Site icon Vistara News

Raksha Bandhan | ಅಣ್ಣ ತಂಗಿಯರ ಬಾಂಧವ್ಯ ಬಲಪಡಿಸುವ ಹಬ್ಬ

Raksha Bandhan

ಡಾ. ಸುಧಾ ಹೆಚ್ ಎಸ್
ಸಂಸ್ಕೃತ ಉಪನ್ಯಾಸಕರು, ಮೈಸೂರು.
ಭೂಮಿಯ ಮೇಲೆ ಕೆಲವು ಸಂಬಂಧಗಳಿಗೆ ಬೆಲೆಕಟ್ಟಲಾಗುವುದಿಲ್ಲ. ಅಂತಹ ಒಂದು ಸಂಬಂಧವೆಂದರೆ ಸೋದರ ಸಂಬಂಧ. ಈ ಶ್ರಾವಣಮಾಸವು ನಮಗೆ ಇಂತಹ ಸಂಬಂಧಗಳ ಉಳಿಸಿ ಬೆಳೆಸುವಂತಹ ಒಂದು ಪವಿತ್ರ ಮಾಸವಾಗಿದೆ.

ಡಾ. ಸುಧಾ ಹೆಚ್ ಎಸ್

ಮೊನ್ನೆ ತಾನೇ ಶ್ರಾವಣದ ಮೊದಲ ಹಬ್ಬ ಅಣ್ಣ-ತಂಗಿಯರ ಹಬ್ಬ ಎಂದೇ ಕರೆಯಲ್ಪಡುವ ನಾಗರಪಂಚಮಿಯನ್ನು ಅದ್ಧೂರಿಯಾಗಿ ಆಚರಿಸಿದ್ದೇವೆ. ಅಣ್ಣ ತಂಗಿಗೆ ಆಗಷ್ಟೇ ಪಂಚಮಿ ಹಂಬಕ್ಕೆ ಉಡುಗೊರೆ ಕೊಟ್ಟು ಮುಗಿಸಿದ್ದಾನೆ. ಆಗಲೇ ನಾನೂ ಬಂದೆ ಅಂತ ಓಡೋಡಿ ಬಂದಿಂದೆ “ರಕ್ಷಾ ಬಂಧನ” (Raksha Bandhan). ಈ ಹಬ್ಬದಲ್ಲಿಯಂತೂ ಅಣ್ಣ ತಂಗಿಗೆ ಉಡುಗೊರೆ ಕೊಡಲೇಬೇಕು. ತಂಗಿಯರಿಂದ ಪವಿತ್ರವಾದ ರಾಖಿ ಕಟ್ಟಿಸಿಕೊಂಡು ಸಂಭ್ರಮಪಡುವ ಅಣ್ಣಂದಿರು ತಂಗಿಯನ್ನು ಹಾಗೇ ಒಳ್ಳೆ ಉಡುಗೊರೆಯಿಂದ ಖುಷಿಪಡಿಸುತ್ತಾರೆ ಎನ್ನುವುದಂತೂ ನಿಜ.

ರಾಖಿ ಹಬ್ಬದ ಮಹತ್ವವೇನು?
ಈ ರಾಖಿ ಹಬ್ಬ ಬಂದಿದ್ದಾದರೂ ಹೇಗೆ? ಏನಿದರ ಮಹತ್ವ? ಯಾಕೆ ಇದನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತೇವೆ? ಎಂಬ ಈ ಎಲ್ಲ ಪ್ರಶ್ನೆಗಳಿಗೂ ಹಲವಾರು ಕಥೆಗಳು ನಮ್ಮ ಪುರಾಣಕಾಲದಿಂದಲೂ ಇವೆ. ಹಾಗಾದರೆ ಈ ಒಂದು ದಾರಕ್ಕೆ ಇಷ್ಟು ಮಹತ್ವವೇ ? ಎನ್ನುವುದಕ್ಕೆ ಕೆಲವು ನಿದರ್ಶನಗಳನ್ನು ನೋಡೋಣ.

ರಕ್ಷಾ ಬಂಧನ ಇದರಲ್ಲಿ ಎರಡು ಪದಗಳಿವೆ ಒಂದು ʼರಕ್ಷಾʼ ಮತ್ತೊಂದು ʼಬಂಧನʼ. ರಕ್ಷಾ ಎಂದರೆ ರಕ್ಷಣೆ ಬಂಧನ ಎಂದರೆ ಅನುಬಂಧ, ಜೋಡಿಸುವಿಕೆ, ಗಾಢತೆ ಎಂದೆಲ್ಲಾ ಅರ್ಥ ಮಾಡಿಕೊಳ್ಳಬಹುದು. ಸೋದರಿ ತನ್ನ ಸೋದರನಿಗೆ ತಮ್ಮ ಒಂದು ಅನುಬಂಧ ಶಾಶ್ವತವಾಗಿರಲೆಂದು; ಅಣ್ಣನಾಗಿ ನನ್ನ ಎಲ್ಲ ಅನುವು ಆಪತ್ತುಗಳಿಗೆ ರಕ್ಷಣೆ ಕೊಡಬೇಕೆಂದು ಬಯಸಿ ಯಾವತ್ತಿಗೂ ಕೊನೆಯಾಗದ ಪ್ರೀತಿ ನಮ್ಮದಾಗಲಿ ಎಂದು ಪ್ರೀತಿಯಿಂದ ಕಟ್ಟುವ ಹಾಗೂ ತನ್ನ ಅಣ್ಣನಿಗೂ ಸಹ ಎಂದಿಗೂ ಆಪತ್ತು ಬಾರದಿರಲಿ ಎಂದು ದೇವಿಯನ್ನು ಪ್ರಾರ್ಥಿಸಿ ಕಟ್ಟುವ ಒಂದು ರೇಷ್ಮೆಯ ದಾರ. ಇತ್ತೀಚೆಗೆ ಇದನ್ನು ಎಲ್ಲರೂ ಒಬ್ಬರಿಗೊಬ್ಬರು ಕಟ್ಟಿಕೊಳ್ಳುತ್ತಾರೆ.

ಇನ್ನು ಪೌರಾಣಿಕ ಹಿನ್ನೆಲೆ ನೋಡುವುದಾದರೆ ಇಂದ್ರನಿಗೆ ವ್ರತ್ರಾಸುರನಿಂದ ಸೋಲುಂಟಾಗಿ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದ ಸಂದರ್ಭದಲ್ಲಿ ಗುರು ಬೃಹಸ್ಪತಿಗಳು ರಕ್ಷಾ ಬಂಧನ ಕಟ್ಟಿಕೊಳ್ಳಬೇಕು ಆಗ ರಕ್ಷಣೆ ಸಿಗುತ್ತದೆ ಎನ್ನುತ್ತಾರೆ. ಅವರ ಮಾತಿನಂತೆ ಶಚೀ ದೇವಿ ಇಂದ್ರನಿಗೆ ಈ ಪವಿತ್ರ ದಾರವನ್ನು ಶತ್ರುವಿನಿಂದ ರಕ್ಷಿಸಲು ಕಟ್ಟುತ್ತಾಳೆ ಎಂದು ಭವಿಷ್ಯತ್ ಪುರಾಣವು ಹೇಳುತ್ತದೆ. ಇನ್ನೊಂದು ಪುರಾಣದ ಕಥೆಯ ಪ್ರಕಾರ ಬಲಿ ಎಂಬ ರಾಕ್ಷಸನು ವಿಷ್ಣುವನ್ನು ತನ್ನೊಂದಿಗೆ ಇರಬೇಕೆಂದು ವರ ಕೇಳಿ ಪಡೆದು ವಿಷ್ಣುವನ್ನು ಕರೆದುಕೊಂಡು ಹೋಗುತ್ತಾನೆ. ವಿಷ್ಣುವು ದೀರ್ಘಕಾಲ ವೈಕುಂಠಕ್ಕೆ ಬಾರದಿರಲು ಲಕ್ಷ್ಮೀ ದೇವಿಯು ಚಿಂತಾಕ್ರಾಂತಳಾಗಿ ಕುಳಿತಿದ್ದಾಗ ತ್ರಿಲೋಕ ಸಂಚಾರಿ ನಾರದರು ಬರುತ್ತಾರೆ. ಆಗ ಲಕ್ಷ್ಮೀ ದೇವಿಗೆ ಬಲಿಯ ಕೈಯಿಗೆ ಸಹೋದರತ್ವದ ಸಂಕೇತವಾದ ಈ ಬಂಧನವನ್ನು ಕಟ್ಟಿ ವಿಷ್ಣುವನ್ನು ಹಿಂದಿರುಗಿ ಪಡೆಯಬಹುದು ಎಂಬ ಉಪಾಯವನ್ನು ಹೇಳುತ್ತಾರೆ.

ಅಂತೆಯೇ ಲಕ್ಷ್ಮೀ ದೇವಿಯು ಬಲಿಯ ಕೈಯಿಗೆ ಪವಿತ್ರ ರಕ್ಷೆಯನ್ನು ಕಟ್ಟಿ ಅವನನ್ನು ಸಹೋದರನನ್ನಾಗಿ ಮಾಡಿಕೊಂಡು ವಿಷ್ಣುವನ್ನು ತನಗೆ ನೀಡಬೇಕೆಂದು ಕೇಳಿಕೊಳ್ಳುತ್ತಾಳೆ. ಸಹೋದರಿಯ ಮಾತಿಗೆ ಕಟ್ಟುಬಿದ್ದು ಬಲಿಯು ವಿಷ್ಣುವನ್ನು ಲಕ್ಷ್ಮೀ ದೇವಿಗೆ ಹಿಂದಿರುಗಿಸುತ್ತಾನೆ.

ಅಲೆಕ್ಸಾಂಡರ್‌ನ ಉಳಿಸಿದ ರಾಖಿ
ಇತಿಹಾಸದ ಒಂದು ದಂತಕಥೆಯ ಪ್ರಕಾರ ಸೋಲೇ ಅರಿಯದ ದೊರೆ ಅಲೆಕ್ಸಾಂಡರ್‌ನು ಭಾರತಕ್ಕೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯವಾಗಿ ಎದುರಿಸಿದವನು ಪೋರಸ್ ಒಬ್ಬನೇ. ಆಗ ಅವರಿಬ್ಬರ ನಡುವೆ ಭೀಕರ ಕದನ ಪ್ರಾರಂಭವಾಗುತ್ತದೆ. ಇದೇ ಸಮಯದಲ್ಲಿ ಅಲೆಕ್ಸಾಂಡರ್‌ನ ಪತ್ನಿ ರೊಕ್ಸಾನ್‌ಳನಿಗೆ ಅಲೆಕ್ಸಾಂಡರ್‌ ಯುದ್ಧದಲ್ಲಿ ಕೊಲ್ಲಲ್ಪಡುವ ಭೀತಿ ಉಂಟಾಗುತ್ತದೆ. ಆಕೆ ಭಾರತದ ರಕ್ಷಾ ಬಂಧನದ ಕುರಿತು ತಿಳಿದುಕೊಂಡು, ಪೋರಸನಿಗೆ ಪವಿತ್ರ ರಾಖಿಯನ್ನು ರೇಷ್ಮೆ ಬಟ್ಟೆಯೊಡನೆ ಸುತ್ತಿ ಅದರೊಂದಿಗೆ “ತನ್ನ ಪತಿಯನ್ನು ಕೊಲ್ಲಬಾರದೆಂಬ” ಮನವಿಯನ್ನು ಕಳುಹಿಸಿರುತ್ತಾಳೆ. ಹಾಗಾಗಿ ಮುಂದೆ ನಡೆದ ಯುದ್ಧದಲ್ಲಿ ಅಲೆಕ್ಸಾಂಡರನನ್ನು ಕೊಲ್ಲಬಹುದಾಗಿದ್ದ ಪೋರಸನು ರುಕ್ಸಾನ್‌ಳ ಕಳುಹಿಸಿದ ರಾಖಿಯನ್ನು ಕೈಯಲ್ಲಿ ನೋಡಿಕೊಳ್ಳುತ್ತಾ ಸಹೋದರಿಗಾಗಿ ಹಾಗೂ ಆಕೆ ಕಳುಹಿಸಿದ ಈ ಪವಿತ್ರ ರಕ್ಷಾ ಬಂಧನಕ್ಕಾಗಿ ನಿನ್ನನ್ನು ಜೀವಂತ ಉಳಿಸಿದ್ದೇನೆ ಎಂದು ಹೇಳಿ ಅಲೆಕ್ಸಾಂಡರನನ್ನು ಕೊಲ್ಲದೇ ಬಿಟ್ಟು ಕಳುಹಿಸುತ್ತಾನೆ.

ಇಂತಹ ಒಂದು ಪವಿತ್ರ ಇತಿಹಾಸವನ್ನು ಹೊಂದಿದ ಹಬ್ಬವು ಶ್ರಾವಣದ ಪೌರ್ಣಿಮೆಯಂದು ಆಚರಿಸಲ್ಪಡುತ್ತದೆ. ಆ ದಿನ ತಂಗಿಯು ಅಣ್ಣನಿಗೆ ಹಣೆಗೆ ತಿಲಕವಿಟ್ಟು ಕೈಗೆ ರಾಖಿ ಕಟ್ಟಿ, ಬಾಯಿಗೆ ಸಿಹಿ ತಿನ್ನಿಸಿ, ಆರತಿ ಎತ್ತಿ ಆಯುರಾರೋಗ್ಯ ಕೊಡುವಂತೆ ದೇವಿಯನ್ನು ಪ್ರಾರ್ಥಿಸುತ್ತಾ ಅಣ್ಣನನ್ನು ಮನದುಂಬಿ ಹರಸುತ್ತಾಳೆ.

ಮೀನುಗಾರರಲ್ಲಿಯೂ ಆಚರಣೆ
ಇನ್ನೊಂದೆಡೆ ಈ ಹಬ್ಬವನ್ನು ಮೀನುಗಾರ ಸಮುದಾಯದವರು ತುಂಬಾ ವಿಜೃಂಭಣೆಯಿದ ಆಚರಿಸುತ್ತಾರೆ. ವರುಣದೇವನಿಗೆ ರಾಖಿ ಅರ್ಪಿಸುತ್ತಾ ತಮ್ಮ ಕಾಯಕಕ್ಕೆ ರಕ್ಷಣೆಯನ್ನು ಕೋರುತ್ತಾರೆ. ಪುರಾಣದ ಪ್ರಕಾರ ಕಥೆಗಳು ಏನೇ ಇದ್ದರೂ ಸಹ ಅದರ ಆಚರಣೆಯು ನಮ್ಮಲ್ಲಿನ ಬಂಧನವನ್ನು ಬೆಸೆದು ಹೊಸ ಅನುಭೂತಿಯನ್ನು ತರುವುದಂತೂ ಖಂಡಿತವಾಗಿಯೂ ಹೌದು. ನಮ್ಮ ಸನಾತನ ಧರ್ಮದ ಹಬ್ಬಗಳ ಆಚರಣೆಗಳು ಅವುಗಳದ್ದೇ ಆದ ಮಹತ್ವವನ್ನು ಪಡೆದಿವೆ. ರಕ್ಷಾ ಬಂಧನವು ಸಹ ಪವಿತ್ರ ಸಹೋದರತ್ವದ ಸಂಕೇತವಾಗಿ ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲ್ಪಡುತ್ತದೆ.

ಇದೊಂದು ಪವಿತ್ರ ಪ್ರೀತಿಯ ಸಂಕೇತ. ರಾಖಿ ಕಟ್ಟಿಸಿಕೊಂಡು ಅಣ್ಣನು ತಂಗಿಯ ರಕ್ಷಣೆ ಮಾಡಿಯೇ ತೀರಬೇಕೆಂದು ಪೂರ್ವಜರು ಇಂತಹ ಒಂದು ಆಚರಣೆಗಳ ಕಟ್ಟುಪಾಡನ್ನು ಇಟ್ಟಿದ್ದಾರೆ. ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ನಮ್ಮ ಆಚರಣೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಆದರೆ ಒಂದು ಸಮಾಧಾನ ಎಂದರೆ ಈಗಿನ ಸೆಲ್ಫಿ ಹುಚ್ಚಿಗಾದರೂ ರಾಖಿಯನ್ನು ಕೈತುಂಬಾ ಕಟ್ಟಿಕೊಳ್ಳುವವರು ಇದ್ದಾರೆ ಎನ್ನುವುದು, ತಂಗಿಯ ರಕ್ಷಣೆ ಎರಡನೇ ಮಾತು. ಅದು ಮಾಡುತ್ತಾರೋ ಬಿಡುತ್ತಾರೋ ಎನ್ನುವುದನ್ನು ಕಾಲಕ್ಕೆ ಬಿಟ್ಟುಬಿಡೋಣ. ಸಧ್ಯಕ್ಕೆ ಆಚರಣೆಯನ್ನು ಆ ದಿನದ ಒಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಳ್ಳಲಾದರೂ ಮಾಡುತ್ತಾರಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾ ಈ ಪವಿತ್ರ ರಕ್ಷಾ ಬಂಧನವು ಎಲ್ಲ ಸಹೋದರರಿಗೂ ದೀರ್ಘ ಆಯುಸ್ಸು ಆರೋಗ್ಯ ಸುಖ ಸಮೃದ್ಧಿ ತರಲಿ ಎಂದು ಹಾರೈಸೋಣ.

ಇದನ್ನೂ ಓದಿ| Rakhi Fashion | ರಕ್ಷಾಬಂಧನಕ್ಕೆ 5 ಟ್ರೆಂಡಿ ಔಟ್‌ಫಿಟ್ಸ್

Exit mobile version