ಶ್ರೀ ಕೈವಲ್ಯಾನಂದ ಸರಸ್ವತೀ
“ಪ್ರೇಮ’ʼ ಮನುಷ್ಯನನ್ನಾಗಿಸುತ್ತದೆ. ಇನ್ನೊಬ್ಬರಿಗೆ ಕೊಡುವುದು. ಪ್ರೇಮ ಎಂಬುದರ ನೈಜ ಅರ್ಥವೆಂದರೆ ಆನಂದದಿರುವುದು, ತೃಪ್ತನಾಗಿರುವುದು, ಜೀವನದಲ್ಲಿ ಸಂತಸ ಪಡುವುದು. ಹೃದಯದಲ್ಲಿ ಸಂತಸೋತ್ಸಾಹದ ಅವಶ್ಯಕತೆ ಇದೆ. ಆಗ ಇತರರೊಂದಿಗೆ ಹೃದಯವನ್ನು ಹಂಚಿಕೊಳ್ಳಬಹುದು. ಹೃದಯವನ್ನು ಹಂಚಿಕೊಳ್ಳುವುದೇ “ನೈಜ ಪ್ರೇಮ’ʼ.
“ಪ್ರೇಮ’ʼ ಎನ್ನುವುದು ಎರಡು ಹೃದಯಗಳು ಸಮಾನವಾಗಿ ಸ್ಪಂದಿಸುವಿಕೆ. ಎರಡು ಹೃದಯಗಳು ಪೂರ್ಣತೆಯಲ್ಲಿ ಸೇರಿಹೋಗುವುದೇ ಪ್ರೇಮ-ಮದುವೆ. ಎರಡು ಹೃದಯಗಳು-ಎರಡು ಶರೀರಗಳು-ಇಬ್ಬರು ವ್ಯಕ್ತಿಗಳು ಏಕಕಾಲದಲ್ಲಿ ಅನುರೂಪ ಸೇರಿಕೆಯಲ್ಲಿ-ವ್ಯವಹರಿಸುವುದು ‘ಪ್ರೇಮ’.
ಪ್ರತಿಯೊಬ್ಬ ಸ್ತ್ರೀಯು ದೇವತೆ, ಪ್ರತಿಯೊಬ್ಬ ಪುರುಷನೂ ದೇವರು. ಆದರೆ ಅದನ್ನು ಮರೆತಿರುತ್ತಾರೆ. ಪ್ರೇಮವೆಂಬುದು ಹೃದಯಗಳು ಹಂಚಿಕೊಳ್ಳುವಿಕೆ. ಸಂತಸ ಮತ್ತು ಆನಂದ ಅಧಿಕವಾಗಿದೆ. ಅದನ್ನೇ ಹಂಚಿಕೊಳ್ಳಬೇಕು. ಧ್ಯಾನದ ಅರಳುವಿಕೆಯೇ ಪ್ರೇಮ.
ಧ್ಯಾನಮಾಡಬಲ್ಲವನೇ ನಿಜವಾಗಲೂ ಪ್ರೇಮಿಸಬಲ್ಲ. ಪ್ರೇಮವೆಂಬುದು ಎರಡು ಆತ್ಮಗಳ (ಜೀವಿಗಳ) ಮಿಲನ. ಅದು ಶಾರೀರಿಕವಲ್ಲ, ಭೌತಿಕವಾದದ್ದಲ್ಲ; ಒಂದು ರೀತಿ ಅಧ್ಯಾತ್ಮವಾದದ್ದು ಆ ಮಿಲನ. ಅಧ್ಯಾತ್ಮವಲ್ಲದಿದ್ದರೆ ಅರ್ಥಶೂನ್ಯ. ಆಧ್ಯಾತ್ಮಿಕ ಪ್ರೇಮ ನಿಶ್ಚಯವಾಗಿ ಪರಿವರ್ತನೆಯನ್ನು ತರುತ್ತದೆ. ಅನೇಕವನ್ನು ಪ್ರೇಮಿಸುವುದಾದಲ್ಲಿ ಆ ಪ್ರೇಮ ಸರಿಯಾದ ಪ್ರೇಮವಲ್ಲ, ಅದು ಮನಸ್ಸಿನಿಂದ ಎದ್ದುಕೊಂಡ ಪ್ರೇಮ. ಹೃದಯ ಸಂಬಂಧವಿಲ್ಲದ್ದು. ಅನೇಕದಲ್ಲಿರುವ ‘ಏಕ’ವನ್ನು ಪ್ರೇಮಿಸುವುದಾದಲ್ಲಿ ಅದು “ನಿಜವಾದ ಪ್ರೇಮ’.
ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ಜೀವಿಸುವ ಒಬ್ಬ, ಸ್ವಾಮಿಯನ್ನು ದರ್ಶನ ಮಾಡಿಕೊಳ್ಳಲು ಹೊರಟನು. ದರ್ಶನ ಮಾಡಿ, ತನ್ನ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬೇಕೆಂಬ ಆತುರತೆಯಲ್ಲಿ ಕಾಲಿನಲ್ಲಿದ್ದ ಚಪ್ಪಲಿಗಳನ್ನು ಜಾಡಿಸಿದನು. ಇದನ್ನು ಗುರುವು ಗಮನಿಸಿದರು. ಗುರುವಿಗೆ ನಮಸ್ಕಾರ ಮಾಡಿದನು. ಗುರುವು “ಮೊದಲು ನೀನು ಹೊರಗಡೆಗೆ ಹೋಗಿ ಆ ಚಪ್ಪಲಿಗಳಿಗೆ ಕ್ಷಮಾಪಣೆ ಕೇಳಿಬಾ’’ ಎಂದರು.
ವಿಧಿ ಇಲ್ಲದೆ ಕ್ಷಮೆ ಹೇಳಿಬಂದನು. ಗುರುವು ಅವನನ್ನು ಪ್ರೇಮದಿಂದ ನೋಡಿ “ಈಗ ನೀನು ಶಾಂತಿಯಾಗಿರುವೆ. ಪ್ರೇಮವಾಗಿದ್ದರೆ ಶಾಂತಿಯಲ್ಲಿರುತ್ತೀಯ. ಶಾಂತವಾಗಿದ್ದರೆ ಯಾರು ಏನು ಹೇಳಿದರೂ ಶ್ರವಣ ಮಾಡುವೆ. ನಿನ್ನ ಶಾಂತಿಯಲ್ಲಿಯೇ ನಿನ್ನ ಸಮಸ್ಯೆಗಳಿಗೆ ಪರಿಷ್ಕಾರವಿದೆ. ಮನುಷ್ಯರನ್ನು, ವೃಕ್ಷಗಳನ್ನು, ಪ್ರಾಣಿಗಳನ್ನು ಸರ್ವವನ್ನೂ ಪ್ರೇಮದಿಂದ ನೋಡು. ಆಗ ಅಲ್ಲಿ ನಿನಗೆ ಶಾಂತಿ, ಸಮನ್ವಯ ಬಿಟ್ಟರೆ ಮತ್ತೇನು ಕಾಣಿಸದು. ಪ್ರೇಮವಿಲ್ಲದಾಗಲೇ ಸಮಸ್ಯೆಗಳಿರುತ್ತವೆ. ಪ್ರೇಮವಿಲ್ಲದಾಗ ಅಹಂಕಾರವಿರುವುದು. ಅಹಂಕಾರವಿದ್ದಲ್ಲಿ ಆನಂದವಿರದು. ಅಹಂಕಾರವಿಲ್ಲವಾದಲ್ಲಿ ಶಾಂತಿ, ಆನಂದವೇ ಇರುವುದುʼʼ ಎಂದರು.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನು ಓದಿ | Prerane | ಕಾರ್ಪೊರೇಟ್ ಜಗತ್ತಿನಲ್ಲಿ ಅಪರಿಗ್ರಹ ಯೋಗ