Site icon Vistara News

Prerane : ಭಾರತದ ಆತ್ಮ; ಅಧ್ಯಾತ್ಮ

prerane morning spiritual thoughts in kannada about spiritual india

#image_title

ಪ್ರೊ. ಕೆ. ಎಸ್. ಕಣ್ಣನ್
ಜೀವನವು ಒಂದು ಪ್ರಯಾಣ ಎಂಬ ರೂಪಕವನ್ನು ಹಲವರು ಹೇಳಿದ್ದಾರಲ್ಲವೆ? ನಾವೆಲ್ಲ ಎಲ್ಲಿಂದ ಬಂದೆವು? – ಎಂಬುದು ಗೊತ್ತಿಲ್ಲ. ನಾವೆಲ್ಲಿಗೆ ಹೋಗುತ್ತಿದ್ದೇವೆ? – ಎಂಬುದೂ ಗೊತ್ತಿಲ್ಲ. ಈಗಂತೂ ಇಲ್ಲಿ ಇದ್ದೇವೆಂಬುದು ಗೊತ್ತು. “ನಾನು ಯಾರು?” ಎಂಬ ಪ್ರಶ್ನೆಗೇ ಉತ್ತರವು ಗೊತ್ತಿಲ್ಲ. ಎಂದೇ ಪ್ರಸಿದ್ಧ ಸ್ತೋತ್ರವೊಂದು ಕೇಳುತ್ತದೆ: ನೀನು ಯಾರು? ನಾನು ಯಾರು? ಬಂದದ್ದು ಎಲ್ಲಿಂದ? ನನ್ನ ತಾಯಿ ಯಾರು? ತಂದೆ ಯಾರು? – ಇದನ್ನೆಲ್ಲ ಪರಿಭಾವಿಸಬೇಕಯ್ಯಾ, ಎನ್ನುತ್ತದೆ ಆ ಮಾತು.

“ಕಸ್ತ್ವಂ ಕೋಽಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ …”

ಹಾಗೆಯೇ ಗೀತೆಯಲ್ಲಿ ಸಹ, “ಪ್ರಾಣಿಗಳ ಆದಿಯು ಅವ್ಯಕ್ತ; ಪ್ರಾಣಿಗಳ ಮಧ್ಯವು ವ್ಯಕ್ತ; ಪ್ರಾಣಿಗಳ ನಿಧನವೂ ಅವ್ಯಕ್ತ…!” – ಎಂದು ಹೇಳಲಾಗಿದೆ:

ಅವ್ಯಕ್ತಾದೀನಿ ಭೂತಾನಿ ವ್ಯಕ್ತ-ಮಧ್ಯಾನಿ ಭಾರತ| ಅವ್ಯಕ್ತ ನಿಧನಾನ್ಯೇವ” ಎಂದು.

ಪ್ರಯಾಣವು ಸಾಗಬೇಕಾದರೆ ಕಾಲ್ನಡಿಗೆಯಿಂದ ಆಗಬಹುದು. ಎತ್ತಿನ ಬಂಡಿಯು ಹಳ್ಳಿಗಳಲ್ಲಾದರೆ, ಪಟ್ಟಣ-ನಗರಗಳಲ್ಲಿ ಕುದುರೆಯೋ ಕುದುರೆ ಗಾಡಿಯೋ ಆಗುತ್ತಿತ್ತಷ್ಟೆ. ಎಂದೇ ಅವೇ ಪ್ರಚುರವಾಗಿದ್ದ ಕಾಲದಲ್ಲಿ, ರಥದಲ್ಲಿ ಸಾಗುವ ಲೆಕ್ಕವನ್ನಿಟ್ಟುಕೊಂಡು ಹೇಳುವಿಕೆಯೆಂಬುದು ಸಹಜವಾದದ್ದು. ಉಪನಿಷತ್ತಿನಲ್ಲಿ ರಥದ ಉದಾಹರಣೆಯೇ ಮೂಡಿಬಂದಿದೆ.

ಯಾವುದು ಈ ರಥ? ರಥದಲ್ಲಿ ಕುಳಿತು ನಿರ್ದಿಷ್ಟಲಕ್ಷ್ಯಕ್ಕೆ ಪ್ರಯಾಣ ಮಾಡುವವ, ಅಂದರೆ ಯಜಮಾನ, ಯಾರು? ಅರ್ಥಾತ್, ರಥಿ ಯಾರು? ರಥಿಗೊಬ್ಬ ಸಾರಥಿ ಯಾರು? ಸಾರಥಿಯು ತಾನೆ ರಥವೆತ್ತ ಸಾಗಬೇಕಾಗಿದೆಯೆಂದು ಖಚಿತಮಾಡಿಕೊಂಡಿರುವವನು? ಆತನ ಕೈಯಲ್ಲಿ ಲಗಾಮುಗಳಿರುತ್ತವೆ. ಲಗಾಮಿನ ಹಿಡಿತ-ಸೆಳೆತ-ಸಡಿಲಿಕೆಗಳಿಂದಲ್ಲವೆ ರಥವನ್ನು ಓಡಿಸುವುದು? ಆ ಲಗಾಮು ಯಾವುದು? ಲಗಾಮಿನಿಂದ ಆತನು ಕುದುರೆಯ ಅಥವಾ ಕುದುರೆಗಳ ಮೇಲೆ ಹತೋಟಿಯನ್ನಿಟ್ಟುಕೊಂಡಿರುವವನಲ್ಲವೆ? ಹಾಗಾದರೆ ಆ ಕುದುರೆಗಳು ಯಾವುವು? ಇಷ್ಟೆಲ್ಲ ಇದ್ದರೂ ಪ್ರಯಾಣದ ಕೊನೆ, ಅಂದರೆ ನಿಲ್ದಾಣವಾವುದು? ಅರ್ಥಾತ್ ಲಕ್ಷ್ಯವಾವುದು? – ಇಷ್ಟೆಲ್ಲ ಪ್ರಶ್ನೆಗಳು ಕಣ್ಣಮುಂದೆ ಬಂದು ನಿಲ್ಲುತ್ತವಲ್ಲವೆ?

ಇಷ್ಟೂ ಪ್ರಶ್ನೆಗಳಿಗೆ ಉತ್ತರವನ್ನು ಅತ್ಯಂತ ಸಂಕ್ಷಿಪ್ತವಾಗಿ ಉಪನಿಷತ್ತಿನಲ್ಲಿ ಕೊಡಲಾಗಿದೆ. ಕಠೋಪನಿಷತ್ತು ಹೀಗೆ ಹೇಳಿದೆ: “ನಾನು (ಅಥವಾ ಆತ್ಮ) – ಎನ್ನುವುದನ್ನೇ ರಥಿಯೆಂಬುದಾಗಿ ತಿಳಿದುಕೋ. ಈ ಶರೀರವೇ ರಥ. ಬುದ್ಧಿಯೇ ಸಾರಥಿ. ಮನಸ್ಸೇ ಲಗಾಮು. ಇಂದ್ರಿಯಗಳೇ ಕುದುರೆಗಳು.”

“ಯಾವನಲ್ಲಿ ವಿಜ್ಞಾನವಿಲ್ಲವೋ, ಯಾವನ ಮನಸ್ಸು ಯುಕ್ತವಾಗಿಲ್ಲವೋ ಅವನಿಗೆ ಇಂದ್ರಿಯಗಳು ವಶವಾಗಿರವು – ಸಾರಥಿಗೆ ಕೆಟ್ಟ ಕುದುರೆಗಳಿದ್ದಂತೆ.”

“ಯಾವನಲ್ಲಿ ವಿಜ್ಞಾನವುಂಟೋ, ಯಾವನ ಮನಸ್ಸು ಯುಕ್ತವಾಗಿರುವುದೋ ಅವನಿಗೆ ಇಂದ್ರಿಯಗಳು ವಶವಾಗಿರುವುವು – ಸಾರಥಿಗೆ ಒಳ್ಳೆಯ ಕುದುರೆಗಳಿದ್ದಂತೆ.”

ಏನು ವಿಜ್ಞಾನವೆಂದರೆ? ಉಪನಿಷತ್ತಿನಲ್ಲಿ ಬಂದಿರುವ ಈ “ವಿಜ್ಞಾನ”ಕ್ಕೆ ವಿಶೇಷವಾದ ಜ್ಞಾನ, ವಿಶೇಷವಾದ ಅರಿವು – ಎಂದರ್ಥ. ಹಾಗೆಯೇ ಮನಸ್ಸು ಯುಕ್ತವಾಗಿರುವುದು ಎಂದರೇನು? ಮನಸ್ಸಿಗೆ ಯೋಗವು ಬಂದಿದ್ದಲ್ಲಿ ಅದು “ಯುಕ್ತ”ವಾದ ಮನಸ್ಸು. ಯಾವ ಯೋಗ? ಯೋಗವೆಂದರೆ ಸೇರ್ಪಡೆ. ತಾನೇನು ಮಾಡಬೇಕೋ ಅದಕ್ಕೇ ಮನಸ್ಸು ಹೊಂದಿಕೊಂಡಿದ್ದರೆ, ಅದರಲ್ಲೇ ಸೇರಿಕೊಂಡಿದ್ದರೆ, ಅದು ಯುಕ್ತವಾದ ಮನಸ್ಸು. “ಮನಸ್ಸು ಯುಕ್ತವಾಗಿಲ್ಲ”ವೆಂದರೆ ಮನಸ್ಸಿನಲ್ಲಿ ಆ ಸೇರಿಕೊಂಡುಹೋಗಿರುವಿಕೆಯು ಬಂದಿಲ್ಲವೆಂದೇ. ಅಲ್ಲಿಗೆ ವಿಶೇಷವಾದ ಅರಿವೂ ಯುಕ್ತವಾದ ಮನಸ್ಸೂ ಇದೆಯೆಂದರೆ, ಸಾರಥಿಗೆ ಒಳ್ಳೆಯ ಕುದುರೆಗಳಿವೆ – ಎಂದರ್ಥ. ಇಲ್ಲವೋ ಕುದುರೆಗಳು ಒಳ್ಳೆಯವಲ್ಲ – ಎಂದೇ.

ಈ ವಿಜ್ಞಾನವಿಲ್ಲದಿದ್ದರೆ ಏನು ಪರಿಣಾಮವಾಗುವುದು? ಅದು ಇದ್ದರೆ ಏನು? – ಎಂಬ ಪ್ರಶ್ನೆಗಳು ಬರುವುವಲ್ಲವೆ? ಮೊದಲು ಅರಿವು ಸರಿಯಿರಬೇಕು. ಇಲ್ಲವೋ ಮನಸ್ಸು ಯುಕ್ತವಾಗಿರದು. ಮನಸ್ಸೇ ಯುಕ್ತವಾಗಿಲ್ಲ – ಎಂದರೆ, ಇನ್ನು ಕುದುರೆಗಳ ಬಗ್ಗೆ ಹೇಳುವುದೇನು? ಅವು ಸದಶ್ವ (ಒಳ್ಳೆಯ ಕುದುರೆ)ಗಳಲ್ಲ, ದುಷ್ಟಾಶ್ವ(ಕೆಟ್ಟ ಕುದುರೆ)ಗಳೇ ಸರಿ!

ಕುದುರೆಗಳು ಹೇಗಿದ್ದರೇನು? – ಎಂದು ಕೇಳಬಹುದಲ್ಲವೆ? ಕುದುರೆಗಳು ಒಳ್ಳೆಯವಾಗಿದ್ದರೆ ಗುರಿ ಮುಟ್ಟಬಹುದು. ದುಷ್ಟಾಶ್ವಗಳಾದರೆ ಲಕ್ಷ್ಯವನ್ನು ತಲುಪಲಾದೀತೇ?

ಹಾಗಿದ್ದರೆ ಜೀವನವೆಂಬ ಪ್ರಯಾಣಕ್ಕೆ ಗುರಿಯಾವುದು? ಅದನ್ನು ಉಪನಿಷತ್ತು, “ತದ್ ವಿಷ್ಣೋಃ ಪರಮಂ ಪದಮ್” “ವಿಷ್ಣುವಿನ ಆ ಪರಮಸ್ಥಾನ” ಎನ್ನುತ್ತದೆ. ಏಕೆ ಬೇಕು ಆ ಗುರಿ? – ಎಂಬ ಪ್ರಶ್ನೆಗೂ ಉತ್ತರವು ಅಲ್ಲೇ ಇದೆ: ಅದು ಮರು ಹುಟ್ಟಿಲ್ಲದ ಎಡೆ.

ಒಳ್ಳೆಯ ಕುದುರೆಗಳಾದರೆ, ಅರ್ಥಾತ್ ನಮ್ಮ ಇಂದ್ರಿಯಗಳು ಸತ್ಪ್ರವೃತ್ತಿಯನ್ನು ಹೊಂದಿದ್ದರೆ, ಆ ಪರಮಪದವನ್ನು ತಲುಪಬಹುದು. ದುಷ್ಟವಾದ ಕುದುರೆಗಳಾದರೆ ಪರಿಣಾಮವೇನು? ತತ್ಪರಿಣಾಮವೇ ಸಂಸಾರ.

ಸಂಸಾರವೆಂದರೇನು? ಸಂಸಾರವೆಂದರೆ ಸಂಸರಣ. ಸಂಸರಣವೆಂದರೆ ಸುತ್ತಿ ಸುತ್ತಿ ಬರುವುದು, ಬರುತ್ತಿರುವುದು. ಇದರಿಂದ ಏನು ನಷ್ಟ? – ಎಂದೂ ಕೇಳಬಹುದು. ದೆಹಲಿಯಲ್ಲಿ ಕನ್ನಾಟ್ ಸರ್ಕಸ್ (Connaught Circus) ಎಂದಿದೆಯಲ್ಲವೆ? ಅದು ವೃತ್ತಾಕಾರವಾಗಿದೆ. (Circus ಎಂದರೆ ಸುತ್ತೂ ಹೌದು). ಬೃಹದ್ವೃತ್ತ. ಆ ರಸ್ತೆಯಲ್ಲಿ ಸಾಗುತ್ತಿದ್ದರೆ ಮುಂದೆ ಮುಂದೆ ಹೋಗುತ್ತಲೇ ಇರುತ್ತೇವೆ. ಪ್ರ-ಗತಿಯಾಗುತ್ತಿದೆ ಎಂದೇ ತೋರುತ್ತದೆ. “ನಾವು ಪ್ರಗತಿಪರರು” – ಎಂದೇ ಎಂದುಕೊಳ್ಳು ತ್ತಿರುತ್ತೇವೆ. ಆದರೆ ಆಗುತ್ತಿರುವುದೇನು? ಮತ್ತೆ ಮತ್ತೆ ಸುತ್ತು! ಬಂದಲ್ಲಿಗೇ ಬರುತ್ತಿರು, ಹೋದಲ್ಲಿಗೇ ಸಾಗುತ್ತಿರು! ವಿಶೇಷವಾದ ಅರಿವಿಲ್ಲದಿದ್ದರೆ ಬರೀ ಚಕ್ರಭ್ರಮಣವೆಂದೇ ಗೊತ್ತಾಗದು; ಆಹಾ ಎಷ್ಟು ವೇಗವಾಗಿ ಹೋಗುತ್ತಿದ್ದೇನೆ! ಎಲ್ಲರನ್ನೂ ಮೀರಿಸುತ್ತಿದ್ದೇನೆ! – ಎಂದೇ ತೋರುತ್ತಿರುವುದು! ನೆಲೆಗಂಡೆವೆ? – ಎಂಬ ಪ್ರಶ್ನೆಯೇ ಬರದಿದ್ದರೆ ಲಾಭವೇನು?

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ನಾವಿರುವುದೇ ಸಂಸಾರಸ್ಥಿತಿಯಲ್ಲಿ; ಲಕ್ಷ್ಯವೇ ಪರಮಪದ – ಅದುವೇ ದಾರಿಯ ಕೊನೆ, ಜೀವನದ ನಿಲ್ದಾಣ, ನೆಲೆ.

ಉಪನಿಷತ್ತು ಕೊಟ್ಟಿರುವ ಈ ರೂಪಕವು ನಾವೇನು, ನಮ್ಮ ಪ್ರಸಕ್ತ ಸ್ಥಿತಿಯೇನು, ನಮ್ಮ ಗುರಿಯೇನು – ಎನ್ನುವುದನ್ನು ತಿಳಿಸುವುದು. ರಥ-ರಥಿ, ಸಾರಥಿ-ಲಗಾಮು, ಕುದುರೆ-ದಾರಿ, ಹಾಗೂ ನಿಲ್ದಾಣ-ಭ್ರಮಣಗಳನ್ನು ಸೊಗಸಾಗಿ ತೋರಿಸಿಕೊಟ್ಟಿದೆ.

ಉದಾಹರಣವೆಂದರೆ ಮೇಲಕ್ಕೆ(ಉತ್) ಎತ್ತುವುದು(ಆಹರಣ). ಅಜ್ಞಾನವೆಂಬ ಹಳ್ಳದಿಂದ ಜ್ಞಾನವೆಂಬ ಉನ್ನತಸ್ಥಾನಕ್ಕೆ ಎತ್ತುವುದೇ ಉದಾಹರಣೆ. ಮನಸ್ಸಿಗೆ ನಾಟುವ ಉದಾಹರಣೆ-ರೂಪಕಗಳ ಮೂಲಕ ನಮ್ಮನ್ನು ಉನ್ನತಸ್ಥಿತಿಗೆ ಒಯ್ದು ಸತ್ಯವನ್ನು ತೋರಿಸಿಕೊಡುವುವು, ನಮ್ಮ ಉಪನಿಷತ್ತುಗಳು.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane : ಸ್ಮೃತಿ, ವಿಸ್ಮೃತಿ, ಸಂಸ್ಕೃತಿ; ಇವುಗಳ ನಡುವಿನ ಸಂಬಂಧವೇನು?

Exit mobile version