Site icon Vistara News

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

#image_title

ಬೆಂಗಳೂರು: ನಾಡಿನೆಲ್ಲೆಡೆ ಗುರುವಾರ ಶ್ರೀರಾಮ ನವಮಿಯ (Ram Navami 2023) ಸಂಭ್ರಮ ಮನೆ ಮಾಡಿತ್ತು. ಬೆಂಗಳೂರಿನ ರಾಜಾಜಿನಗರದ ರಾಮಮಂದಿರ (Rama Mandir), ಕೋದಂಡ ರಾಮಸ್ವಾಮಿ ದೇವಾಲಯ (kodanda ramaswamy temple), ಗಾಳಿ ಆಂಜನೇಯ (Gaali Anjaneya Temple) ದೇವಾಲಯ ಸೇರಿದಂತೆ ವಿವಿಧ ದೇಗುಲದಲ್ಲಿ ವಿಶೇಷ ಪೂಜೆ ಕೈಂಕರ್ಯ ನೆರವೇರಿತು.

ರಾಜಾಜಿನಗರದ ರಾಮಮಂದಿರದಲ್ಲಿ ರಾಮನವಮಿ ಪ್ರಯುಕ್ತ ಅದ್ಧೂರಿ ರಥೋತ್ಸವದ ಮೂಲಕ ಭಕ್ತರು ರಾಮ ನಾಮಸ್ಮರಣೆ ಮಾಡಿದರು. ಶ್ರೀರಾಮ ಸೇವಾ ಮಂಡಳಿ ಆಯೋಜಿಸಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಶ್ರೀರಾಮನ ರಥ ಎಳೆದರು. ಶ್ರೀರಾಮನ ವಿಗ್ರಹಕ್ಕೆ ವಜ್ರಾಂಗಿ ತೊಡಿಸುವ ಮೂಲಕ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂದಿರದ ಆವರಣದಲ್ಲಿ ಶ್ರೀರಾಮ, ಶ್ರೀಕೃಷ್ಣರನ್ನು ತಾಯಿಯರು ತೊಟ್ಟಿಲಲ್ಲಿ ಮಲಗಿಸಿ ತೂಗುವಂತೆ ನಿರ್ಮಿಸಿದ್ದ ವಿಗ್ರಹ ಭಕ್ತರ ಗಮನ ಸೆಳೆಯಿತು. ರಾಮನ ದರ್ಶನ ಪಡೆದ ಜನರು ರಾಮನ ಗುಣಗಾನ ಮಾಡಿದರು.

ರಾಮ ಮಂದಿರದಲ್ಲಿ ವಿಶೇಷ ಅಲಂಕಾರ

ಈ ಬಾರಿ ರಾಮನವಮಿ ಪ್ರಯುಕ್ತ ಶ್ರೀರಾಮಮಂದಿರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮ ಉತ್ಸವ ನಡೆಯಲಿದ್ದು, ಏಪ್ರಿಲ್​ 9ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ದೇವಸ್ಥಾನದಲ್ಲಿ 63 ಅಡಿಯ ರಾಮ-ಲಕ್ಷ್ಮಣರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಶ್ರೀರಾಮಮಂದಿರ ಟ್ರಸ್ಟ್​ ಅಧ್ಯಕ್ಷ ಶ್ರೀಧರ್​ ತಿಳಿಸಿದರು.

ರಾಜಾಜಿನಗರದ ರಾಮಮಂದಿರ ಮಾತ್ರವಲ್ಲದೆ ಗಾಳಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಬೆಳಗ್ಗೆನಿಂದಲೇ ನೂರಾರು ಭಕ್ತರು ದೇವಸ್ಥಾನದ ಮುಂದೆ ಸಾಲುಗಟ್ಟಿ ನಿಂತಿದ್ದರು. ಚಿಕ್ಕಪೇಟೆಯ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪಾನಕ-ಮಜ್ಜಿಗೆ ಹಾಗೂ ಅನ್ನಸಂತರ್ಪಣೆ ಮಾಡುವ ಮೂಲಕ ಶ್ರೀರಾಮನವಮಿಯನ್ನು ಆಚರಣೆ ಮಾಡಲಾಯಿತು.

ಮುಸ್ಲಿಮರಿಂದ ಮಜ್ಜಿಗೆ, ಪಾನಕ ಹಂಚಿಕೆ

ಕಲಬುರಗಿಯಲ್ಲಿ ಅದ್ಧೂರಿಯಾಗಿ ರಾಮ ನವಮಿಯನ್ನು ಆಚರಣೆ ಮಾಡಲಾಯಿತು. ರಾಮತೀರ್ಥ ದೇವಸ್ಥಾನದಿಂದ ಜಗತ್ ವೃತ್ತದವರೆಗೆ 15 ಅಡಿ ಎತ್ತರದ ರಾಮನ ಪ್ರತಿಮೆಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ವೇಳೆ ರಾಮನವಮಿ ಅಂಗವಾಗಿ ಖಾದ್ರಿ ಚೌಕ್ ಬಳಿ ಮುಸ್ಲಿಮರು ಮಜ್ಜಿಗೆ, ಪಾನಕವನ್ನು ವಿತರಣೆ ಮಾಡಿ ಭಾವೈಕ್ಯತೆ ಸಾರಿದರು.

ರಾಮಚಂದ್ರಾಪುರ ಮಠದಲ್ಲಿ ಸಂಭ್ರಮದ ರಾಮೋತ್ಸವ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ ನಡೆಸಲಾಯಿತು. ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ರಾಘವೇಶ್ವರ ಶ್ರೀಗಳು, ರಾಮನ ಬದುಕು ನಮಗೆಲ್ಲ ಆದರ್ಶ ಹಾಗೂ ಶ್ರೀರಾಮನ ಹೆಸರೇ ನಮಗೆಲ್ಲರಿಗೂ ಸ್ಫೂರ್ತಿ ಎಂದು ಆಶೀರ್ವಚನ ನೀಡಿದರು.

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ

ಇದನ್ನೂ ಓದಿ: Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ

ಇನ್ನು ರಾಮೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮ ದೇವರ ಮೂರ್ತಿಯನ್ನು ತೊಟ್ಟಿಲಿನಲ್ಲಿಟ್ಟು ತೂಗಲಾಯಿತು. ಶಾಸಕ ಹರತಾಳು ಹಾಲಪ್ಪ ಸೇರಿದಂತೆ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

Exit mobile version