Site icon Vistara News

Prerane | ಯೋಗ ಹಾಗೂ ಭಾವನಾತ್ಮಕ ಪ್ರಜ್ಞೆ 

PRERANE

ಜಿ ನಾಗರಾಜ
ಇಂದು ಕಾರ್ಪೊರೇಟ್ ವಲಯದಲ್ಲಿ ನಾಯಕತ್ವದ ಗುಣಗಳು, ಅವುಗಳನ್ನು ಬೆಳೆಸಿಕೊಳ್ಳುವ ರೀತಿಗಳ ಬಗ್ಗೆ ಚರ್ಚೋಪಚರ್ಚೆಗಳು ನಡೆಯುತ್ತಿರುತ್ತವೆ. ಇಂದಿನ ಉದ್ಯಮ ವಲಯದಲ್ಲಿ ಮಾನಸಿಕ ಒತ್ತಡ ಸಾಮಾನ್ಯ ಮತ್ತು ಅದರಿಂದ ಉಂಟಾಗುವ ಖಿನ್ನತೆ (depression), ಅದರ ಅತಿರೇಕ ರೂಪವಾದ ಆತ್ಮಹತ್ಯೆ ಇತ್ಯಾದಿಗಳೂ ಅಲ್ಲಲ್ಲಿ ಕೇಳಿಬರುತ್ತವೆ. ಇಂತಹ ವಾತಾವರಣದಲ್ಲಿ ಯಶಸ್ಸು ದೊರಕಬೇಕಾದರೆ ನಾಯಕತ್ವ (Leadership) ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ನಾಯಕತ್ವದ ಮೂರು ಪ್ರಧಾನ ಮುಖಗಳೆಂದರೆ

ನಾಯಕತ್ವದ ಮೂರನೇ ಮುಖವಾದ ಉಲ್ಲಾಸಮಯ ವಾತಾವರಣದ ನಿರ್ವಹಣೆಗೆ ಅವಶ್ಯಕವಾದ ಸಾಮರ್ಥ್ಯವೆಂದರೆ ಭಾವನಾತ್ಮಕ ಪ್ರಜ್ಞೆ (Emotional Intelligence ). ತನ್ನ ಹಾಗೂ ಇತರರ ಭಾವನೆಗಳನ್ನು ಅರ್ಥ ಮಾಡಿಕೊಂಡು ತಂಡವನ್ನು ಗುರಿಯತ್ತ ಸಾಗುವುದಕ್ಕೆ ಅನುಕೂಲವಾಗುವಂತೆ ಭಾವನೆಗಳನ್ನು ಪೋಷಿಸುವುದನ್ನು Emotional Intelligence ಎಂದು ಕರೆಯುತ್ತಾರೆ. ಈ Emotional Intelligence ಅಥವಾ ಭಾವನಾತ್ಮಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಕ್ಕೆ ಕಾರ್ಪೊರೇಟ್ ವಲಯಗಳಲ್ಲಿ ಕಳೆದ 20 ವರ್ಷಗಳಿಂದ ಸಾಕಷ್ಟು ಒತ್ತು ನೀಡಲಾಗುತ್ತಿದೆ ಮತ್ತು ಹಲವಾರು ನಾಯಕತ್ವದ ತರಬೇತಿಗಳಲ್ಲಿ ಭಾವನಾತ್ಮಕ ಪ್ರಜ್ಞೆ ಬೆಳೆಸಿಕೊಳ್ಳುವ ರೀತಿಗಳನ್ನು ಕಲಿಸಲಾಗುತ್ತದೆ. ಉದಾಹರಣೆಗೆ, ಅಮೆರಿಕೆಯಲ್ಲಿ ಪ್ರಧಾನ ಕಚೇರಿಯುಳ್ಳ ಮ್ಯಾನೇಜ್ಮೆಂಟ್ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿರುವ ಜಾಗತಿಕ ಸಂಸ್ಥೆ Project Management Institute ತನ್ನ ತರಬೇತಿ ಪುಸ್ತಕಗಳಲ್ಲಿ ಭಾವನಾತ್ಮಕ ಪ್ರಜ್ಞೆ ಮತ್ತು ಅದನ್ನು ಬೆಳೆಸಿಕೊಳ್ಳಲು ಪ್ರಾಣಾಯಾಮ ಮತ್ತು ಮೆಡಿಟೇಷನ್‌ಗಳ ಬಳಕೆಯನ್ನು ಬೋಧಿಸುತ್ತವೆ.

ವಿಪರ್ಯಾಸವೆಂದರೆ, ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುವ ಭಾವನಾತ್ಮಕ ಪ್ರಜ್ಞೆಯ ಬಗ್ಗೆ ಭಾರತೀಯ ಸಂಸ್ಕೃತಿಯು ಗಾಢವಾದ ಅರಿವನ್ನು ಹೊಂದಿದ್ದರೂ ಇಂದಿನ ಯುವ ಜನತೆ ಈ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ, ಬಳಸುವ ಜೀವನಶೈಲಿಯಿಂದ ದೂರ ಸರಿಯುತ್ತಿದ್ದಾರೆ. ಆದುದರಿಂದ ಭಾವನಾತ್ಮಕ ಪ್ರಜ್ಞೆಯ ಉಪಯೋಗ ಮತ್ತು ಯೋಗಶಾಸ್ತ್ರದ ದೃಷ್ಟಿಯಿಂದ ಅವುಗಳನ್ನು ಅಳವಡಿಸಿಕೊಳ್ಳುವ ಬಗೆಗೆ ಒಂದು ಪರಿಚಯ ಅವಶ್ಯಕವಾಗಿದೆ.
ಪಾತಂಜಲ ಯೋಗಸೂತ್ರವು ಚಿತ್ತ ವೃತ್ತಿಯ ನಿರೋಧವನ್ನೇ ಯೋಗವೆಂದು ಹೇಳುತ್ತದೆ. ಅಂದರೆ ಮನಸ್ಸಿನ ಅಲೆಗಳೆಲ್ಲವೂ ಶಾಂತವಾದಾಗ ಸಮಾಧಿ ಸ್ಥಿತಿಯುಂಟಾಗಿ ಅಂತರಾತ್ಮನು ಗೋಚರವಾಗುವುದರಿಂದ ಮನಸ್ಸಿನ ವೃತ್ತಿಗಳೆಲ್ಲವೂ ಶಾಂತವಾಗುವ ಸ್ಥಿತಿಯನ್ನೇ ಯೋಗ ಎಂದು ಈ ದರ್ಶನವು ಹೇಳುತ್ತದೆ. ಈ ದರ್ಶನವು ಮನಸ್ಸಿನ ನಾನಾ ವೃತ್ತಿಗಳು ಹಾಗೂ ಅವುಗಳೆಲ್ಲವನ್ನು ನಿವೃತ್ತಿಗೊಳಿಸುವುದು ಹೇಗೆನ್ನುವ ವಿವರಗಳನ್ನು ಒಳಗೊಂಡು ವಿಶ್ವದಾದ್ಯಂತ ಯೋಗ ಸಾಧಕರಿಗೂ, ಮನಃಶಾಸ್ತ್ರಜ್ಞರಿಗೂ ಆಳವಾದ ಅಧ್ಯಯನಕ್ಕೆ ಕೈಪಿಡಿಯಾಗಿದೆ.

ಉದಾಹರಣೆಗೆ ಅವಿದ್ಯಾಸ್ಮಿತಾರಾಗದ್ವೇಷಾಭಿನಿವೇಶಾಃಪಂಚಕ್ಲೇಶಾಃ ಎನ್ನುವ ಸೂತ್ರವು ಕ್ಲೇಶಕರವಾದ ಮನಸ್ಸಿನ ವೃತ್ತಿಗಳು ಐದು ಬಗೆಯದು ಎಂದು ಹೇಳುತ್ತದೆ ಮತ್ತು ಇದರಿಂದ ದುಃಖ, ದೌರ್ಮನಸ್ಯಗಳುಂಟಾಗುತ್ತದೆಂದು ಹೇಳುತ್ತದೆ. ಮತ್ತು ಈ ಕ್ಲೇಶಗಳನ್ನು ನಿವಾರಿಸಿ ಮನಸ್ಸಿನ ಸ್ಥಿರತೆ ಹಾಗೂ ಸಾವಧಾನತೆಯನ್ನು ತಂದುಕೊಳ್ಳಲು ಬಗೆಬಗೆಯ ಉಪಾಯಗಳನ್ನು ತಿಳಿಸುತ್ತದೆ. ಉದಾಹರಣೆಗೆ, ಏಕತತ್ವಾಭ್ಯಾಸ ಅಂದರೆ ಯಾವುದಾದರೂ ಒಂದೇ ವಸ್ತುವಿನಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದು ಎನ್ನುವ ಒಂದು ಉಪಾಯವಿದೆ. ಈ ಉಪಾಯಗಳನ್ನು ಅನುಸರಿಸಿದಾಗ, ರಾಗ ಮುಂತಾದ ಕ್ಲೇಶಗಳು ದೂರವಾಗಿ ಮನಸ್ಸಿನಲ್ಲಿ ಸ್ಥೈರ್ಯ, ಸಾವಧಾನತೆಗಳು ತುಂಬುತ್ತವೆ. ಈ ಸ್ಥೈರ್ಯ, ಸಾವಧಾನತೆಗಳೇ ಭಾವನಾತ್ಮಕ ಪ್ರಜ್ಞೆಯನ್ನು ಹೆಚ್ಚಿಸುತ್ತದೆ.

ಒಂದು ದೃಷ್ಟಾಂತವನ್ನು ಪರಿಗಣಿಸುವುದಾದರೆ, ಒಮ್ಮೆ ಸಾಫ್ಟ್ ವೇರ್ ಸಂಸ್ಥೆಯೊಂದರ ಯುವ ಮ್ಯಾನೇಜರೊಬ್ಬರು ಗ್ರಾಹಕ ಸಂಸ್ಥೆಯ ವ್ಯಾವಹಾರಿಕ ಸಂಬಂಧ ನಿರ್ವಹಣಾಧಿಕಾರಿಯಾಗಿ ನಿಯುಕ್ತಗೊಂಡರು. ಅವರ ಹಿಂದಿನ ತಂಡಗಳು ಅದಕ್ಷ ಕಾರ್ಯನಿರ್ವಹಣೆ ಮಾಡಿ ಕಳಪೆ ಪ್ರದರ್ಶನ ನೀಡಿ ಗ್ರಾಹಕರು ಬಹಳ ಅಸಮಾಧಾನ ಗೊಂಡಿದ್ದರು. ಈ ಹೊಸ ಯುವ ಮ್ಯಾನೇಜರ್ ಉಸ್ತುವಾರಿ ಕೈಗೊಂಡ ತಕ್ಷಣವೇ ಗ್ರಾಹಕ ತಂಡದ ನಾಯಕರು ತಮ್ಮ ಆಕ್ರೋಶವನ್ನು ಈ ಮ್ಯಾನೇಜರ್ ಮೇಲೆ ಹೊರಹಾಕಿದರು. ಈ ಹೊಸ ಮ್ಯಾನೇಜರ್ ರಾಗ, ಅಂದರೆ ತನ್ನದಲ್ಲದ್ದನ್ನು ತನಗೆ ಅಂಟಿಸಿಕೊಳ್ಳುವ ಪ್ರವೃತ್ತಿಯಿಂದ, ಇವರು ನನ್ನ ವಿರುದ್ಧ ಕಿಡಿ ಕಾರುತ್ತಿದ್ದಾರೆ ಎಂದು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೈಮೇಲೆಳೆದುಕೊಂಡು ಬಹಳ ಒತ್ತಡಕ್ಕೊಳಗಾದರು.

ನಂತರ ಅನುಭವಿಗಳೊಬ್ಬರು ಕೊಟ್ಟ ಸಲಹೆಯನ್ನನುಸರಿಸಿ ಭಾವನಾತ್ಮಕ ಪ್ರಜ್ಞೆಯಿಂದ ಗ್ರಾಹಕರ ಆಕ್ರೋಶ ವೈಯಕ್ತಿಕವಾಗಿ ನನ್ನ ಮೇಲೆ ಅಲ್ಲ, ನಮ್ಮ ಸಂಸ್ಥೆಯ ಪ್ರತಿನಿಧಿಯಾಗಿ ನಾನು ಆ ಅಕ್ರೋಶವನ್ನು ಸ್ವೀಕರಿಸಿ ಪರಿಸ್ಥಿತಿಯನ್ನು ಸರಿ ಮಾಡುತ್ತೇನೆ ಎಂದು ಅಂದುಕೊಂಡಾಗ, ಅವರಲ್ಲಿ ಸ್ಥೈರ್ಯವುಂಟಾಗಿ ಒತ್ತಡದ ಬದಲು ಸಮಸ್ಯೆಯ ಪರಿಹಾರದ ಕಡೆಗೆ ಮನಸ್ಸು ಹರಿಯಿತು. ಅಂದರೆ ಈ ಸಂದರ್ಭದಲ್ಲಿ ರಾಗವನ್ನು ಕಳೆದುಕೊಂಡಿದ್ದರಿಂದ ಮನಸ್ಸು ಸ್ಥಿರವಾಯಿತು, ಪರಿಸ್ಥಿತಿಯೂ ಸುಧಾರಿಸಿತು. ಹೀಗೆಯೇ ಜೀವನ ಪರ್ಯಂತ ರಾಗವು ಕಾಡದೇ ಇರಬೇಕೆಂದರೆ, ಅದಕ್ಕೆ ಯೋಗಸೂತ್ರವು ಹೇಳುವ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ.

ನವೀನ ಆವಿಷ್ಕಾರಗಳ ಈ ಯುಗದಲ್ಲಿ ಒಂದು ನವೀನ ಕಲ್ಪನೆ ಯಶಸ್ವೀ ಉದ್ಯಮವಾಗಿ ಹೊರಹೊಮ್ಮಬೇಕಾದರೆ ಅನೇಕರು ತಮ್ಮ ಚಿಂತನೆ ಹಾಗೂ ಪರಿಶ್ರಮವನ್ನು ಧಾರೆ ಎರೆಯಬೇಕಾಗುತ್ತದೆ. ನವೀನ ಕಲ್ಪನೆಗಳನ್ನು ಉದ್ಯಮವಾಗಿ ಪರಿವರ್ತನೆಗೊಳಿಸುವ ಪ್ರಯತ್ನದಲ್ಲಿ ಕೆಲವು ಸಂಸ್ಥಾ ಮಾಲೀಕರು ರಾಗಕ್ಕೊಳಗಾಗಿ ತಮ್ಮ ಪರಿಕಲ್ಪನೆಗೆ ಬಹಳವಾಗಿ ಅಂಟಿಕೊಂಡು ತಂಡದ ಇತರರ ಸಲಹೆಗಳಿಗೆ ಹೆಚ್ಚು ಆಸ್ಪದ ನೀಡದೆ, ಕಲ್ಪನೆಯು ಸಾಮೂಹಿಕ ಪ್ರಯತ್ನದಿಂದ ವಿಕಾಸವಾಗಲು ಅವಕಾಶವನ್ನೇ ಕೊಡುವುದಿಲ್ಲ.

ಎಲ್ಲವೂ ತಮ್ಮ ನಿರ್ದೇಶನಕ್ಕೆ ಅನುಗುಣವಾಗಿಯೇ ನಡೆಯಬೇಕು ಎನ್ನುವ ರೀತಿಯಲ್ಲಿ ವರ್ತಿಸಿ, ಕಲ್ಪನೆ ಸಾಕಾರಗೊಳ್ಳದೇ ವಿಫಲರಾಗುತ್ತರೆ. ಆದರೆ ಮತ್ತೆ ಕೆಲವರು ತಮ್ಮ ಪರಿಕಲ್ಪನೆಗೆ ಸ್ವಲ್ಪ ಮಾತ್ರವೇ ಅಂಟಿಕೊಂಡು ಇತರ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ, ಎಲ್ಲರೂ ಉದ್ಯಮದ ಬಗ್ಗೆ ಸ್ವಾಮ್ಯ ಮನೋಭಾವವನ್ನಿಟ್ಟುಕೊಳ್ಳುವಂತೆ ಮಾಡಿ ಪರಿಕಲ್ಪನೆಗೆ ಎಲ್ಲರ ಪೋಷಣೆ ದೊರಕಿಸಿ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ. ಇಲ್ಲಿಯೂ ಸಹ, ರಾಗ ಅಥವಾ ಅಂಟನ್ನು ಕಡಿಮೆ ಮಾಡಿಕೊಂಡು ತಂಡದ ಎಲ್ಲರೂ ಯಶಸ್ಸಿನ ಪಾಲುದಾರರು ಎನ್ನುವ ಭಾವನೆಯನ್ನುಂಟು ಮಾಡಿ ತಂಡವನ್ನು ಮುನ್ನಡೆಸುವಲ್ಲಿ ಭಾವನತ್ಮಕ ಪ್ರಜ್ಞೆ ಯಶಸ್ಸಿಗೆ ಕಾರಣವಾಗುತ್ತದೆ.

ರಾಗವನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೇ ಯೋಗಸೂತ್ರದಲ್ಲಿ ಹಲವು ಕ್ಲೇಶಗಳ ವಿವರಣೆ ಹಾಗೂ ಹಲವು ನಿವಾರಣೋಪಾಯಗಳಿವೆ. ಈ ಉಪಾಯಗಳನ್ನು ಅನುಸರಿಸಿದರೆ, ಮನಸ್ಸಿನಲ್ಲಿ ಸ್ಥಿರತೆ ನೆಲೆಗೊಂಡು ಉನ್ನತ ಅಧ್ಯಾತ್ಮಿಕ ಅನುಭವಗಳಿಗೆ ದಾರಿಯಾಗುತ್ತದಷ್ಟೇ ಅಲ್ಲದೇ ಭಾವನಾತ್ಮಕ ಪ್ರಜ್ಞೆ ಜಾಗೃತಗೊಂಡು ವ್ಯಾವಹಾರಿಕ ಜೀವನವೂ ಸುಗಮವಾಗುತ್ತದೆ. ಇಂತಹಾ ಶ್ರೀಮಂತ ದರ್ಶನವನ್ನು ಕೊಟ್ಟು ಲೋಕೋಪಕಾರ ಮಾಡಿರುವ ಪತಂಜಲಿ ಮಹರ್ಷಿಗಳಿಗೆ ನಮೋ ನಮಃ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನು ಓದಿ| Prerane | ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ

Exit mobile version