Site icon Vistara News

Jagannath Rath Yatra 2022 | ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಶುರು

Jagannath Rath Yatra

ಪುರಿ: ಇಲ್ಲಿಯ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥ ಯಾತ್ರೆಯು (Jagannath Rath Yatra 2022) ಶುಕ್ರವಾರ ಬೆಳಗ್ಗೆ ಆರಂಭಗೊಂಡಿದೆ. ದೇಶ ವಿದೇಶಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.

ಕೋವಿಡ್‌-೧೯ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರಥ ಯಾತ್ರೆ ನಡೆದಿರಲಿಲ್ಲ. ಒಂಬತ್ತು ದಿನಗಳ ಈ ರಥಯಾತ್ರೆಯನ್ನು ಪಂಚಾಂಗದ ಪ್ರಕಾರ ಆಷಾಢ ಶುಕ್ಲ ಬಿದಿಗೆಯಂದ ಆರಂಭಿಸಲಾಗುತ್ತದೆ. ಭಗವಾನ್‌ ಜಗನ್ನಾಥನು ತನ್ನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೊಂದಿಗೆ ಮೂರು ಬೃಹತ್‌ ರಥಗಳಲ್ಲಿ ಮೆರವಣಿಗೆ ಹೋಗುವುದೇ ಈ ರಥಯಾತ್ರೆಯ ವಿಶೇವಾಗಿದೆ. ಹೀಗಾಗಿ ಮೂರು ರಥಗಳನ್ನು ಇಲ್ಲಿ ಎಳೆಯಲಾಗುತ್ತದೆ.

ಈ ರಥಯಾತ್ರೆಗೆ ಪ್ರತಿ ವರ್ಷ ಹೊಸ ರಥವನ್ನೇ ತಯಾರಿಸಲಾಗುತ್ತದೆ. ರಥಗಳ ನಿರ್ಮಾಣವು ಅಕ್ಷಯ ತೃತೀಯದಿಂದಲೇ ಪ್ರಾರಂಭವಾಗಿರುತ್ತದೆ. ಸುಮಾರು ೨ ತಿಂಗಳ ಕಾಲದಲ್ಲಿ ಈ ಸುಂದರ ರಥವನ್ನು ತಯಾರಿಸಿರಲಾಗುತ್ತದೆ. ಈ ಮೂರು ರಥಗಳಲ್ಲಿ ಜಗನ್ನಾಥನಿರುವ ರಥಕ್ಕೆ ನಂದಿಘೋಷ, ಸಹೋದರ ಬಲಭದ್ರನಿರುವ ರಥಕ್ಕೆ ತಳಧ್ವಜ ಹಾಗೂ ಸಹೋದರಿ ಸುಭದ್ರೆಯಿರುವ ರಥಕ್ಕೆ ದರ್ಪದಲನ ಎಂದು ಕರೆಯಲಾಗುತ್ತದೆ.

ರಥೋತ್ಸವವನ್ನು ಸಾಂಗವಾಗಿ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ಸಕಲ ಕ್ರಮಗಳನ್ನು ತೆಗೆದುಕೊಂಡಿತ್ತು. ಸಾವಿರಾರು ಭಕ್ತರು ರಥಬೀದಿಯಲ್ಲಿ ಸೇರಿ ತಮ್ಮ ಭಕ್ತಿ ಪ್ರದರ್ಶಿಸಿದರು. ರಥೋತ್ಸವದ ಅಂಗವಾಗಿ ದೇಗುಲದ ಸಿಂಹ ಧ್ವಾರವನ್ನು ಹೂವುಗಳಿಂದ ಅತ್ಯಂತ ಆಕರ್ಷಕವಾಗಿ ಅಲಂಕರಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಈ ರಥ ಯಾತ್ರೆಗೆ ಶುಭ ಹಾರೈಸಿದ್ದು, ಭಗವಾನ್‌ ಜಗನ್ನಾಥನು ಎಲ್ಲರಿಗೂ ಒಳ್ಳೆಯ ಆರೋಗ್ಯ ಮತ್ತು ಸಂತೋಷವನ್ನು ಕರುಣಿಸಲಿ ಎಂದು ಟ್ವಿಟ್ಟರ್‌ನಲ್ಲಿ ಪ್ರಾರ್ಥಿಸಿದ್ದಾರೆ. ಈ ರಥಯಾತ್ರೆಯ ಮಹತ್ವದ ಕುರಿತು ಅವರು ಕಳೆದ ಮನ್‌ಕಿ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಇದನ್ನೂ ಶೇರ್‌ ಮಾಡಿದ್ದಾರೆ.

ರಥಯಾತ್ರೆ ನಡೆಯುತ್ತಿದ್ದಂತೆಯೇ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅಲ್ಲಿಯ ಸುಂದರ ಚಿತ್ರಗಳನ್ನು ಸರಣಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ದೇಶದ ಹಲವು ಕಡೆ ಭಗವಾನ್‌ ಜಗನ್ನಾಥನ ರಥಯಾತ್ರೆ ನಡೆಯುತ್ತದೆ. ಅಹ್ಮದಾಬಾದ್‌ನಲ್ಲಿ ನಡೆದ ರಥಯಾತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗವಹಿಸಿ, ಮಂಗಳ ಆರತಿ ನೆರವೇರಿಸಿದ್ದಾರೆ.

ಇದನ್ನೂ ಓದಿ| Amarnath Yatra 2022 | ಪವಿತ್ರ ಅಮರನಾಥ ಯಾತ್ರೆ ಇಂದಿನಿಂದ ಪ್ರಾರಂಭ; ಕಟ್ಟುನಿಟ್ಟಿನ ಭದ್ರತೆ

Exit mobile version