ಕೆ. ಎಸ್. ರಾಜಗೋಪಾಲನ್
ಮಕ್ಕಳ ತಪ್ಪನ್ನು ತಿದ್ದಲು, ತಂದೆತಾಯಿಯರು ಶಿಕ್ಷೆ ಕೊಡುವುದುಂಟು. ವಿದ್ಯಾಶಾಲೆಗಳಲ್ಲಿ, ವಿದ್ಯಾರ್ಥಿಗಳ ತಪ್ಪನ್ನು ತಿದ್ದಲು, ಉಪಾಧ್ಯಾಯರು/ಮುಖ್ಯಸ್ಥರು ಶಿಕ್ಷೆಕೊಡುವುದುಂಟು. ಒಂದೇ ಅಪರಾಧಕ್ಕೆ ಎಲ್ಲರಿಗೂ ಏಕ ಪ್ರಕಾರದ ಶಿಕ್ಷೆ ಸೂಕ್ತವಲ್ಲ. “ಜಾಣನಿಗೆ ಮಾತಿನ ಪೆಟ್ಟು; ಕೋಣನಿಗೆ ದೊಣ್ಣೆಯ ಪೆಟ್ಟು” ಎಂಬ ಗಾದೆಯ ಮಾತು ಎಲ್ಲರಿಗೂ ತಿಳಿದದ್ದೇ. ದಪ್ಪ ಚರ್ಮದ ಎಮ್ಮೆಗೆ ಬಲವಾಗಿ ಹೊಡೆದರಷ್ಟೇ ಯಾರೋ ತನ್ನನ್ನು ಹೊಡೆಯುತ್ತಿದ್ದಾರೆಂದು ಅರಿವಿಗೆ ಬಂದೀತು; ಆದರೆ ಹಸುವಿಗೆ ಸಣ್ಣ ಏಟೇಸಾಕಷ್ಟೆ! ಹೀಗೆ ಸಂದರ್ಭಾನುಸಾರ ಶಿಕ್ಷೆಯ ಪ್ರಮಾಣ ಮತ್ತು ವಿಧಾನ, ವ್ಯತ್ಯಾಸ ಹೊಂದಬಹುದು.
ಒಟ್ಟಿನಲ್ಲಿ ಆಗಬೇಕಾದದ್ದು, ಅಪರಾಧಿಯ ಮನಃಪರಿವರ್ತನೆ. ನಮ್ಮ ದೇಶದಲ್ಲಿ ಧರ್ಮಶಾಸ್ತ್ರದ ಗುಂಪಿಗೆ ಸೇರುವ ಎಷ್ಟೋ ಗ್ರಂಥಗಳಿವೆ. ಅವುಗಳಲ್ಲೂ ಒಂದೇ ತಪ್ಪಿಗೆ, ಬೇರೆ ಬೇರೆಯವರಿಗೆ ಬೇರೆ ಬೇರೆ ತರಹದಶಿಕ್ಷೆಯನ್ನು ವಿಧಿಸುವಂತಹ ಮಾತುಗಳಿವೆ. ವಿಷಯದ ಆಳಕ್ಕೆ ಹೋಗದವರಿಗೆ ಇದು ತಾರತಮ್ಯವೆಂಬಂತೆ ಕಾಣಬಹುದು. ಆದರೆ ಪೂರ್ವಗ್ರಹ ವಿಲ್ಲದ ಮನಸ್ಸು ಹಾಗೂ ಸೂಕ್ತ ಮಾರ್ಗದರ್ಶನಗಳಿದ್ದರೆ, ಇಂದೂ ಆಶಿಕ್ಷಾ ವಿಧಾನಗಳ ಹಿಂಬದಿಯಲ್ಲಿರುವ ಮರ್ಮ ತಿಳಿದೀತು.
ಸಂಸ್ಕೃತದಲ್ಲಿ “ಶಿಕ್ಷ” ಎಂದರೆ “ತಿಳಿವಳಿಕೆಕೊಡುವುದು (to educate)” (ಶಿಕ್ಷ –ವಿದ್ಯೋಪಾದಾನೇ). ಇಂತಹ ಶಿಕ್ಷೆಯು (ಶಿಕ್ಷಣವು) ಸ್ವಾಗತಾರ್ಹವೇ. ಏಕೆಂದರೆ ಇಂತಹ ಶಿಕ್ಷೆ, ತಪ್ಪು ಮಾಡಿದವನ ಮೇಲೆಸೇಡು ತೀರಿಸಿಕೊಳ್ಳುವುದಲ್ಲ; ಅಪರಾಧಿಯು ಮತ್ತೊಮ್ಮೆ ಇಂತಹ ಅಪರಾಧವನ್ನು ಮಾಡದಂತೆ ಅರಿವನ್ನುಂಟುಮಾಡುವುದು.
ರಾಮಾಯಣದಲ್ಲೊಂದು ಸ್ವಾರಸ್ಯ ಪ್ರಸಂಗ. ವಿಭೀಷಣನು, ತನ್ನ ಅಣ್ಣನಾದ ರಾವಣನನ್ನು ತೊರೆದು ತನ್ನ ಆಪ್ತರೊಡನೆ ರಾಮನಲ್ಲಿ ಶರಣಾಗಲು ಬರುತ್ತಿದ್ದಾನೆ; ಅಂತಹವನನ್ನು ತಮ್ಮೊಡನೆ ಸೇರಿಸಿಕೊಳ್ಳುವುದೋ ಬೇಡವೋ ಎಂಬ ಜಿಜ್ಞಾಸೆ ವಾನರರಲ್ಲಿ ನಡೆಯುತ್ತದೆ. ರಾಮನು ಎಲ್ಲ ಮುಖ್ಯರ ಅಭಿಪ್ರಾಯವನ್ನೂ ತಿಳಿದುಕೊಳ್ಳುತ್ತಾನೆ. “ರಾಜ್ಯದ ಆಸೆಗಾಗಿ ತನ್ನ ಅಣ್ಣನನ್ನೇ ಬಿಟ್ಟುಬಂದ ವಿಭೀಷಣನನ್ನು ನಂಬಲಾಗದು” ಎನ್ನುತ್ತಾನೆ, ತನ್ನ ಅಣ್ಣ ವಾಲಿಗೆ ಎದುರಾಗಿನಿಂತಿದ್ದ ಸುಗ್ರೀವ! ಸುಗ್ರೀವನ ಈ ಮಾತಿಗೆ ಪ್ರತಿಕ್ರಿಯೆಯಾಗಿ ರಾಮನ ಮುಖದಲ್ಲಿ ಒಂದು ಸಣ್ಣ ನಗೆಯರಳುತ್ತದೆ.
ರಾಮನು, “ಸುಗ್ರೀವ! ವಿಭೀಷಣನಿರಲಿ, ರಾವಣನೇನನ್ನಲ್ಲಿ ಶರಣಾಗತನಾದರೂ ನಾನು ಅವನಿಗೆ ಅಭಯವನ್ನು ಕೊಡುತ್ತೇನೆ. ವಿಭೀಷಣನನ್ನು ಕರೆ ತಾ” ಎನ್ನುತ್ತಾನೆ. ರಾಮನಿಗೆ ರಾವಣನ ಬಗ್ಗೆ ವ್ಯಕ್ತಿಗತವಾದ ದ್ವೇಷವಿಲ್ಲ. ಒಂದು ಪಕ್ಷ ರಾವಣನು ಈಗ ವಿವೇಕಿಯಾಗಿ, ತನ್ನ ಅಪರಾಧಕ್ಕಾಗಿ ಪಶ್ಚಾತ್ತಾಪವನ್ನೂ ಪಡುವುದಾದಲ್ಲಿ, ಸಾತ್ತ್ವಿಕನಾಗಿಬಿಟ್ಟಿರುವ ಅವನಿಗೆ ಶಿಕ್ಷೆ ಕೊಡುವ ಪ್ರಮೇಯವೇ ಇಲ್ಲ ಎಂಬುದು ರಾಮನ ಅಭಿಮತ. ರಾವಣ ಸತ್ತಾಗ, ಇಂತಹ ದುಷ್ಕರ್ಮಿಗೆ ತಾನು ಸಂಸ್ಕಾರ ಮಾಡಬೇಕೆ ? ಎಂದು ವಿಭೀಷಣನೇ ಗೊಂದಲದಲ್ಲಿರುತ್ತಾನೆ. ಆಗ ರಾಮ “ವಿಭೀಷಣ, ಇವನಿಗೆ ಇನ್ನು ಸಂಸ್ಕಾರಮಾಡು; ರಾವಣನು ನಿನಗೆ ಹೇಗೆ ಅಣ್ಣನೋ ನನಗೂ ಹಾಗೆಯೇ ಅವನು” ಎನ್ನುತ್ತಾನೆ. ಅಧರ್ಮ ನಾಶವಷ್ಟೇ ರಾಮನ ಉದ್ದೇಶ. ಅದಕ್ಕಾಗಿ ರಾವಣನಿಗೆ ವಧರೂಪವಾದ ಶಿಕ್ಷೆ.
ಶಿಕ್ಷೆಯನ್ನು ವಿಧಿಸುವ ಸಂದರ್ಭಗಳು ಎಲ್ಲರಿಗೂ ಏರ್ಪಡದಿರಬಹುದು. ಆದರೆ ಇತರರ ತಪ್ಪುಗಳಿಗೆ ಪ್ರತಿಕ್ರಯಿಸುವಾಗ, ಅವರಿಗೆ ಹೇಗೆ ತಿಳಿವಳಿಕೆ ಕೊಡಬೇಕೆಂದು ಸಮಚಿತ್ತತೆಯಿಂದ ಆಲೋಚಿಸುವ ಕ್ರಮವನ್ನು ಬೆಳೆಸಿಕೊಳ್ಳಬೇಕು.
ಮಹಾಭಾರತದಲ್ಲೂ, ಶ್ರೀಕ್ರಷ್ಣನು ಮೊದಲು ದುರ್ಯೋಧನನ ಬಳಿ ಸಂಧಾನಕ್ಕೇಯತ್ನಿಸುತ್ತಾನೆ. ದುರ್ಯೋಧನ, ಪಾಂಡವರಿಗೆ (=ಧರ್ಮಕ್ಕೆ) ಒಂದು ಸೂಜಿ ಮೊನೆಯಷ್ಟೂ ಜಾಗವನ್ನು ಕೊಡಲೊಪ್ಪುವುದಿಲ್ಲ. ಕೆಲವೊಮ್ಮೆ, ಔಷಧಿಗೆ ಬಗ್ಗಲಾರದ ವ್ಯಾಧಿಯನ್ನು ಶಸ್ತ್ರಚಿಕಿತ್ಸೆಯಿಂದ ವೈದ್ಯನು ಪರಿಹರಿಸುವಂತೆ, ಶಸ್ತ್ರಾಸ್ತ್ರಚಿಕಿತ್ಸೆಯಿಂದ ದುರ್ಯೋಧನನನ್ನು ಪರಿಹರಿಸಲು, ಶ್ರೀಕೃಷ್ಣನು ಕ್ರಮಕೈಗೊಳ್ಳುತ್ತಾನೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ತಪ್ಪು ತಿಳಿವಳಿಕೆಯಿಂದಷ್ಟೇ ಮನುಷ್ಯ ತಪ್ಪು ಮಾಡುತ್ತಾನೆ. ಸರಿಯಾದ ಶಿಕ್ಷೆಯಿಂದಾಗಿ ಅಪರಾಧಿಗೆ ತಿಳಿವಳಿಕೆ ಬಂದು, ಮನಸ್ಸು ತಿಳಿಯಾದಲ್ಲಿ ಶಿಕ್ಷೆಯು ಸಾರ್ಥಕವಾದೀತು. ಆಗ ನಿಶ್ಚಿತವಾಗಿ ಶಿಕ್ಷೆಯು ರಕ್ಷೆಯೇ ಆಗುತ್ತದೆ.
– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ
ಇದನ್ನೂ ಓದಿ: Prerane : ಲಕ್ಷಣಜ್ಞಾನ ಎಂದರೇನು? ಇದರ ಮಹತ್ವವೇನು ಗೊತ್ತೇ?