ಬೆಂಗಳೂರು : ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್‌ಮೆಂಟ್ ಆಫ್ ಇಂಡಿಯಾದ ಸಂಸ್ಥಾಪಕ, ವಿಶ್ವ ಧ್ಯಾನ ಗುರು ಸುಭಾಷ್ ಪತ್ರೀಜಿ (Subhash Patriji ) ದೇಹ ತ್ಯಾಗ ಮಾಡಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ರೀಜಿ ಭಾನುವಾರ ಸಂಜೆ ಆಂಧ್ರಪ್ರದೇಶದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಅವರನ್ನು ಬೆಂಗಳೂರಿನಿಂದ ರಂಗಾರೆಡ್ಡಿ ಜಿಲ್ಲೆಯ ಕಡ್ತಲ್ ಮಂಡಲದ ಅನ್ಮಾಸಪಲ್ಲಿಯಲ್ಲಿರುವ ಮಹೇಶ್ವರ ಪಿರಮಿಡ್ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಮೂರು ದಿನಗಳಿಂದ ತೀವ್ರ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಪತ್ರೀಜಿ ಅವರು ನಿಧನರಾಗಿದ್ದಾರೆ ಎಂದು ಅಧಿಕೃತವಾಗಿ ಭಾನುವಾರ ಘೋಷಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ, ಅವರ ಭಕ್ತರು, ಸಾಧಕರು ಅವರ ಅಂತಿಮ ದರ್ಶನ ಪಡೆಯಲು ಮಹೇಶ್ವರ ಮಹಾಪಿರಮಿಡ್ ಕೇಂದ್ರಕ್ಕೆ ತೆರಳುತ್ತಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಸುಭಾಷ್ ಪತ್ರೀಜಿ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ.
ಬೆಂಗಳೂರಿನ ಕನಕಪುರ ರಸ್ತೆಯ ಪಿರಮಿಡ್ ವ್ಯಾಲಿಯಲ್ಲಿ ಇವರ ಆಶ್ರಮವಿದೆ. ಸಂಸಾರಸ್ಥ ಸ್ವಾಮೀಜಿಯಾಗಿದ್ದ ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ. ಆಂಧ್ರಪ್ರದೇಶದ ಮೆಹಬೂಬ್ ನಗರದ ಕಡ್ತಲ್‌ನಲ್ಲಿಯೂ ಸ್ವಯಂ ಘೋಷಿತ ದೇವ ಮಾನವರಾಗಿದ್ದ ಪತ್ರೀಜಿಯವರ ಪಿರಮಿಡ್ ಆಶ್ರಮವಿದೆ.
ಆಂಧ್ರಾದ ನಿಜಾಮಾಬಾದ್‌ನ ಬೋಧನ್‌ನಲ್ಲಿ ಜನಿಸಿದ್ದ ಇವರು ಕರ್ನೂಲ್ ಜಿಲ್ಲೆಯ ಕೋರಮಂಡಲ್ ಫರ್ಟಿಲೈಸರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ನಂತರ ಪಿರಮಿಡ್ ಆಶ್ರಮವನ್ನು ಕಟ್ಟಿ ಸಾವಿರಾರು ಜನರ ಧ್ಯಾನಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ವಿಶ್ವ ಧ್ಯಾನ ಸಮ್ಮೇಳನ ನಡೆಸಿಕೊಂಡು ಬಂದಿದ್ದರು.