ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಲೋಕಾರ್ಪಣೆಯಾದ ಬೆನ್ನಲ್ಲೇ ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಯಲ್ಲಿ (Ayodhya) ಲಕ್ಷಾಂತರ ಭಕ್ತರು (Devotees) ಸೇರಿದ್ದಾರೆ. ಅದರಲ್ಲೂ, ಮಂಗಳವಾರ ಮಧ್ಯಾಹ್ನ ಎರಡನೇ ಅವಧಿಯ ದರ್ಶನದ ವೇಳೆ ನೂಕುನುಗ್ಗಲು, ತಳ್ಳಾಟ ಹಾಗೂ ಕಾಲ್ತುಳಿತ ಉಂಟಾಗಿದ್ದು, ಇದರಿಂದ ಕೆಲ ಭಕ್ತರು ಗಾಯಗೊಂಡಿದ್ದಾರೆ.
ಮಧ್ಯಾಹ್ನ ಎರಡು ಗಂಟೆಯ ನಂತರ ಎರಡನೇ ಅವಧಿಯಲ್ಲಿ ಭಕ್ತರು ದರ್ಶನ ಮಾಡಲು ಅವಕಾಶ ನೀಡಲಾಗಿದೆ. ಆಗ ಲಕ್ಷಾಂತರ ಜನ ಏಕಕಾಲಕ್ಕೆ ರಾಮನ ದರ್ಶನಕ್ಕೆ ಮುಂದಾದ ಕಾರಣ ನೂಕುನುಗ್ಗಲು ಉಂಟಾಗಿದೆ. ಅದರಲ್ಲೂ, ಕೆಲ ಭಕ್ತರು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಅನ್ನು ಕೂಡ ತಳ್ಳಿದ್ದಾರೆ. ಇದೇ ವೇಳೆ ಕೆಲ ಮಹಿಳೆಯರು, ಹಿರಿಯರು ಕೆಳಗೆ ಬಿದ್ದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿಯು ಅವರನ್ನು ರಕ್ಷಿಸಿದರು.
#WATCH | Uttar Pradesh: People break through security at Shri Ram Janmabhoomi Temple in Ayodhya.
— ANI (@ANI) January 23, 2024
The Pran Pratishtha ceremony was done yesterday at Shri Ram Janmabhoomi Temple. pic.twitter.com/vYEANsXQkP
ರಾಮಮಂದಿರದಲ್ಲಿ ಭಕ್ತರಿಗೂ ದರ್ಶನ ಮಾಡಿಕೊಟ್ಟ ಮೊದಲ ದಿನವಾದ ಕಾರಣ ಮಂಗಳವಾರ ಅಪಾರ ಸಂಖ್ಯೆಯ ಜನ ಸೇರಿದ್ದಾರೆ. ಇದರಿಂದಾಗಿ ಭದ್ರತಾ ಸಿಬ್ಬಂದಿಯು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ನೂಕುನುಗ್ಗಲು ಉಂಟಾದ ಕಾರಣ ಇನ್ನಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ 3 ಗಂಟೆಯಿಂದಲೇ ಜಮಾವಣೆ
ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದಲೇ ರಾಮನ ದರ್ಶನಕ್ಕಾಗಿ ಸಾವಿರಾರು ಭಕ್ತರು ಜಮಾಯಿಸಿದ್ದಾರೆ. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರಾಮನ ದರ್ಶನಕ್ಕಾಗಿ ಹಾತೊರೆಯುತ್ತಿದ್ದಾರೆ. ರಾಮಮಂದಿರದ ಗೇಟ್‌ಗಳ ಎದುರು ಸಾವಿರಾರು ಭಕ್ತರು ಕಾದು ನಿಂತಿರುವ ವಿಡಿಯೊ ಕೂಡ ಲಭ್ಯವಾಗಿದೆ. ಜನವರಿ 23ರಿಂದ ಬೆಳಗ್ಗೆ 7 ಗಂಟೆಯಿಂದ 11.30 ಹಾಗೂ ಮಧ್ಯಾಹ್ನ 2 ಗಂಟೆಯಿಂದ 7 ಗಂಟೆವರೆಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾಮಮಂದಿರ ಲೋಕಾರ್ಪಣೆಯಾದ ಕಾರಣ ಕೋಟ್ಯಂತರ ಜನ ಅಯೋಧ್ಯೆಗೆ ತೆರಳುವ ನಿರೀಕ್ಷೆ ಇದೆ.
ಇದನ್ನೂ ಓದಿ: Ram Mandir: ರಾಮಲಲ್ಲಾಗೆ 11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ ಕೊಟ್ಟ ಉದ್ಯಮಿ!
ರಾಮಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ, ಭಗವಾನ್ ಶ್ರೀರಾಮನು ನಿತ್ಯ ನಿರಂತರ ಎಂದು ಬಣ್ಣಿಸಿದರು. “ರಾಮ ವಿವಾದ ಅಲ್ಲ, ಸಮಾಧಾನ. ರಾಮ ವರ್ತಮಾನ ಅಲ್ಲ ಅನಂತ ಕಾಲ. ರಾಮ ಎಲ್ಲರಿಗೂ ಸೇರಿದವನು. ಇದು ಕೇವಲ ವಿಗ್ರಹದ ಪ್ರಾಣ ಪ್ರತಿಷ್ಠೆ ಅಲ್ಲ. ಸಾಕ್ಷಾತ್ ಭಾರತೀಯರ ಮಾನವೀಯ ಮೌಲ್ಯದ, ಸರ್ವೋಚ್ಚ ಆದರ್ಶದ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಇದು ಕೇವಲ ದೇವ ಮಂದಿರ ಅಲ್ಲ, ಭಾರತದ ದೃಷ್ಟಿಯ, ಭಾರತದ ದರ್ಶನದ ಮಂದಿರ. ರಾಷ್ಟ್ರ ಚೇತನ ಮಂದಿರ.ರಾಮ ಪ್ರವಾಹ, ಪ್ರಭಾವ. ರಾಮ ನಿತ್ಯ ನಿರಂತರ. ರಾಮ ವಿಶ್ವಾತ್ಮ. ಕಾಲ ಚಕ್ರ ಬದಲಾಗಿದೆ. ಮುಂದಿನ ಸಾವಿರ ಸಾವಿರ ವರ್ಷಗಳ ಕಾಲ ಈ ಸಂಭ್ರಮ ಮುಂದುವರಿಯಲಿದೆ. ಇದು ಸರಿಯಾದ ಸಮಯ. ಇದು ಪವಿತ್ರ ಸಮಯ. ಮುಂದಿನ ಸಾವಿರ ವರ್ಷಗಳ ಭವಿಷ್ಯಕ್ಕೆ ನಾವೀಗ ಮುನ್ನುಡಿ ಬರೆಯಬೇಕು. ಭವ್ಯ ದಿವ್ಯ ಭಾರತದ ನಿರ್ಮಾಣಕ್ಕೆ ಪ್ರಮಾಣ ತೆಗೆದುಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ