Site icon Vistara News

Prerane | ಹೊರಗೆ ಇಣುಕುವುದಕ್ಕಿಂತ ಮೊದಲು ಒಮ್ಮೆ ನಮ್ಮೊಳಗೇ ಇಣುಕೋಣ

maind set prerane

ಗಣೇಶ ಭಟ್ಟ
ಒಬ್ಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ಹೊಸಮನೆಯಲ್ಲಿ ವಾಸಿಸಲು ಬಂದ. ಮೊದಲ ಮಹಡಿಯಲ್ಲಿದ್ದ ಕೋಣೆಯ ಮುಖ್ಯ ಕಿಟಕಿಯಿಂದ ಎದುರು ಮನೆಯ ಮುಂಭಾಗ ಕಾಣಿಸುತಿತ್ತು. ಮರುದಿನ ಬೆಳಿಗ್ಗೆ ಪತ್ನಿ ತನ್ನ ಪತಿಗೆ ಹೇಳಿದಳು; ‘‘ನೋಡಿ, ಎದುರು ಮನೆಯ ಮುಂಭಾಗದ ಅಂಗಳದಲ್ಲಿ ಹರಗಿದ ಬಟ್ಟೆಗಳು ಎಷ್ಟೋಂದು ಮಲೀನವಾಗಿವೆ. ಅವರಿಗೆ ಸರಿಯಾಗಿ ಬಟ್ಟೆ ತೊಳೆಯಲು ಬರುವುದಿಲ್ಲ ಎಂದು ಅನ್ನಿಸುತ್ತಿದೆ, ಅಥವಾ ಅವರು ಡಿಟರ್ಜೆಂಟ್‌ಅನ್ನು ಬಟ್ಟೆ ತೊಳೆಯಲು ಉಪಯೋಗಿಸುತಿಲ್ಲ ಎನಿಸುತ್ತಿದೆ’’.

ಪತಿ ತನ್ನ ಪತ್ನಿ ಹೇಳಿದ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಕೆಲ ದಿನಗಳ ನಂತರ ಪತ್ನಿ ಮತ್ತೆ ಈ ಮಾತುಗಳನ್ನೇ ಆಡಿದಳು. ಪತಿ ಈ ಸಲವೂ ಪತ್ನಿಯ ಮಾತುಗಳನ್ನು ಕೇಳಿಸಿಕೊಂಡ, ಆದರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೆಲ ದಿನಗಳ ನಂತರ ಒಂದು ದಿನ ಬೆಳಗ್ಗೆ ಪತಿ-ಪತ್ನಿ ಇಬ್ಬರೂ ಉಪಹಾರ ಸೇವಿಸುತ್ತಿದ್ದರು.

ಪತ್ನಿಯ ದೃಷ್ಟಿ ಎಂದಿನಂತೆ ಎದುರು ಮನೆ ಅಂಗಳಕ್ಕೆ ಹರಿಯಿತು. ಆಕೆ ಆಶ್ಚರ್ಯದಿಂದ ಎದ್ದು ನಿಂತಳು-‘‘ಅರೆ! ಸೂರ್ಯ ಇಂದೆನಾದರೂ ಪಶ್ಚಿಮ ದಿಕ್ಕಿನಲ್ಲಿ ಉದಯಿಸಿದ್ದಾನೆಯೇ? ನೋಡಿ, ಇಂದು ಎದುರು ಮನೆಯವರಿಂದು ಬಟ್ಟೆಗಳನ್ನು ಎಷ್ಟೋಂದು ಸ್ವಚ್ಛವಾಗಿ ತೊಳೆದಿದ್ದಾರೆ. ಬಹುಶಃ ಇಂದು ಯಾರೋ ಬೇರೆಯವರು ಬಟ್ಟೆಗಳನ್ನು ಒಗೆದಿದ್ದಾರೆಂದು ಕಾಣಿಸುತ್ತಿದೆ’’.

ಪತಿ ಶಾಂತಿಯಿಂದ ಹೇಳಿದ-‘‘ಅವರ ಬಟ್ಟೆಗಳನ್ನು ಮೊದಲಿನಂತೆ ಒಗೆದು ಹರಗಿದ್ದಾರೆ. ಆದರೆ ನಮ್ಮ ಕಿಟಕಿಯ ಗಾಜು ಮಲೀನವಾಗಿತ್ತು. ಇಂದು ಬೆಳಗ್ಗೆ ಎದ್ದು ನಾನಿದನ್ನು ಸ್ವಚ್ಛಗೊಳಿಸಿದೆ’’ ಎಂದ.

ನಿಜ ದೋಷಾವೃತಮನಸಾಮತಿ ಸುದರಮಾವ ಭಾತಿ ವಿಪರೀತಮ್|
ಪಶ್ಯತಿ ಪಿತ್ತೋಪಹತಃ ಶಶಿಶುಭ್ರಂ ಶಂಖಮಪಿ ಪೀತಮ ||

ದೋಷದಿಂದ ಕೂಡಿದ ಮನಸ್ಸುಳ್ಳವರಿಗೆ ಅತಿಸುಂದರವಾದುದು ವಿಕೃತವಾಗಿ ಕಾಣಿಸುತ್ತದೆ. ಚಂದ್ರನಂತೆ ಶುಭ್ರವಾದ ಶಂಖವನ್ನು ಹಳದಿಯೆಂದು ಪಿತ್ತರೋಗಿ ತಿಳಿಯುತ್ತಾನೆ. ನಮ್ಮ ನೋಟವೇ ಸರಿಯಿಲ್ಲದಿದ್ದಲ್ಲಿ, ದೃಶ್ಯವೂ ಕೂಡ ಸರಿಯಾಗಿ ತೋರಲು ಸಾಧ್ಯವಿಲ್ಲ. ಮೊದಲು ನಾವು ಕೆಟ್ಟ ಭಾವನೆಯನ್ನು ಬಿಡೋಣ. ಕೆಟ್ಟ ಮನಸ್ಸನ್ನು ಬಿಡೋಣ. ಇನ್ನೊಬ್ಬರ ಕುರಿತು ನಿಂದೆ ಅಥವಾ ಕೆಟ್ಟ ಅಭಿಪ್ರಾಯಪಡುವುದಕ್ಕಿಂತ ಮೊದಲು ನಮ್ಮನ್ನು ನಾವು ನೋಡಿಕೊಳ್ಳುವುದೊಳ್ಳೆಯದು.

– ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)

ಇದನ್ನೂ ಓದಿ |Prerane | ಸಂಸಾರವೆಂಬುದೊಂದು ಕಾಲಿಗೆ ಕಟ್ಟಿದ ಗುಂಡು, ಕುತ್ತಿಗೆಗೆ ಕಟ್ಟಿದ ಬೆಂಡು!

Exit mobile version