Site icon Vistara News

Prerane : ನಮ್ಮ ದೇವರುಗಳು ಆಯುಧ ಹಿಡಿದಿರುವುದಾದರೂ ಏಕೆ?

goddess with weapons

prerane spiritual column by sadhguru jaggi vasudev about Unique Culture of India

ಸದ್ಗುರು ಜಗ್ಗಿ ವಾಸುದೇವ್‌
ನಮ್ಮ ಸಂಸ್ಕೃತಿಯಲ್ಲಿ ದೇವರುಗಳು ಇಷ್ಟೊಂದು ಆಯುಧಗಳನ್ನು ಹಿಡಿದು ನಿಂತಿರುವುದೇಕೆ ಎಂದು ಒಬ್ಬರು ನನ್ನನ್ನು ಕೇಳಿದರು. ಇದು ತೀವ್ರವಾದಿಗಳನ್ನು ಪ್ರೋತ್ಸಾಹಿಸುವ ಸಂಸ್ಕೃತಿಯಿರಬಹುದೇ ಎಂಬುದು ಅವರ ಸಂದೇಹ. ಪ್ರಪಂಚದಲ್ಲಿರುವವರೆಲ್ಲರೂ ಜಾಗೃತಮನಸ್ಕರಾಗಿ ಜೀವನ ನಡೆಸಿದರೆ ಆಯುಧಗಳೇ ಬೇಕಾಗುವುದಿಲ್ಲ. ಆದರೆ, ಆಯುಧಗಳ ಅಗತ್ಯವಿಲ್ಲವೆಂದು ಹೇಳುವಂಥ ಸ್ಥಿತಿಗೆ ಪ್ರಪಂಚವು ಇನ್ನೂ ಸಿದ್ಧವಾಗಿಲ್ಲವಲ್ಲ!

ಇಂದಿನ ಯಶಸ್ವಿ ದೇಶಗಳೆಲ್ಲವೂ ಆಯುಧಗಳ ತಯಾರಿಕೆಯಲ್ಲಿ ಮುಳುಗಿವೆ. ಪ್ರಪಂಚದ ಅತಿ ದೊಡ್ಡ ವ್ಯಾಪಾರವೆಂದರೆ ಆಯುಧಗಳ ತಯಾರಿಕೆ ಮತ್ತು ಅವುಗಳ ಮಾರಾಟವಾಗಿದೆ. ಯಾವುದೇ ದೇಶದ ಸರ್ಕಾರ ಆಯುಧಗಳಿಗಾಗಿ ಬಹು ದೊಡ್ಡ ಮೊತ್ತವನ್ನು ಮೀಸಲಾಗಿಡುವುದು ಏಕೆ? ನಿಮ್ಮ ಬಳಿ ಆಯುಧಗಳಿದ್ದರೆ ನೆರೆಯ ದೇಶ ನಿಮ್ಮನ್ನು ನೆಮ್ಮದಿಯಾಗಿರಲು ಬಿಡುತ್ತದೆ. ನೀವು ನಿರಾಯುಧರಾಗಿದ್ದರೆ ಎಲ್ಲರೂ ನಿಮ್ಮನ್ನು ಆಕ್ರಮಿಸಿ ನಿಮ್ಮನ್ನು ಬೀದಿಪಾಲು ಮಾಡುತ್ತಾರೆ.

ಹಾಗಾದರೆ ನಮ್ಮ ಸಂಸ್ಕೃತಿ ದಮನಕಾರಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದೆಯೇ?

ಇಲ್ಲ, ಅದೇ ದೇವರುಗಳು ಬೇರೆ ಕೈಗಳಲ್ಲಿ ತಾವರೆ ಹೂಗಳನ್ನು, ಆಶೀರ್ವಾದದ ಮುದ್ರೆಗಳನ್ನು ಧರಿಸಿಕೊಂಡಿರುವುದನ್ನು ನೋಡಿಲ್ಲವೆ? ನಮ್ಮ ದೇವರುಗಳು ನಿಗ್ರಹ ಮತ್ತು ಅನುಗ್ರಹ ಸಂಕೇತಗಳನ್ನು ಧರಿಸಿದ್ದಾರೆ.

ಲಿಡಿಯಾ ದೇಶದ ರಾಜ ಕ್ರೋಸಸ್, ಪಾರಸಿಕರ ದೇಶವನ್ನು ಆಕ್ರಮಿಸಲು ತೀರ್ಮಾನಿಸಿದ. ದೈವಸನ್ನಿಧಿಯಲ್ಲಿ ಭವಿಷ್ಯವನ್ನು ಕೇಳಿದ. ನಿನ್ನಿಂದ ಒಂದು ಮಹಾ ಸಾಮ್ರಾಜ್ಯ ಅಳಿಸಿಹೋಗುತ್ತದೆ ಎಂದು ದೈವವಾಣಿ ನುಡಿಯಿತು. ಸಂಪೂರ್ಣ ನಂಬಿಕೆಯಿಂದ ಪರ್ಷಿಯಾದ ಮೇಲೆ ದಂಡೆತ್ತಿ ಹೋದವನು ತೀವ್ರವಾದ ಸೋಲನ್ನು ಅನುಭವಿಸಿದ. ದೈವಸನ್ನಿಧಿಗೆ ಮತ್ತೆ ಬಂದು, ದೈವವಾಣಿ ಸುಳ್ಳಾಯಿತಲ್ಲ? ಎಂದು ಕೋಪದಿಂದ ಕೇಳಿದ. ಸುಳ್ಳಾಗಲಿಲ್ಲ. ನಾಶವಾದದ್ದು ಲಿಡಿಯಾ ಎಂಬ ನಿನ್ನ ಮಹಾಸಾಮ್ರಾಜ್ಯ ಎಂದು ಮಾರುತ್ತರ ಬಂದಿತು.

ದೈವಗಳಿಗೆ ರೂಪುಕೊಟ್ಟು ಪ್ರತಿಷ್ಠಾಪಿಸಿದ ಪರಿಣಾಮವಾಗಿ ದೊರೆಯುವ ಅನೇಕ ಸಂಗತಿಗಳು ತಪ್ಪಾಗಿ ಗ್ರಹಿಕೆಯಾದರೆ ಇಂಥ ಎಡವಟ್ಟುಗಳು ಸಂಭವಿಸುತ್ತವೆ.

ದೈವರ ಕೈಗಳಲ್ಲಿರುವ ತಾವರೆ ಜೀವನದ ಒಂದು ಅತ್ಯಂತ ಮಹತ್ವಪೂರ್ಣ ಅಂಶವನ್ನು ಸೂಚಿಸುತ್ತದೆ. ಜೀವನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ನಮ್ಮ ದೇವರುಗಳು ಉಗ್ರವಾದವನ್ನು ಬೋಧಿಸುವಂತಹವು ಎಂದು ಹೇಳುವುದು ಮೂರ್ಖತನ.

ನಿಮ್ಮ ದೃಷ್ಟಿಯಲ್ಲಿ ನೆಮ್ಮದಿಯಾಗಿರುವುದು ಯಾವುದೂ ನಿಜವಾಗಿ ನೆಮ್ಮದಿಯಾಗಿರುವುದಿಲ್ಲ. ಭೂಮಿಯ ಒಳಗೆ ಹೊಕ್ಕು ನೋಡಿ. ಬೇರುಗಳು, ಮಣ್ಣು ಮತ್ತಿತರ ಜೀವರಾಶಿಗಳ ನಡುವೆ ಅಲ್ಲಿ ದೊಡ್ಡದೊಂದು ಯುದ್ಧ ನಡೆಯುತ್ತಿದೆ. ಕ್ಷಣಕ್ಷಣವೂ ಅಲ್ಲಿ ಲಕ್ಷಾಂತರ ಜೀವರಾಶಿಗಳು ಸಾಯುತ್ತಿರುತ್ತವೆ. ಲಕ್ಷಗಟ್ಟಲೆ ಹೊಸ ಜೀವಿಗಳು ಸೃಷ್ಟಿಯಾಗುತ್ತಿರುತ್ತವೆ. ಆಳವಾಗಿ ಯೋಚಿಸಿದರೆ ಉಗ್ರಗಾಮಿತ್ವವೆಂಬುದು ಜೀವನವಲ್ಲ. ನೆಮ್ಮದಿ ಎಂಬುದೂ ಜೀವನವಲ್ಲ. ಅದು ತಿಳಿದುಕೊಳ್ಳಲಾಗದ ಅನೇಕ ಸಂಗತಿಗಳ ಮಿಶ್ರಣ.

ಭಾರತೀಯ ಸಂಸ್ಕೃತಿಯಲ್ಲಿ ನೆಮ್ಮದಿ ಎಂಬುದು ಹೊರಗಡೆ ಸಂಭವಿಸುವ ವಿಷಯವಾಗಿಲ್ಲ. ಅದು ಒಳಗಡೆಯೇ ನಡೆಯುವ ಪ್ರಕ್ರಿಯೆಯೆಂದೇ ಮೊದಲಿನಿಂದಲೂ ಭಾವಿಸಲಾಗಿದೆ. ಈ ಕಾರಣದಿಂದ ಅನ್ವೇಷಣೆಯನ್ನು ಅಂತರಂಗದೆಡೆಗೆ ತಿರುಗಿಸಿದರು. ಹೊರಜಗತ್ತಿನಲ್ಲಿ ನೆಮ್ಮದಿಯಿಂದ ಇರುವುದಾಗಲಿ, ಯುದ್ಧದಲ್ಲಿ ತೊಡಗಿರುವುದಾಗಲಿ ನಿಮ್ಮ ಕೈಯಲಿಲ್ಲ. ಜೀವನವು ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಆದರೆ ಒಳಜಗತ್ತಿನಲ್ಲಿ ಸದಾ ನೆಮ್ಮದಿಯಿಂದ ಇರುವುದು ನಿಮ್ಮ ಕೈಯಲ್ಲಿಯೇ ಇದೆ.

ಈ ಭೂಮಿಯಲ್ಲಿರುವ ಜೀವರಾಶಿಗಳ ಪಾಲಿಗೆ ಪ್ರಕೃತಿಯು ಋತುಗಳನ್ನು ಕಲ್ಪಿಸಿತು. ಸಸ್ಯಗಳು ನಿರ್ದಿಷ್ಟ ಕಾಲದಲ್ಲಿ ಹೂ ಬಿಡುತ್ತವೆ, ಮತ್ತೊಂದು ಋತುವಿನಲ್ಲಿ ಎಲೆಗಳು ಉದುರುತ್ತವೆ. ಮೃಗಗಳಿಗೂ ಹಾಗೆಯೇ. ಯಾವಾಗ ಅದರ ಸಂಗಾತಿಯನ್ನು ಕೂಡಬೇಕೆಂಬುದು ಅವುಗಳಿಗೆ ನಿಗದಿತವಾಗಿದೆ. ಪಕ್ಷಿಗಳೂ ನಿರ್ದಿಷ್ಟ ಕಾಲಗಳಲ್ಲಿ ತಮ್ಮ ಸ್ಥಳವನ್ನು ಬದಲಾಯಿಸುವುದನ್ನು ತಪ್ಪಿಸುವುದಿಲ್ಲ.

ಮನುಷ್ಯರಿಗೆ ಮಾತ್ರ ನಿರ್ದಿಷ್ಟ ಋತುಗಳನ್ನು ನಿಗದಿಪಡಿಸಿಲ್ಲ. ಬುದ್ಧಿವಂತಿಕೆಯಿಂದ ಕ್ರಿಯಾಶೀಲನಾಗಿ ನಿಮ್ಮ ಕಾಲಗಳನ್ನು ನೀವೇ ನಿರ್ಣಯಿಸಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಪ್ರಕೃತಿಯು ನಿಮಗಿತ್ತಿದೆ. ನೆಮ್ಮದಿಯಾಗಿರುವುದು, ಆನಂದವಾಗಿರುವುದು ನಿಮ್ಮ ವಶದಲ್ಲಿಯೇ ಇದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಯಾರಾದರೊಬ್ಬರು 365 ದಿನಗಳೂ ಅವರ ಪಾಲಿಗೆ ವಸಂತ ಋತುವಾಗಿಯೇ ಇರಬೇಕೆಂದು ಬಯಸಿದರೆ ಹಾಗೆಯೇ ಇರುವುದೂ ಸಾಧ್ಯ. ಆದರೆ, ಇಲ್ಲಿ ಅನೇಕರು ಚಳಿಗಾಲದಲ್ಲಿ ಮರಗಟ್ಟಿದವರಂತೆ ಎಲ್ಲ ಋತುಗಳಲ್ಲಿಯೂ ಮರಗಟ್ಟಿರುತ್ತಾರೆ. ಗೋರಿಗಳ ಪಕ್ಕದಲ್ಲಿ ಬಾಳುವಂತೆ, ಹೃದಯವನ್ನು ಮರಗಟ್ಟಿಸಿಕೊಂಡು, ಎಲ್ಲ ಅನಿಸಿಕೆಗಳೂ ಮರಗಟ್ಟಿಹೋದಂತೆ ಜೀವಿಸುತ್ತಾರೆ. ಇಲ್ಲಿ ಯಾರೂ ಯಾರಿಗಿಂತಲೂ ಮೇಲಿನವರೂ ಇಲ್ಲ, ಕೆಳಗಿನವರೂ ಇಲ್ಲ. ಎಲ್ಲರ ಕಣ್ಣುತಪ್ಪಿಸಿ ಯಾರೊಬ್ಬರೂ ತಮ್ಮಷ್ಟಕ್ಕೆ ಒಂಟಿಯಾಗಿ ಬದುಕಲು ಸಾಧ್ಯವಿಲ್ಲವೆಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು.

ಈ ತಿಳುವಳಿಕೆಯೊಂದಿಗೆ ಜೀವನವನ್ನು ನೋಡತೊಡಗಿದರೆ ಆಯುಧಗಳ ಅಗತ್ಯವೇ ಇರುವುದಿಲ್ಲ. ಕೆಲವರು ನಮ್ಮ ಪುರಾಣಕಥೆಗಳ, ದೇವತೆಗಳ ಬಗ್ಗೆ ಪೂರ್ಣಜ್ಞಾನವಿಲ್ಲದೆ ತಮಗೆ ಅರ್ಥವಾದಂತೆ ವಿವರಣೆ ಕೊಡುತ್ತ ಬಂದರು. ಹಲವೆಡೆ ಅನವಶ್ಯಕವಾದ ತಿದ್ದುಪಡಿ ತಂದರು. ಅದನ್ನು ಸರಿಪಡಿಸುವುದು ಈ ತಲೆಮಾರಿನ ಶ್ರದ್ಧಾಪೂರ್ವಕ ಕರ್ತವ್ಯ.

ಪ್ರಾಯಶಃ ಮನುಷ್ಯರು ತಮ್ಮ ಸ್ವಾತಂತ್ರ್ಯವನ್ನು ಎಲ್ಲಕ್ಕಿಂತಲೂ ಮಿಗಿಲಾಗಿ ಬಯಸುತ್ತಾರೆ. ಇದು ಬೇರೆಲ್ಲಿಂದಲೋ, ಪಾಶ್ಚಿಮಾತ್ಯರಿಂದ ಅಥವಾ ಬೇರೆ ದೇಶಗಳಿಂದ ನಮ್ಮಲ್ಲಿಗೆ ಬಂದ ತತ್ತ್ವವಲ್ಲ. ಅವರು ಇದನ್ನು ಕುರಿತು ಕಲ್ಪನೆ ಮಾಡುವುದಕ್ಕಿಂತ ಹಲವು ಸಾವಿರ ವರ್ಷಗಳಿಗೂ ಮುಂಚೆಯೇ, “ಮುಕ್ತಿ” ಎಂಬ ಕಲ್ಪನೆಯ ಸ್ವಾತಂತ್ರ್ಯವನ್ನು ಕುರಿತು ಗಮನ ನೀಡುವಲ್ಲಿ ಭಾರತೀಯ ಸಂಸ್ಕೃತಿ ಮುಂಚೂಣಿಯಲ್ಲಿದೆ. ಇದಕ್ಕಿಂತ ಮಹತ್ವಪೂರ್ಣವಾದ ಸಂಸ್ಕೃತಿ ಬೇರೊಂದಿಲ್ಲ.

ನಿಜವಾದ ಸ್ವಾತಂತ್ರ್ಯವೆಂದರೆ ರಾಜಕೀಯ ಸ್ವಾತಂತ್ರ್ಯವಲ್ಲ; ಆರ್ಥಿಕ ಸ್ವಾತಂತ್ರ್ಯವೂ ಅಲ್ಲ. ನಿಜವಾಗಿ ನಮಗೆ ಬೇಕಾಗಿರುವುದು ಆಂತರಿಕ ಸ್ವಾತಂತ್ರ್ಯ. ಬೇರಾವ ಸಂಸ್ಕೃತಿಯಲ್ಲಿಯೂ ಇಂತಹ ಒಂದು ಉದ್ದೇಶವಿದ್ದಂತಿಲ್ಲ. ನಮ್ಮ ಸ್ವಾತಂತ್ರ್ಯದ ಮುಖ್ಯ ದೃಷ್ಟಿಯೇ ಮನುಷ್ಯನ ಅಂತಿಮ ತೀರ್ಮಾನದ ಸ್ವಾತಂತ್ರ್ಯ. ನಮ್ಮ ಹುಟ್ಟು ಮತ್ತು ಅಸ್ತಿತ್ವಗಳನ್ನೂ ಮೀರಿದ ಒಂದು ಸ್ವತಂತ್ರ ಸ್ಥಿತಿ ಇದು.

ಇದನ್ನು ನಾವು ಮುಕ್ತಿ ಹೊಂದುವುದು ಎಂದು ಕರೆಯುತ್ತೇವೆ. ಅಗತ್ಯವಾದರೆ ದೇವರನ್ನು ಮುಂದಿಟ್ಟುಕೊಂಡು ಇದನ್ನು ಪಡೆಯಬಹುದು. ಬೇಡವೆಂದರೆ, ದೇವರಿಲ್ಲದಿದ್ದರೂ ಅದನ್ನು ಪಡೆಯಬಹುದು. ಇವೆರಡೂ ಸಾಧ್ಯತೆಗಳಿವೆ, ಇಂತಹ ಎರಡು ಮಾರ್ಗಗಳಿಂದಲೂ ಮುಕ್ತಿಯನ್ನು ಪಡೆಯುವ ಅವಕಾಶವನ್ನು ಪ್ರಪಂಚದ ಮತ್ತಾವುದೇ ಸಂಸ್ಕೃತಿ ರೂಪಿಸಿಲ್ಲ.

ನಿಮ್ಮ ಕುಟುಂಬ, ನಿಮ್ಮ ಉದ್ಯೋಗ, ನಿಮ್ಮ ಓದು, ಯಾವುದೇ ಆದರೂ ಸರಿಯೇ, ಅದು ನಮ್ಮ ಮುಕ್ತಿಯ ಪರಿಕಲ್ಪನೆಗೆ ಸರಿಹೊಂದುವಂತಹ ಸಂಸ್ಕೃತಿಯನ್ನು ಪ್ರಾಚೀನರು ರೂಪಿಸಿದರು. ಸ್ವತಂತ್ರ ಭಾರತಕ್ಕೆ ಇರುವುದು ಕೇವಲ ಎಪ್ಪದೈದು ವರ್ಷಗಳ ಪರಂಪರೆ ಮಾತ್ರ. ಆದರೆ ನಮ್ಮ ಸಂಸ್ಕೃತಿಯ ದೃಷ್ಟಿಯಲ್ಲಿ ಅವು ಹಲವು ಸಾವಿರ ವರ್ಷಗಳು ಬಿಗಿಯಾದ ಕಟ್ಟುಪಾಡುಗಳಿಂದ ಬಂಧಿತವಾಗಿದೆ. ಇಂತಹ ಪ್ರಾಚೀನ ಪರಂಪರೆ ಭಾರತಕ್ಕೊಂದು ಮಹತ್ವವನ್ನು ತಂದುಕೊಟ್ಟಿದೆ.

ಇಂದಿನ ಯುವಕರಲ್ಲಿರುವ ಹುಮ್ಮಸ್ಸು ನೋಡಿದರೆ, ವೀಸಾ ದೊರೆತರೆ, ಅರ್ಧದಷ್ಟು ಜನ ಈಜಿಕೊಂಡೇ ಅಮೆರಿಕಕ್ಕೆ ಹೋಗಿಬಿಡುವಂತೆ ಕಂಡುಬರುತ್ತದೆ. ಭಾರತೀಯತೆ ಎಂಬುದನ್ನು, ಅದರಲ್ಲಿರುವ ಮಹತ್ವವನ್ನು ನಮ್ಮ ಯುವಕರಿಗೆ ಯಾರೂ ಸರಿಯಾಗಿ ತಿಳಿಸದೇ ಹೋದುದರಿಂದ ಬೇರೆಡೆ ಅವರ ದೃಷ್ಟಿ ಹರಿಯಿತು.

ನಮ್ಮ ಸಂಸ್ಕೃತಿಯನ್ನು ಕುರಿತು ಮುಖ್ಯವಾಗಿ ಹಿರಿಯರು, ಪೋಷಕರು ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ಅನಂತರ ಉತ್ತಮ ಮಟ್ಟದ ಸರಕಾರಗಳನ್ನು ನಿರ್ಮಿಸಿಕೊಳ್ಳಬೇಕು. ಅನಂತರ ಇಂದಿನ ಯುವ ಜನಾಂಗಕ್ಕೆ ಅದನ್ನು ಮನವರಿಕೆ ಮಾಡಿಕೊಡಬೇಕು.

ಬೇರೆ ಸಂಸ್ಕೃತಿಗಳಿಗೆ ಮಾರುಹೋಗಬೇಡಿರೆಂದು ನಮ್ಮ ಯುವಕರಿಗೆ ಕೂಗಿ ಹೇಳುವುದಕ್ಕೆ ಬದಲಾಗಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು, ಸತ್ತ್ವವನ್ನು ಅವರಿಗೆ ಅರ್ಥವಾಗುವಂತೆ, ಕಣ್ಣಿಗೆ ಕಟ್ಟುವಂತೆ ನಾವು ತೋರಿಸಿಕೊಡಬೇಕು.

ಇದನ್ನೂ ಓದಿ : Prerane : ಆಧ್ಯಾತ್ಮಿಕ ಮಾರ್ಗದಲ್ಲಿ ಪುರಾಣ ಗ್ರಂಥಗಳಿಗೆ ಮಹತ್ವವಿದೆಯೇ?

ನಮ್ಮ ದೇಶ ವರ್ಣರಂಜಿತವಾದದ್ದು, ವಿಸ್ಮಯಕರವಾದದ್ದು, ಗೊಂದಲಮಯವಾದದ್ದು; ಇಂತಹುದನ್ನು ಪ್ರಪಂಚದಲ್ಲಿ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ; ಒಂದು ಊರಿಗೂ ಇನ್ನೊಂದು ಊರಿಗೂ ಬದಲಾವಣೆಯಿರುವುದು ಮಾತ್ರವಲ್ಲ; ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಹೋದರೆ ಸಾಕು, ಅನೇಕ ವ್ಯತ್ಯಾಸಗಳು ಕಂಡುಬರುತ್ತವೆ. ಒಂದೇ ಬಡಾವಣೆಯಲ್ಲಿ ಪಕ್ಕದ ಮನೆಗೆ ಹೋಗಿ ನೋಡಿದರೂ ಅವರು ಮಾತನಾಡುವ ಭಾಷೆ ಬೇರೆ, ಪೂಜಿಸುವ ದೇವರು ಬೇರೆ, ಅವರು ಸೇವಿಸುವ ಆಹಾರ ಬೇರೆ, ಅವರ ಉಡುಗೆತೊಡುಗೆಗಳು, ಆಚಾರ ವಿಚಾರಗಳು ಸಾಕಷ್ಟು ವಿಭಿನ್ನವಾಗಿ ಕಂಡುಬರುತ್ತವೆ.

ಆದರೆ, ನಮ್ಮ ಸಂಸ್ಕೃತಿಯ ಸಾಮುದಾಯಿಕ ಸೂತ್ರ ನಮ್ಮೆಲ್ಲರನ್ನೂ ಒಂದಾಗಿ ಹಿಡಿದಿಟ್ಟಿದೆ. ಆ ಸೂತ್ರದ ಎಳೆಯನ್ನು ತುಂಡರಿಸದಂತೆ ನೋಡಿಕೊಳ್ಳುವುದು ನಮಗೆ ಬಹಳ ಮುಖ್ಯ.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

Exit mobile version