ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿಯು ಕೊನೆಯ ಹಂತಕ್ಕೆ ಬಂದಿದೆ. 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಾಗುತ್ತದೆ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾನೆ (Pran Pratishta) ನೆರವೇರಿಸಿ, ಗರ್ಭಗುಡಿಯಲ್ಲಿ ಇರಿಸಿ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳು ಸಿದ್ಧವಾಗಿದ್ದು, 6 ಸಾವಿರ ಗಣ್ಯರಿಗೆ ರವಾನಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ರಾಮಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ದೇಶಾದ್ಯಂತ ಇರುವ 6 ಸಾವಿರ ಗಣ್ಯರಿಗೆ ಟ್ರಸ್ಟ್‌ನಿಂದ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಆಮಂತ್ರಣ ಪತ್ರಿಕೆಗಳ ಫೋಟೊಗಳು ಕೂಡ ಲಭ್ಯವಾಗಿವೆ. ದೇಶದ ಪ್ರಮುಖ ರಾಜಕಾರಣಿಗಳು, ಹಿಂದು ಸಂಘಟನೆಗಳ ಮುಖಂಡರು, ಸಾಧು-ಸಂತರಿಗೆ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
Invitation cards are being sent to people for the Pran Pratistha ceremony of Ram Temple in Ayodhya, Uttar Pradesh on January 22. pic.twitter.com/aHupKCMUwS
— ANI (@ANI) December 2, 2023
ಅಯೋಧ್ಯೆ ವಿಮಾನ ನಿಲ್ದಾಣವೂ ಸಿದ್ಧ
ರಾಮಮಂದಿರ ಲೋಕಾರ್ಪಣೆಗೆ ಮೊದಲೇ ಅಯೋಧ್ಯೆ ವಿಮಾನ ನಿಲ್ದಾಣವು ಸಿದ್ಧವಾಗಿರಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. “ಡಿಸೆಂಬರ್ 15ರ ವೇಳೆಗೆ ವಿಮಾನ ನಿಲ್ದಾಣ ಸಿದ್ಧವಾಗಿರಲಿದೆ. ಮೊದಲ ಹಂತದಲ್ಲಿ ವಿಮಾನ ನಿಲ್ದಾಣ ಮುಗಿಯಲಿದ್ದು, ವಿಮಾನಗಳ ಹಾರಾಟ ಶುರುವಾಗಲಿದೆ. ಇದಾದ ಬಳಿಕ ಹಂತ ಹಂತವಾಗಿ ಬೃಹತ್ ವಿಮಾಣ ನಿಲ್ದಾಣ ನಿರ್ಮಿಸಲಾಗುವುದು” ಎಂದು ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಎಂಬುದಾಗಿ ಹೆಸರಿಡಲು ತೀರ್ಮಾನಿಸಲಾಗಿದೆ.
ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ
ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರೆ ನೀಡಿದ್ದಾರೆ.
ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್ ಶಾ ಹೇಳಿಕೆಗೊಂದು ಕಾರಣವಿದೆ
ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ