Site icon Vistara News

Prerane | ಸುಖವೆಂಬುದೂ ದುಃಖವೇ

Prerane

ಶ್ರೀ ಕೈವಲ್ಯಾನಂದ ಸರಸ್ವತೀ
ಸುಖವೆಂಬುದು ಅಲ್ಪ, ಅಸ್ಥಿರ, ಬಹಳ ಆಯಾಸ ಸಾಧ್ಯ. ಅನುಭವಿಸುವಾಗ ಇನ್ನೂ ಬೇಕೆನಿಸುವುದು. ಮಾತ್ಸರ್ಯಾದಿಗಳನ್ನು ಉಂಟುಮಾಡುವ ಮುಖಾಂತರ ಚಿತ್ತವಿಕ್ಷೇಪವನ್ನು ಉಂಟುಮಾಡುವುದು. ಸುಖವು ನಾಶವಾಗುವುದರ ಚಿಂತನೆಯಿಂದ ಉದ್ವೇಗವನ್ನು ಹುಟ್ಟಿಸುವುದು. ಕ್ಷಯ ದರ್ಶನದಿಂದ ಸಂತಾಪವನ್ನು ಉಂಟು ಮಾಡುವುದು – ಈ ಕಾರಣಗಳಿಂದ ಸುಖವೆಂಬುದು ದುಃಖವೇ ಆಗಿದೆ.

ಸುಖವೆಂಬುದು ಮನಸ್ಸಿನಲ್ಲಿ ಉಂಟಾದ ವಿಕಾರ. ದುಃಖವೆಂಬುದೂ ಮನಸ್ಸಿನ ವಿಕಾರ. ಆದ್ದರಿಂದಲೇ ಸುಖದ ಸಮಯದಲ್ಲಿ ಮನುಷ್ಯ ನಿದ್ದೆ ಮಾಡಲಾರ. ದುಃಖದ ಸಮಯದಲ್ಲೂ ನಿದ್ದೆ ಮಾಡಲಾರ.

ಪ್ರಾಪಂಚಿಕ ಸುಖದಲ್ಲಿ ಪ್ರಾಪ್ತಿ ಮಾಡಿಕೊಳ್ಳುವವನು, ಪ್ರಾಪ್ತಿಮಾಡಿಕೊಳ್ಳುವಂತಹುದು ಎಂಬ ವಿಭಾಗದ ಅಪೇಕ್ಷೆ ಇರುತ್ತದೆ. ಪರಮಾರ್ಥವಾಗಿ ಅದು ಸುಖವಲ್ಲ. ಏಕೆಂದರೆ ಬಂದು ಹೋಗುವಂತಹುದು. ಮತ್ತೊಂದನ್ನು ಅವಲಂಬಿಸಿರುವುದು.

ವಿಷಯೇಂದ್ರಿಯಗಳ ಕಲೆಯುವಿಕೆಯ ಲಕ್ಷಣದ ಭೋಗದಿಂದುಂಟಾದ, ಪುರುಷನು ಅನುಕೂಲವೆಂದು ಭಾವಿಸುವುದನ್ನೇ ಸುಖವೆಂದು ಲೋಕದಲ್ಲಿ ಹೇಳಲಾಗುತ್ತದೆ. ಬೇರೆಯ ವಿಷಯ ಹಾಗೂ ಇಂದ್ರಿಯಗಳನ್ನು ಅವಲಂಬಿಸಿರುವುದು ಸುಖವು ಹೇಗಾದೀತು. ಮನಸ್ಸು ವಿಷಯಾಕಾರ ರೂಪವನ್ನು ಪಡೆಯುವ ಸ್ಪಂದನವಿಲ್ಲದೆ ವಿಷಯ ಸುಖವು ಲಭಿಸುವುದೇ ಇಲ್ಲ. ಆಯಾಸದಿಂದ ಲಭ್ಯವಾಗುವ ಇದು ಹೇಗೆ ಸುಖವಾದೀತು? ವಿಷಯ, ಇಂದ್ರಿಯ, ಮನಸ್ಸು – ಇವುಗಳಲ್ಲಿ ಯಾವುದೇ ಒಂದು ವಿಯೋಗವಾದರೂ ಸುಖವು ಕಾಣದಾಗುತ್ತದೆ. ಅದು ಅನಿತ್ಯವಾಗಿದೆ. ಸುಖವೆಂದುಕೊಂಡಿರುವುದು ದುಃಖವೇ ಆಗಿದೆ.

ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖ ಯೋನಯ ಏವತೇ |
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ||

(ಭಗವದ್ಗೀತಾ ೫-೨೨)
ಇದರರ್ಥ; ಯಾವುವು ಸ್ಪರ್ಶದಿಂದ ಉದ್ಭವಿಸುವ ಭೋಗಗಳೋ ಅವು ದುಃಖ ಮೂಲಗಳೇ, ಹೇ ಅರ್ಜುನಾ, ಪ್ರಾರಂಭವಾಗಿ ಕೊನೆಗಾಣುವ ಈ ಸುಖಗಳಲ್ಲಿ ವಿವೇಕಿಯು ಕ್ರೀಡಿಸುವುದಿಲ್ಲ ಎಂದು ಪರಮಾತ್ಮನಿಂದ ಹೇಳಲ್ಪಟ್ಟಿದೆ.

ಒಬ್ಬನಿಗೆ ಸುಖವೆಂಬುದು, ಮತ್ತೊಬ್ಬನಿಗೆ ದುಃಖವೆನಿಸುತ್ತದೆ. ಒಂದು ಕಾಲದಲ್ಲಿ ದುಃಖವಾಗಿದ್ದದ್ದು ಮತ್ತೊಮ್ಮೆ ಸುಖವಾಗುತ್ತದೆ. ಈ ರೀತಿ ಅನಿಶ್ಚಿತ ಸ್ವಭಾವವಾದದ್ದು ಸುಖವು. ಸುಖವೆಂಬುದು ದುಃಖವೇ ಆಗಿದೆ. ಜನರು ಸುಖವೆಂದು ಭ್ರಮೆಪಡುತ್ತಾರೆ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನು ಓದಿ | Prerane | ಫಲ ಮೂಲಾಶನಾಃ ದಾನ್ತಾಃ ಎಂಬ ಋಷಿ ವಾಕ್ಯದ ಅಂತರಾರ್ಥ

Exit mobile version