Site icon Vistara News

Prerane : ಮರವು ನಮಗೆ ಆದರ್ಶವಾಗಬಲ್ಲದೇ ?

tree and spirituality

ಪ್ರೊ ಕೆ ಎಸ್ ಕಣ್ಣನ್
ಗಿಡಮರಗಳನ್ನು ಯಾರು ಕಂಡಿಲ್ಲ? ಲೋಕದಲ್ಲಿ ನಾವು ಕಾಣುವ ಮರಗಳೆಲ್ಲ ತಮ್ಮ ಬೇರಿನ ಆಧಾರದ ಮೇಲೆಯೇ ನಿಲ್ಲತಕ್ಕವು. ಬಿತ್ತ ಬೀಜವು ಮೊದಲು ಮಣ್ಣಿನೊಳಗೆ ದೃಢಗೊಂಡು, ಜೊತೆಗೇ ಮಣ್ಣಿನ ಮೇಲ್ಪದರವನ್ನು ಸೀಳಿಕೊಂಡು ಬಂದು ಸಸಿಯಾಗಿ, ಗಿಡವಾಗಿ, ಮರವಾಗಿ ಬೆಳೆಯುತ್ತದೆ. ಮರವು ನಮಗೆ ಕಾಣುವಂತೆ ದೊಡ್ಡದಾಗಿ ಬೆಳೆದಷ್ಟೂ, ಜೊತೆಗೇ, ಮತ್ತು ಅದಕ್ಕಿಂತ ಮುಖ್ಯವಾಗಿ, ಬೇರು ಭದ್ರವಾಗುತ್ತ ಹೋಗಿರುತ್ತದೆ.

ಮನುಷ್ಯರು ಕಟ್ಟುವ ಕಟ್ಟಡಗಳ ಸಮಾಚಾರ ಬೇರೆ. ಕೆಲವೊಮ್ಮೆ ಬುನಾದಿಯು ಭದ್ರವಾಗಿಲ್ಲವಾಗಿದ್ದು, ಕಟ್ಟಡವು ಬಂದ ಸ್ವಲ್ಪವೇ ಕಾಲಕ್ಕೇ ಕಟ್ಟಡವು ತಾನೇ ತಾನಾಗಿ ಸೀಳು ತೋರಿ ಕುಸಿದು ಉರುಳಿಬೀಳುವಂತಾಗುವುದು! ಆದರೆ ಗಿಡಮರಗಳು ಹಾಗಾದಾವೆ?

ಬುಡವನ್ನು ಭದ್ರಮಾಡಿಕೊಳ್ಳದೆ ಮರವು ಬೆಳೆದುದಿಲ್ಲ. ಬುಡವು ಗಟ್ಟಿಯಾಗುವ ಮುಂಚೆಯೇ ಬೆಳೆದುಕೊಂಡುಬಿಟ್ಟ ತಪ್ಪಿನಿಂದಾಗಿ ಮರವೊಂದು ಉರುಳಿಕೊಂಡಿತು–ಎಂಬುದಾಗಿ ನಾವು ಎಲ್ಲೂ ಕೇಳಿಲ್ಲ (ರೋಗ ಹತ್ತಿದ ಗಿಡದ ಮಾತು ಬೇರೆ). ಕೇಳಲು ಸಾಧ್ಯವೂ ಇಲ್ಲ. ಮರಗಳು ಅದೆಷ್ಟೆತ್ತರ ಬೆಳೆಯಬಲ್ಲವು! ಎಷ್ಟು ವಿಸ್ತಾರವಾಗಬಲ್ಲವು! ಇಷ್ಟಾಗಿ ನಿಂತ ಜಾಗದಲ್ಲೇ ಎಲ್ಲವನ್ನೂ ವ್ಯವಸ್ಥೆಮಾಡಿಕೊಳ್ಳಬಲ್ಲವು! ಬುಡಕ್ಕೆರೆದ ನೀರು ಸಮಸ್ತ ಶಾಖೋಪಶಾಖೆಗಳಿಗೂ ಸಲ್ಲುವುದು.

ಇಡೀ ವೃಕ್ಷವನ್ನು ಕಾಪಾಡುವ ಬೇರು ಮಾತ್ರ ಸಂಕೋಚದಿಂದಲೋ ಎಂಬಂತೆ ತೆರೆಯ ಮರೆಯಲ್ಲೇ–ಎಂದರೆ ನೆಲದ ಅಡಿಯಲ್ಲೇ–ಹುದುಗಿದ್ದು ತನ್ನ ಕಾರ್ಯವನ್ನು ಸದಾ ಸರ್ವದಾ ಮಾಡುತ್ತಲಿರುವುದು. ಆದರೆ ಬುಡಕ್ಕೇನಾದರೂ ಕೊಡಲಿ ಏಟು ಬಿದ್ದಿತೋ, ಇಡೀ ಮರವೇ ಉರುಳುವುದು: ಮರದ ಕಾಂಡ-ಬೇರುಗಳೇ ಮರದ ಆಧಾರ-ಸ್ತಂಭವಲ್ಲವೇ? ಕಾಣದ ಬೇರು ಅವ್ಯಕ್ತ, ಕಾಣುವ ಕಾಂಡ-ಶಾಖೆ-ಉಪಶಾಖೆ-ಪುಷ್ಪ-ಫಲಗಳು ವ್ಯಕ್ತ. ವ್ಯಕ್ತವಾದುದರ ಹಿಂದೆ ಆಧಾರಭೂತವಾದ ಅವ್ಯಕ್ತವಿದೆ. ಅವ್ಯಕ್ತವು ವ್ಯಕ್ತವನ್ನು ಸದಾಕಾಲ ರಕ್ಷಿಸುತ್ತದೆ. ಕೊಂಬೆಯೊಂದನ್ನು ಮುರಿದಷ್ಟಕ್ಕೆ ಮರವು ಸತ್ತುಹೋಗಿಬಿಡುವುದಿಲ್ಲ. ಆದರೆ ಮರದ ಬುಡ-ಬೇರುಗಳಿಗೆ ತೀವ್ರವಾದ ಹೊಡೆತ ಬಿತ್ತೋ, ಮರವು ತತ್ತರಿಸಿ ಹೋಗುತ್ತದೆ. ಇದನ್ನೇ “ಛಿನ್ನೇ ಮೂಲೇ ನೈವ ವೃಕ್ಷಂ ನ ಶಾಖಾ” ಎನ್ನುತ್ತಾರೆ.

ಇದಿಷ್ಟೂ ನಾವು ಸಾಧಾರಣವಾಗಿ ನೋಡುವ ಮರಗಳಿಗೆ ಸಲ್ಲುತ್ತದೆ. ಆದರೆ ಬೇರೊಂದು ವಿಚಿತ್ರವಾದ ಮರವೊಂದಿದೆಯಂತೆ. ಅದನ್ನು ಗೀತೆ-ಉಪನಿಷತ್ತುಗಳು ಹೇಳುತ್ತವೆ. ಅದರ ಬುಡವೇ ಮೇಲಿದೆಯಂತೆ. ಕೊಂಬೆಗಳು ಕೆಳಗಂತೆ!

“ಇಂತಹ ಮರವನ್ನು ಕಂಡಿದ್ದೀರಾ?” – ಎಂಬುದಾಗಿ ಶ್ರೀರಂಗ ಮಹಾಗುರುಗಳು ತಮ್ಮ ಶಿಷ್ಯರನ್ನು ಕೇಳಿದ್ದರು. ಯಾರು ಕಂಡಿರಲು ಸಾಧ್ಯ? ಇಲ್ಲವೆಂದೇ ಉತ್ತರವು ಸಹಜವಾಗಿಯೇ ಬಂದಿತು. “ನೀವೆಲ್ಲರೂ ಕಂಡೇ ಇರುವಿರಿ, ಕಾಣುತ್ತಲೂ ಇರುವಿರಿ” ಎಂಬ ಗುರುಗಳ ಮುಂದಿನ ಮಾತು ಮತ್ತೂ ಒಗಟಾಗಿಯೇ ಕಂಡಿತು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

“ಅಂತಹ ಮರವು ನೀವೇ ಆಗಿರುವಿರಿ” ಎಂದು ಹೇಳಿ ಮತ್ತೂ ಅಚ್ಚರಿಗೊಳಿಸಿದರು. ಅದು ಹೇಗೆಂದು ಕೇಳಿದ ಶಿಷ್ಯರಿಗೆ ಅವರಿತ್ತ ವಿವರಣೆ ಅದ್ಭುತವಾದದ್ದೇ. ನಾವೆಲ್ಲರೂ ಮೇಲ್ಬುಡದ ಮರಗಳೇ ಸರಿ ಏಕೆ? ಹೇಗೆ? ನಮ್ಮ ತಲೆಯೇ ಮೂಲ! ನಮ್ಮ ಕೈಕಾಲುಗಳೇ ಶಾಖೆಗಳು! (ತಲೆಯೇ ಮೂಲವೆಂದರೆ, ತಲೆಯೊಳಗಿನ ಮಸ್ತಿಷ್ಕವೇ ಮೂಲವೆಂದೇ ಅರ್ಥವಷ್ಟೆ). ಅದು ಮರೆಯಲ್ಲಿದ್ದು ಅವ್ಯಕ್ತವಾಗಿದೆ. ನಮ್ಮ ಮೈ-ಕೈ-ಕಾಲುಗಳೇ ಕಾಂಡ ಹಾಗೂ ಶಾಖೆಗಳು. (ಬೆರಳುಗಳನ್ನು ಉಪಶಾಖೆಗಳೆಂದು ಬೇಕಾದರೆ ಹೇಳೋಣವಂತೆ). ಇವುಗಳು ವ್ಯಕ್ತವಾಗಿವೆ. ವ್ಯಕ್ತವಾದುದೇ ಗೋಚರವಾಗುವುದು. ವ್ಯಕ್ತವಾದುದರಲ್ಲೇ ಚಲನ-ವಲನಗಳಾಗುವುದು. ಕೈಗೋ ಬೆರಳಿಗೋ ಉಗುರಿಗೋ ಘಾತವಾಯಿತೆನ್ನಿ, ಗಾಸಿಯಾಯಿತೆನ್ನಿ, ಅವು ಕತ್ತರಿಸಿಯೇ ಹೋದವೆನ್ನಿ–ಮನುಷ್ಯನಿನ್ನೂ ಬದುಕಿರಬಲ್ಲ! ಆದರೆ ತಲೆ ಹೋಯಿತೋ ಕಥೆ ಮುಗಿಯಿತು! ತಲೆ ಚೆನ್ನಾಗಿತ್ತೋ, ಮೈಯೆಲ್ಲ ಚೆನ್ನಾಗಿರುವುದು. ತಲೆ ಸರಿಯಿಲ್ಲವೋ ಮೈಯೆಲ್ಲವೂ ಚೆನ್ನಾಗಿದ್ದರೂ ಪ್ರಯೋಜನವಿಲ್ಲ. ವಾಸ್ತವವಾಗಿ ತಲೆಯು ಸರಿಯಿಲ್ಲದಿದ್ದಲ್ಲಿ ಮೈಯೆಲ್ಲಾ ಚೆನ್ನಾಗಿ ಬಹುಕಾಲವಿರಲು ಸಾಧ್ಯವೇ ಇಲ್ಲ! ಎಂದೇ ಶಿರಸ್ತ್ರಾಣ(ಹೆಲ್ಮೆಟ್)ವೆಂದು ತಲೆಗೇ ಮುಖ್ಯ ರಕ್ಷೆ ಕೊಡುವುದು.

ಇದನ್ನೂ ಓದಿ : Prerane : ಭಗವದ್ಗೀತೆಯಲ್ಲಿ ಸಮದರ್ಶಿತ್ವ; ಇದರ ನಿಜ ಅರ್ಥವೇನು?

ನಮ್ಮ ಸಾಧಾರಣ ಅನಿಸಿಕೆಯೆಂದರೆ ನಾವು ನಿಲ್ಲಲು ಕಾಲೇ ಆಧಾರವೆಂಬುದು. ಅದರೆ ಗುರುಗಳ ಉತ್ತರ ಸಾಧಾರಣ ಅನಿಸಿಕೆಯನ್ನು “ಬುಡಮೇಲು ಮಾಡು”ವಂತಹುದು! ವಿಶೇಷವಾದ ಅರಿವುಳ್ಳ ಜ್ಞಾನಿಗಳ ನೋಟವು ನಮ್ಮ ಸಾಮಾನ್ಯ “ಅರಿವ”ನ್ನು ತಲೆಕೆಳಗಾಗಿಸಿದರೂ ಮಾರ್ಮಿಕವಾಗಿರುತ್ತದೆ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

Exit mobile version