ಡಾ. ಗಣಪತಿ ಭಟ್
ಸ್ಪರ್ಧೆಯೊಂದರಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿನಿಯೊಬ್ಬಳು ಆ ಸ್ಪರ್ಧೆಯ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಳು. ತನ್ನ ಪ್ರತಿಭೆ, ಪರಿಶ್ರಮ ಹಾಗೂ ಪ್ರಸ್ತುತಿಯ ಬಗ್ಗೆ ವಿಶ್ವಾಸವಿದ್ದ ಕಾರಣ ಆಕೆ ಗೆಲುವು ತನಗೆ ಖಚಿತವೆಂದೇ ಅಂದು ಕೊಂಡಿದ್ದಳು. ಆದರೆ ಫಲಿತಾಂಶ ಅವಳ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತು. ತನಗೆ ಅನ್ಯಾಯವಾಯಿತೆಂದು ಆಯೋಜಕರ ಬಳಿ ಕೇಳಿದರೆ ಅವರು ನಿರ್ಣಾಯಕರ ತೀರ್ಮಾನವೇ ಅಂತಿಮವೆಂದರು.
ಖಿನ್ನಳಾಗಿ ಮನೆಗೆ ಬಂದ ಮಗಳನ್ನು ಕಂಡ ಆಕೆಯ ತಂದೆ “ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ಸಾಕಷ್ಟು ಜನ ಸ್ವಾರ್ಥಿಗಳೇ ಆಗಿರುತ್ತಾರೆ. ಅಂಥವರ ಧೋರಣೆಯಿಂದ ನೈಜಪ್ರತಿಭೆಗಳಿಗೆ ಕೆಲವೊಮ್ಮೆ ಅನ್ಯಾಯವಾಗುತ್ತದೆ. ಹಾಗಂತ ಪ್ರಯತ್ನ ಬಿಡಬಾರದು. ಜಗತ್ತಲ್ಲಿ ಪ್ರಾಮಾಣಿಕತೆಯೂ ಕೂಡ ಇನ್ನೂ ಬದುಕಿದೆ’ʼಎಂದೆನ್ನುತ್ತಾ ಸಮಾಧಾನ ಪಡಿಸಿದರು.
ಸಮಾಜದ ಪರಿಧಿಯಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸುವ ಮನುಷ್ಯನಿಗೆ ಸಾಮಾಜಿಕ ಬದ್ಧತೆಯಿರಬೇಕು. ಸ್ವಹಿತದ ಸಾಧನೆಗಾಗಿ ಅಥವಾ ಆಮಿಷಕ್ಕೆ ಒಳಗಾಗಿ ನ್ಯಾಯ ಸಮ್ಮತವಲ್ಲದ ಕಡೆಗೆ ವಾಲಿದರೆ ಒಂದಲ್ಲ ಒಂದು ದಿನ ನಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ಬರಬಹುದು ನಿಶ್ಚಿತ.
ರಾಜನಾಗಿದ್ದಾಗ ಧೃತರಾಷ್ಟ್ರನು ಕೇವಲ ತನ್ನ ಮಕ್ಕಳ ಬಗ್ಗೆ ಮಾತ್ರವೇ ಅಭಿಮಾನವನ್ನು ಹೊಂದಿ ಪಾಂಡವರನ್ನು ನಿಕೃಷ್ಟವಾಗಿ ಕಂಡನು. ಇದರ ಪರಿಣಾಮ ಮುಂದೇನಾಯಿತು ಗೊತ್ತೆ? ಮಹಾಭಾರತದ ಯುದ್ಧಾನಂತರ ತನ್ನ ಮಕ್ಕಳನ್ನು, ರಾಜ್ಯವನ್ನೂ ಕಳೆದುಕೊಂಡು ನಿರ್ಗತಿಕನಂತಾದ ಅದೇ ಧೃತರಾಷ್ಟ್ರನನ್ನು ಭೀಮನು ಪದೇ ಪದೇ ಹಂಗಿಸುತ್ತಿದ್ದ. ತಾನು ರಾಜನಾಗಿದ್ದಾಗ ಪಾಂಡವರನ್ನೂ ತನ್ನ ಮಕ್ಕಳಂತೆಯೇ ಕಂಡಿದ್ದರೆ ಮುಂದೊಂದು ದಿನ ಪಾಂಡವರ ಪ್ರೀತಿಯಾದರೂ ಆತನಿಗೆ ಧಕ್ಕುತ್ತಿತ್ತೇನೊ?
ಭಗವಂತನು ಎಲ್ಲವನ್ನೂ ನಮಗೆ ಕರುಣಿಸಿರುವಾಗ ಎಲ್ಲರನ್ನೂ ನಮ್ಮವರಂತೆ ಕಾಣಬೇಕಾದುದು ಮಾನವಧರ್ಮ.
ದ್ರೌಪದಿಗೆ ತನ್ನ ಐವರು ಗಂಡಂದಿರ ಪೈಕಿ ಅರ್ಜುನನ ಮೇಲೆ ವಿಶೇಷವಾದ ಪ್ರೀತಿಯಿತ್ತು. ಈ ಪಕ್ಷಪಾತ ಧೋರಣೆಯಿಂದಾಗಿಯೇ ಆಕೆ ಸಶರೀರಿಯಾಗಿ ಸ್ವರ್ಗಾರೋಹಣ ಮಾಡಲಾಗಲಿಲ್ಲ. ನ್ಯಾಯಸಮ್ಮತವಲ್ಲದ ಪಕ್ಷಪಾತವು ಲವಲೇಶದಷ್ಟೂ ನಮ್ಮ ಮನಸಲ್ಲಿ ಸುಳಿಯಬಾರದು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಉನ್ನತವಾದ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿದ್ದರಂತೂ ಯಾವ ಹಂಗೂ ಇಲ್ಲದೆ ನಿಷ್ಪಕ್ಷಪಾತಿಯಾಗಿರಬೇಕು. ಕವಿ ಪಂಡಿತರಾಜ ಜಗನ್ನಾಥನು ತನ್ನ ಭಾಮಿನೀವಿಲಾಸ ಕೃತಿಯಲ್ಲಿ ಈ ಕುರಿತು ಸೊಗಸಾಗಿ ಹೇಳಿದ್ದಾನೆ:
ನಾಪೇಕ್ಷಾ ನ ಚ ದಾಕ್ಷಿಣ್ಯಂ ನ ಪ್ರೀತಿರ್ನ ಚ ಸಂಗತಿಃ|
ತಥಾಪಿ ಹರತೇ ತಾಪಂ ಲೋಕಾನಾಮುನ್ನತೋ ಘನಃ||
ಎತ್ತರದ ಸ್ಥಾನದಲ್ಲಿರುವ ವ್ಯಕ್ತಿಯು ಹೇಗೆ ನಿಶ್ಪಕ್ಷಪಾತಿಯಾಗಿರಬೇಕು ಎಂಬುದಕ್ಕೆ ಮೋಡವೇ ನಿದರ್ಶನ. ಎತ್ತರ ವಾದ ಆಕಾಶದಲ್ಲಿರುವ ಮೋಡವು ಏನನ್ನೂ ಬಯಸುವುದಿಲ್ಲ. ಯಾರ ಬಗ್ಗೆಯೂ ಅದಕ್ಕೆ ದಾಕ್ಷಿಣ್ಯವಿಲ್ಲ, ಒಲವೂ ಇಲ್ಲ. ಯಾರ ಸಹವಾಸವನ್ನೂ ಮಾಡುವುದಿಲ್ಲ. ಆದರೂ ಕೂಡ ಅದು ತನ್ನ ಪಾಡಿಗೆ ಮಳೆ ಸುರಿಸಿ ಎಲ್ಲರ ತಾಪವನ್ನು ಪರಿಹರಿಸುತ್ತದೆಯಲ್ಲವೆ? ಅಂತೆಯೇ ಮನುಷ್ಯನು ಉನ್ನತ ಸ್ಥಾನವನ್ನು ಪಡೆದ ಮೇಲೆ ಸ್ಥಾನ ಭ್ರಷ್ಟರಾಗದಂತೆ ಬದುಕಬೇಕು. ಬಹುಜನರ ಹಿತ ಮತ್ತು ಬಹು ಜನರ ಲಾಭವೇ ಧ್ಯೇಯವಾಗಬೇಕು.
ನೆನಪಿರಲಿ; ನಿಷ್ಪಕ್ಷವಾದ ನಡೆಯಿದ್ದರೆ ಮಾತ್ರವೇ ಮನುಷ್ಯನು ಮಹಾನ್ ವ್ಯಕ್ತಿಯಾಗಬಲ್ಲ.
ಲೇಖಕರು ಸಂಸ್ಕೃತ ಪ್ರಾಧ್ಯಾಪಕರು, ಎ.ಎಸ್.ಸಿ ಮಹಾವಿದ್ಯಾಲಯ, ಬೆಂಗಳೂರು
ಇದನ್ನು ಓದಿ: Prerane : ಪುನರ್ಜನ್ಮವಿರದ ಕೇಶವದರ್ಶನ ರಥೋತ್ಸವ