Site icon Vistara News

Ram Mandir: ಇಂದು ಗರ್ಭಗುಡಿ ಪ್ರವೇಶಿಸಿದ ರಾಮಲಲ್ಲಾ; ವಿಧಿವಿಧಾನಗಳು ಏನೇನು?

Ram Lalla Idol In Ram Mandir

Ram Lalla idol brought inside Ram Mandir, as day 3 of consecration rituals commence

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆಗೆ ನಾಲ್ಕೇ ದಿನಗಳು ಬಾಕಿ ಇವೆ. ಅದರಲ್ಲೂ ಮಂಗಳವಾರದಿಂದ (ಜನವರಿ 16) ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಇದರ ಬೆನ್ನಲ್ಲೇ, ಕನ್ನಡಿಗ ಅರುಣ್‌ ಯೋಗಿರಾಜ್‌ (Arun Yogiraj) ಕೆತ್ತಿದ ರಾಮಲಲ್ಲಾನ ಮೂರ್ತಿಯನ್ನು ಬುಧವಾರ ಸಂಜೆ (ಜನವರಿ 17) ರಾಮಮಂದಿರದ ಆವರಣದೊಳಗೆ ತಂದು, ಗುರುವಾರ ಬೆಳಗ್ಗೆ (ಜನವರಿ 18) ಗರ್ಭಗೃಹದಲ್ಲಿ ಇರಿಸಲಾಗಿದೆ.

ಗುರುವಾರದ ವಿಧಿವಿಧಾನಗಳು ಹೀಗಿವೆ…

51 ಇಂಚಿನ ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ. ಗುರುವಾರ ಗಣೇಶಾಂಬಿಕಾ ಪೂಜೆಯ ಬಳಿಕ ಆಯುಷ್‌ಮಂತ್ರ ಪಠಿಸಲಾಗುತ್ತದೆ. ಮಂಟಪ ಪ್ರವೇಶದ ನಂತರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ರಾಮಲಲ್ಲಾನ ಮೂರ್ತಿಯನ್ನು ಜಲಾಧಿವಾಸ (ನೀರಿನಿಂದ ಮೂರ್ತಿಯನ್ನು ತೊಳೆಯುವುದು), ಗಂಧಾಧಿವಾಸ (ಅಭಿಷೇಕ) ಮಾಡಲಾಗುತ್ತದೆ. ಗುರುವಾರ ಸಂಜೆ ರಾಮಲಲ್ಲಾ ಮೂರ್ತಿಗೆ ಆರತಿ ಮಾಡಲಾಗುತ್ತದೆ. ಆರತಿಗೂ ಮೊದಲು ರಾಮಲಲ್ಲಾ ಮೂರ್ತಿಯನ್ನು ಹಾಲು, ತುಪ್ಪ, ಗೋಮೂತ್ರ, ಗೋವಿನ ಸಗಣಿ ಹಾಗೂ ಮೊಸರಿನಿಂದ ಪಂಚಗವ್ಯ ಅಭಿಷೇಕ ಮಾಡಲಾಗುತ್ತದೆ.

ಇದನ್ನೂ ಓದಿ: ರಾಮಮಂದಿರ ಧಾರ್ಮಿಕ ವಿಧಿವಿಧಾನಗಳಿಗೆ ಅನಿಲ್‌ ಮಿಶ್ರಾ ಪ್ರಧಾನ ಯಜಮಾನ; ಯಾರಿವರು?

ಜನವರಿ 22ರವರೆಗಿನ ವಿಧಿವಿಧಾನಗಳು

ಜನವರಿ 19
ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಜನವರಿ 20
ದೇವಾಲಯದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆದ ನಂತರ ವಾಸ್ತು ಶಾಂತಿ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಜನವರಿ 21
125 ಕಲಶಗಳಿರುವ ದೈವ ಸ್ನಾನದ ನಂತರ ಶಯಾಧಿವಾಸ ನಡೆಯಲಿದೆ.

ಜನವರಿ 22
ಬೆಳಗಿನ ಪೂಜೆಯ ನಂತರ ಮಧ್ಯಾಹ್ನ ಮೃಗಶಿರ ನಕ್ಷತ್ರದಲ್ಲಿ ರಾಮಲಲ್ಲಾ ದೇವರ ಪ್ರತಿಷ್ಠಾಪನೆ ನಡೆಯಲಿದೆ.

ಇದನ್ನೂ ಓದಿ: Ram Temples: ಅಯೋಧ್ಯೆ ಜತೆಗೆ ದೇಶಾದ್ಯಂತ ಇವೆ 7 ಭವ್ಯ ರಾಮಮಂದಿರಗಳು; ಭೇಟಿ ಕೊಡಿ

ಪ್ರಾಣಪ್ರತಿಷ್ಠಾಪನೆಗೆ ಮೋದಿಯೇ ಪ್ರಧಾನ ಯಜಮಾನ

ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನ ಯಜಮಾನರಾಗಿರುತ್ತಾರೆ ಎಂದು ಕಾಶಿಯ ಹಿರಿಯ ವೈದಿಕ ಕರ್ಮಕಾಂಡ ವಿದ್ವಾಂಸ, ಪಂಡಿತ ಲಕ್ಷ್ಮೀಕಾಂತ್ ಮಥುರಾನಾಥ ದೀಕ್ಷಿತ್ ಅವರು ಹೇಳಿದ್ದಾರೆ. ಇವರು ರಾಮಲಲ್ಲಾ ವಿಗ್ರಹವನ್ನು ಪ್ರಾಣ ಪ್ರತಿಷ್ಠಾಪನೆಯ ವೈದಿಕ ವಿದ್ವಾಂಸರು ಮತ್ತು ಪುರೋಹಿತರ ತಂಡವನ್ನು ಮುನ್ನಡೆಸುತ್ತಿದ್ದಾರೆ. ದೀಕ್ಷಿತ್ ಅವರು ‘ಪ್ರಾಣ ಪ್ರತಿಷ್ಠಾಪನೆ’ಯ ಪ್ರಧಾನ ಆಚಾರ್ಯರಾಗಿದ್ದಾರೆ. ಕಾಶಿ ವಿದ್ವಾಂಸ ಮತ್ತು ಪುರೋಹಿತ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು 121 ಆಚಾರ್ಯರ ತಂಡದೊಂದಿಗೆ ನಡೆಸುವ ವಿಧಿವಿಧಾನಗಳ ಮೇಲ್ವಿಚಾರಣೆ ಮತ್ತು ಸಮನ್ವಯತೆಯನ್ನು ನೋಡಿಕೊಳ್ಳಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version