Site icon Vistara News

Prerane | ಸಂಪೂರ್ಣವಾದ ತೊಡಗುವಿಕೆಯೇ ಆನಂದದ ಮೂಲ

Prerane

ಸದ್ಗುರು ಜಗ್ಗಿ ವಾಸುದೇವ್‌
ನನ್ನ ಬಳಿಗೆ ಒಬ್ಬ ಯುವಕ ಬಂದು ಕೇಳಿದ, “ಮದ್ಯ ಸೇವನೆ ಮಾಡಿದರೆ ಆತಂಕವಿರುವುದಿಲ್ಲ. ಅನಗತ್ಯ ಯೋಚನೆಗಳು ದೂರವಾಗುತ್ತವೆ. ನೆಮ್ಮದಿಯಿಂದ ನಿದ್ರೆ ಬರುತ್ತದೆ. ಹೀಗೆಂದು ಡಾಕ್ಟರು ಹೇಳುತ್ತಾರೆಂದು ಓದಿದ್ದೇನೆ. ಇದು ನಿಜವೆ?”
ನಾನು ನಗುತ್ತಲೇ ಪ್ರತಿದಿನ ಒಂದು ಸೇಬು ಎಂದು ಹೇಳಿದರು, ಈಗ ಅದನ್ನು ಮದ್ಯ ಎಂದು ಬದಲಾಯಿಸಿಕೊಂಡಿದ್ದಾರೆಯೆ? ಎಂದು ಮರುಪ್ರಶ್ನೆ ಕೇಳಿದೆ.

ವಾಸ್ತವದಲ್ಲಿ ಮದ್ಯ ಸೇವನೆ ಮಾಡುವಾಗ ಏನು ನಡೆಯುತ್ತದೆ? ನಿಮ್ಮಲ್ಲಿ ಒಂದು ರೀತಿಯ ರಾಸಾಯನಿಕ ಬದಲಾವಣೆ ನಡೆದು ನಿಮ್ಮ ಚಟುವಟಿಕೆಯನ್ನು ಕಡಮೆಗೊಳಿಸುತ್ತದೆ. ಅದನ್ನು ನೆಮ್ಮದಿ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ. ಒಂದು ಬಾಟಲ್ ಮದ್ಯ ಸೇವನೆ ಮಾಡಿ ಇಷ್ಟು ನೆಮ್ಮದಿ ಪಡೆಯುವುದಾದರೆ ಒಂದು ಹಂಡೆ ಮದ್ಯ ಕುಡಿದರೆ ಹಲವು ಪಟ್ಟು ಹೆಚ್ಚು ನೆಮ್ಮದಿ ಅಲ್ಲವೆ ದೊರೆಯಬೇಕಾದುದು? ಕುಡಿದು ನೋಡಿ, ಏನಾಗುತ್ತದೆ?

ನಿಜವಾಗಿ ಮದ್ಯ ನಿಮ್ಮನ್ನು ನೆಮ್ಮದಿಗೊಳಿಸಲಿಲ್ಲ. ಅದು ನಿಮ್ಮನ್ನು ಮಂದವಾಗಿಸುತ್ತದೆ. ಬೇರೆ ಸಮಯದಲ್ಲಿ ನೆಮ್ಮದಿಯಾಗಿ ಘನತೆಯಿಂದ ಇರುವ ಹಲವಾರು ಮಂದಿ ಮದ್ಯಸೇವನೆ ಮಾಡಿದಾಗ ಮಾಡುವ ಕೋಲಾಹಲವನ್ನು, ನೀವು ಗಮನಿಸಿದ್ದೀರಾ? ಮದ್ಯ ಒಳಗೆ ಹೋದುದರಿಂದ, ಮನಸ್ಸು ಹತೋಟಿಯಿಲ್ಲದೆ ಮಾಡಿದ ತಪ್ಪುಗಳನ್ನು ಕುರಿತು, ಸೆರೆಮನೆಯಲ್ಲಿರುವ ಅಪರಾಧಿಗಳನ್ನು ಕೇಳಿ, ಅವರು ಹೇಳುತ್ತಾರೆ.

ಮದ್ಯವು ನಿಮಗೆ ಒಳ್ಳೆಯದನ್ನು ಮಾಡುತ್ತದೆಯೆ, ಕೆಟ್ಟದ್ದನ್ನು ಮಾಡುತ್ತದೆಯೆ ಎಂಬುದನ್ನು ನೀವೇ ಗಮನಿಸಿ. ನಿಮ್ಮ ಬಗೆಗೆ ನಿಮಗೆ ಗಮನವಿರುವುದರಿಂದ ತಾನೆ ನೀವು ಜೀವನವನ್ನು ತಿಳಿದುಕೊಂಡಿದ್ದೀರಿ? ಜೀವನವು ಅರ್ಥವತ್ತಾಗಿರಬೇಕಾದರೆ ಅದರ ಬಗೆಗೆ ಎಚ್ಚರಿಕೆಯ ಅರಿವು ಹೆಚ್ಚಾಗಿರಬೇಕಲ್ಲವೆ? ಮದ್ಯದಂತಹ ಯಾವುದೇ ಮಾದಕದ್ರವ್ಯ ನಿಮ್ಮ ಎಚ್ಚರಿಕೆಯ ಅರಿವನ್ನು ಹೆಚ್ಚು ಮಾಡುತ್ತದೆಯೆ, ಮಂದಗೊಳಿಸುತ್ತದೆಯೆ ಎಂಬುದನ್ನು ಯೋಚಿಸಿ ತಿಳಿದುಕೊಂಡಿದ್ದರೂ, ಎಚ್ಚರಿಕೆಯ ಅರಿವನ್ನು ನಿಮ್ಮಲ್ಲಿ ಬೆಳೆಯಲು ಬಿಡುತ್ತಿಲ್ಲವೆಂದರೆ ಸಂಪೂರ್ಣವಾಗಿ ಜೀವಿಸದೆ ಅರೆಬರೆಯಾಗಿ ಜೀವನ ಮಾಡುತ್ತಿದ್ದೀರಿ ಎಂದು ಅರ್ಥವಾಗುತ್ತದೆ.

ಶಂಕರನ್ ಪಿಳ್ಳೆಯವರಿದ್ದ ಬಾರ್ ಒಂದರಲ್ಲಿ ಒಬ್ಬ ಅಮೆರಿಕನ್ ಪ್ರವೇಶ ಮಾಡಿದ.
ಹತ್ತು ಬಿಯರ್‌ ಗಳನ್ನು ಒಂದೇ ಸಾರಿಗೆ ಕುಡಿಯುವವರಿಗೆ ಇನ್ನೂರು ಡಾಲರ್ ಬಹುಮಾನ ಎಂದು ಪ್ರಕಟಿಸಿದ. ಯಾರೂ ಮರುಮಾತನಾಡಲಿಲ್ಲ. ಅಲುಗಾಡಲಿಲ್ಲ. ಶಂಕರನ್ ಪಿಳ್ಳೆ ಎದ್ದು ಹೊರಗೆ ಹೋಗಿ, ಮೂವತ್ತು ನಿಮಿಷಗಳ ನಂತರ ತಿರುಗಿ ಬಂದು, ಪಂದ್ಯಕ್ಕೆ ನಾನು ಸಿದ್ಧವಾಗಿದ್ದೇನೆ ಎಂದರು.

ಒಂದಾದ ಮೇಲೊಂದು ಹತ್ತು ಬಿಯರ್‌ ಗಳನ್ನು ಅವರು ಖಾಲಿ ಮಾಡಿದ್ದನ್ನು ನೋಡಿ ಅಮೆರಿಕನ್ನನು ಆಶ್ಚರ್ಯಪಟ್ಟನು.

ಬಹುಮಾನದ ಮೊತ್ತವನ್ನು ಕೊಟ್ಟು ಅದು ಸರಿ, ಮೊದಲು ಯಾತಕ್ಕಾಗಿ ಹೊರಗೆ ಎದ್ದು ಹೋಗಿದ್ದೀರಿ? ಎಂದು ಪ್ರಶ್ನಿಸಿದ.

ಪಂದ್ಯದಲ್ಲಿ ಗೆಲ್ಲಲು ನನಗೆ ಸಾಧ್ಯವಾಗುತ್ತದೆಯೋ ಇಲ್ಲವೋ ಎಂದು ಪರೀಕ್ಷಿಸಿ ನೋಡಲು, ಪಕ್ಕದ ಬಾರಿನಲ್ಲಿ ಹತ್ತು ಬಿಯರ್‌ ಗಳನ್ನು ಕುಡಿದು ನೋಡಿದೆ ಎಂದರು ಶಂಕರನ್ ಪಿಳ್ಳೆ.

ಇಂತಹ ಕುಡುಕರು ವಿಶ್ರಾಂತಿಗಾಗಿ ಕುಡಿಯುತ್ತಾರೆಯೇ?

ಮದ್ಯಸೇವನೆ ಮಾಡುವವರು ಒಳ್ಳೆಯವರೆ ಅಥವಾ ಕೆಟ್ಟವರೇ ಎಂದು ನಾನು ತೀರ್ಪು ನೀಡಲಿಲ್ಲ. ಆದರೆ, ನಿಮಗೆ ಅದು ಒಳ್ಳೆಯದನ್ನು ಮಾಡುತ್ತದೆಯೆ, ಕೆಟ್ಟದ್ದನ್ನು ಮಾಡುತ್ತದೆಯೆ ಎಂಬುದನ್ನು ಗಮನಿಸಿ ಎಂದು ಮಾತ್ರ ನಾನು ಹೇಳುತ್ತೇನೆ. ಮತ್ತೊಂದನ್ನು ಅರ್ಥಮಾಡಿಕೊಳ್ಳಿ. ದೇಹಕ್ಕೆ ವಿಶ್ರಾಂತಿ ಅಗತ್ಯ. ಆದರೆ ನಿದ್ರೆ ಆವಶ್ಯಕವಿಲ್ಲ. ನಾನು ದಿನವೊಂದಕ್ಕೆ ಹೆಚ್ಚೆಂದರೆ ನಾಲ್ಕು ಗಂಟೆಗಳಿಗಿಂತ ಹೆಚ್ಚಾಗಿ ನಿದ್ರಿಸುವುದಿಲ್ಲ. ಆದರೆ, ನನ್ನ ದೇಹ ಪೂರ್ತಿಯಾದ ವಿಶ್ರಾಂತಿ ಪಡೆದ ತೃಪ್ತಿಯೊಂದಿಗೆ, ಪರಿಪೂರ್ಣವಾದ ಎಚ್ಚರಿಕೆಯ ಅರಿವಿನೊಂದಿಗೆ ಸದಾ ಇರುತ್ತದೆ.

ದೇಹವೆಂಬುದು ನಿಮ್ಮ ಕಲ್ಪನೆಗೆ ಮೀರಿದ ಅತ್ಯಂತ ಅದ್ಭುತವಾದ ಯಂತ್ರ. ಅದನ್ನು ಯಾವಾಗಲೂ ನೆಮ್ಮದಿಯಿಂದ ಇರಿಸಿಕೊಳ್ಳುವುದರಿಂದ ಹೆಚ್ಚು ಜಾಗೃತವಾಗಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸಂಪೂರ್ಣ ಎಚ್ಚರಿಕೆಯಿಂದ ಕೂಡಿದ ತಿಳುವಳಿಕೆ ಅಗತ್ಯ. ದುಃಖ, ವಿರಕ್ತಿ, ಕೋಪ, ಗೊಂದಲ ಮುಂತಾದ ಅನಿಸಿಕೆಗಳಂತೆಯೇ ಮದ್ಯವೂ ಆ ಎಚ್ಚರಿಕೆಯ ಅರಿವನ್ನು ಮಂಕುಗೊಳಿಸುತ್ತದೆ.

ಆನಂದವಾಗಿರುವುದು ಎಲ್ಲ ಜೀವಿಗಳಿಗೂ ಅಗತ್ಯವಾದದ್ದು ಮತ್ತು ಹಾಗೆ ಆಸೆಪಡುವುದೂ ಸಹಜ. ನೀವು ಅದನ್ನು ಜೀವಂತವಾಗಿರಿಸಿಕೊಂಡಿದ್ದೀರಿ. ಅನಗತ್ಯವಾದ ಯೋಚನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಅದನ್ನು ಗುಡ್ಡೆಹಾಕಿಕೊಂಡು, ಕುಡಿದರೆ ನೆಮ್ಮದಿ ದೊರೆಯುತ್ತದೆಂದು ನಂಬುವುದು ಒಂದು ದೊಡ್ಡ ಮೂರ್ಖತನವೆನಿಸುತ್ತದೆ. ಆನಂದವಾಗಿರಲು ನೀವು ಯಾವುದನ್ನೂ ಹುಡುಕಬೇಕಾಗಿಲ್ಲ. ಆದರೆ, ಪ್ರೀತಿಯಿಂದ ಇರುವುದಕ್ಕಾಗಿ ಏನನ್ನಾದರೂ ಜೊತೆಮಾಡಿಕೊಳ್ಳುವ ಅಗತ್ಯವಿದೆ. ಪ್ರೀತಿಗಾಗಿ ಏನನ್ನಾದರೂ ಹುಡುಕಾಡುವಾಗ, ಅದು ನಿಮ್ಮ ದೇಹಕ್ಕೆ ಕೆಡಕನ್ನು ಉಂಟುಮಾಡುವಂತಹುದೆ ಇಲ್ಲವೆ ಎಂಬುದನ್ನು ನೀವು ಯೋಚಿಸುವುದಿಲ್ಲ.

Prerane

ಆನಂದವನ್ನು, ನಾನಾಗಲೀ ನೀವಾಗಲೀ, ಹೊರಗಿನಿಂದ ಉತ್ಪತ್ತಿ ಮಾಡಲಾಗದು. ಸಿಗರೇಟ್, ಮದ್ಯದಂತಹ ಮೂರ್ಖತನದ ಚಟಗಳ ಮೂಲಕ ಆನಂದವನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ಅವುಗಳ ಮೂಲಕ ನಿಮಗೆ ದೊರೆಯುವುದು ಆನಂದವಲ್ಲ. ಎಂದೆಂದಿಗೂ ಸಿಗಲಾರದ ’ಪ್ರೀತಿ’ಗಾಗಿ ಚಟ. ಒಂದು ಘಟ್ಟದಲ್ಲಿ ನೀವು ಆ ಚಟಕ್ಕೆ ಗುಲಾಮರಾಗುತ್ತೀರಿ.

ನೀವು ಮೂರ್ಖತನದಿಂದ ಪ್ರೀತಿಯನ್ನು ಹುಡುಕಿಕೊಂಡು ಹೋಗುವುದಕ್ಕೂ, ಆನಂದವಾಗಿರುವುದಕ್ಕೂ ಮಧ್ಯೆ ಭೂಮಿ ಆಕಾಶದಷ್ಟು ಅಂತರವಿದೆ. ಆನಂದವನ್ನು ಅನುಭವಿಸಲು ಮಾದಕದ್ರವ್ಯಗಳನ್ನು ಹುಡುಕುವುದು ಸಮುದ್ರದ ಆಳವನ್ನು ಅರ್ಧ ಅಡಿ ಸ್ಕೇಲಿನಿಂದ ಅಳೆದು ನೋಡುವ ಪ್ರಯತ್ನದಂತೆ. ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಸಿಗರೆಟ್ ಸೇದುವುದರಿಂದ ಅಥವಾ ಮದ್ಯಪಾನದಿಂದ ನಿಮಗೆ ಸಂತೋಷ ಬಂದುಬಿಡುವುದಿಲ್ಲ. ಅದರಲ್ಲಿ ನೀವು ತೋರಿಸುವ ತೀವ್ರವಾದ ಆಸಕ್ತಿ ಆ ಸಂತೋಷವನ್ನು ತಂದುಕೊಡುತ್ತದೆ. ಅದರಲ್ಲಿ ಸಂಪೂರ್ಣವಾಗಿ ನಿಮ್ಮ ತೊಡಗುವಿಕೆಯೇ ಆನಂದದ ಮೂಲ.

ಮನಃಪೂರ್ವಕವಾಗಿ ಕೆಲಸಮಾಡುವಾಗ ಪೂರ್ತಿಯಾಗಿ ಅದರಲ್ಲಿ ತಲ್ಲೀನವಾಗಿ ಮಾಡಿ ನೋಡಿ, ಅಂತಹುದರಲ್ಲಿ ದೊರೆಯುವ ಆನಂದವೇ ನಿಜವಾದದ್ದು. ಯೋಚಿಸಿ, ನಿಮಗೆ ಮತ್ತೇರಿದಾಗಲೆಲ್ಲಾ ಚಿಂತೆ ಜಾಗವನ್ನು ಖಾಲಿಮಾಡಿಕೊಂಡು ಹೊರಟುಹೋಯಿತೆ? ಇಲ್ಲ. ಅಲ್ಲಿಯೇ ಗಟ್ಟಿಯಾಗಿ ಕುಳಿತುಕೊಂಡಿತ್ತು. ನೀವಾಗಿಯೇ ಸ್ವಲ್ಪ ಸಮಯ ಅದರತ್ತ ನೋಡದೆ ಮುಖವನ್ನು ತಿರುಗಿಸಿಕೊಂಡು ಕುಳಿತುಕೊಂಡಿದ್ದೀರಿ.

ಯೋಚನೆಗಳನ್ನು ಮರೆಯಲು ಮಾದಕದ್ರವ್ಯಗಳನ್ನು ಹುಡುಕುತ್ತಾ ಹೋಗುವುದು, ಸಿಂಹದಿಂದ ತಪ್ಪಿಸಿಕೊಳ್ಳಲು ಅದರ ನೆರಳಿನಲ್ಲಿ ಅವಿತುಕೊಳ್ಳುವಂತೆಯೇ, ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಓಡಿಹೋಗದೆ ಅವುಗಳನ್ನು ಎದುರಿಸಿ ಮುಕ್ತಾಯಗೊಳಿಸುವುದು ಬುದ್ಧಿವಂತಿಕೆಯೆನಿಸುತ್ತದೆ. ನಿಮ್ಮ ಸಂತೋಷ ಯಾವುದರ ಮೇಲಾದರೂ ಆಧಾರವಾಗಿದ್ದರೆ, ಅದು ಯಾವಾಗ ಬೇಕಾದರೂ ನಿಮ್ಮ ಜೀವನದಿಂದ ಹೊರಟು ಹೋಗಬಹುದೆಂಬ ಭಯದ ಕತ್ತಿ, ನಿಮ್ಮ ಕುತ್ತಿಗೆಯ ಮೇಲೆ ನೇತಾಡುತ್ತಾ ಇರುತ್ತದೆ.

ಅದಾಗಿ ಬಿಟ್ಟು ಹೋಗಬಹುದು ಅಥವಾ ವೈದ್ಯರೋ, ಸರಕಾರವೋ, ನೀವು ಅವಲಂಬಿಸಿರುವ ಗುಂಪಿನವರೋ ಅದನ್ನು ಬಿಟ್ಟು ಹೋಗುವಂತೆ ಮಾಡಬಹುದು. ಯಾವುದಕ್ಕಾದರೂ ಅಂಟಿಕೊಂಡಾಗ, ಅದು ತಿರಸ್ಕೃತವಾದರೆ ನಿಮ್ಮ ಸಂತೋಷಕ್ಕೆ ತಡೆಯುಂಟಾಗುತ್ತದೆ. ಅದು ನಿಮ್ಮನ್ನು ದೂರಮಾಡುತ್ತದೆಯೋ ಎಂಬ ಚಿಂತೆಯೇ ನಿಮ್ಮ ಬಹು ದೊಡ್ಡ ದುಃಖವಾಗುತ್ತದೆ.

ಒಂದು ಕ್ಲಬ್ಬಿನಲ್ಲಿ ಕೃಶವಾದ ದೇಹದ ಒಬ್ಬ ವ್ಯಕ್ತಿ ಸ್ವಲ್ಪ ಕೆಮ್ಮುತ್ತಾ ಕುಳಿತಿದ್ದನು.

ಅವನ ಬಳಿಗೆ ಒಬ್ಬ ಯುವಕ ಬಂದು ಕೇಳಿದ, ‘ನೀವು ಪ್ರತಿದಿನ ನಲವತ್ತು ಸಿಗರೆಟ್‌ ಗಳನ್ನು ಸೇದುತ್ತೀರಿ, ಆರು ಗ್ಲಾಸ್ ಮದ್ಯಪಾನ ಮಾಡುತ್ತೀರಿ. ಅಷ್ಟೆಲ್ಲಾ ಆಗಿದ್ದರೂ ದೀರ್ಘಾಯುಸ್ಸಿನಿಂದ ಬದುಕಿದ್ದೀರಿ. ನನಗೆ ಅನೇಕ ಹಿತನುಡಿಗಳನ್ನು ಹೇಳುವ ನನ್ನ ತಂದೆಯನ್ನು ನಿಮಗೆ ಪರಿಚಯ ಮಾಡಿಸಬೇಕು. ಬರುತ್ತೀರಾ, ತಾತ?’

‘ತಾತ? ನನಗೆ ಇಪ್ಪತ್ತೆರಡು ವರ್ಷ ವಯಸ್ಸು, ಬ್ರದರ್’ ಎಂದು ಉತ್ತರ ಬಂತು.

ಹೀಗೆ ಇಪ್ಪತ್ತನೆಯ ವಯಸ್ಸಿಗೇ, ನಿಮ್ಮ ವಯಸ್ಸು ಅರವತ್ತು ಎಂದು ಹೇಳುವಂತಹ ಪರಿಸ್ಥಿತಿ ದೇಹಕ್ಕೆ ಬರಬೇಕೆ? ಯೋಚನೆ ಮಾಡಿ. ಸಂತೋಷವೆಂಬುದನ್ನು ಹುಡುಕುತ್ತಾ ಹೋಗುವುದೇ, ಅನಂತರ ನಿಮ್ಮ ದುಃಖಗಳಿಗೆ ಮುಖ್ಯವಾದ ಕಾರಣವಾಗಿಬಿಡುತ್ತದೆ. ನೀವು ಸ್ವಲ್ಪ ಸಂತೋಷವನ್ನು ಅರಸುತ್ತಾ ಕುಡಿಯಲು ಪ್ರಾರಂಭಿಸಿದಿರಿ ಎಂದರೆ, ಅ ಸಂತೋಷ ನಿಮ್ಮನ್ನು ಮಂದಗತಿಯವರನ್ನಾಗಿ ಮಾಡಿದೆ. ಅದೇ ಸಮಯದಲ್ಲಿ ಅಪರಿಮಿತವಾಗಿ ಅದನ್ನು ಪಡೆಯಲು ಅವಕಾಶವಿದೆಯಲ್ಲವೆ; ಅದನ್ನು ಗಮನಿಸಿ ಎಂದು ಮಾತ್ರ ನಾನು ಹೇಳುವುದು. ಯಾವಾಗಲೂ ಎಚ್ಚರಿಕೆಯೊಂದಿಗೆ ಅದೇ ಸಮಯದಲ್ಲಿ ಪೂರ್ಣವಾದ ಅರಿವಿನೊಂದಿಗೆ ಇರಬಹುದು.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ | Prerane | ನಿಮ್ಮ ಸ್ವಂತಿಕೆ ನಿಮಗಿರಲಿ, ಅದುವೇ ನಿಮಗೆ ದಾರಿಯಾಗಲಿ

Exit mobile version