ಸ್ವಾಮಿ ಯೋಗೀಶ್ವರ ನಂದಾ
ಝೆನ್‌ಗುರು ಒಬ್ಬರು ಚಿತ್ರಕಲೆಯಲ್ಲಿ ಬಹಳ ಹೆಸರು ಮಾಡಿದ್ದರು. ಅವರನ್ನು ಭೇಟಿಯಾದ ರಾಜನೊಬ್ಬ ಬಿದಿರಿನ ಚಿತ್ರ ಬಿಡಿಸಿಕೊಡುವಂತೆ ಕೇಳಿದರು. ರಾಜನ ಕೋರಿಕೆಯನ್ನು ಮನ್ನಿಸಿದ ಝೆನ್ ಗುರು ಇದಕ್ಕೆ ಸಮಯ ಹಿಡಿಯುತ್ತದೆ ಎಂದರು. ‘ಎಷ್ಟು ಸಮಯ ಬೇಕಾಗುತ್ತದೆ’ ರಾಜ ಕೇಳಿದ. ‘ಇಷ್ಟೇ ಸಮಯ ಎಂದು ಹೇಳುವುದು ಕಷ್ಟ. ಕೊನೇಪಕ್ಷ ಎರಡು, ಮೂರು ವರ್ಷ ಬೇಕಾಗಬಹುದು’ ಎಂದರು ಗುರು.
ರಾಜನಿಗೆ ಆಶ್ಚರ್ಯವಾಯಿತು. ಕೇಳಿದ ಕೂಡಲೇ ಇವರು ಚಿತ್ರ ಬಿಡಿಸಿಕೊಡುತ್ತಾರೆ ಎಂದುಕೊಂಡಿದ್ದರು. ‘ಅಷ್ಟು ಸಮಯ ಬೇಕೇ’ ಎಂದು ಕೇಳಿದರು.
‘ಬಿದಿರಿನ ಚಿತ್ರ ಬಿಡಿಸೋದು ಕಷ್ಟವಲ್ಲ. ಆದರೆ ಅದಕ್ಕೂ ಮೊದಲು ನಾನೇ ಬಿದಿರಾಗಬೇಕು. ಇಲ್ಲದಿದ್ದರೆ ಬಿದಿರು ಏನು ಅಂತ ತಿಳಿಯೋದು ಹ್ಯಾಗೆ? ಬಿದಿರಿನ ಒಳಗನ್ನು ತಿಳಿಯಬೇಕು. ಅದಕ್ಕೆ ನಾನು ಬಿದಿರಿನ ನಡುವೆ ಇರಬೇಕು. ಅವುಗಳ ಮರ್ಮ ತಿಳಿಯುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆಯೋ ಗೊತ್ತಿಲ್ಲ. ಬಿದಿರಿನ ಅಂತರಂಗವನ್ನು ತಿಳಿಯದೇ ನಾನು ಅವುಗಳ ಚಿತ್ರ ಬಿಡಿಸಲಾರೆ. ನನ್ನ ಜೀವನದ ಉದ್ದಕ್ಕೂ ನಾನು ಹಾಗೇ ಮಾಡಿಕೊಂಡು ಬಂದಿದ್ದೀನಿ. ಅಂತರಂಗದ ತಿರುಳು ತಿಳಿದಾದ ಮೇಲೆ ನಾನು ಚಿತ್ರ ಬರೆಯೋದು’ ಎಂದು ರಾಜನಿಗೆ ಗುರು ವಿವರಣೆ ನೀಡಿದರು.
ಆಗ ರಾಜ ಬೇರೆ ದಾರಿಯಿಲ್ಲದೆ ‘ಸರಿ ನಾನು ಕಾಯ್ತೀನಿ’ ಎಂದು ಹೇಳಿ ಅರಮನೆಗೆ ಹಿಂದಿರುಗಿದರು. ವರ್ಷ ಕಳೆಯಿತು, ಕಲಾವಿದ ಗುರುವಿನ ಸುದ್ದಿಯೇ ಇಲ್ಲ. ‘ಅವನು ಸತ್ತಿದ್ದಾನೋ, ಬದುಕಿದ್ದಾನೋ ನೋಡಿಕೊಂಡು ಬನ್ನಿ’ ಎಂದು ರಾಜ ಭಟರನ್ನು ಕಳುಹಿಸಿದ. ಝೆನ್ ಗುರವಿದ್ದ ಕಾಡಿಗೆ ಬಂದು ಹಿಂದಿರುಗಿದ ಭಟರು ರಾಜನಿಗೆ ವರದಿ ಒಪ್ಪಿಸಿದರು.
‘ಆ ಗುರುಮಹಾಶಯರು ಬದುಕಿದ್ದಾರೆ. ಆದರೆ ಅವರಿನ್ನೂ ಮನುಷ್ಯರಾಗಿಯೇ ಉಳಿದಿದ್ದಾರೆ ಎಂಬ ಬಗ್ಗೆ ನಮಗೆ ಅನುಮಾನವಿದೆ. ಬಿದಿರು ಹಿಂಡಿಲ ನಡುವೆ ನಿಂತು ನಿಂತು ಅವರೂ ಬಿದಿರೇ ಆಗಿದ್ದಾರೆ. ಮಾತಿಲ್ಲ, ಕತೆಯಿಲ್ಲ, ಗಾಳಿ ಬಂದು ಬಿದಿರು ತೂಗಾಡಿದಾಗ ತಾನೂ ಹಾಗೆಯೇ ತೂಗಾಡುತ್ತಾರೆ. ನಾವು ಅವರ ಹತ್ತಿರ ಹೋಗಿ ಕರೆದರೂ ಅವರು ಮಾತನಾಡಲಿಲ್ಲ. ಮುಟ್ಟಿ ‘ಹಲೋ’ಎಂದರೂ ಪ್ರತಿಕ್ರಿಯೆಯಿಲ್ಲ. ಏನುಮಾಡಿದರೂ ಅವರು ಹಾಗೆಯೇ ಇದ್ದುದ್ದರಿಂದ ನಮಗೆ ಹೆದರಿಕೆಯಾಯಿತು. ಅವರಿಗೆ ಹುಚ್ಚು ಹಿಡಿದಿರಬೇಕು, ಇಲ್ಲವೇ ಇನ್ನೇನೋ ಆಗಿರಬೇಕು. ಹುಚ್ಚಲ್ಲಿ ಅವರು ಏನು ಬೇಕಾದರೂ ಮಾಡಿಬಿಡಬಹುದು, ನಮ್ಮನ್ನು ಕೊಲ್ಲಲೂ ಬಹುದು. ಅವರು ಮೊದಲಿನ ಮನುಷ್ಯ ಅಂತೂ ಅಲ್ಲ. ಅದರಿಂದ ಹೆದರಿ ನಾವು ಓಡಿ ಬಂದೆವು ಪ್ರಭುಗಳೇ’
ಇದಾಗಿ ಎರಡು ವರ್ಷಗಳ ನಂತರ ಕಲಾವಿದ ಝೆನ್‌ಗುರು ಒಂದು ದಿನ ಇದ್ದಕ್ಕಿದ್ದಂತೆಯೇ ಅರಮನೆಯಲ್ಲಿ ಪ್ರತ್ಯಕ್ಷರಾದರು. ‘ಈಗ ನಾನು ಬಿದಿರಿನ ಚಿತ್ರ ಬಿಡಿಸೋದಕ್ಕೆ ಸಿದ್ಧ, ಬ್ರಷ್, ಬಣ್ಣ ತನ್ನಿ’ ಎಂದು ಕೇಳಿದರು.
ರಾಜನಿಗೆ ಆತನನ್ನು ನೋಡಿ ಮಾತೇ ಹೊರಡಲಿಲ್ಲ. ಮಾತು ಮುಂದುವರಿಸಿದ ಗುರುಗಳು; ‘ಅಲ್ಲಾ, ನಿಮ್ಮ ಜನ ಯಾಕೆ ನನಗೆ ಪದೇ ಪದೇ ತೊಂದರೆ ಕೊಡ್ತಾ ಇದ್ದರು? ಅವರು ತೊಂದರೆ ಕೊಡದೇ ಹೋಗಿದ್ದರೆ ಇನ್ನು ಮುಂಚೆಯೇ ನಾನು ಬಂದು ನಿಮಗೆ ಚಿತ್ರಬಿಡಿಸಿಕೊಡುತ್ತಿದ್ದೆ ಪ್ರಭುಗಳೇ. ನೀವು ಕಳುಹಿಸಿದ ಜನ ಮೂರ್ಖರಲ್ಲಿಯೇ ಶತ ಮೂರ್ಖರು, ನನ್ನಲ್ಲಿಗೆ ಬಂದು ‘ಹಲೋ’ ಅನ್ನೋರು. ಯಾರಾದರೂ ಬಿದಿರು ಗಿಡಕ್ಕೆ ‘ಹಲೋ’ ಅಂತಾರಾ?’
ಈ ಕತೆಯಲ್ಲಿನ ಚಿತ್ರಗಾರನಾದ ಝೆನ್ ಗುರುವಿನ ವರ್ತನೆ ನಿಮಗೆ ಹುಚ್ಚು ಎನಿಸಬಹುದು. ಆದರೆ ಅವರು ತಾವು ಬಿಡಿಸುವ ಸಂಗತಿಯ ಅಂತರಂಗ ತಿಳಿಯದೇ ಚಿತ್ರ ಬಿಡಿಸಲು ಮುಂದಾಗುವವರಲ್ಲ. ತಮ್ಮತನವನ್ನು ಅವರು ರಾಜ ಕೇಳಿದಾಗಲೂ ಬಿಟ್ಟು ಕೊಡಲಿಲ್ಲ. ಯಾರು ಏನೇ ಹೇಳಿದರೂ, ಯಾವುದೇ ಸಂದರ್ಭದಲ್ಲಿಯಾದರೂ ಈ ರೀತಿ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಒಂದು ರೀತಿಯ ವಿಶಿಷ್ಟ ಗುಣ. ಇದನ್ನು ಇಂಗ್ಲಿಷ್‌ನಲ್ಲಿ ಯುನಿಕ್‌ನೆಸ್ ಎನ್ನುತ್ತಾರೆ. ಪ್ರತಿಯೊಬ್ಬರಲ್ಲಿಯೂ ಒಂದಲ್ಲಾ ಒಂದು ರೀತಿಯಲ್ಲಿ ಈ ರೀತಿಯ ಸರಿಸಾಟಿಯಿಲ್ಲದ ವಿಶಿಷ್ಟಗುಣ, ಅಸಾಧಾರಣ ಶಕ್ತಿ ಇರುತ್ತದೆ. ಇದನ್ನು ನಾವು ಗುರುತಿಸಿಕೊಂಡಾಗ ನಮ್ಮ ಆಧ್ಯಾತ್ಮಿಕದ ಹಾದಿಯು ಸುಗಮವಾಗಿ ಸಾಗುತ್ತದೆ.
ಲೇಖಕರು ಸಂಗಮ ಆಶ್ರಮದ ಮುಖ್ಯಸ್ಥರು,
ಆಧ್ಯಾತ್ಮಿಕ ಪ್ರವಚನಕಾರರು
ಇದನ್ನೂ ಓದಿ | Prerane | ಮೂರು ಶ್ರೇಷ್ಠ ಪ್ರಾರ್ಥನೆಗಳು