿಷಯೀಕರಿಸಿ ಗುರುತಿಸುವ ವಸ್ತುವಲ್ಲ. ಈ ದೇಶ ಕಾಲಕ್ಕೆ ಸಂಬಂಧಿಸಿದ ವಸ್ತುವಲ್ಲ. ಉಪನಿಷತ್ತುಗಳು: ʻʻತತ್ – ಅದು’ ಎಂಬ ಶಬ್ಧವನ್ನು ಪ್ರಯೋಗ ಮಾಡುತ್ತವೆ. ಇದರ ಅರ್ಥ ಯಾವದೋ ಒಂದು ಅತೀತವಾದದ್ದು, ಎಲ್ಲದರ ಆಚೆಗಿರುವುದು, ನಾವಿರುವ ದೇಶಕಾಲದಲ್ಲಿಲ್ಲದ್ದು ವಸ್ತುಗಳೊಂದಿಗಿರುವ ನಮ್ಮ ಸಂಬಂಧದಲ್ಲಿಯಾಗಲಿ, ಅಥವಾ ವ್ಯಕ್ತಿಗಳೊಂದಿಗಿರುವ ನಮ್ಮ ಸಂಬಂಧಗಳಲ್ಲಾಗಲಿ ಇಲ್ಲದ್ದು, ಹೆಸರಿಸಲಾಗದ್ದು.
ಹೆಸರಿಸಿದ್ದೇ ಆದರೆ ಮೇಲಿನ ಎರಡು ಕ್ಷೇತ್ರಗಳಿಗೆ ಸೇರಬೇಕಾಗುತ್ತದೆ. ಆಗ ನಾವು ಅದನ್ನ ಸೀಮಿತಗೊಳಿಸುತ್ತೇವೆ, ಪರಿಚ್ಚಿನ್ನ ಗೊಳಿಸುತ್ತೇವೆ. ಅದನ್ನು ದೇವರೆಂದು ಕರೆದು ಪುನಃ ತಂದೆ, ತಾಯಿ ಎಂದು ಭಕ್ತಿಯಿಂದ ಭಾವಿಸಬಹು ದಾದರೆ, ಅದನ್ನು ಸೀಮಿತಗೊಳಿಸಿದಂತೆ. ಅದಕ್ಕೆ ರೂಪವಿಲ್ಲ, ಒಂದು ಎಲ್ಲೆಯಿಲ್ಲ. ಈ ಕಾರಣದಿಂದ ಅದಕ್ಕೆ ಹೆಸರಿಲ್ಲ. ಆದಕಾರಣ ಉಪನಿಷತ್ತು ʻತತ್ – ಅದು’ ಎಂಬ ಶಬ್ದವನ್ನು ಬಳಸುತ್ತದೆ. (ಬ್ರಹ್ಮಸೂತ್ರಗಳಲ್ಲಿ ʻಜನ್ಮಾಧ್ಯಸ್ಯ ಯತಃ’ ಎಂಬ, ಸೂತ್ರದಲ್ಲಿ ಜಗತ್ತಿನ ಸೃಷ್ಠ ಸ್ಥಿತಿಲಯಗಳು ಯಾವುದರಿಂದ ಆಗುತ್ತವೆಯೋ ಎಂದೂ ಹೇಳಿರುವುದು ಸಹ ಆ ತತ್ ಎಂಬುದನ್ನೇ).
ʻಅದನ್ನು’ ಸತತವಾಗಿ ಸ್ಮೃತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾದಲ್ಲಿ ಆಗ ನೀನು ಧ್ಯಾನದಲ್ಲಿದ್ದಂತೆ. ವಸ್ತುಗಳ ಜತೆಗಿದ್ದಾಗ, ವ್ಯಕ್ತಿಗಳ ಜತೆಗಿದ್ದಾಗ ಅದನ್ನು ಜ್ಞಾಪಿಸಿಕೊ. ಎಲ್ಲಿದ್ದರೂ ಅದರ ಸ್ಮರಣೆಯಿರಲಿ. ಪರಿಚ್ಚಿನ್ನವಾದದ್ದನ್ನು ಪರಿಚ್ಚಿನ್ನವೆಂದು ನೋಡುವುದು ಬೇಡ. ಉಪಾಧಿಯ ಅಂತರಾಳಕ್ಕೆ ಹೋಗಿ ಅಪರಿಚ್ಚಿನ್ನವಾದದ್ದನ್ನು ನೋಡಲು ಪ್ರಯತ್ನಿಸು. ರೂಪವನ್ನು ರೂಪವೆಂದು ನೋಡಬೇಡ. ರೂಪದ ಅಂತರಂಗದ ಒಳಹೊಕ್ಕು ರೂಪರಹಿತವಾದದ್ದನ್ನು ಕಾಣು. ವಸ್ತುವನ್ನು ವಸ್ತವೆಂದು ನೋಡಬೇಡ. ಅವುಗಳ ಆಳಕ್ಕೆ ಹೋಗು, ಅವುಗಳ ಕೇಂದ್ರವನ್ನು ಸ್ಪರ್ಶಿಸು. ʻಅದು’
ವ್ಯಕ್ತವಾಗುವುದು. ಯಾವ ವ್ಯಕ್ತಿಯನ್ನೂ, ಆತನ ವ್ಯಕ್ತಿತ್ವದಲ್ಲಿ ಬಂಧಿತನಾಗಿರುವಂತೆ ಎಂದೂ ನೋಡಬೇಡ. ವ್ಯಕ್ತಿತ್ವವನ್ನು ಭೇದಿಸಿಕೊಂಡು ಆಳಕ್ಕೆ ಹೊಗು ಹಾಗು ಎಲ್ಲದರ ಆಚೆಗಿರುವುದನ್ನು ಗ್ರಹಿಸು. ಸತತವಾದ ಅದರ ಅವಲೋಕನೆಯೇ ಧ್ಯಾನ.
ಆದರೆ ಇದು ಕಷ್ಟ ಸಾಧ್ಯ, ಪ್ರಯಾಸಕರ. ಸತತ ಸ್ಮರಣೆಯಿರಬೇಕು, ಮಧ್ಯೆ ಮಧ್ಯೆ ವ್ಯವಧಾನವಿರಬಾರದು. ಸ್ಮರಣೆ ಬಿಟ್ಟು ಹೋಗಬಾರದು, ಒಂದು ಕ್ಷಣದ ವಿಸ್ಮೃತಿಯೂ ಆಗಬಾರದು. ಇದು ಕಷ್ಚಸಾಧ್ಯ. ಕೆಲವು ಕ್ಷಣಗಳ ಕಾಲ ಹಾಗಿರುವುದೇ ದುಷ್ಕರವಾಗುತ್ತದೆ. ಕಷ್ಟಸಾಧ್ಯವೇಕೆಂದರೆ ನಾವು ನಿದ್ದೆಯಲ್ಲಿದ್ದೇವೆ. ಅನಾದಿ ಮಾಯಾ ನಿದ್ರೆಯಲ್ಲಿದ್ದೇವೆ. ಎಚ್ಚರವೆಂದು ಕೊಂಡಾಗಲೂ, ಅದು ಮಾಯಾ ನಿದ್ರೆಯಲ್ಲಿ ತೋರಿಕೊಂಡ ಕನಸು. ಎಲ್ಲವೂ ಯಾಂತ್ರಿಕವಾಗಿ ನಡೆಯುತ್ತಿದೆ. ಯಾವುದರ ಬಗ್ಗೆಯೂ ನಾವು ಎಚ್ಚರವಾಗಿಲ್ಲ.
ಇಡೀ ಜೀವನದಲ್ಲಿ ಯಾವುದೋ ಒಂದು ಕ್ಷಣ ದ್ವೈತರಹಿತವಾಗಿ, ಅಹಂಕಾರ ರಹಿತವಾಗಿ, ನಿಜವಾದ ಎಚ್ಚರದಲ್ಲಿರುತ್ತೇವೆ. ಇದು ಯಾವುದೂ ಆಕಸ್ಮಿಕವಾದ ನಿಮಿತ್ತದಿಂದ ಆದದ್ದಾದ ಕಾರಣ ಹೆಚ್ಚು ಕಾಲ ಉಳಿಯದು. ಪುನಃ ನಿದ್ದೆ ಮಾಡುತ್ತೇವೆ. ಉಪನಿಷತ್ತು ಸತತವಾದ ಅದರ ಅವಲೋಕನೆಯೇ ಧ್ಯಾನ ಎಂದು ಹೇಳುವಾಗ ಅದರ ಅಭಿಪ್ರಾಯವೇನೆಂದರೆ. ನಿರಂತರವಾಗಿ, ಎಡಬಿಡದೆ ಅದನ್ನು ಎಲ್ಲದರಲ್ಲೂ, ಎಲ್ಲ ಘಟನೆಯಲ್ಲೂ, ಏನಿದೆಯೊ ಅದರಲೆಲ್ಲ, ಹೊರಗೂ, ಒಳಗೂ ಕಾಣಬೇಕು ಎಂಬುದೇ ಆಗಿದೆ. ಇದು ಯಾವಾಗ ಸಾಧ್ಯವೆಂದರೆ ಪ್ರತಿಯೊಂದು ʻಅದರ’ ಸಂಕೇತವಾಗಬೇಕು.
ಅಥವಾ ಅದೇ ಎಲ್ಲವಾಗಿ ತೋರುತ್ತಿದೆ ಎಂಬ ನಿಶ್ಚಿತ ಜ್ಞಾನವಿರಬೇಕು. ಸತತವಾಗಿ ಅದರ ಸ್ಮರಣೆಮಾಡಬೇಕೆಂದರೆ, ದೈನಂದಿನ ಕಾರ್ಯ ಗಳನ್ನು ಸರಿಯಾಗಿ ಮಾಡಲಾಗದು. ಯಾವುದಾದರೂ ಪರಮಾತ್ಮನ ನಾಮವನ್ನು ಮಾನಸಿಕವಾಗಿ ಉಚ್ಚರಿಸುವುದೆಂದರೆ ಆಗಲೂ ದೈನಂದಿನ ಕಾರ್ಯಕ್ರಮ, ನಾಮಸ್ಮರಣೆ ಎರಡೂ ಸತತವಾಗಿ ನಡೆಯಲಾರವು. ಹಾಗಾದರೆ ಸತತ ಚಿಂತನೆ ಎಂದರೆ ಏನು? ಹೇಗೆ ಸಾಧ್ಯ? ನೀವು ಮಾಡುತ್ತಿರುವ ಪ್ರತಿಯೊಂದರಲ್ಲೂ ʻಅದನ್ನೇ’ ಕಾಣಬೇಕು. ಮಾಡುವ ನೀವು, ಮಾಡುವಿಕೆಗೆ ಉಪಯೋಗಿಸುವ ಸಾಮಗ್ರಿ, ಮಾಡುವಿಕೆ ಸಕಲವೂ ಅದೇ ಎಂದು ಗ್ರಹಿಸಬೇಕು.
ಝೆನ್ ಸಿದ್ದಾಂತದ ಸಂತರಾದ Bokoju ಎಂಬುವರನ್ನು, ತಾವು ಸದಾ ಏನು ಮಾಡುತ್ತೀರ ಎಂದು ಕೇಳಲಾಯಿತು? ಈ ಪ್ರಶ್ನೆಗೆ ಸಮಾಧಾನವಾಗಿ ಅವರು ನಾನು ಯಾವುದನ್ನೂ ನಿರಂತರವಾಗಿ ಮಾಡುವುದಿಲ್ಲ. ಏನನ್ನು ಮಾಡಿದರೂ ಪೂರ್ಣವಾಗಿ ಮಾಡುತ್ತೇನೆ. ಬಾವಿಯಿಂದ ನೀರು ತರಬೇಕಾದರೆ, ನೀರು ತರುತ್ತೇನೆ. ಸೌದೆ ಹೊಡೆಯುವುದಾದರೆ, ಸೌದೆ ಹೊಡೆಯುತ್ತೇನೆ. ನಿದ್ರಿಸುವಾಗ ನಿದ್ರಿಸುತ್ತೇನೆ. ಈ ಕೆಲಸಗಳೆಲ್ಲವನ್ನೂ ಮಾಡುವ ಸಮಯದಲ್ಲಿ ನೀನು ಏನು ಮಾಡುತ್ತಿರುತ್ತೀಯೆ? ಎಂದು ಪ್ರಶ್ನಿಸಲಾಗುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ನಾನು ಏನನ್ನೂ ಮಾಡುವುದಿಲ್ಲ. ನಾನು ಸೌದೆ ಹೊಡೆಯುತ್ತಿರುವಂತೆ ಕಂಡಾಗ, ಪರಮಾತ್ಮನೇ ಸೌದೆ ಹೊಡೆಯುತ್ತಿದ್ದಾನೆ. ನೀರು ತರುತ್ತಿರುವಂತೆ ಕಂಡಾಗ ಆತನೆ ನೀರು ತರುತ್ತಿದ್ದಾನೆ. ಮತ್ತೇನೆಂದರೆ ತರಲ್ಪಟ್ಟ ನೀರು ಪರಮಾತ್ಮನೆ, ಹೊಡೆಯಲ್ಪಟ್ಟ ಸೌದೆಯೂ ಪರಮಾತ್ಮನೆ. ಈಗ ಪರಮಾತ್ಮನೇ ಇದ್ದಾನೆ, ನಾನಿಲ್ಲ. ನಾನೆಂಬ ಕರ್ತೃವಿಲ್ಲ. ಆದಕಾರಣ ಪ್ರತಿಯೊಂದು ಪೂಜೆಯಾಯಿತು ಹಾಗೂ ಮಾಡುವುದೆಲವೂ ಸರ್ವವೂ ಧ್ಯಾನವಾಯಿತು.
ಇಡೀ ನಿಮ್ಮ ಜೀವನವನ್ನು ಪೂಜೆಯನ್ನಾಗಿ ಪರಿವರ್ತಿಸುವುದೆ ಉಪನಿಷತ್ತಿನ ಗುರಿ. ಒಂದು ವಿಭಿನ್ನ ದೃಷ್ಟಿಯ ಅವಶ್ಯಕತೆ ಇದೆ. ಹೊಸ ದೃಷ್ಟಿ ಎಂದಾಗ ಕಲ್ಲು ಇದೆ. ಅದನ್ನು ಪರಮಾತ್ಮನೆಂದು ಭಾವಿಸುವುದಲ್ಲ. ಮತ್ತೇನೆಂದರೆ ಕಲ್ಲೆಂಬುದು ಬಿದ್ದು ಹೋಗಬೇಕು. ಕೇವಲ ‘ಅದೇ’ ಇದೆ. ‘ಪರಮಾತ್ಮನೇ’ ಇದ್ದಾನೆ. ಇದು ಒಂದು ಗಹನವಾದ ವಾಸ್ತವಿಕತೆಯ ಅರಿವು. ನಿರಂತರವಾದ ಅರಿವು.
ಪರಮಾತ್ಮನನ್ನು ಗ್ರಹಿಸಲು ಪ್ರಾರಂಭಿಸು. ಆ ಇರುವನ್ನು ಗ್ರಹಿಸದೆ ಯಾವ ವಸ್ತುವನ್ನೂ ಮುಟ್ಟಬೇಡ. ಪರಮಾತ್ಮನೆಂಬ ಜ್ಞಾನವಿಲ್ಲದೆ ಯಾವುದನ್ನೂ ಪ್ರೀತಿಸಬೇಡ. ಆ ಜ್ಞಾನವಿಲ್ಲದೆ ಚಲಿಸಬೇಡ. ಉಸಿರಾಡಲು ಬೇಡ. ಪರಮಾತ್ಮನನ್ನು ಎಲ್ಲ ವಸ್ತುಗಳ ಮೇಲೆ ಆರೋಪಿಸಬೇಕೆಂಬುದಲ್ಲ. ಎಲ್ಲ ವಸ್ತುಗಳೂ ಪರಮಾತ್ಮನೆ ಎಂಬುದನ್ನು ಕಂಡುಕೊಳ್ಳಬೇಕು. ಸತತವಾದ ಅವಲೋಕನವೆಂದರೆ ಇದೆ, ಈ ಅವಲೋಕನವೇ ಧ್ಯಾನ.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Navavidha Bhakti : ನವವಿಧಗಳಲ್ಲಿ ಭಗವಂತನನ್ನು ಪ್ರೀತಿಸೋಣ