ರಾಹು ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು, ಪ್ರಯಾಣ ಮಾಡಬಾರದು ಎಂಬ ವಿಚಾರ ಎಲ್ಲರಿಗೂ ತಿಳಿದಿರುತ್ತದೆ. ರಾಹು ಕಾಲದಲ್ಲಿ (Rahu Kaala) ಮಾಡಿದ ಕಾರ್ಯ ಸಫಲವಾಗುವುದಿಲ್ಲ, ಏನಾದರೂ ಕೆಟ್ಟದಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾದರೆ ರಾಹು ಕಾಲ ಎಂದರೇನು..? ರಾಹು ಕಾಲದಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು. ರಾಹು ಕಾಲದಲ್ಲಿ ಯಾವ ಕೆಲಸ ಮಾಡಿದರೆ ತೊಂದರೆಯಾಗುವುದಿಲ್ಲ ಎಂಬುದನ್ನು ನೋಡೋಣ.
ನವಗ್ರಹಗಳಲ್ಲಿ ರಾಹು ಗ್ರಹ ಕೂಡ ಒಂದು. ಈ ಗ್ರಹವನ್ನು ಕ್ರೂರ ಗ್ರಹ ಅಥವಾ ಪಾಪ ಗ್ರಹವೆಂದು ಕರೆಯುತ್ತಾರೆ. ರಾಹು ಕಾಲದಲ್ಲಿ ರಾಹು ಗ್ರಹದ ಪ್ರಭಾವ ಪೂರ್ಣ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಆ ಸಮಯದಲ್ಲಿ ಮಾಡುವ ಕಾರ್ಯಕ್ಕೆ ರಾಹು ಗ್ರಹದ ನಕಾರಾತ್ಮಕ ಪ್ರಭಾವ ಉಂಟಾಗುವುದರಿಂದ ಅದು ಸಫಲವಾಗುದಿಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಯಾವುದೇ ಶುಭ ಕಾರ್ಯಗಳಿಗೆ ಮುಹೂರ್ತವನ್ನು ಇಡುವಾಗ ರಾಹು ಕಾಲವನ್ನು ಹೊರತು ಪಡಿಸಿ, ಬೇರೆಯ ಉತ್ತಮ ಮುಹೂರ್ತವನ್ನು ನೋಡಲಾಗುತ್ತದೆ.
ಪ್ರತಿನಿತ್ಯ ಗ್ರಹಗಳ ಸಂಚಾರಕ್ಕೆ ನಿಶ್ಚಿತ ಸಮಯವಿರುತ್ತದೆ. ಹಾಗೆಯೇ ರಾಹುಗ್ರಹಕ್ಕೂ ದಿನದಲ್ಲಿ ಒಂದು ನಿಶ್ಚಿತ ಸಮಯವಿರುತ್ತದೆ. ಬೇರೆ ಬೇರೆ ಪ್ರದೇಶಗಳಿಗೆ ಅನುಗುಣವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವನ್ನು ಆಧರಿಸಿ ರಾಹುಕಾಲವನ್ನು ನಿರ್ಧರಿಸಲಾಗುತ್ತದೆ. ರಾಹುಕಾಲದ ಗಣನೆಯನ್ನು ಹೇಳುವುದಾದರೆ ಭಾರತೀಯ ಸಮಯವನ್ನು ಅನುಸರಿಸಿ ಬೆಳಗ್ಗೆ 6ಗಂಟೆಯಿಂದ ಸಂಜೆ ಆರು ಗಂಟೆಯ ಸಮಯವನ್ನು ಪರಿಗಣಿಸಲಾಗುತ್ತದೆ. ಇದರಲ್ಲಿ ರಾಹು ಕಾಲವು ಸುಮಾರು 90 ನಿಮಿಷಗಳ ಕಾಲ ಇರಲಿದೆ. ರಾಹುಕಾಲಕ್ಕೆ “ವಿಷಘಳಿಗೆ” ಎಂದು ಕೂಡ ಕರೆಯುತ್ತಾರೆ.
ಯಾವೆಲ್ಲ ಕಾರ್ಯಗಳನ್ನು ಮಾಡಬಾರದು?
ರಾಹು ಕಾಲದಲ್ಲಿ ಹೊಸ ಕೆಲಸಗಳನ್ನು ಆರಂಭಿಸಬಾರದು, ದೂರದ ಪ್ರಯಾಣಕ್ಕೆ ರಾಹುಕಾಲದಲ್ಲಿ ಮನೆಯಿಂದ ಹೊರಡುವುದು ನಿಷಿದ್ಧವಾಗಿದೆ. ಶುಭ ಕಾರ್ಯಗಳಿಗೆ ರಾಹು ಕಾಲದಲ್ಲಿ ಹೊರಡಬಾರದು. ವಾಹನ, ಮನೆ, ನಿವೇಶನ ಇತ್ಯಾದಿಗಳ ಖರೀದಿಗೆ ಸಹ ರಾಹುಕಾಲ ಶುಭವಲ್ಲ. ಶುಭ ಕಾರ್ಯಗಳಿಗೆ ಮುಹೂರ್ತ ನಿಗದಿ ಮಾಡುವ ಕೆಲಸವನ್ನು ಸಹ ರಾಹುಕಾಲದಲ್ಲಿ ಮಾಡಬಾರದೆಂಬ ಶಾಸ್ತ್ರವಿದೆ.
ಯಾವೆಲ್ಲಾ ಕೆಲಸ ಮಾಡಬಹುದು?
ರಾಹು ಗ್ರಹಕ್ಕೇ ಮೀಸಲಾಗಿರುವ ಕಾಲದಲ್ಲಿ ರಾಹು ಗ್ರಹಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಿದರೆ ಅದರಿಂದ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ರಾಹು ಕಾಲದಲ್ಲಿ ರಾಹು ಗ್ರಹಕ್ಕೆ ಸಂಬಂಧಿಸಿದ ಹೋಮ ಹವನಗಳನ್ನು ಮಾಡುವುದರಿಂದ ರಾಹು ಗ್ರಹದ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ.
ಜಾತಕದಲ್ಲಿ ಕಾಳ ಸರ್ಪ ದೋಷವಿದ್ದರೆ ಅದರ ಪರಿಹಾರಕ್ಕಾಗಿ ಮಾಡುವ ಶಾಂತಿಯನ್ನು ರಾಹು ಕಾಲದಲ್ಲಿಯೇ ಮಾಡಲಾಗುತ್ತದೆ. ಕಾಳ ಸರ್ಪ ದೋಷಕ್ಕೆ ಸಂಬಂಧಿಸಿದ ಯಾವುದೇ ಪರಿಹಾರ ಕಾರ್ಯಗಳನ್ನು ರಾಹು ಕಾಲದಲ್ಲಿ ಮಾಡಬಹುದಾಗಿದೆ. ಇದರಿಂದ ರಾಹು ಗ್ರಹದ ಕೃಪೆ ಸಿಗುವುದಲ್ಲದೇ, ದೋಷ ನಿವಾರಣೆಯಾಗುತ್ತದೆ. ರಾಹು ಗ್ರಹದ ಶಾಂತಿಗಾಗಿ ರಾಹು ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಬಹುದಾಗಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಇದನ್ನೂ ಓದಿ: Vastu Tips | ಹಣಕಾಸಿನ ತೊಂದರೆಯೇ?; ಇವುಗಳಿಂದ ಪಾರಾಗಲು ಮನೆಯಲ್ಲಿ ಈ ವಾಸ್ತು ನಿಯಮ ಪಾಲಿಸಿ