Site icon Vistara News

Prerane | ಸ್ವರ್ಗ ಮತ್ತು ನರಕಕ್ಕೆ ಹೋಗಲು ಬೇಕಿರುವುದು ಒಂದೇ ಶಕ್ತಿ…

prerane

ಶ್ರೀ ಕೈವಲ್ಯಾನಂದ ಸರಸ್ವತೀ
ಮನುಷ್ಯ ತತ್ತ÷್ವತಃ ಬ್ರಹ್ಮ ಸ್ವರೂಪವೇ ಅಹುದು. ಆದರೆ ಈ ತತ್ತ÷್ವವನ್ನು ತಿಳಿಯುವ ಮುನ್ನ, ಅವನು ಒಂದು ದ್ವಂದ್ವ, ಒಂದು ರೀತಿಯ ದ್ವೈತ. ಒಂದೆಳೆಯ, ಒಂದು ಮಡತೆಯ ವ್ಯಕ್ತಿತ್ವ ಮನುಷ್ಯನಲ್ಲಿ ಇಲ್ಲ. ವಿಭಾಗವಾಗಿದೆ ಹಾಗೂ ದ್ವಂದ್ವದಲ್ಲಿದೆ.

ಯಾವ ರೀತಿಯ ಕತ್ತಲು ಬೆಳಕು ಮನುಷ್ಯ ಜೀವನದಲ್ಲಿ ಇದೆಯೋ ಅದೇ ರೀತಿ ಪಶು ಹಾಗೂ ಪರಮಾತ್ಮ ಮನುಷ್ಯ ಜೀವನದಲ್ಲಿ (ಅನಿವಾರ್ಯವಲ್ಲದಿದ್ದರೂ) ಇದೆ, ಪಶು ಹಾಗೂ ಪರಮಾತ್ಮ ಜತೆ ಜತೆಯಲ್ಲೇ ಮನುಷ್ಯನಲ್ಲಿ ಇದ್ದಾರೆ. ಮನುಷ್ಯ ಏಣಿಯಿದ್ದಂತೆ.
ಒಂದು ಅಂಚು ನರಕದಲ್ಲಿ ಮತ್ತೊಂದು ಅಂಚು ಸ್ವರ್ಗದಲ್ಲಿ. ಯಾತ್ರೆ ಎರಡು ಕಡೆಗೂ ಸಾಧ್ಯ. ಯಾತ್ರೆ ಎಲ್ಲಿ ನಡೆಯುತ್ತದೆ, ಹೇಗೆ ನಡೆಯುತ್ತದೆ, ಅಂತಿಮ ಪರಿಣಾಮವೇನು ಎಂಬುಂದು ಪ್ರತಿಯೊಬ್ಬ ವ್ಯಕ್ತಿಯ ಕೈನಲ್ಲಿದೆ.

ಯಾತ್ರೆಯ ದಿಕ್ಕನ್ನು ಯಾವ ಕ್ಷಣದಲ್ಲಾದರೂ ಬದಲಾಯಿಸಬಹುದು. ಕೇವಲ ದಿಕ್ಕು ಬದಲಾಯಿಸುವುದು ಮಾತ್ರ. ನರಕಕ್ಕೆ ಹೋಗಲು ಯಾವ ಶಕ್ತಿ ಬೇಕೋ, ಅದೇ ಶಕ್ತಿ ಸ್ವರ್ಗಕ್ಕೆ ಕಾರಣವಾಗುತ್ತದೆ. ಕೆಟ್ಟವನಾಗಲು ಎಷ್ಠು ಶ್ರಮ ಪಡಬೇಕಾಗಿದೆಯೋ, ಅಷ್ಟೇ ಶ್ರಮದಲ್ಲಿ ಒಳಿತು ಸಹ ಫಲಿಸುತ್ತದೆ. ದೆವ್ವವಾಗುವುದು ಎಷ್ಠು ಸುಲಭ ಅಥವಾ ಕಠಿಣವೋ ಅಷ್ಟೇ ಸುಲಭ ಅಥವಾ ಕಠಿಣ ಸಂತನಾಗುವುದು.

ಒಂದು ಮಾತನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ; ಒಂದೇ ಶಕ್ತಿ ಎರಡು ದಿಕ್ಕಿನಲ್ಲೂ ಪ್ರಯಾಣ ಬೆಳೆಸುತ್ತದೆ. ಕೆಟ್ಟವನು ತಪಶ್ಚರ್ಯವನ್ನು ಮಾಡಲಾರನೆಂದು ತಿಳಿಯದಿರಿ. ಅವನೂ ಹೆಚ್ಚು ಶ್ರಮ ತೆಗೆದುಕೊಳ್ಳಬೇಕು, ಅವನದೂ ದೊಡ್ಡ ಸಾಧನೆ. ಅವನೂ ಸಹ ಹೆಚ್ಚು ಶ್ರಮವನ್ನು ವಹಿಸಬೇಕಾಗುವುದು. ಬಹುಶಃ ಒಳ್ಳೆಯವನ ಸಾಧನೆಗಿಂತಲೂ ಕೆಟ್ಟವನ ಸಾಧನೆಯು ಹೆಚ್ಚು ದುಸ್ಥರ, ಏಕೆಂದರೆ ಮಾರ್ಗದಲ್ಲಿ ಇಬ್ಬರಿಗೂ ಕಷ್ಟ ಸಿಗುತ್ತದೆ, ಒಳ್ಳೆಯವನಿಗೆ ಅಂತ್ಯದಲ್ಲಿಯೂ ಆನಂದ ಸಿಗುತ್ತದೆ, ಈ ಆನಂದ ಕೆಟ್ಟವನಿಗೆ ಅಂತ್ಯದಲ್ಲಿ ಸಿಗುವುದಿಲ್ಲ. ಮಾರ್ಗಗಳು ಎರಡು ಸಮವಾಗಿ ಸಾಗುತ್ತವೆ. ಒಳ್ಳೆಯವನು ಗುರಿ ತಲುಪುತ್ತಾನೆ. ಕೆಟ್ಟವನು ಎಲ್ಲೂ ಸೇರಲಾರ.

ಒಂದು ಅರ್ಥದಲ್ಲಿ ಕೆಟ್ಟ ಮನುಷ್ಯನ ಸಾಧನೆ ಇನ್ನೂ ಹೆಚ್ಚು ಕಠಿಣ, ಎಷ್ಠು ಕೆಟ್ಟತನವಿರುತ್ತದೋ, ಅಷ್ಟು ದುಃಖ. ಶಕ್ತಿಯು ಒಂದೇ. ಯಾತ್ರೆಯ ಮಾರ್ಗದ ಉದ್ದ, ಅಗಲ ಒಂದೇ. ಜೀವನ ವ್ಯಯವೂ ಒಂದೇ. ಮತ್ತೆ ಭೇದವೇನು? ದಿಕ್ಕು ಮಾತ್ರ ವ್ಯತ್ಯಾಸ. ಪರಮಾತ್ಮನ ಕಡೆಗೆ ಮುಖ ಮಾಡಿಕೊಂಡು ಪ್ರಯಾಣ ಮಾಡುವುದು ಶುಭಯಾತ್ರೆ.

ಅಶುಭವೆಂಬುದು ಪರಮಾತ್ಮನ ಕಡೆಗೆ ಬೆನ್ನು ಮಾಡಿ ಪ್ರಯಾಣಿಸುವುದು.ಈ ಎರಡು ಯಾತ್ರೆಗಳು ನಿಮ್ಮಿಂದ ಹೊರಗೆ ನಡೆಯುವುದಾದರೆ ಸುಲಭವಾಗಬಹುದಾಗಿತ್ತು. ಈ ಎರಡು ನಿಮ್ಮ ಒಳಗೇ ಇವೆ. ಪ್ರಯಾಣ ಮಾಡುವವರೂ ನೀವೇ. ರಸ್ತೆಯೂ ನೀವೇ ಹಾಗೂ ಯಾವ ಮಂದಿರವನ್ನು ಸೇರುವಿರೋ, ಅದೂ ಸಹ ನೀವೇ ಆಗಿರುತ್ತೀರ. ವಿಗ್ರಹವನ್ನು ಮಾಡುವವರು, ವಿಗ್ರಹದ ಕಲ್ಲು, ವಿಗ್ರಹವನ್ನು ಬಿಡಿಸುವ ಉಳಿ, ಸುತ್ತಿಗೆ, ಸರ್ವವೂ ನೀವೇ. ಆದ್ದರಿಂದ ಜವಾಬ್ದಾರಿಯೂ ಬಹಳ ದೊಡ್ಡದು.

ಯಾರ ಮೇಲೂ ದೋಷವನ್ನು ಆರೋಪಿಸಲಾಗದು. ಯಾವ ಫಲ ಬಂದರೂ ಕೇವಲ ನೀವಲ್ಲದೆ ಇನ್ನಾರು ಜವಬ್ಧಾರರಲ್ಲ. ನರಕ ಸ್ವರ್ಗವೆಂಬುದು, ನೀವೇ ಸೃಷ್ಠಿ ಮಾಡಿಕೊಂಡಿರುವ ಮಾನಸಿಕ ಸ್ಥಿತಿಯೆಂದೇ ಒಂದು ರೀತಿಯಲ್ಲಿ ಹೇಳಬೇಕು. ದೇವರು, ದೆವ್ವ ಎಂಬುವುಗಳು ನಿಮ್ಮ ಜೀವನದಲ್ಲಿ ನೀವೇ ಸೃಷ್ಠಿ ಮಾಡಿಕೊಳ್ಳಬಹುದಾದ ಎರಡು ಮುಖ್ಯವಾದ ಸ್ಥಿತಿಗಳು. ಈ ಎರಡನ್ನು ನೀವೇ ಸೃಜಿಸಿಕೊಳ್ಳುತ್ತೀರ. ಇವೆರಡನ್ನು ನೀವು ದರ್ಶನ ಮಾಡಲಾಗದು. ಏಕೆಂದರೆ ಎರಡೂ ನೀವೇ ಎರಡೂ ನಿಮ್ಮಲ್ಲಿಯೇ ಸಂಭಾವಿತ. ನೀವು ಶಾಂತರಾಗಬಹುದು, ದೇವರಾಗಬಹುದು. ಒಳ್ಳೆಯವನಲ್ಲಿದಂತೆ ಕೆಟ್ಟವನಲ್ಲಿಯೂ ಪರಮಾತ್ಮನಿದ್ದಾನೆ. ಅನುಭೋಕ್ತ ಇಲ್ಲವಾಗಲು, ಯಾವುದು ಉಳಿಯುವುದೋ ಅದೇ ಅನುಭವ – ದೇವರು.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನು ಓದಿ | Prerane | ಫಲ ಮೂಲಾಶನಾಃ ದಾನ್ತಾಃ ಎಂಬ ಋಷಿ ವಾಕ್ಯದ ಅಂತರಾರ್ಥ

Exit mobile version