Site icon Vistara News

Prerane | ಕಾರ್ಪೊರೇಟ್ ಜಗತ್ತಿನಲ್ಲಿ ಸತ್ಯದ ಬೆಲೆ!

Prerane

ಜಿ ನಾಗರಾಜ
ಸತ್ಯವು ಅಷ್ಟಾಂಗ ಯೋಗದ ಮೊದಲ ಮೆಟ್ಟಿಲಾದ ಯಮದಲ್ಲಿ ಒಂದು. ಆದರೆ ಇಂದಿನ ಕಾಲದಲ್ಲಿ ಸತ್ಯಕ್ಕೆ ಬೆಲೆಯಿಲ್ಲ, ಸತ್ಯದ ಪರವಾಗಿ ಮಾತನಾಡುವವನು ಓಬೀರಾಯನ ಕಾಲದವರು, ಗೊಡ್ಡು, ಈ ಕಾಲಕ್ಕೆ ತಕ್ಕವನಲ್ಲವೆನ್ನುವ ಭಾವನೆಯೂ ಜನಮನದಲ್ಲಿ ಪ್ರಚಲಿತವಿದೆ. ಸತ್ಯಮೇವ ಜಯತೇ ಎನ್ನುವ ಘೋಷವಾಕ್ಯ ಜನಮನದಲ್ಲಿ ಕ್ಷೀಣ ದೆಶೆಯಲ್ಲಿ ಉಳಿದುಕೊಂಡಿದೆ ಎಂದು ಹೇಳಿದರೆ ತಪ್ಪಾಗದು.

ಆದರೆ, ವಾಸ್ತವವನ್ನು ಪರಿಶೀಲಿಸಿದರೆ ವ್ಯಾವಹಾರಿಕ ಪ್ರಪಂಚದ ಎಷ್ಟೋ ಎಡೆಗಳಲ್ಲಿ ಸತ್ಯವು ಶಕ್ತಿಯುತವಾಗಿ ಉಳಿದುಕೊಂಡಿದೆ ಎಂದು ಕಂಡು ಬರುತ್ತದೆ. ಈ ಬಗ್ಗೆ ಶ್ರೀರಂಗಮಹಾಗುರುಗಳು ಕೊಟ್ಟಿರುವ ಸರಳ ಹಾಗೂ ಮಾರ್ಮಿಕವಾದ ನೋಟ ಗಮನಾರ್ಹ.

ಶ್ರೀರಂಗಮಹಾಗುರುಗಳು; ಸುಳ್ಳನ್ನು ಜನ ಸತ್ಯವೆಂದು ಭಾವಿಸಿದಾಗ ಮಾತ್ರ ಅದಕ್ಕೆ ಬೆಲೆಯೇ ಹೊರತು ಸುಳ್ಳನ್ನು ಸುಳ್ಳೆಂದು ತಿಳಿದರೆ ಯಾರೂ ಬೆಲೆ ಕೊಡುವುದಿಲ್ಲ ಎನ್ನುವ ಮಾರ್ಮಿಕವಾದ ನೋಟವನ್ನು ಕೊಟ್ಟಿದ್ದಾರೆ. ಒಬ್ಬ ಪ್ರವಚನಕಾರರು ಸಭೆಯೊಂದರಲ್ಲಿ ಈ ನೋಟವನ್ನು ನಿರೂಪಿಸಲು, ಮಾತಿನ ಮಧ್ಯದಲ್ಲಿ ಇದ್ದಕ್ಕಿದ್ದಂತೆ “ಕಟ್ಟಡದ ಹಿಂದೆ ಏನೋ ಕಾಣುತ್ತಿದೆಯಲ್ಲಾ ಅದು ಬೆಂಕಿಯೇ?” ಎಂದು ಕೇಳಿದರು. ತಕ್ಷಣವೇ ಸಭೆಯಲ್ಲಿದ್ದ ಅನೇಕರು ಹಿಂದಕ್ಕೆ ತಿರುಗಿ ನೋಡಿದರು. ನಂತರ, ಪ್ರವಚನಕಾರರು ನಾನು ಸುಮ್ಮನೆ ಹಾಗೆ ಕೇಳಿದೆ, ಆದರೆ ಇನ್ನೊಮ್ಮೆ ಅದೇ ಪ್ರಶ್ನೆಯನ್ನು ಕೇಳುತ್ತೇನೆ ಎಂದು ಪ್ರಶ್ನೆಯನ್ನು ಪುನರುಚ್ಛರಿಸಿದರು. ಈ ಬಾರಿ ಒಬ್ಬರೇ ವ್ಯಕ್ತಿಯೂ ಹಿಂದಿರುಗಿ ನೋಡಲಿಲ್ಲ.

ಈ ಘಟನೆಯನ್ನಿಟ್ಟುಕೊಂಡು ಪ್ರವಚನಕಾರರು; “ನೋಡಿ, ಸಭಾಭವನದ ಹಿಂಭಾಗದಲ್ಲಿ ಬೆಂಕಿಯಿದೆಯೆಂಬುದು ಸುಳ್ಳು. ಆದರೂ ಮೊದಲನೇ ಸಾರಿ ಅದನ್ನು ಹೇಳಿದಾಗ ಅದನ್ನು ಸತ್ಯವೆಂದು ಭಾವಿಸಿದ್ದರಿಂದ ನೀವೆಲ್ಲರೂ ಹಿಂದಿರುಗಿ ನೋಡಿದಿರಿ. ಆದರೆ ಅದು ಸುಳ್ಳೆಂದು ತಿಳಿದ ಮೇಲೆ, ಒಬ್ಬರೂ ಮಿಸುಕಾಡಲಿಲ್ಲ. ಅಂದರೆ ಸತ್ಯಕ್ಕೆ ಮಾತ್ರವೇ ಜನರನ್ನು ಪ್ರಭಾವಗೊಳಿಸುವ, ಚಲಿಸುವ, ಹಿಡಿದಿಡುವ ಶಕ್ತಿಯಿರುವುದು. ಸುಳ್ಳಿಗೆ ಸತ್ಯದ ವೇಷ ತೊಡಿಸಿದಾಗ ಮಾತ್ರವೇ ಅದಕ್ಕೆ ಬೆಲೆ ಹೊರತು ಸುಳ್ಳಿಗೆ ತನ್ನ ಸ್ವರೂಪತಃ ಬೆಲೆಯಿಲ್ಲ. ಹೀಗಾಗಿ ಸತ್ಯಕ್ಕೇ ಎಂದಿಗೂ ಜಯ ಎನ್ನುವ ವಾಕ್ಯವು ಸರ್ವಕಾಲಕ್ಕೂ ಅನ್ವಯಿಸುತ್ತದೆ” ಎಂದು ಆ ಸಭೆಯಲ್ಲಿ ನಿರೂಪಿಸಿದರು.

ಸತ್ಯಕ್ಕೆ ಜಯವೆಂದ ಮಾತ್ರಕ್ಕೆ ಗೊಡ್ಡುಗೊಡ್ಡಾಗಿಯಾದರೂ ಸರಿಯೇ ಸತ್ಯವನ್ನು ಎತ್ತಿಹಿಡಿಯಲು ಹೊರಟರೆ ಸುಲಭವಾಗಿ ಯಶಸ್ಸು ದೊರೆಯುತ್ತದೆ ಎಂದು ಹೇಳಲಾಗುವುದಿಲ್ಲ. ಸುಳ್ಳನ್ನು ಸತ್ಯವೆಂದು ಬಿಂಬಿಸಿ ತಾತ್ಕಾಲಿಕ ಜಯವನ್ನು ಪಡೆಯುವುದಕ್ಕೆ ಹೇಗೆ ಜಾಣತನ ಬೇಕೋ ಹಾಗೆಯೇ ಸತ್ಯವನ್ನೇ ಹಿಡಿದು ಯಶಸ್ವಿಯಾಗಲೂ ಯುಕ್ತಿ, ಜಾಣತನ ಬೇಕಾಗುತ್ತದೆ. ಈ ಜಾಣತನದ ಬಗ್ಗೆ ಒಂದು ಸುಭಾಷಿತವಿದೆ:
ಸತ್ಯಂ ಬ್ರೂಯಾತ್ ಪ್ರಿಯಂ ಭ್ರೂಯಾತ್ ।
ನ ಭ್ರೂಯಾತ್ ಸತ್ಯಮಪ್ರಿಯಂ ।
ಪ್ರಿಯಂಚ ನಾನೃತಂ ಭ್ರೂಯಾತ್ ।
ಏಷಃ ಧರ್ಮಸ್ಸನಾತನಃ ॥

ಎಂದು. ಅಂದರೆ, ಯಥಾರ್ಥವಾದುದನ್ನೇ ಮಾತನಾಡಬೇಕು, ಪ್ರಿಯವಾದುದನ್ನೇ ಮಾತನಾಡಬೇಕು, ಯಥಾರ್ಥವಾದರೂ ಅಪ್ರಿಯವನ್ನು ಹೇಳಬಾರದು ಮತ್ತು ಪ್ರಿಯವಾದರೂ ಸಹ ಸುಳ್ಳನ್ನು ಹೇಳಬಾರದು ಎನ್ನುವುದು ಈ ಸುಭಾಷಿತದ ಅಭಿಪ್ರಾಯ.

ಈ ಸುಭಾಷಿತದ ಅಭಿಪ್ರಾಯದಂತೆ ಸತ್ಯವನ್ನು ನಯನ ಮಾಡಿ ಯಶಸ್ಸುಗಳಿಸಿದ ಅನೇಕ ನಿದರ್ಶನಗಳು ಇಂದಿನ ಕಾರ್ಪೊರೇಟ್ ಕ್ಷೇತ್ರದಲ್ಲಿದೆ.

ಕಾರ್ಪೊರೇಟ್ ಕ್ಷೇತ್ರದಲ್ಲಿ ನಿಗಧಿತ ಕಾಲದಲ್ಲಿ ಕಾರ್ಯಯೋಜನೆಗಳನ್ನು ಮಾಡಿಕೊಟ್ಟು (commercial project contracts) ಅರ್ಥಗಳಿಸುವ ವಿಧಾನವುಂಟು. ಇಂತಹಾ ಪ್ರಾಜೆಕ್ಟ್‌ಗಳು ವಿಳಂಬವಾಗುವುದೂ ಉಂಟು. ಇಂತಹ ವಿಳಂಬಗಳು ಎದುರಾದಾಗ ಕಾರ್ಯ ನಿರ್ವಹಣ ತಂಡಕ್ಕೆ ಅಸಮಾಧಾನಗೊಂಡ ಗ್ರಾಹಕರನ್ನು ಎದುರಿಸುವುದು ಬಹಳ ಮುಜುಗರ ಹಾಗೂ ಕಷ್ಟಕರವಾದ ಕೆಲಸ. ಹೀಗಾಗಿ ಹಲವರು ಯಥಾಸ್ಥಿತಿಯನ್ನು ಮರೆಮಾಚಿ ಎಲ್ಲವೂ ಸರಿಯಿದೆಯೆಂದು ತೋರಿಸಿ ಜಾರಿಕೊಂಡು, ಜಾಣತನವನ್ನು ಮೆರೆದೆವೆಂದುಕೊಳ್ಳುತ್ತಾರೆ ಆದರೆ ಕೊನೆಯ ಹಂತದಲ್ಲಿ ಸಿಕ್ಕಿಹಾಕಿಕೊಂಡು ವಿಫಲರಾಗುತ್ತಾರೆ. ಇಂತಹವರು ಸುಭಾಷಿತದ ಭಾಗವಾದ ಪ್ರಿಯವಾದರೂ ಸುಳ್ಳನ್ನು ಹೇಳಬೇಡ ಎನ್ನುವ ವಾಕ್ಯವನ್ನು ಪಾಲಿಸುವುದಿಲ್ಲ.

ಅಮೆರಿಕೆಯ ಗ್ರಾಹಕರು ಎಂತಹ ಪ್ರತಿಕೂಲ ಪರಿಸ್ಥಿತಿಯಿದ್ದರೂ ಸತ್ಯವನ್ನೇ ಅಪೇಕ್ಷಿಸುತ್ತಾರೆ; ಆದರೆ ಪ್ರತಿಕೂಲ ಪರಿಸ್ಥಿತಿಯಿದ್ದಾಗ ಸಮಸ್ಯೆಯ ಮೂಲ ಮತ್ತು ಪರಿಹಾರದೊಡನೆ ಯಥಾಸ್ಥಿತಿಯನ್ನು ಬಿಂಬಿಸಬೇಕು ಎಂದು ಅಪೇಕ್ಷಿಸುತ್ತಾರೆ. ಹೀಗಾಗಿ ಎಷ್ಟೋ ಮಂದಿ ದಿಟ್ಟ ಅಧಿಕಾರಿಗಳು ಪ್ರತಿಕೂಲ ಪರಿಸ್ಥಿತಿಯಿದ್ದಾಗ ಸಮಸ್ಯೆಯನ್ನು ವಿವರಿಸುವುದಲ್ಲದೇ ಪರಿಹಾರಕ್ಕೆ ಸೂಕ್ತ ಸಲಹೆಗಳನ್ನೂ ಮುಂದಿಟ್ಟುಕೊಂಡು ಯಥಾಸ್ಥಿತಿಯನ್ನು ಬಿಂಬಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರು ಅಧಿಕಾರಿಗಳ ಸತ್ಯಶೀಲತೆಯನ್ನು ಮೆಚ್ಚುತ್ತಾರೆ ಮತ್ತು ಈ ಅಧಿಕಾರಿಗಳು ಅವರ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ. ಇಂತಹ ಅಧಿಕಾರಿಗಳು ಸುಭಾಷಿತದ – ಅಪ್ರಿಯವಾದ ಸತ್ಯವನ್ನು ಹೇಳಬೇಡ ಎನ್ನುವ ಭಾಗವನ್ನು ಅಪ್ರಿಯವಾದ ಸತ್ಯವನ್ನು ಪ್ರಿಯವಾಗುವಂತೆ ಮಾಡಿ ಹೇಳುವುದರ ಮೂಲಕ ಪಾಲಿಸಿ ಯಶಸ್ವಿಯಾಗುತ್ತಾರೆ.

ಇಂತಹ ಉದಾಹರಣೆಗಳು ಅನೇಕ. ಅವುಗಳಲ್ಲಿ 90ರ ದಶಕದಲ್ಲಿ ನಡೆದ ಒಂದು ಘಟನೆ ಇಲ್ಲಿ ಸ್ಮರಣೀಯ. ಭಾರತೀಯ ಸಂಸ್ಥೆಯೊಂದು ಅಮೆರಿಕೆಯ ಗ್ರಾಹಕ ಸಂಸ್ಥೆಗಳಿಂದ ಗುತ್ತಿಗೆ ಪಡೆಯುತ್ತಿತ್ತು. ಈ ಗುತ್ತಿಗೆಯನ್ನು ನಿರ್ವಹಿಸಿಕೊಡುವುದಕ್ಕೆ ಒಂದು ದೊಡ್ಡ ಗಣಕಯಂತ್ರ(mainframe computer)ವನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆಮದಾದ ಆ ಯಂತ್ರವು ವಿಮಾನ ನಿಲ್ದಾಣದ ಆಮದು ತೆರಿಗೆ ಇಲಾಖೆಯಲ್ಲಿ ಬಂದು ಕುಳಿತುಕೊಂಡಿತು. ಸಂಸ್ಥೆಯ ಅಧಿಕಾರಿಗಳು ಗಣಕ ಯಂತ್ರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಹೋದಾಗ ತೆರಿಗೆ ಅಧಿಕಾರಿಗಳು ಲಂಚಕ್ಕಾಗಿ ಒತ್ತಾಯ ಮಾಡಿ ಸಂಸ್ಥೆ ಅಧಿಕಾರಿಗಳು ಒಪ್ಪದಿದ್ದಾಗ ಯಂತ್ರವನ್ನು ಬಿಡುಗಡೆ ಮಾಡಲು ನಿರಾಕರಿಸಿಬಿಟ್ಟರು. ಈ ಯಂತ್ರವಿಲ್ಲದಿದ್ದರೆ ಗುತ್ತಿಗೆ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಯೋಜನೆ ವಿಳಂಬವಾಗುತ್ತಿತ್ತು. ನಿರ್ವಾಹಕ ತಂಡಕ್ಕೆ ಗ್ರಾಹಕರಿಗೆ ಏನು ಹೇಳುವುದು ಎಂದು ಬಹಳ ಆತಂಕವಾಗುತ್ತಿತ್ತು.

ಆದರೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಗ್ರಾಹಕರ ಒಲುಮೆಗಾಗಿಯಾದರೂ ಸರಿಯೇ, ತಮ್ಮ ಉದ್ದಿಮೆಯ ಒಳಿತಿನ ಸಲುವಾಗಿಯಾದರೂ ಸರಿಯೇ ಲಂಚವನ್ನು ಕೊಡಲೇಬಾರದು ಎಂಬ ತಮ್ಮ ನೀತಿಯನ್ನು ಸ್ಪಷ್ಟ ಪಡಿಸಿಬಿಟ್ಟರು. ಲಂಚ ಕೊಡದೆಯೇ ಯಂತ್ರವನ್ನು ಪಡೆದುಕೊಳ್ಳುವ ಪ್ರಯತ್ನ ಆರು ತಿಂಗಳು ಕಾಲ ಸತತವಾಗಿ ನಡೆಯಿತು. ಕೊನೆಗೆ ಕಾರ್ಯತಂಡದ ಇಬ್ಬರು ಸದಸ್ಯರು ತೆರಿಗೆ ಅಧಿಕಾರಿಗಳ ಬಳಿ ಹೋಗಿ, ನೋಡಿ – ನೀವು ಇನ್ನೆಷ್ಟು ವರ್ಷಗಳು ಯಂತ್ರವನ್ನು ಇಟ್ಟುಕೊಂಡಿದ್ದರೂ ನಾವು ಲಂಚ ಕೊಡುವುದಿಲ್ಲ. ನಿಮಗೆ ಸುಮ್ಮನೆ ಜಾಗ ವ್ಯಯವಾಗುತ್ತದೆ ಮತ್ತು ಯಂತ್ರ ಧೂಳುಸೇರಿಸಿಕೊಂಡು ಬಿದ್ದಿರುತ್ತದೆ. ನೀವು ಅದನ್ನು ಕಳುಹಿಸಿಕೊಡುವಿರಾ ಇಲ್ಲ ಅದರ ಧೂಳನ್ನು ಹೊಡೆದುಕೊಂಡು ಜಾಗವನ್ನೂ ಹಾಳು ಮಾಡೀಕೊಳ್ಳುತ್ತೀರೋ ಎಂದು ಕೇಳಿಬಿಟ್ಟರು. ಆಗ ಬೇರೆ ವಿಧಿಯಿಲ್ಲದೇ ತೆರಿಗೆ ಅಧಿಕಾರಿಗಳು ಯಂತ್ರವನ್ನು ಬಿಡುಗಡೆ ಮಾಡಿದರು.

ಈ ಮಧ್ಯದಲ್ಲಿ ತಂಡದವರಿಗೆ ಈ ವಿಳಂಬದಿಂದಾಗಿ ಗ್ರಾಹಕರು ಕುಪಿತರಾಗಿ ಎಲ್ಲಿ ಗುತ್ತಿಗೆಯನ್ನು ರದ್ದು ಮಾಡಿಬಿಡುತ್ತಾರೋ ಎನ್ನುವ ಆತಂಕ ಇತ್ತು. ಆದರೂ ವಿಳಂಬದ ಸತ್ಯಾಂಶವನ್ನೇ ಗ್ರಾಹಕರಿಗೆ ತಿಳಿಸಿದರು. ಈ ವಿಳಂಬದಿಂದ ಗ್ರಾಹಕರಿಗೆ ಕೋಪ ಬರುವುದರ ಬದಲು, ಗುತ್ತಿಗೆ ರದ್ದಾಗುವ ಸಾಧ್ಯತೆಯಿದ್ದಾಗಲೂ
ಲಂಚ ಕೊಡದೇ ತಮ್ಮ ನೈತಿಕ ಸಮಗ್ರತೆಯನ್ನು ಕಾಪಾಡಿಕೊಂಡರು ಎಂದು ಸಂತೋಷವೇ ಉಂಟಾಗಿ ಇನ್ನೂ ಹೆಚ್ಚಿನ ಮೊತ್ತದ ಗುತ್ತಿಗೆಗಳನ್ನು ಮುಂದೆ ಕೊಟ್ಟರು. ಹೀಗೆ ಸತ್ಯವು ಅಪ್ರಿಯವಾಗಿರುವಾಗ ಅದನ್ನು ಪ್ರಿಯವಾಗುವಂತೆ ಮಾಡಿ ಹೇಳುವುದಕ್ಕೆ ಜಾಣತನ ಬೇಕು. ಹೀಗೆ ಜಾಣತನದಿಂದ ಸತ್ಯವನ್ನು ನಯನ ಮಾಡಿದಾಗ ಸತ್ಯದಿಂದ ಕ್ಷಿಪ್ರವಾಗಿಯೇ ಯಶಸ್ಸು ದೊರೆಯುತ್ತದೆ. ಸತ್ಯಮೇವ ಜಯತೇ ಎನ್ನುವುದು ಸಾರ್ವಕಾಲಿಕ ಸತ್ಯ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನು ಓದಿ| Prerane | ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ

Exit mobile version