ಸದ್ಗುರು ಜಗ್ಗಿ ವಾಸುದೇವ್
ಸರ್ಪಗಳು ಕೆಲವು ವಿಶಿಷ್ಟ ಶಕ್ತಿವಲಯಕ್ಕೆ ಬಹಳ ಸಂವೇದನಾಶೀಲ ಜೀವಿಗಳು. ವಿಶುದ್ಧ ಚಕ್ರಕ್ಕೂ ಸರ್ಪಕ್ಕೂ ನಿಕಟ ಸಂಬಂಧವಿದೆ. ಇಂತಹ ವಿಶೇಷ ಶಕ್ತಿಗಳು ಇದ್ದೆಡೆ ಮೊದಲು ಆಕರ್ಷಿತವಾಗುವ ಜೀವಿಗಳೇ ಸರ್ಪಗಳು. ಪತಂಜಲಿ ಅರ್ಧ ಮಾನವ ಅರ್ಧ ಸರ್ಪವೇ? ಇಂತಹ ವದಂತಿಗಳನ್ನು ನಂಬಬೇಡಿ. ಅರ್ಧ ಸರ್ಪ ಅರ್ಧ ಮಾನವ ಎನ್ನುವುದು ಒಂದು ಸಂಕೇತ ಅಷ್ಟೇ. ಕುಂಡಲಿನೀ ಶಕ್ತಿಯ ಸಂಕೇತವೇ ಸರ್ಪ. ಸರ್ಪದ ಮೇಲೆ ಪತಂಜಲಿಯ ತಲೆ ಮತ್ತು ದೇಹವನ್ನು ಇಟ್ಟಿರುವುದು ಏಕೆಂದು ಗೊತ್ತೇ? ಕುಂಡಲಿನೀ ಶಕ್ತಿ ಮತ್ತು ಪತಂಜಲಿ ಒಂದೇ ಎಂಬುದರ ಸಂಕೇತ ಇದು.
ಪತಂಜಲಿಯ ಬಗ್ಗೆ ಅತೀವ ಪ್ರೇಮ-ಭಕ್ತಿ ಇರುವವರು ಅರ್ಧ ಸರ್ಪ ಅರ್ಧ ಮಾನವನ ಆಕೃತಿಯನ್ನು ಪತಂಜಲಿ ಎಂದರು. ಪತಂಜಲಿಯನ್ನು ಯೋಗಿ, ಮುನಿ, ಅಥವಾ ಋಷಿ ಎಂದು ಕರೆಯುವುದು ಪತಂಜಲಿಯ ಬಗ್ಗೆ ಪೂರ್ಣ ವಿವರ ಕೊಟ್ಟಂತೆ ಆಗುವುದಿಲ್ಲ. ಆದ್ದರಿಂದ ನಮ್ಮೊಳಗಿನ ಜೀವಶಕ್ತಿ ಚೈತನ್ಯ – ಕುಂಡಲಿನಿಯೇ ಪತಂಜಲಿ ಎಂದರು. ಆಗಮಾತ್ರ ಪತಂಜಲಿಯ ನಿಜಸತ್ವ ತಿಳಿಯುವುದೆಂದು ಅವರೆಲ್ಲರ ಅಭಿಮತ.
ಪತಂಜಲಿಯ ಪ್ರತಿಮೆ ಯಾವಾಗಲೂ ಸುತ್ತಿಕೊಂಡ ಸರ್ಪದೊಡನೆ ಇರುತ್ತದೆ. ನೋಡಲಿಕ್ಕೆ ಈ ಪ್ರತಿಮೆ ಸುಂದರವಾಗಿ ಇರುವುದೇನೋ ಸರಿ. ಆದರೆ ನಿಜವಾಗಿಯೂ ಪತಂಜಲಿ ಹಾಗೆ ಇದ್ದಿದ್ದರೆ ಪರಿಸ್ಥಿತಿ ಹೇಗಿದ್ದೀತು? ನಡೆದಾಡಲಿಕ್ಕೇ ಆಗದೆ ತೆವಳುತ್ತಾ ಹೋದಂತೆಲ್ಲ ಮೂಗು ಹರಿದುಕೊಳ್ಳಬೇಕಿತ್ತು. ಹಾಗಿರಲಿಲ್ಲ. ಪತಂಜಲಿಗೆ ಕೈಕಾಲುಗಳು ಸರಿಯಾಗೇ ಇದ್ದವು. ಅವರು ದೈಹಿಕ ಪರಿಮಿತಿಯನ್ನು ದಾಟಿಸಿ ಆತ್ಮಸಾಕ್ಷಾತ್ಕಾರ ಮಾಡಿಸಬಲ್ಲ ಕುಂಡಲಿನೀ ಶಕ್ತಿಯೊಂದಿಗೆ ಎಷ್ಟು ಸಮರಸವಾಗಿದ್ದರೆಂದರೆ ಅವರಿಗೆ ಅರ್ಧಕುಂಡಲಿನಿ [ಸರ್ಪ] ಅರ್ಧಮಾನವನಂತೆ ರೂಪ ಕೊಟ್ಟರು. ಆಗಮಾತ್ರ ಅವರ ಸಾಧನೆಗೆ ಸೂಕ್ತ ಅಭಿವ್ಯಕ್ತಿ ಸಿಗುತ್ತಿತ್ತು.
ನಾನು ಎಲ್ಲಿ ಹೋದರೂ ಅಲ್ಲಿ ಸರ್ಪ ಕಂಡುಬರುವುದು ಖಚಿತ. ನಾನಿರುವ ಶಕ್ತಿವಲಯಕ್ಕೆ ಹಾವುಗಳು ಬರುತ್ತವೆ. ಎಲ್ಲರಿಗೂ ಇದನ್ನು ಅರ್ಥ ಮಾಡಿಸುವುದು ಕಷ್ಟ. ಸರ್ಪಭೀತಿ ಒಂದು ಪೂರ್ವಾಗ್ರಹ ಪೀಡಿತ ಮನೋಭಾವ ಅಷ್ಟೇ. ನಿಮ್ಮ ಬಂಧು ಮಿತ್ರರಲ್ಲಿ ಹಾವು ಕಚ್ಚಿ ಸತ್ತವರು ಎಷ್ಟು ಮಂದಿ? ವಾಹನಗಳ ದುರ್ಘಟನೆಯಲ್ಲಿ ಸತ್ತವರು ಎಷ್ಟು ಜನ? ಹಾವು ಕಚ್ಚಿ ಸತ್ತವರು ಇಲ್ಲವೆಂದೇ ಹೇಳಬೇಕು. ಮತ್ತೇಕೆ ಹಾವು ಎಂದರೆ ಅಷ್ಟೊಂದು ಭಯ? ಅನೇಕ ಜನ ವಾಹನಗಳಿಂದಾಗಿ ಸತ್ತಿದ್ದರೂ ವಾಹನವನ್ನು ಮತ್ತೆ ಮತ್ತೆ ಏಕೆ ಏರುವಿರಿ? ಹಾವಿನ ಬಗೆಗಿನ ಭಯ ಕಾರಣವಿಲ್ಲದುದು. ಹಾವುಗಳ ಬಗ್ಗೆ ನಿಮ್ಮ ತಿಳುವಳಿಕೆ ಎಷ್ಟು ಕಡಿಮೆಯೋ, ಅಷ್ಟೇ ಹೆಚ್ಚು ಭಯ ಇರುವುದು. ಅವುಗಳ ಬಗ್ಗೆ ಅರಿತುಕೊಂಡಷ್ಟೂ ಭಯ ಕಡಿಮೆಯಾಗುವುದು.
ನಾನು ತೋಟದಲ್ಲಿ ಇರುತ್ತಿದ್ದಾಗ ನಾನು ಮಲಗುತ್ತಿದ್ದ ಕೊಠಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸರ್ಪಗಳು ನನ್ನೊಡನೆ ಇದ್ದವು. ರಸ್ಸೆಲ್ ವೈಪರ್ ಮತ್ತು ಕಾಳಿಂಗಗಳು. ರಾತ್ರಿ ಮಲಗಿದಾಗ ನನ್ನ ಕಂಬಳಿಯೊಳಗೇ ಸಿಂಬಿಸುತ್ತಿ ಮಲಗುತ್ತಿದ್ದವು. ನಾನು ಚಕ್ಕನೆ ಅಲುಗಾಡಿದರೆ ಅವೂ ಅಲುಗಾಡುತ್ತಿದ್ದವು. ಹೀಗಾಗಿ, ನಾನು ನಿದ್ದೆಯಲ್ಲಿ ಹೊರಳಾಡುವಾಗಲೂ ನನ್ನ ಬಳಿಯಲ್ಲಿ ಏನಿರುವುದೆಂಬ ಅರಿವು ನನಗೆ ಇರುತ್ತಿತ್ತು. ನಿಧಾನವಾಗಿ ಹೊರಳಿಕೊಳ್ಳುತ್ತಿದ್ದೆ. ಸರ್ಪವಿರುವಲ್ಲಿ ಥಟ್ಟನೆ ಚಲಿಸುವುದು ಅಪಾಯಕಾರಿ ನಿಜ. ನಮ್ಮ ಚಲನೆ ಸರಿಯಿದ್ದರೆ ನಿರಾಯಾಸವಾಗಿ ಕೈಗೇ ಎತ್ತಿಕೊಳ್ಳಬಹುದಾದ ಏಕೈಕ ಕಾಡುಪ್ರಾಣಿ ಸರ್ಪ. ಕಚ್ಚದೆ ನಿಮ್ಮ ಹಿಡಿತಕ್ಕೆ ಸಲೀಸಾಗಿ ಬರುವುದು. ಧ್ಯಾನಸ್ಥ ಮನಸಿನ ವ್ಯಕ್ತಿಯ ಮಗ್ಗುಲಿಗೇ ಬಂದು ಕೂಡುವ ಸರ್ಪ ಹಾನಿ ಮಾಡುವುದಿಲ್ಲ. ಗಲಿಬಿಲಿಯ ಉದ್ವೇಗದ ಮನಸ್ಸಿನ ವ್ಯಕ್ತಿ ಸರ್ಪಕ್ಕೆ ಸರಿಬರುವುದಿಲ್ಲ. ಹತ್ತಿರ ಬಂದರೆ ನಿಮ್ಮ ಗಲಿಬಿಲಿಗೆ ನಿಮಗೂ ಅಂತಿಮ ವಿರಾಮ!
ಈಶ ಕೇಂದ್ರವನ್ನು ಸ್ಥಾಪಿಸಿದ ಸಮಯದಲ್ಲಿ ಸರ್ಪಗಳು ಎಲ್ಲೆಡೆ ಹರಿದಾಡುತ್ತಿದ್ದವು. ನಾವು ಕಾರ್ಯಕ್ರಮ ನಡೆಸುತ್ತಿದ್ದ ಹಜಾರದಲ್ಲೆಲ್ಲ ಓಡಾಡುತ್ತಿದ್ದವು. ಸಾಧಕರು ಇದಕ್ಕೆ ಒಗ್ಗಿಕೊಳ್ಳಲು ಸಮಯ ಹಿಡಿಯಿತು. ಅವರದೊಂದೇ ಪ್ರಶ್ನೆ. ಸರ್ಪಗಳೊಂದಿಗೆ ನಾವೇನು ಮಾಡಬೇಕು? ಏನೂ ಮಾಡಬೇಕಾಗಿಲ್ಲ. ಅವುಗಳ ವಾಸಸ್ಥಾನವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ಅವುಗಳ ಜೊತೆಗೇ ವಾಸ ಮಾಡಬೇಕು ಅಷ್ಟೇ. ಜಾಗ ಅವುಗಳದ್ದು. ಸರ್ಪಗಳಿಗೆ ನಾವು ಹಿಡಿಸಲಿಲ್ಲವೆಂದರೆ ಅವು ಜಾಗ ಬಿಟ್ಟು ಹೋಗುವವು. ಅವಕ್ಕೆ ನಿಮ್ಮೊಡನಿರಲು ಅಭ್ಯಂತರವಿಲ್ಲದಿದ್ದರೆ ನಿಮಗೂ ಅವುಗಳೊಂದಿಗೆ ಇರಲು ಅಭ್ಯಂತರವಿರಬಾರದು. ನೀವು ಬಂದು ಅವುಗಳ ಜಾಗವನ್ನು ನಾಶ ಮಾಡಿದ್ದೀರಿ. ಈಗ ಆ ಜಾಗದಿಂದಲೇ ಓಡಿಸಬೇಕೇನು? ಈ ರೀತಿಯ ಜೀವನ ಸರಿಯಲ್ಲ. ಇದಕ್ಕೆ ಆಗಲೇ ಬೆಲೆ ತೆರುತ್ತಿದ್ದೇವೆ.
ಭಾರತದಲ್ಲಿನ ಸರ್ಪಗಳಲ್ಲಿ 90% ವಿಷವಿಲ್ಲದವು. ಇವು ನೋಡಲು ಬಲು ಸುಂದರವಾದುವು. ಬಹಳ ಸರ್ಪಗಳಿಗೆ ವಿಷದ ಹಲ್ಲುಗಳು ಸಹ ಇರುವುದಿಲ್ಲ. ಗರಗಸದಂತಹ, ಕಡಿಯಲೂ ಆಗದ ಮೆದು ಎಲುಬುಗಳಿವೆ ಅಷ್ಟೇ. ಸರ್ಪದ ಬಗ್ಗೆ ನಿಮ್ಮದು ಅರ್ಥವಿಲ್ಲದ ಭಯ. ನಿಮ್ಮನ್ನು ನೋಡಿದ ಕೂಡಲೇ ಅವೇ ಓಡಿಹೋಗುತ್ತವೆ. ನಿಮ್ಮದು ಆಧಾರವಿಲ್ಲದ ಅತಿರೇಕದ ಭೀತಿಯಷ್ಟೇ. ನಿಮಗಿದು ಗೊತ್ತೇ? ಅನೇಕ ವೈದ್ಯಕೀಯ ಸಂಸ್ಥೆಗಳು ಕೋಲೊಂದನ್ನು ಸುತ್ತಿಕೊಂಡಿರುವ ಎರಡು ಸರ್ಪಗಳನ್ನು ಸಂಕೇತವಾಗಿ ಮಾಡಿಕೊಂಡಿವೆ. ಇದು ಯೋಗದಲ್ಲಿನ ಸಂಕೇತವೂ ಕೂಡ.
ಎರಡು ಸರ್ಪಗಳು ಆರು ಕಡೆ ಕೂಡಿ, ತುದಿಯಲ್ಲಿ ಮತ್ತೆ ತಾಗಿಕೊಂಡಿರುವುದು ಇಡಾ – ಪಿಂಗಳಾ ನಾಡಿಗಳು ಸುಷುಮ್ನಾ ಮೂಲಕ ಹಾದುಹೋಗುವುದರ ಸಂಕೇತ. ಭಾರತದಲ್ಲಿ ಆಧ್ಯಾತ್ಮಿಕ ಸಾಧನೆಗೂ ಸರ್ಪಕ್ಕೂ ಇರುವ ಸಂಬಂಧ ಬಹಳ ಆಳವಾದುದು. ನಿಜವಾಗಿ, ಈ ಸಂಬಂಧವನ್ನು ವಿಶ್ವದ ಎಲ್ಲೆಡೆ ಗುರುತಿಸಬಹುದು. ಏಕೆಂದರೆ, ಜನ ಅರಿವು ಪಡೆದಂತೆ ನಿರ್ದಿಷ್ಟ ಶಕ್ತಿಗಳಿಗೆ ಸರ್ಪಗಳು ಸೂಕ್ಷ್ಮಗ್ರಾಹಿ ಆಗಿರುವುದನ್ನು ಮನಗಾಣುವರು.
ಕೇವಲ ಪಂಡಿತರು ಮತ್ತು ಪೂಜಾರಿಗಳು ಸರ್ಪಗಳ ಬಗ್ಗೆ ಅಸಂಬದ್ಧ ಊಹಾಪೋಹಗಳನ್ನು ಸೃಷ್ಟಿಸಿದ್ದಾರೆ. ಕ್ರೈಸ್ತ ಧರ್ಮದಲ್ಲಿಯೂ ಇಂತಹ ಕಲ್ಪನೆಗಳನ್ನು ಕಾಣಬಹುದು. ಕ್ರೈಸ್ತ ಪಾದ್ರಿಗಳ ಪ್ರಕಾರ ಸರ್ಪವು ಈವ್‌ಳನ್ನು ಮರುಳು ಮಾಡಿ ಜ್ಞಾನದ ಹಣ್ಣು ತಿನ್ನುವಂತೆ ಪ್ರಚೋದಿಸಿತು. ಇದೇ ಕಾರಣವಾಗಿ ಈಡನ್ ವನದಲ್ಲಿ ಆಗಬಾರದ ಸಂಗತಿಗಳು ನಡೆದುಹೋದವು. ಇದೇ ಘಟನೆಗೆ ನಾವು ಬೇರೊಂದು ರೀತಿಯಲ್ಲಿ ಅರ್ಥ ಕೊಡಬಹುದು. ಸರ್ಪವು ಈವ್‌ಳಿಗೆ ಮರುಳು ಮಾಡಿ ತಿನ್ನಿಸಿದ ಹಣ್ಣನ್ನೇ ನೀವೂ ನಿಮ್ಮ ಮಕ್ಕಳಿಗೆ ತಿನಿಸುತ್ತಿದ್ದೀರಿ. ಅಲ್ಲವೇ? ಅತೀವ ಆಸಕ್ತಿಯಿಂದ ನಿಮ್ಮ ಮಕ್ಕಳನ್ನು ಶಾಲೆಗೆ ದೂಡುತ್ತಿದ್ದೀರಿ. ಜ್ಞಾನದ ಹಣ್ಣನ್ನು ತಿನ್ನಿರೆಂದು ಒತ್ತಾಯಿಸುತ್ತಿದ್ದೀರಿ. ಸರ್ಪವೂ ಈವ್‌ಳಿಗೆ ಇದನ್ನೇ ತಾನೆ ಮಾಡಿದುದು.
ಇಲ್ಲ ಇಲ್ಲ ಹಣ್ಣಿನಿಂದಾಗಿ ಏನೆಲ್ಲ ನಡೆದುಹೋಯಿತು… ಎನ್ನುವಿರಾ? ಒಳ್ಳೆಯದೇ ಆಯಿತಲ್ಲ. ಭೂಮಿಯ ಮೇಲೆ ಜೀವನ ಆರಂಭವಾಯಿತು. ಈವ್ ಹಣ್ಣು ತಿಂದುದರ ಫಲವಾಗಿಯೇ ಭೂಮಿಯ ಮೇಲೆ ಜೀವನ ಜೀವರಾಶಿ ಹುಟ್ಟಿಬಂದಿತು ಎನ್ನುವುದು ಈ ಕಥೆ. ಜೀವನ ಆರಂಭವಾದುದರಲ್ಲಿ ತಪ್ಪೇನು? ಆಡಮ್ ಮತ್ತು ಈವ್ ಒಬ್ಬರಿಗೊಬ್ಬರು ಏನು ಮಾಡಬೇಕೆಂದು ತಿಳಿಯದ ಮೂರ್ಖರು. ಅವರ ತಲೆಯಲ್ಲಿ ಸ್ವಲ್ಪ ವಿವೇಕ ತುಂಬಿದುದು ಸರ್ಪ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಒಂದು ವೇಳೆ ಈ ಕಥೆಯನ್ನು ನಂಬುವುದಾದರೆ, ನಾನು, ನೀವು ಈ ಭೂಮಿಗೆ ಬಂದುದಕ್ಕೆ ಕಾರಣ, ಆ ಸರ್ಪವು ಸೃಷ್ಟಿಯ ಮೊದಲ ದಂಪತಿಗೆ ತಿಳುವಳಿಕೆ ನೀಡಿದುದೇ ಅಲ್ಲವೇ? ನೀವು ಜೀವನಕ್ಕೆ ವಿರುದ್ಧವಾದರೆ ಸರ್ಪವು ಸೈತಾನನ ದೂತ ಎನ್ನುವಿರಿ. ಜೀವನ ಬೇಕೆನ್ನುವವರು ಸರ್ಪವು ನಿಜವಾಗಿ ದೈವಿಕವಾದುದರ ಪ್ರತಿನಿಧಿ ಎಂದು ಮಾನ್ಯತೆ ನೀಡುವರು. ಸ್ವಲ್ಪವಾದರೂ ಪರಿಜ್ಞಾನ ಇರುವವರು, ಜೀವನದ ಬಗ್ಗೆ ಉತ್ಸಾಹ ಇರುವವರು ಸರ್ಪವನ್ನು ದೈವೀರೂಪ ಎಂದು ತಿಳಿಯುವರು. ಜೀವನದ ರೀತಿಯನ್ನೇ ಜೀವನವನ್ನೇ ಸೈತಾನನ ಆಟ ಎಂದು ತೀರ್ಮಾನಿಸುವ ಜನರು ಮಾತ್ರ ಸರ್ಪವನ್ನು ಸೈತಾನನ ಪ್ರತಿನಿಧಿ ಎಂದು ದೂರ ಸರಿಸುವರು.
ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.
ಇದನ್ನೂ ಓದಿ : Prerane : ಹನುಮಂತನ ಆದರ್ಶ ಮತ್ತು ಅದರ ಫಲ