Site icon Vistara News

Prerane | ಸಪ್ತ ಪ್ರಾಣಗಳೆಂಬ ಸಪ್ತ ವೃಷಭಗಳು

Prerane

ಸುಬ್ರಹ್ಮಣ್ಯ ಸೋಮಯಾಜಿ
ಶ್ರೀಕೃಷ್ಣನ ಅಷ್ಟ ಮಹಿಷಿಯರಲ್ಲೊಬ್ಬಳಾದ ಕೋಸಲದೇಶದ ಸತ್ಯಾ ದೇವಿಯನ್ನು ಶ್ರೀಕೃಷ್ಣನು ವರಿಸುವ ಸಂದರ್ಭ. ಸತ್ಯಾದೇವಿ ಶ್ರೀ ಕೃಷ್ಣನನ್ನು ನೋಡಿದೊಡನೆಯೇ ಅವನನ್ನೇ ತನ್ನ ಪತಿಯೆಂದು ಮನಸ್ಸಿನಲ್ಲಿಯೇ ವರಿಸಿರುತ್ತಾಳೆ. ಶ್ರೀಕೃಷ್ಣನು ಸತ್ಯೆಯ ತಂದೆ ನಗ್ನಜಿತನ ಹತ್ತಿರ ಕನ್ಯೆಯಾದ ಸತ್ಯೆಯನ್ನು ಯಾಚಿಸುತ್ತಾನೆ. ನಗ್ನಜಿತನಿಗೆ ತನ್ನ ಮಗಳನ್ನು ಶ್ರೀಕೃಷ್ಣನಿಗೆ ಕೊಟ್ಟು ವಿವಾಹಮಾಡಲು ಇಷ್ಟವಿದ್ದರೂ, ಅದಕ್ಕೆ ಪೂರ್ವಭಾವಿಯಾಗಿ ಒಂದು ಸ್ಪರ್ಧೆಯನ್ನು ಘೋಷಿಸಿರುತ್ತಾನೆ.

ಅತಿ ಬಲಿಷ್ಠವಾದ, ದಮನ ಮಾಡಲು ಅತ್ಯಂತ ಕಷ್ಟಸಾಧ್ಯವಾದ ಸಪ್ತ ವೃಷಭಗಳನ್ನು ಪಳಗಿಸಿ ಕಟ್ಟಿಹಾಕಬಲ್ಲವನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುತ್ತೇನೆ ಎಂಬುದೇ ಆ ಸ್ಪರ್ಧೆ. ಅದನ್ನೇ ಶ್ರೀ ಕೃಷ್ಣನಲ್ಲಿ ಅರಿಕೆ ಮಾಡುತ್ತಾನೆ. ಆ ವೃಷಭಗಳಾದರೋ ಒಂದೊಂದೂ ಅತಿ ಭಯಂಕರ, ಬಲಿಷ್ಠ, ಮದೋನ್ಮತ್ತವಾದವುಗಳು. ಅಂತಹ ಏಳು ವೃಷಭಗಳನ್ನು ಮಣಿಸುವುದು ದುಸ್ಸಾಧ್ಯವಾಗಿ ವೀರಾಧಿವೀರರಾದ ಕ್ಷತ್ರಿಯರೆಲ್ಲ ಈ ಸ್ಪರ್ಧೆಯಲ್ಲಿ ಸೋಲುತ್ತಾರೆ. ಶ್ರೀಕೃಷ್ಣನು ತನ್ನನ್ನೇ ಏಳು ವಿಭಾಗ ಮಾಡಿಕೊಂಡು ಒಂದೊಂದನ್ನೂ ಎದುರಿಸುತ್ತಾನೆ.

ಅವನ ಪರಾಕ್ರಮದ ಮುಂದೆ ಆ ವೃಷಭಗಳೆಲ್ಲವೂ ವಶದಲ್ಲಿರುವ ಎತ್ತುಗಳಂತಾಗುತ್ತವೆ. ಅವನು ಅವುಗಳನ್ನು ಲೀಲಾಜಾಲವಾಗಿ ಕಟ್ಟಿಹಾಕುತ್ತಾನೆ. ಬಾಲಕನು ಮರದ ಬೊಂಬೆಗಳನ್ನು ಎಳೆಯುವಂತೆ ಎಳೆದು ಕಟ್ಟಿಹಾಕುತ್ತಾನೆ ಎಂದು ಶ್ರೀಮದ್ಭಾಗವತವು ವರ್ಣಿಸುತ್ತದೆ. ನಂತರ, ಪಂದ್ಯದ ನಿಯಮದಂತೆ ಸಂತೋಷವಾಗಿ ಶ್ರೀಕೃಷ್ಣನ ವಿವಾಹ ನೆರವೇರುತ್ತದೆ. ಇದು ಹೊರಗಿನ ಸಮಾಚಾರ.

ಇಲ್ಲಿ ಸಪ್ತ ವೃಷಭಗಳೇ ಸಪ್ತ ಪ್ರಾಣಗಳು. ಪ್ರಾಣಶಕ್ತಿಗಳು ಅತ್ಯಂತ ಬಲಿಷ್ಠ. ಅವುಗಳನ್ನು ಜಯಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತಪಸ್ಸು, ಇಂದ್ರಿಯ ಸಂಯಮ ಎಲ್ಲವೂ ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುತ್ತವೆ. ಯಾರು ಪ್ರಾಣಶಕ್ತಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಲ್ಲನೋ ಅವನೇ ಸಪ್ತ ವೃಷಭಗಳನ್ನು ಸುಲಭವಾಗಿ ಜಯಿಸಬಲ್ಲನು. ನರ ವೃಷಭನಾದ ಶ್ರೀ ಕೃಷ್ಣನು ಮಾತ್ರವೇ “ಸಪ್ತ ಪ್ರಾಣಾ: ಪ್ರಭವಂತಿ” ಎಂದಂತೆ ಪ್ರಾಣಕ್ಕೂ ಪ್ರಾಣನಾದ ಸ್ವಾಮಿಯಾದುದರಿಂದ ಪ್ರಾಣಗಳನ್ನು ಕಟ್ಟಿಹಾಕಬಲ್ಲ! ಹುಚ್ಚೆದ್ದು ಕುಣಿಯುವ ಪ್ರಾಣಗಳನ್ನು ಒಂದೊಂದಾಗಿ ಎಳೆದು ಕಟ್ಟಬಲ್ಲ ಮಹಾಪ್ರಾಣ ಅವನು. ಹಾಗೆ ಪ್ರಾಣಗಳನ್ನು ಕಟ್ಟಿಹಾಕಿ ಪ್ರಕೃತಿಯನ್ನು ತನ್ನ ವಶದಲ್ಲಿ ಇರಿಸಿಕೊಳ್ಳುವ ಪರಮಪುರುಷ ಶ್ರೀಕೃಷ್ಣ ಎಂಬ ಧ್ವನಿ ಈ ಕಥೆಯ ಹಿಂಬದಿಯಲ್ಲಿದೆ.

ಪ್ರಾಣ ಶಕ್ತಿಗಳನ್ನು ವಶದಲ್ಲಿಟ್ಟುಕೊಂಡು ಅವನ್ನು ಊರ್ಧ್ವಮುಖವಾಗಿ ಸಂಚರಿಸುವಂತೆ ಮಾಡಿ ನಮ್ಮೊಳಗೇ ಬೆಳಗುತ್ತಿರುವ ಪರಮಾತ್ಮನನ್ನು ನೋಡಿ ಶಾಶ್ವತವಾದ ನೆಮ್ಮದಿಯನ್ನು ಅನುಭವಿಸುವುದಕ್ಕಾಗಿಯೇ ಪ್ರಾಣಾಯಾಮ ವಿದ್ಯೆಯನ್ನು ನಮ್ಮ ದೇಶದ ಮಹರ್ಷಿಗಳು ಪ್ರಕಾಶಗೊಳಿಸಿದ್ದಾರೆ.

ಋಷಿಸಂಸ್ಕೃತಿಯಲ್ಲಿ ಬಂದಿರುವ ಆಚಾರ ವಿಚಾರಗಳು, ಜೀವನ ವಿಧಾನಗಳು ಎಲ್ಲವೂ ಐಹಿಕ ಪಾರಮಾರ್ಥಿಕ ಜೀವನಗಳ ಸೌಖ್ಯವನ್ನು ಉದ್ದೇಶವಾಗಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ಪ್ರಾಣಗಳ ಗತಿಯನ್ನು ನಿಯಮನ ಮಾಡುವ ಉಪಾಯದಿಂದ ಕೂಡಿದೆ. ಎಲ್ಲಾ ಪ್ರಾಣಗಳನ್ನು ಮೇಲಕ್ಕೊಯ್ಯುವ ಪ್ರಣವನಾದದಿಂದಲೇ ಇಲ್ಲಿನ ಎಲ್ಲಾ ಕಲಾಪಗಳೂ ಆರಂಭವಾಗುವುದು.

ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ-“ಪ್ರಣವವು ಎಲ್ಲಾ ಪ್ರಾಣಗಳನ್ನೂ ಮೇಲೊಯ್ದು ಪರಂಜ್ಯೋತಿಯಲ್ಲಿ ಸೇರಿಸುವುದು. ಪರಾ-ಅಪರಾ ವಿದ್ಯೆಗಳು ಹೊರಟದ್ದು ಅದರಿಂದಲೇ. ಪ್ರಣವರೂಪವಾದ ನಾದದಿಂದಲೇ ಭಾರತೀಯ ವಿದ್ಯಾ ಸ್ಥಾನಗಳು ಹೊರಬಂದಿವೆ”. ಪ್ರಾಣಗಳಿಗೆಲ್ಲ ಪ್ರಾಣನಾಗಿ ಬೆಳಗುವ ಶ್ರೀ ಕೃಷ್ಣ ಪರಂಜ್ಯೋತಿಯು ನಮ್ಮ ಮನಸ್ಸುಗಳನ್ನು ಅಂತಹ ಸಾಧನೆಗೆ ಪ್ರೇರೇಪಿಸಲಿ ಎಂದು ಪ್ರಾರ್ಥಿಸೋಣ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Sabarimala News | ಶಬರಿಮಲೆಯಲ್ಲಿ ಯಾವ ಸಮಯದಲ್ಲಿ ಏನು ಪೂಜೆ ನಡೆಯುತ್ತಿದೆ?

Exit mobile version