ಶ್ರೀ ಕೈವಲ್ಯಾನಂದ ಸರಸ್ವತೀ
ಜೀವನವನ್ನು ಪ್ರೀತಿಸಿದ್ದೇ ಆದರೆ (ಮನಸ್ಸಿನ) ವಟಗುಟ್ಟುವಿಕೆ ಬಿದ್ದುಹೋಗುತ್ತದೆ. ಏಕೆಂದರೆ ಪ್ರತಿ ಕ್ಷಣವೂ ಜೀವನದಿಂದ (ಜೀವಿಸುವದರಿಂದ) ತುಂಬಿರುತ್ತದೆ. ನಮಗೆ ವಟಗುಟ್ಟಲು ಮಾರ‍್ಗವಾಗಲೀ, ಸ್ಥಳಾವಾಗಲೀ, ಅವಕಾಶವಾಗಲೀ ಇಲ್ಲ. ಜೀವನದ ಪ್ರತಿ ಕ್ಷಣವು ಎಷ್ಟು ಮಹತ್ತರವಾಗಿ ಪ್ರವಹಿಸುತ್ತದೆ ಎಂದರೆ ವಟವಟ ಎನ್ನಲು, ಗೊಡ್ಡು ಹರಟೆ ಹೊಡೆಯಲು ಸಮಯವಾದರೂ ಎಲ್ಲಿದೆ? ಪ್ರತಿ ಕ್ಷಣವನ್ನು ಪೂರ್ಣವಾಗಿ ಜೀವಿಸಿ ಮನಸ್ಸು ಮೌನವಾಗುವುದು.
ಆಹಾರ ಸೇವಿಸುವಾಗ ಪೂರ್ಣಮನಸ್ಸಿನಿಂದ ಸೇವಿಸಿ, ಮನಸ್ಸು ಮೌನವಾಗುವುದು, (ಪಾನೀಯಗಳನ್ನು) ಸೇವಿಸುವಾಗ, ಪೂರ್ಣಮನಸ್ಸಿನಿಂದ ಸೇವಿಸಿ. ನೀರು ಬಾಯಾರಿಕೆಯನ್ನು ಹೋಗಲಾಡಿಸುತ್ತದೆ. ನೀರು ಬಾಯಾರಿಕೆಯನ್ನು ಸ್ಪರ್ಶಿಸಿದಾಗ, ಬಾಯಾರಿಕೆಯು ಮಾಯವಾದಾಗ ಅದರ ಜೊತೆಯಲ್ಲೇ ಸರಿಯಿರಿ. ಮೌನವಾಗಿರಿ ಹಾಗೂ ವೀಕ್ಷಿಸಿ. ಪ್ರತಿ ಕ್ಷಣದಲ್ಲೂ ತುಂಬಿದಂತಿರಿ. ಗೌರವಯುಕ್ತವಾಗಿರಿ.
ಮೇಲಿನ ವಾಕ್ಯಗಳು ಅರ್ಥವಾಗಬೇಕಾದರೆ ಝೆನ್ ಸಂಪ್ರದಾಯದ ಟೀ ಸೇವನೆಯನ್ನು ಮನನ ಮಾಡಬೇಕು. ಜಪಾನ್ ದೇಶದಲ್ಲಿ ಪ್ರತಿ ಮನೆಯಲ್ಲೂ ಟೀ ವ್ರತಾಚಾರಣೆ ಇದೆ. ಹಾಗೂ ಮನೆಯೆಂದು ಹೇಳಿಸಿಕೊಳ್ಳುವ ಯೋಗ್ಯತೆಯುಳ್ಳ ಪ್ರತಿಯೊಂದು ಮನೆಯಲ್ಲೂ ಒಂದು ಟೀ ಕೊಠಡಿ ಇರುತ್ತದೆ. ಮಂದಿರವಿದ್ದಂತೆ, ಪೂಜಾ ಮಂದಿರವಿದ್ದಂತೆ. ಅತ್ಯಂತ ಸಾಮಾನ್ಯ ಟೀ ಸೇವನೆಯನ್ನು ಬಹಳ ಪವಿತ್ರವಾದ ಸ್ಥಾಯಿಗೆ ಏರಿಸಿರುತ್ತಾರೆ. ಟೀ ಕೊಠಡಿಗೆ ಪ್ರವೇಶಿಸುವಾಗ ಪೂರ್ಣ ಮೌನದಿಂದ ಪ್ರವೇಶಿಸುತ್ತಾರೆ. ಮೌನವಾಗಿ ಕೂಡುತ್ತಾರೆ. ಧ್ಯಾನಕ್ಕೆ ಕೂಡುವಂತೆ ಕೂಡುತ್ತಾರೆ. ಟೀ ಮಾಡುತ್ತಿರಲು ಟೀ ಕುದಿಯುತ್ತಿರುವ ಪಾತ್ರೆಯಿಂದ ಶಬ್ದ ಬರುತ್ತಿರುತ್ತದೆ. ಹಾಗೂ ಪ್ರತಿಯೊಬ್ಬರೂ ಮೌನದಿಂದ ಆ ಶಬ್ದವನ್ನೇ ಶ್ರವಣ ಮಾಡುತ್ತಿರುತ್ತಾರೆ.
ವೇದಾಂತ ಶ್ರವಣ ಮಾಡುವಾಗ ಯಾವರೀತಿ ಮೌನದಿಂದ ಶ್ರವಣ ಮಾಡುತ್ತೇವೆಯೋ, ಆ ರೀತಿ. ಟೀ ಸೊಪ್ಪನ್ನು ಕುದಿಯುವ ನೀರಿನಲ್ಲಿ ಹಾಕಿದಾಗ ಅದರ ಸುಗಂಧ ಆ ಕೊಠಡಿಯಲ್ಲೆಲ್ಲಾ ಪ್ರಸರಿಸುತ್ತದೆ. ಮೌನದಿಂದ ಅದನ್ನು ಆಸ್ವಾಧಿಸುತ್ತಾರೆ. ಕಪ್ಪು ಮತ್ತು ಸಾಸರ್‌ನಲ್ಲಿ ಟೀ ಹಾಕಲಾಗುತ್ತದೆ. ಬಹಳ ಭಕ್ತಿ ಭಾವದಿಂದ ಆನಂದದಿಂದ ಕೈಗೆ ಎತ್ತಿಕೊಳ್ಳುತ್ತಾರೆ.
ಈ ಒಂದು ಕ್ಷಣ ಅವರಿಗೆ ಮತ್ತೊಮ್ಮೆ ಒದಗಿ ಬಂದದ್ದಕ್ಕಾಗಿ ಕೃತಜ್ಞತೆಯುಳ್ಳವರಾಗುತ್ತಾರೆ. ಈ ಕ್ಷಣ ಮತ್ತೊಮ್ಮೆ ಬರುತ್ತದೆಯೋ ಇಲ್ಲವೋ ಯಾರಿಗೆ ಗೊತ್ತು? ಆಗ ಅವರು ʻಚಾʼ ಪಾನೀಯಾದ ವಾಸನೆ ನೋಡುತ್ತಾರೆ. ಅದರ ಪರಿಮಳಕ್ಕೆ ಕೃತಜ್ಞತೆಯಿಂದ ತುಂಬಿ ಹೋಗುತ್ತಾರೆ. ಗುಟುಕು ಗುಟುಕಾಗಿ ಕುಡಿಯುತ್ತಾರೆ. ʻಚಾʼ ಪಾನೀಯದ ಪರಿಮಳ, ಸವಿ, ಹಿತೋಷ್ಣತೆ ಹಾಗೂ ಸರಾಗವಾಗಿ ಒಳಗೆ ಪ್ರವೇಶಿಸುವಿಕೆ, ತಮ್ಮ ಒಂದು ಶಕ್ತಿ ʻಚಾʼ ಶಕ್ತಿಯೊಂದಿಗೆ ಒಂದಾಗುವಿಕೆ (ದ್ವೈ ಅಳಿಯುವಿಕೆ) – ಪಾನೀಯ ಕ್ರಿಯೆ ಒಂದು ಧ್ಯಾನವಾಗುತ್ತದೆ. ಇದೇ ರೀತಿ ಎಲ್ಲ ಜೀವನವೂ ಒಂದು ಧ್ಯಾನವಾಗಬಹುದು.
*****
ಝೆನ್ ಜನರು ಒಂದು ಕಪ್ಪು ಚಹಾ, ಪ್ರಾರ್ಥನೆಯ ಒಂದು ಕಪ್ಪು ಆಗಬಹುದು, ಒಂದು ಬಟ್ಟಲು ಚಹಾ ಪ್ರಾರ್ಥನೆಯ ಒಂದು ಬಟ್ಟಲಾಗಬಹುದು ಎನ್ನುತ್ತಾರೆ, ಹೇಗೆ? “ಚಹಾ, ಚಹಾ ಕುಡಿಯುವವ ಎಂಬ ವಿಭಾಗವಿಲ್ಲದೆ ಚಹಾ ಸೇವಿಸಬೇಕು. ಮನಸ್ಸು ಪೂರ್ಣವಾಗಿರಬೇಕು, ಚಹಾ, ಚಹಾ ಕುಡಿಯುವವ ಎಂಬ ಭೇದವಿಲ್ಲದೆ, ಅಲ್ಲಿ ಎಂತಹ ಮೌನವಿದೆ ಎಂದರೆ, ಸೇವಿಸುವವನು ವಿಶ್ರಾಂತನಾಗಿದ್ದಾನೆ (ಇಲ್ಲವಾಗಿದ್ದಾನೆ). ಚಹಾ ಕುಡಿಯುವ ಸಮಯದಲ್ಲಿ ವಿಶ್ರಾಂತನಾಗದಿದ್ದಲ್ಲಿ ಮತ್ತಾವ ಸಮಯದಲ್ಲಿ ವಿಶ್ರಾಂತನಾಗಲು ಸಾಧ್ಯ? ಎನ್ನುತ್ತಾರೆ.
ಮನಸ್ಸೆಂದರೆ ಭೂತ ಭವಿಷ್ಯತ್ತುಗಳಲ್ಲಿ ಇರುತ್ತದೆ. ಮನಸ್ಸು ಕೆಲಸಮಾಡಲು ಪ್ರಾರಂಭ ಮಾಡಿದರೆ ವರ್ತಮಾನಕ್ಕೆ ನೀವು ಇಲ್ಲವಾದಂತೆ, ವರ್ತಮಾನವೇ ಸತ್ಯ, ವರ್ತಮಾನವೆಂದರೆ ಶಾಶ್ವತ, ಭೂತ ಭವಿಷ್ಯಗಳು ಕಾಲದ ಅಂಶಗಳು. ವರ್ತಮಾನ ಶಾಶ್ವತವಾದದ್ದರ ಅಂಶ, ವರ್ತಮಾನದಿಂದ ದೈವತ್ವಕ್ಕೆ ಜಾರಬಹುದು. ಅಹಂಕಾರದಿಂದ ನಿಮ್ಮ ಅಂತರಾಳಕ್ಕೆ ಅಂತರ್ ಹೃದಯಕ್ಕೆ ಜಾರಬಹುದು, ಅದೇ ಇಡೀ ಅಸ್ಥಿತ್ವದ ತಿರುಳು.
ಧ್ಯಾನವೆಂಬುದು ಮುಮುಕ್ಷು ಜೀವನದಲ್ಲಿ ಬಹಳ ಮುಖ್ಯವಾದದ್ದು. ಇದರಲ್ಲಿ ಎರಡು ವಿಧ. ಒಂದು- ಮನಸ್ಸನ್ನು ಪರಮಾತ್ಮನ ಕಡೆಗೆ ತಿರುಗಿಸಿ, ಪರಮಾತ್ಮನಲ್ಲೇ ಏಕಾಗ್ರತೆಯನ್ನು ಪಡೆಯುವಂತೆ ಮಾಡುವ, ʻʻನಾಮ ಜಪʼʼ ಅಭ್ಯಾಸ. ಈ ಅಭ್ಯಾಸದಿಂದ ಮನಸ್ಸು ಬಾಹ್ಯ ಪ್ರಾಪಂಚಿಕ ವಿಷಯ ವ್ಯಾಮೋಹವನ್ನು ಬಿಟ್ಟು ಅಂತರ್ ಮುಖವಾಗಿ ತನ್ನ ಸ್ವರೂಪವನ್ನು ತಿಳಿಯಲು ತಯಾರಾಗುತ್ತದೆ.
ಎರಡನೆಯದು : ಶ್ರೀ ಶ್ರೀ ಶಂಕರಾಚಾರ್ಯರು ಧ್ಯಾನಂ ನಾಮ ʻಆತ್ಮ ಚಿಂತನಮ್’ ಎನ್ನುತ್ತಾರೆ. ತಾನಲ್ಲದ್ದೆಲ್ಲವನ್ನೂ ತೆಗೆಯುತ್ತಾ, ನೈಜವಾದ ತನ್ನ ಸ್ವರೂಪದಲ್ಲಿ ಉಳಿಯುವ ಪ್ರಯತ್ನ ಧ್ಯಾನ. ಅಮರತ್ವದ ಕಡೆಗೆ ಪ್ರಯಾಣ, ಹುಟ್ಟು ಸಾವಿಲ್ಲದ, ಸರ್ವತ್ರ ವ್ಯಾಪಿಸಿರುವ ಸರ್ವರ ಅಂತರ್ಯಾಮಿಯಾದ ಭಗವಂತನೇ ನಾನೆಂಬ ಸತ್ಯದ ಅರಿವು ಈ ಧ್ಯಾನ.
******
ಅಮನಸ್ಸಿನ ಸ್ಥಿತಿ ಧ್ಯಾನ. ಮನಸ್ಸಿಗಿಂತಲೂ ಉನ್ನತವಾದದ್ದನ್ನು ನಿನ್ನಲ್ಲೇ ಕಂಡುಕೊಳ್ಳವುದೇ ಧ್ಯಾನ. ಪೃಥ್ವಿಯನ್ನು ರಕ್ಷಿಸುವ ಒಂದೇ ಒಂದು ಮಾರ್ಗವೆಂದರೆ ʻಧ್ಯಾನ’. ಪ್ರಯತ್ನ ಪೂರ್ವಕವಾಗಿ, ಮೂಲವನ್ನು ತಲುಪುವುದೇ ಧ್ಯಾನ.
Meditation Means, The State of No-Mind.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Prerane : ಪ್ರಾಮಾಣಿಕತೆಯೇ ಅಧ್ಯಾತ್ಮದ ಮೂಲ