Site icon Vistara News

Ram Mandir: ರಾಮ ಮಂದಿರ ಪ್ರಧಾನ ಅರ್ಚಕರಾಗಿ ಮೋಹಿತ್‌ ಪಾಂಡೆ; ಇವರು ಆಯ್ಕೆಯಾಗಿದ್ದು ಹೇಗೆ?

mohith

mohith

ಅಯೋಧ್ಯೆ: ಮೋಹಿತ್‌ ಪಾಂಡೆ (Mohit Pandey)-ಸದ್ಯ ದೇಶಾದ್ಯಂತ ಚರ್ಚೆಯಲ್ಲಿರುವ ಹೆಸರು. ಅಯೋಧ್ಯೆಯ ರಾಮ ಮಂದಿರ (Ram Mandir)ದ ಪ್ರಧಾನ ಅರ್ಚಕ ಹುದ್ದೆಗೆ ಈ ಮೋಹಿತ್‌ ಪಾಂಡೆ ಆಯ್ಕೆಯಾಗಿದ್ದಾರೆ. 3 ಸಾವಿರ ಅರ್ಚಕರ ಪೈಕಿ 23ರ ಹರೆಯದ, ಉತ್ತರ ಪ್ರದೇಶದ ಮೋಹಿತ್‌ ಪಾಂಡೆ ಆಯ್ಕೆಯಾಗಿದ್ದೇ ರೋಚಕ. ಈ ಬಗೆಗಿನ ವಿವರ ಇಲ್ಲಿದೆ.

ಇವರು ಮೋಹಿತ್‌ ಪಾಂಡೆ

ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ ಅರ್ಚಕರ ಆಯ್ಕೆಗಾಗಿ ಕರೆ ಕೊಟ್ಟಾಗ ದೇಶಾದ್ಯಂತ ಇರುವ ಸುಮಾರು 3 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಬಳಿಕ ಇವರಿಗೆ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ತೇರ್ಗಡೆಯಾಗಿ ಮೋಹಿತ್‌ ಪಾಂಡೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ.

ಸದ್ಯ ರಾಮ ಮಂದಿರಲ್ಲಿ ಪ್ರಧಾನ ಅರ್ಚಕರಾಗಿ ಉತ್ತರ ಪ್ರದೇಶದ ಕಬೀರ್‌ ನಗರದ ಆಚಾರ್ಯ ಸತ್ಯೇಂದ್ರ ದಾಸ್‌ ಸೇವೆ ಸಲ್ಲಿಸುತ್ತಿದ್ದಾರೆ. 70 ವರ್ಷದ ಇವರು 90ರ ದಶಕದಿಂದ ರಾಮನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನೂ ಕೆಲವು ದಿನಗಳವರೆಗೆ ಇವರೇ ರಾಮ ಮಂದಿರದ ಪ್ರಧಾನ ಅರ್ಚಕರಾಗಿ ಮುಂದುವರಿಯಲಿದ್ದಾರೆ. ತರಬೇತಿ ಬಳಿಕ ಅಂತಿಮ ಪರೀಕ್ಷೆಯನ್ನೂ ತೇರ್ಗಡೆಯಾದಾಗ ಮೋಹಿತ್‌ ಪಾಂಡೆ ಅವರನ್ನು ಅಧಿಕೃತವಾಗಿ ಪ್ರಧಾನ ಅರ್ಚಕ ಎಂದು ಘೋಷಣೆ ಮಾಡಲಾಗುತ್ತದೆ.

ಆಯ್ಕೆ ವಿಧಾನ ಹೇಗಿತ್ತು?

ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅರ್ಚಕ ಹುದ್ದೆ ಭರ್ತಿಗೆ ಪ್ರಕಟಣೆ ಹೊರಡಿಸಿತ್ತು. ಈ ವೇಳೆ ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದರಂತೆ ಅರ್ಚಕರ ವಯಸ್ಸು 20ರಿಂದ 30 ವರ್ಷದ ಒಳಗಿರಬೇಕು. ಜತೆಗೆ ಪೌರೋಹಿತ್ಯ ಹಿನ್ನೆಲೆಯ ಮನೆತನವಾಗಿರಬೇಕು. ಅಲ್ಲದೆ, ಯಾವುದಾದರೂ ಗುರುಕುಲದಲ್ಲಿ ಶಿಕ್ಷಣ ಪೂರೈಸಿ ಪ್ರಮಾಣಪತ್ರ ಹೊಂದಿರಬೇಕು ಎಂದು ಷರತ್ತು ಹಾಕಲಾಗಿತ್ತು. ಈ ಅರ್ಹತೆಗಳನ್ನು ಹೊಂದಿದ ಸುಮಾರು 3 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು.

ಈ ಪೈಕಿ ಮೌಖಿಕ ಮತ್ತು ಲಿಖಿತ ಪರೀಕ್ಷೆಯಲ್ಲಿ 2 ಸಾವಿರ ಮಂದಿ ತೇರ್ಗಡೆಯಾಗಿದ್ದರು. ಆ ಪೈಕಿ ಮೋಹಿತ್‌ ಪಾಂಡೆ ಕೂಡ ಒಬ್ಬರು. ಮುಂದಿನ ಹಂತ ಅತ್ಯಂತ ಕ್ಲಿಷ್ಟಕರ ಸಂದರ್ಶನ. ಇದನ್ನು ವೃಂದಾವನದ ಪಂಡಿತರಾದ ಜಯಕಾಂತ ಮಿಶ್ರ, ಅಯೋಧ್ಯೆಯ ಮಿಥಿಲೇಶ್‌, ನಂದಿನಿ ಶರ್ಮಾ ಮತ್ತು ಸತ್ಯ ನಾರಾಯಣ ಅವರನ್ನೊಳಗೊಂಡ ಸಮಿತಿ ನಡೆಸಿತು. ಈ ಸಂದರ್ಶನ ಅಯೋಧ್ಯೆಯ ಕರಸೇವಕಪುರದಲ್ಲಿ ನಡೆದಿತ್ತು. ಈ ವೇಳೆ ಅರ್ಚಕರಿಗೆ ರಾಮನ ಕುರಿತಾದ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ರಾಮನ ಪೂಜೆಗೆ ಬೇಕಾದ ಅರ್ಹತೆಗಳೇನು? ಸಂಧ್ಯಾ ವಂದನೆ ಎಂದರೇನು? ಅದನ್ನು ಮಾಡುವುದು ಹೇಗೆ? ರಾಮನ ಪೂಜೆಗೆ ಬಳಸುವ ಮಂತ್ರ ಯಾವುದು? ಇದನ್ನು ಉಚ್ಚರಿಸುವುದು ಹೇಗೆ? ಪೂಜೆಯ ನಿಯಮಗಳೇನು? ಮುಂತಾದ ಪ್ರಶ್ನೆಗಳನ್ನು ಕೇಳಲಾಯಿತು. ಒಟ್ಟಿನಲ್ಲಿ ಇದನ್ನು ಐಎಎಸ್‌ ಪರೀಕ್ಷೆ ರೀತಿಯಲ್ಲಿ ನಡೆಸಲಾಗಿತ್ತು.

2 ಸಾವಿರ ಮಂದಿಯ ಪೈಕಿ ಇದರಲ್ಲಿ ತೇರ್ಗಡೆಯಾಗಿದ್ದು 21 ಅರ್ಚಕರು. ಇದರಲ್ಲಿ ಒಬ್ಬರು ಪ್ರಧಾನ ಅರ್ಚಕರಾಗಿದ್ದರೆ ಉಳಿದ 20 ಮಂದಿ ಸಹಾಯಕರಾಗಿರಲಿದ್ದಾರೆ ಎಂದು ಟ್ರಸ್ಟ್‌ ಮೊದಲೇ ತಿಳಿಸಿತ್ತು. ಎಲ್ಲರಿಗಿಂತ ಹೆಚ್ಚಿನ ಅರ್ಹತೆ ಹೊಂದಿದ ಮೋಹಿತ್‌ ಪಾಂಡೆ ಪ್ರಧಾನ ಅರ್ಚಕರಾಗಿ ನೇಮಕಗೊಂಡರು.

ಮೋಹಿತ್‌ ಆಯ್ಕೆಯ ಹಿಂದಿದೆ ಕಾರಣ

ಆಯ್ಕೆ ಸಮಿತಿಯ ಪೈಕಿ ಒಬ್ಬರಾದ ಸತ್ಯನಾರಾಯಣ ಅವರು ಮೋಹಿತ್‌ ಆಯ್ಕೆಗಿರುವ ಕಾರಣ ಹೀಗೆ ವಿವರಿಸುತ್ತಾರೆ: ʼʼಮೋಹಿತ್‌ ಸೀತಾರಾಮ್‌ ನಗರ ನಿವಾಸಿ. ಇವರು ಚಿಕ್ಕಂದಿನಿಂದಲೇ ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಹೊಂದಿದ್ದರು. ಅವರ ವಯಸ್ಸಿನ ಮಕ್ಕಳೆಲ್ಲ ಆಟದಲ್ಲಿ ಕಾಲ ಕಳೆಯುತ್ತಿದ್ದರೆ ಇವರು ವೇದ-ಪುರಾಣಗಳ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ದೀಕ್ಷೆ ಪಡೆದು ಇವರು ಚಿಕ್ಕ ವಯಸ್ಸಿನಲ್ಲೇ ವೇದ ಅಧ್ಯಯನಕ್ಕೆ ತಿರುಪತಿಗೆ ತೆರಳಿದ್ದರು. ಅಲ್ಲಿ ಪಿಎಚ್‌.ಡಿಯನ್ನೂ ಪೂರೈಸಿದ್ದಾರೆʼʼ ಎಂದು ಹೇಳಿದ್ದಾರೆ.

ಮೋಹಿತ್‌ ದಿನಚರಿ

ಇನ್ನೊಂದು ಮುಖ್ಯ ವಿಚಾರ ಎಂದರೆ ಆಯ್ಕೆಯ ಹಿಂದೆ ಮೋಹಿತ್‌ ಅವರ ದಿನಚರಿಯೂ ಪ್ರಮುಖ ಪಾತ್ರ ವಹಿಸಿದೆ. ಅವರು ಪ್ರತಿ ದಿನ ಬ್ರಾಹ್ಮಿ ಮುಹೂರ್ತಕ್ಕೆ ಎದ್ದು ಹಲವು ಗಂಟೆಗಳ ಕಾಲ ಪೂಜೆಯಲ್ಲಿಯೇ ಕಾಲ ಕಳೆಯುತ್ತಾರೆ. ಪ್ರತಿ ದಿನ ಸಂಧ್ಯಾ ವಂದನೆ ಮಾಡುತ್ತಾರೆ. ವಿಶೇಷ ಎಂದರೆ ಮೋಹಿತ್‌ ಆಧುನಿಕ ಪ್ರಪಂಚದ ಯಾವುದೇ ಶೋಕಿ, ಆಡಂಬರದ ಆಮಿಷಕ್ಕೆ ಒಳಗಾಗಿಲ್ಲ. ಸದಾ ಸಾತ್ವಿಕ, ಸರಳ ಆಹಾರ ಸೇವಿಸುತ್ತಾರೆ. ಸೋಷಿಯಲ್‌ ಮೀಡಿಯಾದಿಂದ ಸದಾ ಅಂತರ ಕಾಪಾಡಿಕೊಳ್ಳುತ್ತಾರೆ. ಅಲ್ಲದೆ ರಾಮನ ಕುರಿತಾದ ಪ್ರತಿಯೊಂದು ವಿಷಯವೂ ಅವರಿಗೆ ಗೊತ್ತು. ಇದೆಲ್ಲ ಮೋಹಿತ್‌ ಆಯ್ಕೆಗೆ ಕಾರಣವಾಗಿತ್ತು.

ಇದನ್ನೂ ಓದಿ: Ram Lalla: ನೀವು ನೋಡಿದ ಮಂದಸ್ಮಿತ ರಾಮಲಲ್ಲಾನ ಫೋಟೊ ನಕಲಿ; ಅರ್ಚಕ ಹೇಳಿದ್ದೇನು?

ಅಧಿಕೃತ ಆಯ್ಕೆ ಘೋಷಣೆಗೆ ಇನ್ನೂ ಕಾಲಾವಕಾಶ ಇದೆ

ಈಗ ನಡೆದಿರುವುದು ಅಂತಿಮ ಆಯ್ಕೆಯಲ್ಲ. ಮೋಹಿತ್‌ ಸೇರಿದಂತೆ ಆಯ್ಕೆಯಾದ ಎಲ್ಲ 21 ಮಂದಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ತರಬೇತಿ ನಂತರ ನಡೆಯುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕೂಡ ಮುಖ್ಯ. ಇಲ್ಲದಿದ್ದರೆ ಅಂತಹವರನ್ನು ತೆಗೆದು ಬೇರೆಯವರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಟ್ರಸ್ಟ್‌ ತಿಳಿಸಿದೆ. ʼʼಈಗಾಗಲೇ ಮೋಹಿತ್‌ ಪಾಂಡೆ ಪ್ರಧಾನ ಅರ್ಚಕರಾಗಿ ನೇಮಕವಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು, ಇದು ನಕಲಿ. ತರಬೇತಿ ಮುಗಿದ ಬಳಿಕವಷ್ಟೇ ಅವರು ಪೂಜೆ ಸಲ್ಲಿಸುವ ಅಧಿಕಾರ ಪಡೆಯುತ್ತಾರೆʼʼ ಎಂದು ಟ್ರಸ್ಟ್‌ನ ಪ್ರಮುಖರಾದ ಕಾಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಪ್ರಾಣ ಪ್ರತಿಷ್ಠೆ ಆದ ಬಳಿಕ ರಾಮ ಲಲ್ಲಾ ವಿಗ್ರಹಕ್ಕೆ ಸತ್ಯೇಂದ್ರ ದಾಸ್‌ ಅವರೇ ಮೊದಲ ಪೂಜೆ ನೆರವೇರಿಸಲಿದ್ದಾರೆ ಮತ್ತು ಕೆಲವು ತಿಂಗಳ ಕಾಲ ಸೇವೆ ಮುಂದುವರಿಸಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version