Site icon Vistara News

Ram Mandir: ಉದ್ಘಾಟನೆಗೆ ಸಜ್ಜಾಗಿರುವ ರಾಮಮಂದಿರ ಹೇಗಿದೆ? ಇಲ್ಲಿವೆ ಹೊಸ ಫೋಟೊಗಳು

Ram Mandir

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲೀಗ ಹಬ್ಬ, ಜಾತ್ರೆಯ ಸಂಭ್ರಮ ಮನೆಮಾಡಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಭದ್ರತೆ, ಗಣ್ಯರಿಗೆ ಸಕಲ ಸೌಕರ್ಯ, ಲಕ್ಷಾಂತರ ಜನರ ನಿಯಂತ್ರಣ, ಪ್ರಸಾದ ವ್ಯವಸ್ಥೆ ಸೇರಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮಮಂದಿರದ ಹೊಸ ಫೋಟೊಗಳನ್ನು ಹಂಚಿಕೊಂಡಿದೆ.

ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರ, ಮಂದಿರದ ಗರ್ಭಗುಡಿ, ಚಿನ್ನ ಲೇಪಿತ ಬಾಗಿಲು ಸೇರಿ ರಾಮಮಂದಿರ ಆವರಣದ ಹೊಸ ಫೋಟೊಗಳನ್ನು ರಾಮಮಂದಿರ ಟ್ರಸ್ಟ್‌ ಹಂಚಿಕೊಂಡಿದೆ. ಈ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿವೆ. ಇದಕ್ಕೂ ಮೊದಲು ಕೂಡ ರಾಮಮಂದಿರ ಕಾಮಗಾರಿಯ ಫೋಟೊಗಳನ್ನು ಟ್ರಸ್ಟ್‌ ಹಂಚಿಕೊಂಡಿತ್ತು.

ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿತ ಹಲವು ಉನ್ನತ ಮಟ್ಟದ ನಾಯಕರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಅಯೋಧ್ಯೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈಗಾಗಲೇ ನಗರದಲ್ಲಿ 10,000 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮಾತ್ರವಲ್ಲ ಸಮಾರಂಭದ ದಿನ ಡ್ರೋನ್‌ ಮೂಲಕ ಕಣ್ಗಾವಲು ಇಡಲಾಗುತ್ತದೆ. ಜತೆಗೆ ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಡ್ರೋನ್ ಹಾರಾಡುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಆ್ಯಂಟಿ ಡ್ರೋನ್‌ ಸಿಸ್ಟಮ್‌ (Anti-drone system) ಜಾರಿಗೊಳಿಸಲಾಗುವುದು ಎಂದು ಭದ್ರತಾ ಎಸ್‌ಪಿ ಗೌರವ್ ವನ್ಸ್‌ವಾಲ್‌ ತಿಳಿಸಿದ್ದಾರೆ.

55 ದೇಶಗಳಿಂದ ಗಣ್ಯರ ಆಗಮನ

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ರಾಮನಗರಿ ಅಯೋಧ್ಯೆಯಲ್ಲಿ ಮನೆ ಕಟ್ಟಿಸಲು ಜಾಗ ಖರೀದಿಸಿದ ಅಮಿತಾಭ್‌ ಬಚ್ಚನ್;‌ ಬೆಲೆ ಎಷ್ಟು?

ರಾಮ ಮಂದಿರಕ್ಕಾಗಿ ಅಡಿಪಾಯವನ್ನು ಅಗೆಯುವ ಸಮಯದಲ್ಲಿ ತೆಗೆದ ರಾಮ ಜನ್ಮಭೂಮಿಯ ಮಣ್ಣನ್ನು ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವ ಗಣ್ಯರಿಗೆ ಉಡುಗೊರೆಯಾಗಿ ನೀಡಲು ತಯಾರಿ ನಡೆಸಲಾಗಿದೆ. ಮಣ್ಣನ್ನು ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಅತಿಥಿಗಳಿಗೆ ನೀಡಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ. ಪ್ರಧಾನಿ ಮೋದಿ ಅವರಿಗೆ ಅಯೋಧ್ಯೆಯ ರಾಮ ಮಂದಿರದ 15 ಮೀಟರ್ ಎತ್ತರದ ಚಿತ್ರವನ್ನು ಉಡುಗೊರೆಯಾಗಿ ನೀಡಲಾಗುವುದು. ಚಿತ್ರವನ್ನು ಸೆಣಬಿನ ಚೀಲದಲ್ಲಿ ಪ್ಯಾಕ್‌ ಮಾಡಲಾಗುವುದು. ಇದರಲ್ಲಿ ದೇವಾಲಯದ ಛಾಯಾಚಿತ್ರವೂ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version