Site icon Vistara News

Prerane : ಕನ್ಯೆ ಎಂದರೆ ಯಾರು? ಈ ಪದಕ್ಕಿರುವ ಮಹತ್ವವೇನು?

prerane kanya spirituality women

#image_title

prerane Narsimha Bhatt

ನರಸಿಂಹ ಭಟ್ಟ
ಅನೇಕ ಸಹಸ್ರಮಾನಗಳಿಂದಲೂ ಭಾರತೀಯ ಸಂಸ್ಕೃತಿಯು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ಅದಕ್ಕೆ ಕಾರಣ ಪ್ರಕೃತಿ. ‘ದ್ವಿಧಾ ಕೃತ್ವಾ ಆತ್ಮನೋ ದೇಹಮ್ ಅರ್ಧೇನ ಪುರುಷೋಽಭವತ್ ಅರ್ಧೇನ ನಾರೀ’ ಎಂದು ಉಪನಿಷತ್ತು ಕೂಡಾ ಪ್ರಕೃತಿಯ ಪ್ರಾಧಾನ್ಯವನ್ನು ಪ್ರತಿಪಾದಿಸುತ್ತದೆ. ಪ್ರಕೃತಿ ಇಲ್ಲದೆ ಪುರುಷನಿಗೆ ಚೈತನ್ಯವಿಲ್ಲ. ಆದ್ದರಿಂದ ನಮ್ಮ ಪರಂಪರೆಯೂ ಕೂಡಾ ಪ್ರಕೃತಿಗೆ ಚೈತನ್ಯದಾಯಿತ್ವವನ್ನು ಪ್ರತಿಪಾದಿಸುತ್ತದೆ. ಈ ಪ್ರಕೃತಿಯು ನಾನಾ ದೆಶೆಯನ್ನು ಪಡೆಯುತ್ತದೆ. ಅವುಗಳಲ್ಲಿ ಮೊದಲನೆಯದೇ ‘ಕನ್ಯಾ’ ಎಂದು. ಆದಕಾರಣ ಕನ್ಯೆಯ ಸ್ವರೂಪ ಸ್ವಭಾವ ಮತ್ತು ಅದರ ಕಾರ್ಯಕ್ಷೇತ್ರವನ್ನು ಅನುಸಂಧಾನ ಮಾಡಬೇಕಾಗಿದೆ.

‘ಕನ –ದೀಪ್ತೌ’ ಧಾತುವಿಗೆ ‘ಯಕ್’ ಎಂಬ ಉಣಾದಿಪ್ರತ್ಯಯವನ್ನು ಸೇರಿಸಿದಾಗ ಕನ್ಯಾ ಎಂಬ ಶಬ್ದವು ಕುಮಾರೀ ಎಂಬ ಅರ್ಥವನ್ನು ಕೊಡುತ್ತದೆ. ‘ಕನ್ಯಾಯಾಃ ಕನೀನ ಚ’ ಎಂಬ ಪಾಣಿನಿ ಸೂತ್ರಪ್ರಕಾರವಾಗಿ ಇಲ್ಲಿ ‘ಙೀಷ್’ ಎಂಬ ಸ್ತ್ರೀ ಪ್ರತ್ಯಯದ ಬದಲಾಗಿ ‘ಟಾಪ್’ ಎಂಬ ಪ್ರತ್ಯಯವು ಬರುತ್ತದೆ. ಕನ್ಯಾ ಶಬ್ದವು ಹನ್ನೆರಡು ರಾಶಿಗಳಲ್ಲಿ ಒಂದಾಗಿಯೂ ಮತ್ತು ಒಂದು ಬಗೆಯ ಓಷಧಿ ಎಂಬ ಅರ್ಥವನ್ನೂ ಸುತಾ ಮೊದಲಾದ ಅರ್ಥಗಳಲ್ಲಿಯೂ ಬಳಕೆಯಲ್ಲಿದೆ.

ವಿಶೇಷವಾಗಿ ಕನ್ಯಾ ಶಬ್ದಕ್ಕೆ ದೀಪ್ತಿಮತೀ-ಕಾಂತಿ ಉಳ್ಳವಳು ಎಂಬ ಅರ್ಥವನ್ನು ನಾವಿಲ್ಲಿ ತೆಗೆದುಕೊಳ್ಳೋಣ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರದ್ಧಾಳುಗಳಾದ ನಾವು ಪ್ರತಿದಿನ ಬೆಳಗ್ಗೆ ಎದ್ದು ಈ ಶ್ಲೋಕವನ್ನು ಪಠಿಸುತ್ತೇವೆ;
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
ಪಂಚಕನ್ಯಾಃ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್ ||

ಎಂದು. ಈ ಕನ್ಯೆಯರು ನಮಗೆ ಆದರ್ಶರು. ಯಾಕೆ ಇಷ್ಟು ಆದರ್ಶರು? ಎಂಬುದಕ್ಕೆ ಅಷ್ಟಾಂಗಯೋಗ ವಿಜ್ಞಾನಮಂದಿರದ ಸಹಜಾಧ್ಯಕ್ಷರೂ ಯೋಗಿಗಳೂ ಆದ ಶ್ರೀರಂಗ ಮಹಾಗುರುಗಳು ಇವರ ಕನ್ಯಾ ಶ್ರೇಷ್ಠತ್ವವನ್ನು ವಿವರಿಸಿರುವುದನ್ನು ನೋಡಿದರೆ ಅವರ ಮೇಲೆ ನಮ್ಮ ಗೌರವ ಇಮ್ಮಡಿಯಾಗುವುದು. “ಸಾಮಾನ್ಯವಾಗಿ ವಿವಾಹದ ಅನಂತರದಲ್ಲಿ ಕನ್ಯೆಯರ ದೀಪ್ತಿಯು ನಶಿಸುತ್ತಾ ಹೋಗುತ್ತದೆ. ಆದರೆ ಅಹಲ್ಯಾದಿ ಈ ಕನ್ಯೆಯರ ಕಾಂತಿಯು ದಿನದಿಂದ ದಿನಕ್ಕೆ ದೇದೀಪ್ಯಮಾನವಾಗಿ ಹೋಗುತ್ತಿತ್ತು. ಇದಕ್ಕಾಗಿಯೇ ಇವರು ಪ್ರಾತಃಸ್ಮರಣೀಯರು. ಯಾರು ಆತ್ಮ ದೀಪ್ತಿಯ ಕಡೆಗೆ ಆಕರ್ಷಿಸುತ್ತಾರೋ ಅವರು ಪ್ರಾತಃಸ್ಮರಣೀಯರಾಗುತ್ತಾರೆ” ಎಂಬುದಾಗಿ. ಆದ್ದರಿಂದಲೇ ಭಾರತೀಯ ಪರಂಪರೆಯು ಕನ್ಯೆಗೆ ಅನುಪಮ ಮರ್ಯಾದೆಯನ್ನು ಕೊಟ್ಟಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಭಾರತೀಯರ ವಿವಾಹ ಸಂದರ್ಭದಲ್ಲಿ ಈ ವಿಷಯ ಅತ್ಯಂತ ಸ್ಪಷ್ಟವಾಗುತ್ತದೆ. ಅಲ್ಲಿ ಕನ್ಯೆಯ ತಂದೆಯಾದವನು ಈ ರೀತಿಯಾಗಿ ಸಂಕಲ್ಪ ಮಾಡುತ್ತಾನೆ. “ಲಕ್ಷ್ಮೀರೂಪಾಮ್ ಇಮಾಂ ಕನ್ಯಾಂ ಶ್ರೀಧರರೂಪಿಣೇ ವರಾಯ ಪ್ರದಾಸ್ಯಾಮಿ’ʼ ಎಂದು. ಕನ್ಯೆಯಲ್ಲಿ ಲಕ್ಷ್ಮಿಯನ್ನೋ ಪಾರ್ವತಿಯನ್ನೋ ಸರಸ್ವತಿಯನ್ನೊ ಭಾವಿಸುತ್ತಾರೆ. ಮತ್ತು ಎಲ್ಲಿ ಸ್ತ್ರೀಯರಿಗೆ ಸಮಾಜವು ಗೌರವಿಸುವುದೋ ಅಲ್ಲಿ ಸಕಲ ದೇವತೆಗಳೂ ನಲಿದು ನರ್ತಿಸುತ್ತಾರೆ. ಈ ಕಾರಣದಿಂದಲೇ ತಾಯಿಗೆ ಮೊದಲ ಪೂಜೆ ಸಲ್ಲುತ್ತದೆ; “ಮಾತೃದೇವೋ ಭವ | ಲಕ್ಷ್ಮೀನಾರಾಯಣಾಭ್ಯಾಂ ನಮಃ ಉಮಾಮಹೇಶ್ವರಾಭ್ಯಾಂ ನಮಃ ವಾಣೀವಿಧಾತೃಭ್ಯಾಂ ನಮಃ ಅರುಂಧತೀವಸಿಷ್ಠಾಭ್ಯಾಂ ನಮಃ” ಇತ್ಯಾದಿಯಾಗಿ. ಕೊನೆಯದಾಗಿ ಹೇಳುವುದಾರೆ ಕಾಂತಿಮತ್ವ ಮತ್ತು ಆತ್ಮದೀಪ್ತಿಕರ್ಷಣದಂತಹ ಅನೇಕ ಸದ್ಗುಣಗಳ ಗಣಿಯಾಗಿರುವುದರಿಂದ ಕನ್ಯೆಗೆ ಮಹತ್ವ ಬಂದಿದೆ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane : ದೇವರ ಅವತಾರ; ಏನಿದು ವಿಚಾರ?

Exit mobile version