ಬೆಂಗಳೂರು: ಇಡೀ ಜಗತ್ತೇ ಕಾತರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ (Rama Janmabhoomi Ayodhya) ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ 2024ರ ಜನವರಿ 22ರಂದು ನಡೆಯಲಿದೆ. ಈ ಕ್ಷಣವನ್ನು ಕಾಣಲು ಎಲ್ಲರೂ ಹಾತೊರೆಯುತ್ತಿದ್ದಾರೆ. ಆದರೆ, ಎಲ್ಲರಿಗೂ ಅಯೋಧ್ಯೆಯವರೆಗೆ ಹೋಗಿ ನೋಡಲು ಸಾಧ್ಯವಿಲ್ಲ, ಅವಕಾಶವೂ ಇಲ್ಲ. ಅದಕ್ಕಾಗಿ ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ (RSS and Vishwah Hindu Parishat) ಸಂಘಟನೆಗಳು ರಾಮ ಭಕ್ತರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಿವೆ. ಅದೇನೆಂದರೆ ಊರಿನ ದೇವಸ್ಥಾನದಲ್ಲೇ ರಾಮನ ಪ್ರಾಣ ಪ್ರತಿಷ್ಠಾಪನೆಯ ಲೈವ್ ಚಿತ್ರಣ (Live telecast in temples)
ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯನ್ನು ಬುಧವಾರ ಪ್ರಕಟಿಸಲಾಯಿತು. ಆರ್‌ಎಸ್ಎಸ್ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಮತ್ತು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ವಿಭಾಗದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಅವರು ರಾಮ ಮಂದಿರ ಲೋಕಾರ್ಪಣೆಯ ದಿನದ ವಿಶೇಷ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಮಂದಿರ ಲೋಕಾರ್ಪಣೆಗೆ ಮುನ್ನವೇ ರಾಜ್ಯಾದ್ಯಂತ ಮನೆ ಮನೆಗೆ ರಾಮ ಸಂದೇಶವನ್ನು ತಲುಪಿಸಿ ಜನವರಿ 22ರ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸಜ್ಜುಗೊಳಿಸುವ ಕೆಲಸವನ್ನು ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ ನಡೆಸಲಿದೆ. ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ರಾಮಂದಿರ ಭಾವಚಿತ್ರ ಹಾಗೂ ನಿವೇದನಾ ಪತ್ರಗಳನ್ನು ಮನೆ ಮನೆಗೆ ಹಂಚುವ ಕೆಲಸವನ್ನು ಅದು ಮಾಡಲಿದೆ.
ಜನವರಿ 1ರಿಂದ 15 ಮನೆ ಮನೆಗೆ ರಾಮ
2024ರ ಜನವರಿ 1ರಿಂದ 15ರವರೆಗೆ ರಾಜ್ಯಾದ್ಯಂತ ಮನೆಗೆ ಮನೆಗೆ ಮಂತ್ರಾಕ್ಷತೆ, ಭಾವಚಿತ್ರ, ಕರಪತ್ರ ವಿತರಣೆ ನಡೆಯಲಿದೆ ಎಂದು ಆರ್‌ಎಸ್‌ಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾ.ತಿಪ್ಪೇಸ್ವಾಮಿ ವಿವರಣೆ ನೀಡಿದರು.
ಕರ್ನಾಟಕದ ಪ್ರತೀ ಗ್ರಾಮ ಹಾಗೂ ಪ್ರತಿ ಮನೆಗಳಿಗೂ ಮಂತ್ರಾಕ್ಷತೆ, ಭಾವಚಿತ್ರ, ನಿವೇದನಾ ಪತ್ರ ಹಂಚಿಕೆ ಮಾಡಲಾಗುವುದು. ಶ್ರೀರಾಮನ ಜೀವನಚರಿತ್ರೆ ಹಾಗೂ ಇತಿಹಾಸ ತಿಳಿಸುವ ಕೆಲಸವನ್ನು ಈ ಮೂಲಕ ಮಾಡಲಾಗುವುದು ಎಂದು ಹೇಳಿದರು.
ಪ್ರತಿ ದೇವಸ್ಥಾನದಲ್ಲೂ ಲೈವ್ ವೀಕ್ಷಣೆ ವ್ಯವಸ್ಥೆ
2024ರ ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಕರ್ನಾಟಕದ ಎಲ್ಲ ಕಡೆ LIVE ಪ್ರಸಾರ ಮಾಡಲಾಗುತ್ತದೆ. ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ನೋಡಲು LIVE ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಕರ್ನಾಟಕದ ಪ್ರತೀ ಗ್ರಾಮದ ಪ್ರಮುಖ ದೇವಸ್ಥಾನಗಳಲ್ಲಿ LED ಸ್ಕ್ರೀನ್ ಮೂಲಕ ಕಾರ್ಯಕ್ರಮ LIVE ಆಗಿ ತೋರಿಸಲಾಗುವುದು. ಆಯಾ ದೇವಸ್ಥಾನಗಳಲ್ಲಿ ಎಲ್ಲರೂ ಸೇರಿ ʻʻಶ್ರೀರಾಮ-ಜೈರಾಮʼʼ ಎಂದು 108 ಬಾರಿ ಪಠಿಸಲು ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.
ಜನವರಿ 22ರಂದು ಅಯೋಧ್ಯೆಯ ದಿಕ್ಕಿಗೆ ಮುಖ ಮಾಡುವಂತೆ ಮಾಡಿ ಐದು ದೀಪಗಳನ್ನು ಹಚ್ಚುವಂತೆ ಮನವಿ ಮಾಡಲಾಗುವುದು ಎಂದು ನಾ.ತಿಪ್ಪೇಸ್ವಾಮಿ ತಿಳಿಸಿದರು. ಈ ಬಾರಿ ಕರ್ನಾಟಕದ ಒಟ್ಟು 29,500 ಗ್ರಾಮಗಳನ್ನು ತಲುಪಲು ಆರ್‌ಎಸ್‌ಎಸ್-ವಿಹೆಚ್‌ಪಿ ತೀರ್ಮಾನ ಮಾಡಿವೆ.
ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಗೆ ಮಮತಾ ಬ್ಯಾನರ್ಜಿಯೂ ಗೈರು; ಏನು ಕಾರಣ?
ದೇವಸ್ಥಾನಗಳಲ್ಲಿ ಸತ್ಸಂಗ, ಭಜನೆ ವ್ಯವಸ್ಥೆ
ಜನವರಿ 22ರಂದು ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲಿ ಬೆಳಗ್ಗೆ ವಿಶೇಷ ಸತ್ಸಂಗ ಹಾಗೂ ಭಜನೆ ವ್ಯವಸ್ಥೆ ಮಾಡಲಾಗುತ್ತದೆ. ಈ ಮೂಲಕ ಒಂದು ದೈವಿಕ ವಾತಾವರಣ ನಿರ್ಮಾಣದ ಉದ್ದೇಶ ಹೊಂದಲಾಗಿದೆ.
ರಾಜ್ಯದಿಂದ ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರು ಅಯೋಧ್ಯೆಗೆ
ಜನವರಿ 22ರಂದು ಅಯೋಧ್ಯೆ ಕಾರ್ಯಕ್ರಮದಲ್ಲಿ ಇರಲು ಕರ್ನಾಟಕದ ಎಲ್ಲ ಸ್ವಾಮೀಜಿಗಳಿಗೂ ಆಹ್ವಾನ ನೀಡಲಾಗಿದೆ. ಅದರ ಜತೆಗೆ ರಾಜ್ಯದಿಂದ ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿರುವ ಭಕ್ತಾಧಿಗಳಿಗೆ ಟ್ರಸ್ಟ್‌ನಿಂದಲೇ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಕರ್ನಾಟಕದ ಸುಮಾರು ಸಾವಿರಾರು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಅಯೋಧ್ಯೆ ಪ್ರವಾಸ ಮಾಡಲಿದ್ದಾರೆ. ಫೆಬ್ರವರಿ 19ರಂದು ಕರ್ನಾಟಕದ ದಕ್ಷಿಣ ಪ್ರಾಂತದ 2000 ಮತ್ತು ಉತ್ತರ ಪ್ರಾಂತದ 1500 ಜನರು ಅಯೋಧ್ಯೆಗೆ ಪ್ರಯಾಣ ಬೆಳೆಸಲಿದ್ದಾರೆ. ಫೆಬ್ರವರಿ 17ರಂದು ಬೆಂಗಳೂರು, ಬೆಳಗಾವಿ ಹಾಗೂ ಉಡುಪಿಯಿಂದ ಆರೆಸ್ಸೆಸ್ ಕಾರ್ಯಕರ್ತರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ನಾ.ತಿಪ್ಪೇಸ್ವಾಮಿ ಮಾಹಿತಿ ನೀಡಿದರು.