Site icon Vistara News

Prerane : ಐಕ್ಯತೆಯನ್ನು ಅರಸುವ ಹಂಬಲ

Sadhguru

Sadhguru

ಸದ್ಗುರು ಜಗ್ಗಿ ವಾಸುದೇವ್‌
ನೀವು ಲೈಂಗಿಕತೆ ಎಂದು ಕರೆಯುವ ದೈಹಿಕ ಪ್ರಚೋದನೆ, ಇನ್ನೊಂದು ಜೀವದ ಜೊತೆ ಐಕ್ಯವಾಗುವ ಪ್ರಯತ್ನವೇ ಆಗಿದೆ. ಎಲ್ಲೋ ಒಂದು ಕಡೆ, ನಿಮಗೆ ನೀವೇ ಇರುವುದು ಸಾಕಾಗುವುದಿಲ್ಲ ಎಂಬ ಹಂಬಲ ನಿಮ್ಮಲ್ಲಿದೆ. ನಿಮ್ಮದೇ ಭಾಗವಾಗಿ ಇನ್ನೊಬ್ಬ ವ್ಯಕ್ತಿಯನ್ನು ಸೇರಿಸಿಕೊಳ್ಳಲು ನೀವು ಬಯಸುತ್ತೀರಿ. ಆದ್ದರಿಂದ, ಲೈಂಗಿಕತೆಯು ನಿಮಗಿಂತ ಹೆಚ್ಚಿನದನ್ನು ನಿಮ್ಮ ಭಾಗವಾಗಿ ಹೊಂದಬೇಕೆಂಬ ಹಂಬಲವಾಗಿದೆ; ಮೂಲ ಹಂಬಲವು ಐಕ್ಯತೆಯನ್ನು ಹುಡುಕುವುದರ ಬಗ್ಗೆಯೇ.

ಹಾಗೆಯೇ, ಹೆಚ್ಚು ಹಣ, ಹೆಚ್ಚು ಆಸ್ತಿ, ಹೆಚ್ಚು ಶಕ್ತಿ, ಹೆಚ್ಚು ಸಂತೋಷ, ಹೆಚ್ಚು ಪ್ರೀತಿ ಹೊಂದಬೇಕೆಂಬ ನಿಮ್ಮ ಆಸೆಯು ನಿಮ್ಮ ಆಧ್ಯಾತ್ಮಿಕ ಹಂಬಲವೇ ಆಗಿದೆ, ಆದರೆ ಅರಿವಿಲ್ಲದೆ. ನಿಮ್ಮ ಹಂಬಲವು ಸರಿಯೇ, ಆದರೆ ನೀವು ಅದಕ್ಕೆ ಸರಿಯಾದ ನಿರ್ದೇಶನ ನೀಡುತ್ತಿಲ್ಲ, ಅಷ್ಟೆ. ನಿಮ್ಮ ಬಯಕೆ ಇನ್ನೂ ನಿಮಗಿಂತ ಹೆಚ್ಚಿನದನ್ನು ಹೊಂದಲು ಬಯಸುತ್ತಿದೆ, ಆದರೆ ನೀವು ಅರ್ಥ ಮಾಡಿಕೊಳ್ಳಬೇಕಾದುದು ಏನೆಂದರೆ, ಇನ್ನೊಬ್ಬ ವ್ಯಕ್ತಿಯನ್ನೋ ಅಥವಾ ಇನ್ನೊಂದು ವಸ್ತುವನ್ನೋ ಹೊಂದುವುದರಿಂದ ಈ ಹಂಬಲ ಪೂರ್ಣವಾಗುವುದಿಲ್ಲ. ಇದು ಇನ್ನೂ ಹೆಚ್ಚು, ಮತ್ತೂ ಹೆಚ್ಚಿನದನ್ನು ಬಯಸುತ್ತದೆ. ನಿಮ್ಮ ಆಸೆ ಅಂತಿಮವಾಗಿ ಏನನ್ನು ಬಯಸುತ್ತಿದೆ? ಅದು ಮಿತಿಯಿಲ್ಲದಿರುವಿಕೆಯನ್ನು ಬಯಸುತ್ತಿದೆ. ಅದು ಎಲ್ಲದರಲ್ಲೂ ಒಂದಾಗಲು ಬಯಸುತ್ತದೆ.

ಐಕ್ಯವಾಗುವುದು ಎಂದರೆ ಯೋಗ. ನೀವು ಯಾವುದರಾದರೂ ಒಂದರ ಜೊತೆ ಐಕ್ಯವಾಗಲು ಬಯಸುತ್ತೀರಿ, ಆದರೆ ನೀವು ಒಬ್ಬ ವ್ಯಕ್ತಿಯೊಂದರೆ ಒಂದಾದರೆ ಅದು ಸಾಕಾಗುವುದಿಲ್ಲ. ಆರಂಭದಲ್ಲಿ, ಇದು ಸಾಕು ಎಂದು ನೀವು ನಿಜವಾಗಿಯೂ ನಂಬಿದ್ದಿರಬಹುದು. ಆದರೆ ಒಮ್ಮೆ ನೀವು ಅದರ ಮೂಲಕ ಹೋದಾಗ, ಇದು ಹಾಗಲ್ಲ ಎಂದು ನೀವೇ ಅರ್ಥಮಾಡಿಕೊಳ್ಳಬಲ್ಲಿರಿ. ಮೂರ್ಖರು ಮಾತ್ರವೇ ಆ ರೀತಿಯಲ್ಲಿ ಹೆಚ್ಚು ಹೆಚ್ಚು ಜನರೊಂದಿಗೆ ಒಂದಾಗಲು ಬಯಸುವುದಾಗಿ ಭಾವಿಸುತ್ತಾರೆ, ಆದರೆ ಅದು ನಿಮ್ಮ ಹಂಬಲವನ್ನು ಪೂರೈಸುವುದಿಲ್ಲ. ನೀವು ಅದರ ಹಿಂದೆ ಒಂದಿಡೀ ಜೀವನದುದ್ದಕ್ಕೂ ಹೋದರೂ, ಅದು ನಿಮ್ಮನ್ನು ಎಲ್ಲಿಗೂ ತಲುಪಿಸುವುದಿಲ್ಲ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಆದ್ದರಿಂದ, ಒಂದೋ ನೀವು ಈ ಎಲ್ಲಾ ಅನುಭವಗಳನ್ನು ಅರ್ಥ ಮಾಡಿಕೊಳ್ಳಲು ನಿಮ್ಮ ಜೀವಿತಾವಧಿಯನ್ನು ತೆಗೆದುಕೊಳ್ಳುತ್ತೀರಿ, ಅಥವಾ ಆ ರಿತಿಯ ಎಲ್ಲ ಜನರನ್ನು ನೋಡಿ ಅರ್ಥಮಾಡಿಕೊಳ್ಳುತ್ತೀರಿ. ಅವರು ಈ ಎಲ್ಲ ಕೆಲಸಗಳನ್ನು ಮಾಡಿದ್ದಾರೆ, ಅದು ಅವರನ್ನು ಎಲ್ಲಿಗೂ ತಲುಪಿಸಿಲ್ಲ. ಇದು ತುಂಬಾ ಸ್ಪಷ್ಟವಾಗಿದೆ. ಜೀವನದ ವಿವಿಧ ಪ್ರಕ್ರಿಯೆಗಳಾದ ಮಹತ್ವಾಕಾಂಕ್ಷೆ, ಅಧಿಕಾರ, ಲೈಂಗಿಕತೆ, ಮಕ್ಕಳು, ಪ್ರೀತಿ, ಇವುಗಳ ಮೂಲಕ ಸಾಗಿದ ಅರವತ್ತು ವರ್ಷದ ವ್ಯಕ್ತಿಯನ್ನು ನೀವು ನೋಡಿದಾಗ, ನೀವು ಅವರ ಮುಖದಲ್ಲಿ ತೃಪ್ತಿಯನ್ನು ಕಾಣಬಲ್ಲಿರಾ ? ಇಲ್ಲ. ಇತರ ಜನರ ಜೀವನದ ಅನುಭವದಿಂದ ಇದನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತಿಕೆ ನಿಮ್ಮಲ್ಲಿದ್ದರೆ, ಈ ವಿಷಯಗಳು ನಿಮ್ಮನ್ನು ಎಲ್ಲಿಯೂ ಕರದೊಯ್ಯುವುದಿಲ್ಲ ಎಂದು ನಿಮಗೆ ಗೊತ್ತಾಗುತ್ತದೆ.

ಯಾವಾಗಲೂ ಏನಾದರೂ ಅಥವಾ ಯಾರೊಂದಿಗಾದರೂ ಒಂದಾಗುವುದೇ ನಿಮ್ಮಲ್ಲಿರುವ ಮೂಲಭೂತ ಪ್ರವೃತ್ತಿ. ಇದೊಂದು ಆಧ್ಯಾತ್ಮಿಕ ಪ್ರವೃತ್ತಿ. ನಿಮ್ಮ ಆಧ್ಯಾತ್ಮಿಕ ಪ್ರವೃತ್ತಿಗೆ ನೀವು ಭೌತಿಕವಾದ ರೀತಿಯಲ್ಲಿ ಅಭಿವ್ಯಕ್ತಿ ನೀಡುತ್ತಿದ್ದೀರ ಅಷ್ಟೇ. ನೀವು ಅತ್ಯಂತ ಮೂಲಭೂತ ಪ್ರವೃತ್ತಿ ಎಂದು ಕರೆಯುವ ಯಾವುದೇ ಕ್ರಿಯೆಯಲ್ಲಿ ನೀವು ಪ್ರಜ್ಞೆಯನ್ನು ತಂದುಕೊಂಡರೆ, ನೀವು ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಿದಂತೆ. ಇದೀಗ, ನೀವು ಅದನ್ನು ಅರಿವಿಲ್ಲದೆ ಮಾಡುತ್ತಿದ್ದೀರಿ, ಅದಕ್ಕಾಗಿಯೇ ಅದು ಸೀಮಿತ ಪ್ರಕ್ರಿಯೆಯಾಗಿ ಉಳಿದಿದೆ.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ : Prerane : ನಾವು ಕೋಪ ಮಾಡಿಕೊಳ್ಳಬಾರದು; ಕೃತಜ್ಞರಾಗಿರಬೇಕು

Exit mobile version