Site icon Vistara News

Ram Mandir: ಕೃತಕ ಬುದ್ಧಿಮತ್ತೆ, ಡ್ರೋನ್‌ ತಂತ್ರಜ್ಞಾನ; ಮಂದಿರಕ್ಕೆ ಹೀಗಿದೆ ಸೆಕ್ಯುರಿಟಿ

Ram Mandir

Ayodhya Ram Mandir: Dignitaries From 55 Nations To Attend Pran Pratishtha On Jan 22

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳೂ ನಡೆಯುತ್ತಿವೆ. ಹಾಗೆಯೇ, ಬಹುಮುಖ್ಯವಾಗಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಇನ್ನಿಲ್ಲದ ಭದ್ರತೆ (Ram Mandir Security) ಒದಗಿಸಲಾಗುತ್ತಿದೆ. ಅತ್ಯಾಧುನಿಕ ಸಿಸಿಟಿವಿ, ಡ್ರೋನ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಭದ್ರತೆ ಹೆಚ್ಚಿಸಲಾಗಿದೆ.

ಆ್ಯಂಟಿ ಡ್ರೋನ್‌ ಟೆಕ್ನಾಲಜಿ

ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ATS) ಹಾಗೂ ಉತ್ತರ ಪ್ರದೇಶ ಪೊಲೀಸರು ಭದ್ರತೆಯ ಹೊಣೆ ವಹಿಸಿಕೊಂಡಿದೆ. ಅದರಲ್ಲೂ, ಡ್ರೋನ್‌ ನಿಗ್ರಹ ತಂತ್ರಜ್ಞಾನವನ್ನು (Anti Drone Technology) ಅಳವಡಿಸಿಕೊಳ್ಳಲಾಗುತ್ತಿದೆ. ರೇಡಿಯೋ ಫ್ರೀಕ್ವೆನ್ಸಿ ಸೇರಿ ಹಲವು ತಂತ್ರಜ್ಞಾನದ ಮೂಲಕ ಅಪಾಯಕಾರಿ ಎನಿಸುವ ಡ್ರೋನ್‌ಗಳನ್ನು ಆ್ಯಂಟಿ ಡ್ರೋನ್‌ ಟೆಕ್ನಾಲಜಿ ಮೂಲಕ ಹೊಡೆದುರುಳಿಸಲಾಗುತ್ತದೆ ಎಂದು ಎಟಿಎಸ್‌ ಅಧಿಕಾರಿಗಳುಪ ಮಾಹಿತಿ ನೀಡಿದ್ದಾರೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Pranita Subhash: ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ಪ್ರಣೀತಾ ಸುಭಾಷ್

“ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಿಗಾ ಇರಿಸಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್‌ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಮುಂದಿನ ನಡೆ ಅನುಸರಿಸುತ್ತಾರೆ” ಎಂದು ತಿಳಿಸಿದ್ದಾರೆ.

ಅತ್ಯಾಧುನಿಕ ಸಿಸಿಟಿವಿ, ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌

ರಾಮಮಂದಿರ ಲೋಕಾರ್ಪಣೆ ದಿನ ಅಯೋಧ್ಯೆಯಲ್ಲಿ ಅತ್ಯಾಧುನಿಕ ಸಿಸಿಟಿವಿಗಳ ಕಾವಲು ಇರಲಿದೆ. ಅಯೋಧ್ಯೆಗೆ ಬರುವ ಪ್ರತಿಯೊಬ್ಬರ ಮೇಲೆ ನಿಗಾ ಇರಿಸುವುದು, ಅವರ ಚಲನವಲನ ಗಮನಿಸುವುದು ಸೇರಿ ಹಲವು ರೀತಿಯಲ್ಲಿ ಸಿಸಿಟಿವಿ ನೆರವಾಗಲಿವೆ. ಇನ್ನು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಅನುಮಾನಾಸ್ಪದ ವಾಹನಗಳ ಟೈರ್‌ ಕಿಲ್ಲಿಂಗ್‌ ತಂತ್ರಜ್ಞಾನ, ಟ್ರಾಫಿಕ್‌ ನಿಯಂತ್ರಣದ ಜತೆಗೆ ವಾಹನಗಳ ಮೇಲೆ ನಿಗಾ ಇರಿಸುವುದು ಸೇರಿ ಹಲವು ರೀತಿಯಲ್ಲಿ ಮಾನಿಟರ್‌ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version