Site icon Vistara News

Prerane : ನಾವು ನಿರ್ಮೋಹಿಗಳಾಗುವುದು ಹೇಗೆ?

spiritual nirmoha

ಶ್ರೀ ಕೈವಲ್ಯಾನಂದ ಸರಸ್ವತೀ
ನಿರ್ಮೋಹವೆನ್ನುವುದೇ ನಮ್ಮ ಸ್ವಸ್ವಭಾವ. ಸಾಮಾನ್ಯವಾದ ಮನುಷ್ಯ ಈ ಸ್ಥಿತಿಗೆ ಏರುವುದು ಹೇಗೆ? ಪ್ರಶ್ನೆ ಕೇಳಬಹುದು. ವಾಸ್ತವಾಂಶವೇನೆಂದರೆ, ಈ ಸ್ಥಿತಿಗೆ ಏರುವತನಕ ಪ್ರತಿ ಮನುಷ್ಯ ಸಾಮಾನ್ಯನೆ. ಆದ್ದರಿಂದ ʻಸಾಮಾನ್ಯ ಮನುಷ್ಯ ಈ ಸ್ಥಿತಿಗೆ ಏರುವುದು ಹೇಗೆ?’ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಎಲ್ಲಿಯವರೆಗೂ ಒಂದು ವಸ್ತುವಿಗೆ ಅಂಟಿಕೊಂಡಿರುವನೊ, ಅಥವಾ ವಿರೋಧಮಾಡುವನೋ, ಅಲ್ಲಿಯವರೆಗೂ ಸಾಮಾನ್ಯ ಮನುಷ್ಯನಾಗೇ ಇರುತ್ತಾನೆ.

ವಿಶೇಷತ್ವವು ನಿರ್ಮೋಹದಿಂದ ಬರುತ್ತದೆ. ಅದಕ್ಕೆ ಮುನ್ನ ಅಲ್ಲ. ಸಾಮಾನ್ಯ ಮನುಷ್ಯರು ಒಂದು ಮಾರ್ಗದಲ್ಲಿ ವಿಶೇಷವಾದವರು ಇನ್ನೊಂದು ಮಾರ್ಗದಲ್ಲಿ ನಿರ್ಮೋಹಕ್ಕೆ ಒಳಗಾಗುತ್ತಾರೆ ಎನ್ನುವುದಿಲ್ಲ. ಯಾವಾಗ ಇಷ್ಟಾನಿಷ್ಟಗಳನ್ನು ಮೀರುತ್ತಾನೋ, ಆಗ ಆತನು ವಿಶೇಷತ್ವವನ್ನು ಹೊಂದುತ್ತಾನೆ. ಆದ್ದರಿಂದ ನಿರ್ಮೋಹತ್ವವನ್ನು ಹೊಂದುವುದು ಹೇಗೆ? ಎಂಬುದು ಪ್ರಶ್ನೆ.

ಈ ಪ್ರಶ್ನೆಗೆ ಸಮಾಧಾನವನ್ನು ಕಂಡುಕೊಳ್ಳುವುದಕ್ಕೆ ಮುನ್ನ, ಒಂದು ವಿಷಯವನ್ನು ಜ್ಞಾಪಕದಲ್ಲಿಡಬೇಕು. ಅನಾಸಕ್ತಿ – ನಿರ್ಮೋಹವೆನ್ನುವುದು ಮನುಷ್ಯನ ಸ್ವಭಾವದಲ್ಲೇ ಹುದುಗಿದೆ. ಇದು ನಮ್ಮ ಮೂಲಭೂತ ಸ್ವಭಾವ. ನಮ್ಮ ಮೊದಲ ಮುಖ. ಇದು ಅರ್ಥವಾಗಬೇಕಾದರೆ, ನಿಮ್ಮ ನಿದ್ದೆಯ ಅನುಭವವನ್ನು ಸ್ವಲ್ಪ ಗಮನಿಸಿ. ಅಲ್ಲಿ ನೀವು ಯಾವರೀತಿ ಇದ್ದೀರ? ಎಚ್ಚರದ ಶರೀರಾದಿಗಳನ್ನು, ಕನಸಿನ ಶರೀರಾದಿಗಳನ್ನು – ಎಲ್ಲವನ್ನೂ ಕೊಡವಿಕೊಂಡು ನೀವೇ ನೀವಾಗಿರುತ್ತೀರಿ. ಯಾವುದರ ಅಂಟೂ ಇಲ್ಲದೆ ಕೇವಲ ಇರುವಾಗಿರುತ್ತೀರ. ಕೊಡವಿಕೊಂಡ ಶರೀರಾದಿಗಳು ನೀವಲ್ಲ. ಕೊಡವಿಕೊಳ್ಳಲಾಗದ, ‘ಇರುವೇ’ ನೀವು. ಶರೀರಗಳ ಸಮೇತ ವ್ಯವಹರಿಸುವಾಗಲೂ ಅದೇ ಇರುವಾಗಿರುತ್ತೀರ.
ಆದ್ದರಿಂದ ʻʻತನ್ನ ಸ್ವಭಾವವನ್ನು ಹೇಗೆ ತಿರಸ್ಕರಿಸಿದನು?ʼʼ ಎಂಬುದು ಸರಿಯಾದ ಪ್ರಶ್ನೆ. ನಿರ್ಮೋಹತ್ವವನ್ನು – ಅನಾಸಕ್ತಿಯನ್ನು ಅಭ್ಯಾಸ ಮಾಡಬೇಕಾದ ಅವಶ್ಯಕತೆ ಇಲ್ಲ. ಅದನ್ನು ಪಡೆಯಲು ಏನನ್ನಾದರೂ ಮಾಡುವ ಅವಶ್ಯಕತೆಯಿಲ್ಲ. ‘ನಾವು ನಮ್ಮ ಸ್ವಭಾವವನ್ನು ಬಿಟ್ಟು ಹೇಗೆ ದಾರಿತಪ್ಪಿ ಹೋಗಿದ್ದೇವೆ?’’- ಎಂಬುದನ್ನು ತಿಳಿದುಕೊಳ್ಳಬೇಕು. ಇದೇ ನಮ್ಮ ಮೂಲಭೂತ ಪ್ರಶ್ನೆ.

ಆದ್ದರಿಂದ ನಾವು ಅರ್ಥಮಾಡಿಕೊಳ್ಳಬೇಕಾದ ಮೊದಲ ವಿಷಯವೆಂದರೆ- ನಿರ್ಮೋಹವೆನ್ನುವುದೇ ನಮ್ಮ ಸ್ವಸ್ವಭಾವವು, ಅದಾಗಿಯೇ ಜನ್ಮಿಸಿರುತ್ತೇವೆ. ಅದು ನಮ್ಮ ಮೂಲಭೂತ ಮುಖ. ನಾವು ಕಣ್ಣುಗಳನ್ನು ಮುಚ್ಚಿ, ತೆಗೆಯುತ್ತೇವೆ ಎಂದು ಹೇಳುತ್ತೇವೆ. ಆದರೆ ತೆರೆಯುವುದು ಮುಚ್ಚಿಕೊಳ್ಳುವುದು ಬಾಹ್ಯಕ್ರಿಯೆ. ಕಣ್ಣುರೆಪ್ಪೆಗಳ ಕ್ರಿಯೆ. ಆದರೂ ಕಣ್ಣುಗಳು ಈ ಕ್ರಿಯೆಗಳಿಗೆ ಅಂಟದೇ, ಸಂಬಂಧವಿಲ್ಲದೆ ಇವೆ. ಕಣ್ಣುಗಳು ಈ ಎರಡು ಕ್ರಿಯೆಗಳಿಗೂ ಅತೀತ. ಇದೇರೀತಿ ನಮ್ಮ ಸ್ವಭಾವ – ಆತ್ಮ ವಸ್ತುತಃ ನಿರ್ಮೋಹ. ಮೋಹ, ದ್ವೇಷ ಅದಕ್ಕೆ ಬಾಹ್ಯದಲ್ಲಿ ನಡೆಯುತ್ತಿವೆ.

ಎರಡನೆಯ ವಿಷಯ: ನಮ್ಮ ಸ್ವಸ್ವಭಾವವನ್ನು ಪಡೆಯಬಹುದೇ ಹೊರತು, ಅದಕ್ಕೆ ಬೇರೆಯಾದದ್ದನ್ನು ಪಡೆಯಲಾಗದು. ನಮ್ಮ ಅಸ್ತಿತ್ವದ ಅಂತರಾಳದಲ್ಲಿ ನಾವು ಏನಾಗಿರುವೆವೋ, ಅದನ್ನೇ ಪಡೆಯುವೆವು. ನಿರ್ಮೋಹವೆಂಬುವುದು ಕೆಲವರ ಸ್ವಭಾವವಲ್ಲ. ಇದು ಪ್ರತಿಯೊಬ್ಬರ ಸ್ವಭಾವ. ಆತ್ಮ, ಮೋಹ ದ್ವೇಷಗಳಿಗೆ ಅತೀತವಾಗಿದೆ. ನಮ್ಮ ಅತ್ಯುನ್ನತವಾದ ಜ್ಞಾನಸ್ವರೂಪ ಅಂಟಿಕೊಳ್ಳುವಿಕೆ, ಬಿಡುವಿಕೆ – ಈ ಎರಡಕ್ಕೂ ಅತೀತವಾಗಿದೆ. ಆದರೆ ಮನುಷ್ಯ ತನ್ನ ಪ್ರವರ್ತನೆಯಲ್ಲಿ ಯಾವುದೋ ಒಂದಕ್ಕೆ ಅಂಟುಕೊಳ್ಳುವನು. ಇಲ್ಲವೇ ದೂರ ಹೋಗುವನು. ಇದು ಅವನ ಪ್ರವರ್ತನೆಗೆ ಸೇರಿದ್ದು.

ಬಾಹ್ಯದಲ್ಲಿ ಕಣ್ಣುರೆಪ್ಪೆಗಳಂತಿದೆ. ಪ್ರವರ್ತನೆ ಎಂದರೆ ಒಬ್ಬ ವ್ಯಕ್ತಿಯೊಡನೆ, ಒಂದು ವಸ್ತುವಿನ ಜತೆ, ಇಲ್ಲ ಮಾನಸಿಕ ವೃತ್ತಿಯೊಂದಿಗೆ ಸಂಬಂಧ ಹೊಂದುವಿಕೆ. ಸಂಬಂಧದಲ್ಲಿ ʻʻಇತರೆ’’ ಎನ್ನುವುದು ತಪ್ಪದೇ ಇರಬೇಕು. ಇನ್ನೊಂದಿಲ್ಲದೆ ಪ್ರವರ್ತನೆ ಸಾಧ್ಯವಾಗದು. ನೀವು ಏಕಾಂತದಲ್ಲಿದ್ದರೆ ಇದು ಸಾಧ್ಯವಾಗದು. ಸ್ವ-ಸ್ವಭಾವವೆಂದರೆ ತನಗೆ ತಾನು ತನ್ನಲ್ಲಿ ಏಕಾಂತವಾಗಿರುವುದು. ಏಕಾಂತವೆಂಬುದೇ ಸಹಜವಾದ ಆತ್ಮಲಕ್ಷಣ. ಜನಗಳಿಂದ, ವಸ್ತುಗಳಿಂದ, ಅಭಿಪ್ರಾಯಗಳಿಂದ, ಕಲ್ಪನೆಗಳಿಂದ ದೂರವಾಗಿ, ಸಂಪೂರ್ಣವಾಗಿ ಏಕಾಂತದಲ್ಲಿ ಬಿಟ್ಟರೆ – ಸಂಪೂರ್ಣವಾಗಿ ಏಕಾಂತದಲ್ಲಿದ್ದಾಗ – ಆ ಸ್ಥಿತಿಯಲ್ಲಿ ಮೋಹವಾಗಲಿ, ದ್ವೇಷವಾಗಲಿ ಇರಬಲ್ಲದೇ? ಇಲ್ಲ, ಇರಲಾರವು. ಏಕೆಂದರೆ ಏಕಾಂತಕ್ಕೆ ಇವೆರಡೂ ಅಸಂಗತವಾದವುಗಳು. ಏಕೆಂದರೆ ಅವು ಸಂಬಂಧದ ಪ್ರತಿಬಿಂಬಗಳು. ಒಂದು ಸಾರಿ ಸರ್ವ ಬಂಧಗಳಿಂದ ನಾನು ಹೊರಗಾದರೆ – ನಾನು ಏಕಾಂಗಿ, ಎಲ್ಲಿಯೂ ಅಂಟಿಕೊಂಡಿಲ್ಲ ಯಾವುದರಿಂದಲೂ ಮುಟ್ಟಲ್ಪಟ್ಟಿಲ್ಲ.

ʻಮತ್ತೊಂದು – ಇತರೆ’ ಎಂಬುದರ ಜತೆಯೇ ರಾಗ ದ್ವೇಷ. ಅದೇ ಬಂಧನವಾಗುವುದು. ಅದೇ ಗುಲಾಮನನ್ನಾಗಿ ಮಾಡುವುದು. ರಾಗದ್ವೇಷಗಳು ʻʻಇತರೆ ಎಂಬುದರ ಮೇಲೆ ಆಧಾರಪಡೆದಿದೆ. ʻʻಇತರೆ’’ ಎಂಬುದು ಎಲ್ಲ ಕಡೆಯಲ್ಲೂ ಇದೆ. ಒಂದು ಕಡೆ ಮಾತ್ರ ಇಲ್ಲ. ಆ ಸ್ಥಳವಾವುದೆಂದರೆ ನಿಮ್ಮ ಒಳಗೇ ಇರುವ ಅಸ್ತಿತ್ವವೇ, ಕೇಂದ್ರವೇ. ಅತ್ಯಂತ ಆಳವಾದ ನಿಮ್ಮ ಹೃದಯಭಾಗದಲ್ಲಿ ʻಇತರೆ’ ಎಂಬುದು ಇರದು.

ʻಇತರೆ’ ಎಂಬುದು ಅಲ್ಲಿ ಪ್ರವೇಶಿಸುವುದಿಲ್ಲವೆಂಬ ಅಭಿಪ್ರಾಯವಿಲ್ಲ. ಮತ್ತೇನೆಂದರೆ ನಿಮ್ಮ ಅತ್ಯಂತ ಆಳವಾದ ಹೃದಯದಲ್ಲಿ – ಅತ್ಯಂತ ಆಳವಾದ ಅಸ್ತಿತ್ವದ ಕೇಂದ್ರದಲ್ಲಿ ನೀವೇ ಅದೃಶ್ಯರಾಗುವಿರಿ – ಎಂದರೆ ಅಹಂಕಾರ ರಹಿತರಾಗುವಿರಿ. ಆದ್ದರಿಂದ ಅಲ್ಲಿ ಇತರೆ ಎಂಬುದು ಇರಲು ಮಾರ್ಗವೇ ಇಲ್ಲ. ನಮ್ಮ ಸ್ವರೂಪದ ಸ್ವಭಾವವಾವುವೆಂದರೆ ಅಹಂಕಾರವು ಎಲ್ಲಿ ಇಲ್ಲವಾಗುವುದೊ ಅದೇ ನಮ್ಮ ಸ್ವರೂಪ. ಅಹಂಕಾರಕ್ಕೂ ಸ್ವರೂಪಕ್ಕೂ ಯಾವ ಸಂಬಂಧವೂ ಇಲ್ಲ. ನಾವು ಈ ಜಗತ್ತಿನಲ್ಲಿ ಇಲ್ಲದಾಗ ಯಾವುದು ಇತ್ತೋ, ಈಗಲೂ ಯಾವುದು ಇದೆಯೋ, ನಾವು ಈ ಜಗತ್ತಿನಿಂದ ಹೊರಟುಹೋದ ನಂತರವೂ ಯಾವುದಿರುವುದೊ, ಅದೇ ನಮ್ಮ ಸ್ವರೂಪವು. ಯಾವುದು ಆದ್ಯಂತ ರಹಿತವೋ ಅದೇ ನಮ್ಮ ಸ್ವರೂಪ.

ಯಾವುದಿದೆಯೋ, ಯಾವುದು ‘ಅಹಂ’ ಸಂಪೂರ್ಣವಾಗಿ ಅದೃಶ್ಯವಾದ ನಂತರವೂ ಇರುವುದೊ, ಅದೇ ನಮ್ಮ ಸ್ವರೂಪ. ಯಾವುದು ಅಹಂ ಇಲ್ಲದೇ ಇರುವುದೋ, ಯಾವುದು ನಮ್ಮ ಮೂಲಭೂತವಾದ ಮುಖವೋ, ಅದೇ ನಮ್ಮ ಸ್ವಭಾವವು. ಗಾಢನಿದ್ರೆಯಲ್ಲಿ ಅಹಂ ಇಲ್ಲ. ಆದರೆ ಸ್ವರೂಪ ಇರುವುದು. ಸ್ವರೂಪವನ್ನೇ ನಿದ್ರೆ ಎನ್ನುತ್ತೇವೆ.

ಎಲ್ಲಿಯವರೆಗೂ ಪ್ರಪಂಚವಿರುವುದೊ ‘ಇತರೆ’ ಎಂಬುದು ಇರುವುದು. ಎಲ್ಲಿನವರೆಗೂ ʻʻನಾನು’’, ʻʻಅಹಂ’’ ಇರುವುದೊ, ʻʻಇತರೆ’’ ಎನ್ನುವುದು ಇರುವುದು. ಆದರೆ ಈ ವಿಷಯವನ್ನು ಮತ್ತೊಂದು ರೀತಿಯಲ್ಲಿ ನೋಡಬಹುದು. ಪ್ರಪಂಚವೆಂಬುದು ಅಹಂಕಾರವೆಂಬ ಭೂತಕನ್ನಡಿಯಲ್ಲಿ ನಾನು ನೋಡಿದ ಅಸ್ತಿತ್ವವೇ ವಿಷಯಿಯೇ. ಆದ್ದರಿಂದ ಪ್ರಪಂಚವೆಂಬುದು ʻʻಇತರೆ’’. ಎಲ್ಲಿಯವರೆಗೂ ‘ಅಹಂ’ ಇರುವುದೋ, ಅಲ್ಲಿಯವರೆಗೂ ‘ಅಹಂ’ ನೋಡುವುದೇ ಪ್ರಪಂಚ. ಅಹಂಕಾರವು ನಿಂತುಹೋದರೆ ʻಇತರೆ’ ಎಂಬುದೂ ನಿಂತುಹೋಗುತ್ತದೆ. ಆಗ ಮೋಹವನ್ನು ಹೊಂದುವುದಕ್ಕೆ ಯಾರು ಇರುವುದಿಲ್ಲ. ಯಾರಲ್ಲಿ ಮೋಹವನ್ನು ಹೊಂದಬೇಕು. ಯಾರಲ್ಲಿ ದ್ವೇಷವನ್ನು ಹೊಂದಬೇಕು.

ಆ ರೀತಿ ದ್ವೇಷವೊ ಮೋಹವೋ ಪಡೆಯುವವರು ಯಾರಿದ್ದಾರೆ? ಆಗ ನಾನು ಎಲ್ಲಿಯಾದರೂ ಒಂದು ಕಡೆ ಇರುವುದಿಲ್ಲ. ಸರ್ವವಸ್ತುಗಳಲ್ಲಿಯೂ, ಸರ್ವಸ್ಥಳಗಳಲ್ಲಿಯೂ ಇರಬಲ್ಲೆ. ಅನಾಸಕ್ತಿ, ನಿರ್ಮೋಹ – ನಮಗೆ ಸಹಜವಾದದ್ದು, ಆದರೆ ಅದಕ್ಕೆ ಏರುವುದು ಹೇಗೆ-ಆ ಸ್ವಸ್ಥಿತಿಯಲ್ಲಿ ನಿಲ್ಲುವುದು ಹೇಗೆ? ಈ ಮಾರ್ಗದಲ್ಲಿ ಒಂದು ದೊಡ್ಡ ತಪ್ಪನ್ನು ಮಾಡುತ್ತಿದ್ದೇವೆ. ಅದೇನೆಂದರೆ ನಿರ್ಮೋಹವನ್ನು ಸೇರಿಕೊಳ್ಳಲು ಮೋಹವಿರುವ ವಸ್ತುವು ಬಗ್ಗೆ ಅಯಿಷ್ಟವನ್ನು ಅಸಹ್ಯವನ್ನು ಬೆಳೆಸಿಕೊಳ್ಳುತ್ತಿದ್ದೇವೆ. ನಿರ್ಮೋಹದಲ್ಲಿ ಇದ್ದೇವೆ ಎಂಬ ಭ್ರಮೆಯಲ್ಲಿ ಬೀಳುತ್ತಿದ್ದೇವೆ. ಇದು ಸರಿಯಾದ ಮಾರ್ಗವಲ್ಲ.

ಸರಿಯಾದ ಮಾರ್ಗವೆಂದರೆ : ನಮ್ಮ ಅಸ್ತಿತ್ವದ ಕೇಂದ್ರವನ್ನು ತಪ್ಪಿಸಿ ಇತರತ್ರ ʻʻಇತರೆ’’ ಎನ್ನುವುದು ಇದೆ. ಆದ್ದರಿಂದ ನಮ್ಮ ಅಸ್ತಿತ್ವದ ಕೇಂದ್ರದ ಕಡೆ ಪ್ರಯಾಣ ಮಾಡಬೇಕು. ಅತ್ಯಂತ ಒಳಗೆ ಇರುವ ನಮ್ಮ ಅಸ್ಥಿತ್ವದ ಅಂತರ್ ಭಾಗವನ್ನು ಪ್ರವೇಶ ಮಾಡಬೇಕು. ಏಕಾಂತವಾದ, ನಿರ್ಜನವಾದ ಆ ಮಂದಿರಕ್ಕೆ ಇಳಿದುಹೋಗಬೇಕು. ಅಲ್ಲಿ ಯಾರು ಇರುವುದಿಲ್ಲ. ಸಾವು ಕೂಡ – ಅಂದರೆ ನಿಮ್ಮ ಅಹಂ ಕೂಡ ಇರುವುದಿಲ್ಲ. ಅದು ಸಂಪೂರ್ಣವಾಗಿ ಮೌನವಾದ ಸ್ಥಳ.
ಕಣ್ಣುಗಳು ಮುಚ್ಚಿಕೊಂಡರೆ ಆ ಸ್ಥಳವನ್ನು ಸೇರುತ್ತೇವೆಂದುಕೊಳ್ಳುತ್ತಾರೆ. ಕಣ್ಣು ಮುಚ್ಚಿದರೆ ಮಾನಸಿಕ ಪ್ರಪಂಚವಿರುವುದು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಆ ಪ್ರಪಂಚವನ್ನೂ ದಾಟಬೇಕು. ಶ್ರವಣದ ಮುಖಾಂತರ- ಭೌತಿಕ ಪ್ರಪಂಚ, ಮಾನಸಿಕ ಪ್ರಪಂಚ ಕೇವಲ ತೋರಿಕೆ ಎಂದು ನಿಶ್ಚಯವಾಗಬೇಕು. ಆಗ ಇರುವುದು ಆ ಮೌನ ಸ್ಥಳವು ಮಾತ್ರವೇ, ನಿರ್ಮೋಹವು ಮಾತ್ರವೇ. ವ್ಯವಹಾರ ನಡೆಯುತ್ತಿರುವಾಗಲೂ ಇರುವುದು ಅದೊಂದೆ. ನಿರ್ಮೋಹದಲ್ಲಿ ನಿಂತಿರುವವನ ನಡತೆ-ನಿರ್ಲಿಪ್ತತೆ. ಆತನ ಪ್ರವರ್ತನೆ ಇತರರ ಪ್ರವರ್ತನೆಗಿಂತಲೂ ಬೇರೆಯಾಗಿರುವುದು, ಭಿನ್ನವಾಗಿರುವುದು. ಸರ್ವವನ್ನೂ ಸ್ವೀಕರಿಸುವನು. ಇಷ್ಟವೂ ಇಲ್ಲ, ಅಯಿಷ್ಟವೂ ಇಲ್ಲ. ಪೂರ್ವದಲ್ಲಿ ಆತನ ಪ್ರವರ್ತನೆ ಒಂದು ಕ್ಯಾಮರಾದಂತೆ ಇರುತ್ತಿತ್ತು. ಅಂದರೆ ಬಂದದ್ದೆಲ್ಲವನ್ನು ಒಳಕ್ಕೆ ತೆಗೆದುಕೊಂಡು, ಒಳಗಡೆಯೇ ಇಟ್ಟುಕೊಳ್ಳುತ್ತಿದ್ದನು.

ಬಾಧೆಯನ್ನು ಅನುಭವಿಸುತ್ತಿದ್ದನು. ಈಗ ಕನ್ನಡಿಯಂತೆ ಇರುತ್ತಾನೆ. ಯಾವುದರ ಗುರುತು ಆತನಲ್ಲಿ ಬೀಳುವುದಿಲ್ಲ – ಅಂತಹ ಜ್ಞಾನಿ ಜನರ ಜತೆ ವ್ಯವಹಾರ ಮಾಡುವನು, ಆದರೆ ಇಷ್ಟಾನಿಷ್ಟಗಳನ್ನುಂಟುಮಾಡುವ ಸಂಬಂಧವನ್ನು ಬೆಳೆಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಬೆರೆತಿರುವನು. ಆದರೆ ತನ್ನ ಏಕಾಂತತೆ ಭ್ರಷ್ಟವಾಗದೆ ಇರುವನು.
ಹಾಗೂ ಯಾವುದರಿಂದಲೂ ಸ್ಪರ್ಶವಾಗದೆ ಇರುವನು. ಒಂದುವೇಳೆ ಜಗಳವಾಡುವ ಸಮಯ ಬಂದಲ್ಲಿ ಒಬ್ಬ ನಟನಂತೆ ಆಡುವನು. ಆತನು ಪ್ರೇಮಿಸುವನು. ಆದರೆ ಆತನ ಪ್ರೇಮ ನೀರಿನ ಮೇಲೆ ಬರೆದ ಗೆರೆಗಳಂತೆ. ಅಂದರೆ ಎಲ್ಲಿಗೂ, ಯಾರಿಗೂ, ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ, ಮೋಹಗೊಳ್ಳುವುದಿಲ್ಲ. ಸೂರ್ಯರಶ್ಮಿಯಂತೆ ಆತನ ಪ್ರೇಮ ಎಲ್ಲರಿಗೂ ಸಮ. ಆತನ ಪ್ರಜ್ಞಾದರ್ಪಣ ಪ್ರೇಮ ಹಾಗೂ ಯುದ್ಧ ಎರಡನ್ನೂ ಪ್ರತಿಬಿಂಬಿಸುವುದು.

ಇದನ್ನೂ ಓದಿ : Prerane : ನಮ್ಮ ದೇವರುಗಳು ಆಯುಧ ಹಿಡಿದಿರುವುದಾದರೂ ಏಕೆ?

ಆದರೆ ತನಗೆ ತಾನು ಯಾವುದರಿಂದಲೂ ಬದಲಾವಣೆಗೊಳ್ಳುವುದಿಲ್ಲ. ಆತನು ಏನು ಮಾಡಿದರೂ, ಆತನ ಚೈತನ್ಯ ನಿಶ್ಚಲವಾಗಿ ಕದಲದೆ, ಬಿರುಗಾಳಿಯ ಕೇಂದ್ರದಂತೆ ಇರುವುದು. ಆತನ ಪ್ರವರ್ತನೆ ಕೇವಲ ನಟನೆ;
ಆತನು ಕರ್ತನಾಗಿ ಉಳಿದಿರುವುದಿಲ್ಲ; ಆತನು ಜೀವಿತರಂಗದಲ್ಲಿ ನಟನಂತೆ ಇರುವನು.

Exit mobile version