ಶ್ರೀ ಕೈವಲ್ಯಾನಂದ ಸರಸ್ವತೀ
ಮನುಷ್ಯ ತನ್ನಲ್ಲಿ ತಾನು ಪರಿಪೂರ್ಣನಲ್ಲ ಎಂದುಕೊಳ್ಳುತ್ತಾನೆ. ತನ್ನ ಜೀವನ ಅರ್ಥರಹಿತ, ಶೂನ್ಯ, ಖಾಲಿ ಎಂದುಕೊಳ್ಳುತ್ತಾನೆ. ಅದನ್ನು ತುಂಬಿಕೊಳ್ಳಬೇಕೆಂದು ಕೊಳ್ಳುತ್ತಾನೆ. ಯಾವುದೋ ಒಂದು ರೀತಿ ತುಂಬಿಕೊಳ್ಳಬೇಕೆಂಬುದು ದುರಾಸೆ ಎನ್ನಿಸಿಕೊಳ್ಳುತ್ತದೆ. ಈ ಪ್ರಯತ್ನ ಸಫಲೀಕೃತವಾಗಲಾರದು. ಸಾಮಾನ್ಯವಾದ ಒಂದೇ ಕಾರಣವೆಂದರೆ ಸಂಗ್ರಹ ಮಾಡಿದ್ದೆಲ್ಲವೂ ಹೊರಗೆ ಉಳಿಯುತ್ತದೆ, ಅದು ಮನುಷ್ಯನ ಒಳಕ್ಕೆ ತಲುಪಲಾರದು. ಹಾಗೂ ಸಮಸ್ಯೆ ಅಂತರಂಗದ ಒಳಗಿದೆ, ಹುಡುಕುವ ಪರಿಹಾರ ಬಾಹ್ಯದಲ್ಲಿದೆ.
ದುರಾಸೆ ಎಂಬುದು ಬುದ್ಧಿಹೀನ ಮನುಷ್ಯನು ತನ್ನ ಜೀವನವು ಅರ್ಥಪೂರ್ಣವಾಗಬೇಕೆಂದು ಮಾಡುವ ಪ್ರಯತ್ನ. ಬುದ್ಧಿಹೀನ ಎಂದು ಒತ್ತಿ ಹೇಳಿರುವುದನ್ನು ಮರೆಯಬಾರದು. ಸಂಖ್ಯಾ ಪ್ರಧಾನವಾದ ಯಾವ ಬದಲಾವಣೆಯೂ ನಿಮ್ಮ ಜೀವನವನ್ನು ಪರಿವರ್ತನೆ ಮಾಡಲಾರದು. ಗುಣ ಪ್ರಾಧಾನ್ಯ ದಿಕ್ಕಿನಲ್ಲಿ ವೀಕ್ಷಿಸುವುದೊಂದೇ ಪರಿವರ್ತಿಸುವುದು.
ವಾಸ್ತವಿಕವಾಗಿ ಬೇಕಾಗಿರುವುದು ಗುಣ ಪ್ರಾಧಾನ್ಯವಾದ ಪರಿವರ್ತನೆ. ನಿಮ್ಮ ಅಸ್ಥಿತ್ವದ ವಾಸ್ತವಿಕತೆಯನ್ನು ಗುರುತಿಸುವಿಕೆ. ನಿಮ್ಮ ಜೀವನವು ತುಂಬು ಪ್ರಕಾಶದಿಂದ ಕೂಡಿರಬೇಕಾದ ಅವಶ್ಯಕತೆಯನ್ನು ನೀವು ಬಯಸುತ್ತೀರ. ಒಂದು ತೆರನಾದ ಆಂತರಿಕ ಐಶ್ವರ್ಯವು ಬೇಕು. ಭೇದ, ಬಾಹ್ಯ ಸಂಪತ್ತು ಸಹಾಯ ಮಾಡಲಾರದು. ಆದರೆ ಜನರು ಆಲೋಚನೆ ಮಾಡುವುದಿಲ್ಲ. ಪ್ರಜ್ಞೆಯಿಲ್ಲದೆ ಮತ್ತೆ ಮತ್ತೆ ಹೆಚ್ಚು ಹೆಚ್ಚು ಬಾಹ್ಯ ಸಂಪತ್ತನ್ನೇ ಬಯಸುತ್ತಾರೆ.
ಬಾಹ್ಯ ಸಂಪತ್ತಿನ ವ್ಯರ್ಥತೆಯನ್ನು ಕಾಣದೆ, ಅದನ್ನೇ ಅಧಿಕವಾಗಿ ಬಯಸುವುದೇ ದುರಾಸೆ. ದುರಾಸೆ ಎಂಬುದು ಮೂರ್ಖತನ, ಕೇವಲ ಮೂರ್ಖತನ. ದುರಾಸೆಯ ಮನುಷ್ಯ ಬುದ್ದಿವಂತನಾಗಿ ಕೆಲಸ ಮಾಡುವುದಿಲ್ಲ. ವಿವೇಕಿ ಇದನ್ನು ನೋಡಬಲ್ಲ ಹಾಗೂ ಮನುಷ್ಯನ ಅವಶ್ಯಕತೆ ಏನೆಂಬುದನ್ನು ಗ್ರಹಿಸಬಲ್ಲ. ಮೂಲಭೂತವಾಗಿ ಮನುಷ್ಯನ ಅವಶ್ಯಕತೆಯೆಂದರೆ ನಾನಾರೆಂದು ವಿಚಾರಿಸುವುದು. ಏಕೆಂದರೆ ನಾನಾರೆಂದು ತಿಳಿಯದೆ, ನಾನೇನು ಮಾಡಿದರೂ ತಪ್ಪೆ ಆಗುತ್ತದೆ, ಅದು ನನ್ನ ಕೊರತೆಯನ್ನು ತುಂಬಲಾರದು. ನನ್ನನ್ನು ಪೂರ್ಣನನ್ನಾಗಿ ಮಾಡಲಾರದು. ಒಮ್ಮೆ ನಾನಾರೆಂಬುದನ್ನು ತಿಳಿದರೆ, ಆಗ ನಾನೇನು ಮಾಡಿದರೂ ಅದು ನನ್ನ ಐಶ್ವರ್ಯವನ್ನು, ನನ್ನ ಸಂಪತ್ತನ್ನು, ಆನಂದವನ್ನು, ನನ್ನ ಸಂತೋಷವನ್ನು ಅಧಿಕಗೊಳಿಸುವುದು. ಅದು ನನಗೆ ಆರ್ಶಿವಾದವಾಗುವುದು.
ಏಕೆಂದರೆ ಆಗ ನಾನು ನನ್ನ ಸ್ವಭಾವದಿಂದ ವ್ಯವಹರಿಸುತ್ತಿರುತ್ತೇನೆ. ತನ್ನ ಸ್ವಭಾವದಲ್ಲಿ ನೆಲೆ ನಿಲ್ಲುವುದು ಎಂದರೆ ಆನಂದವನ್ನು ತಿಳಿಯುವುದು. ತನ್ನ ಸ್ವಭಾವವನ್ನು ತಿಳಿಯದೆ, ತನ್ನ ಆಂತರಿಕ ಇರುವಿಕೆಯನ್ನು ತಿಳಿಯದೆ, ಒಬ್ಬನು ತಪ್ಪು ದಾರಿಯಲ್ಲಿ ಪಯಣಿಸುವುದು ಖಂಡಿತ. ಅಂತಹವನು ಮಾಡುವುದೆಲ್ಲ ಊಹಾಕೃತಿ, ಕೇವಲ ಪರರ ಅನುಕರಣೆ. ಮೂರ್ಖನೇ ಪರರನ್ನು ಅನುಕರಣೆ ಮಾಡುವವನು, ವಿವೇಕಿ ಅನುಕರಣೆ ಮಾಡುವುದಿಲ್ಲ. ತನ್ನ ಸ್ವಭಾವವೇನೆಂದು ತಿಳಿಯಲು ಪ್ರಯತ್ನ ಮಾಡುತ್ತಾನೆ ಎಂದೂ ಅನುಕರಣೆ ಮಾಡುವುದಿಲ್ಲ, ಎಂದೂ ಇತರರನ್ನು ಅನುಸರಿಸುವುದಿಲ್ಲ. ತನ್ನ ಅಂತರ್ವಾಣಿಯನ್ನು ಅನುಸರಿಸುತ್ತಾನೆ. ಸಾಮಾನ್ಯ ಮನುಷ್ಯ ಇತರರನ್ನು ಅನುಕರಣೆ ಮಾಡಲು ಪ್ರಯತ್ನ ಮಾಡುತ್ತಾನೆ. ಇತರರಂತೆ ಇರಲು ಸಾಧ್ಯವಾಗದಿದ್ದರೆ, ನಾನು ಕ್ಷುಲ್ಲಕನೆಂದು ಒಳಗೆ ಹಿಂಸೆಯನ್ನು ಅನುಭವಿಸುತ್ತಾನೆ. ಇಡೀ ಜನಾಂಗ ಈ ಭಾವನೆ ಯಿಂದ ದುಃಖ ಪಡುತ್ತಿದೆ. ಇದಕ್ಕೆ ಒಂದೇ ಒಂದು ಸಾಮಾನ್ಯ ಕಾರಣವೆಂದರೆ ಮತ್ತೊಬ್ಬರೊಂದಿಗೆ ಹೋಲಿಸಿ ತನ್ನನ್ನು ತಾನು ನೋಡಿಕೊಳ್ಳುವುದು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ತನ್ನಲ್ಲಿ ತಾನು ನೋಡಿಕೊಂಡರೆ ತನ್ನ ವಿಶೇಷಣೆಯು ಅರ್ಥವಾಗುವುದು. ಎಲ್ಲಾ ಕ್ಷುಲ್ಲಕತೆಯು ಮಾಯವಾಗುವುದು, ಆವಿಯಾಗಿ ಹೋಗುವುದು. ನಿನ್ನ ವಿಶೇಷತೆಯನ್ನು ತಿಳಿದಾಗ ಆನಂದ. ಎಲ್ಲರಿಂದಲೂ ಕಲಿಯಬಹುದು, ಆದರೆ ಅನುಕರಣೆ ಬೇಡ. ತನ್ನ ಪರಿಚಯ ತನಗಿಲ್ಲದಿರುವುದೇ ದುರಾಸೆ, ಪರಿಚಯವಾದಾಗ ಮಾಯವಾಗುವುದು. ದುರಾಸೆಯಿಂದ ದೂರವಾಗಲು, ದುರಾಸೆಯನ್ನು ದೂರಿಕರಿಸಲು ತನ್ನ ಪರಿಚಯ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ.
– ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Navavidha Bhakti : ನಮಸ್ಕಾರ ಸ್ವೀಕಾರಕ್ಕೆ ಯಾರು ಅಧಿಕಾರಿ? ಅವರಿಗೇನಿದೆ ಜವಾಬ್ದಾರಿ?