Site icon Vistara News

Ram Navami 2023 : ರಾಮಾ ಮನೋಹರನೆ ದೀನ ಪತಿತಪಾವನ…

The story of a Perfect man and god lord sri rama

rama

ಸುಪ್ರೀತಾ ಬಿ. ಎಸ್‌.
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ (Ram Navami 2023), ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನ. ತಂದೆ ದಶರಥ ಮಹಾರಾಜನು ಮಕ್ಕಳಿಲ್ಲದೇ ಪುತ್ರಕಾಮೇಷ್ಟಿ ಯಾಗವನ್ನು ಮಾಡಿದಾಗ, ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ಪಾಯಸವನ್ನು ನೀಡುತ್ತಾನೆ. ಈ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ನೀಡುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

ರಾಮ ಎನ್ನುವ ಎರಡು ಅಕ್ಷರದಲ್ಲಿ ಮಹತ್ವಪೂರ್ಣವಾದ ಅರ್ಥವಿದೆ ‘ರಾ’ ಎಂದರೆ ಬೆಳಕು ‘ಮ’ ಎಂದರೆ ಒಳಗೆ. ಅಂದರೆ ನಮ್ಮೊಳಗಿನ ದೈವಿಕ ಬೆಳಕು ರಾಮ. ರಾಮನೊಬ್ಬನ ಮೂರ್ತಿಗೆ ಪೂಜೆ ಅಪರೂಪ. ಎಡಕ್ಕೆ ಸೀತೆ, ಬಲಕ್ಕೆ ಲಕ್ಷ್ಮಣ, ಕಾಲ ಕೆಳಗೆ ಹನುಮಂತ.

ರಾವಣನು ಘೋರ ತಪಸ್ಸನ್ನು ಮಾಡಿ, ರಾಕ್ಷಸರೂ, ಯಕ್ಷಕನ್ಯೆಯರಿಂದಲೂ ಸಾವು ಬರಬಾರದೆಂದು ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ಹೀಗೆ ವರ ಪಡೆದು ಸಹಚರ ರಾಕ್ಷಸರೊಡಗೂಡಿ ಭೂಸಂಹಾರಕ್ಕೆ ತೊಡಗಿ, ಜನರಿಗೆ ತೊಂದರೆ ಕೊಡುತ್ತಾ, ಹೋಮಹವನಗಳಿಗೆ ಹವಿಸ್ಸನ್ನು ಕೊಡದಂತೆ ತಡೆದಾಗ, ದೇವತೆಗಳು ವಿಷ್ಣುವಿನ ಮೊರೆ ಹೊಕ್ಕಿ, ಸಾಕ್ಷಾತ್ ವಿಷ್ಣು ದೇವನೇ 7 ನೇ ಅವತಾರವಾಗಿ “ರಾಮ” ನಾಗಿ ಭೂಲೋಕದಲ್ಲಿ ಅವತಾರ ತಾಳಿದನು. ರಾಮ ಸಾಗಿದ ಮಾರ್ಗ, ಎತ್ತಿ ಹಿಡಿದ ಆದರ್ಶ ಮತ್ತು ಅವನು ಅನುಸರಿಸಿದ ಮಾರ್ಗಗಳು ಸರ್ವಕಾಲಕ್ಕೂ ಶಾಶ್ವತ ಮತ್ತು ಲೋಕಾತೀತವಾಗಿದೆ. ರಾಮ ಏಕೆ ಮತ್ತು ಹೇಗೆ ನಮಗೆ ಆದರ್ಶ? ವಾಲ್ಮೀಕಿ ಮಹರ್ಷಿಗಳು ನಾರದರನ್ನು ಹೀಗೆ ಕೇಳುತ್ತಾರೆ;

“ಈ ಲೋಕದಲ್ಲಿ ಈಗ ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತ ಹಿಡಿದವನು, ಮಾಡಿದ ಸಂಕಲ್ಪವನ್ನು ಬಿಡದವನು, ಪರಂಪರೆಯಾಗಿ ಬಂದ ಸದಾಚಾರ ಸಂಪನ್ನ, ಸರ್ವಶಾಸ್ತ್ರಗಳನ್ನು ಬಲ್ಲವನು, ಸರ್ವ ಕಾರ್ಯ ದುರಂಧರ, ಪ್ರಿಯದರ್ಶನ, ಧೈರ್ಯಶಾಲಿ, ಕೋಪವನ್ನು ಜಯಿಸಿದವನು, ಅಹಂಕಾರ ರಹಿತನು, ಅಸೂಯೆ ಇಲ್ಲದವನು, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವನು ಇದ್ದಾನೆಯೇ? – ಈ ಗುಣಗಳಿಂದ ಕೂಡಿದಂಥವ ಈಗ ಲೋಕದಲ್ಲಿ ಇದ್ದರೆ ದಯವಿಟ್ಟು ತಿಳಿಸಿ.” ವಾಲ್ಮೀಕಿಗಳ ಈ ಪ್ರಶ್ನೆಯನ್ನು ಕೇಳಿದ ನಾರದರು ಸಂತೋಷದಿಂದ ವಾಲ್ಮೀಕಿಗಳಿಗೆ “ನೀವು ಕೇಳುವಂತೆ ಸಕಲ ಗುಣಗಳಿಂದ ಕೂಡಿದವನು ಇದ್ದಾನೆ. ಅವನೇ ಇಕ್ಷ್ವಾಕು ವಂಶದಲ್ಲಿ ಅವತರಿಸಿದ ಶ್ರೀರಾಮ” ಎಂದು ಶ್ರೀರಾಮನ ಕಥೆಯನ್ನು ವಿವರಿಸುತ್ತಾರೆ.

ಅಗಣಿತ ಗುಣ ಸಂಪನ್ನ

ರಾಮಾಯಣವನ್ನು ಒಪ್ಪದೇ ಇದ್ದವರು, ಸರಿಯಾಗಿ ಓದದೇ ಬರೀ ಕೊಂಕು ನುಡಿಯುವರು ಇದಕ್ಕೆ ತಗಾದೆ ಎತ್ತುತ್ತಾರೆ. ಧರ್ಮವನ್ನು ಸಂಸ್ಥಾಪಿಸಲು ಅವತಾರವೆತ್ತಿದ ಶ್ರೀರಾಮ, ಕೈಕೇಯಿಗೆ ವನವಾಸಕ್ಕೆ ಹೋಗುವ ಮುಂಚೆ ಹೀಗೆ ಹೇಳುತ್ತಾನೆ “ನನಗೆ ಹಣ, ರಾಜ್ಯ, ಭೋಗ, ಭಾಗ್ಯ ಇವೆಲ್ಲದರ ಚಿಂತೆ ಇಲ್ಲ. ಧರ್ಮಾಚರಣೆಯೇ ನನ್ನ ವ್ರತ”. ಬ್ರಹ್ಮಚರ್ಯ ನಿಷ್ಠೆಯಿಂದ ಕೂಡಿದವನು ಇವನು. ತಂದೆಯ ಮಾತಿಗೆ ಬೆಲೆಕೊಟ್ಟು , ವನವಾಸಕ್ಕೆ ಹೋದವ. ಧೈರ್ಯವಂತ, ವಿದ್ವಾಂಸನಾಗಿರುವವನು. ಸರ್ವಶಾಸ್ತ್ರಗಳನ್ನೂ ತಿಳಿದವನು ಮಾತ್ರವಲ್ಲ ಅವೆಲ್ಲವನ್ನೂ ಯಥಾವತ್ತಾಗಿ ಅನುಷ್ಟಾನಕ್ಕೆ ತಂದಿರುವಂಥವನು, ಕೋಪಗೊಳ್ಳದವನು, ಎಂಥ ಕಷ್ಟಕಾರ್ಯವನ್ನಾದರೂ ಸಾಧಿಸುವಂತಹ ಧೃತಿಯುಳ್ಳವನು.

ಇನ್ನೂ ಕೆಲವರು ರಾಮ ತನ್ನ ಪತ್ನಿಯ ಮೇಲೆ ಸಂದೇಹ ಪಟ್ಟ ವ್ಯಕ್ತಿ. ಕಾಡಿಗಟ್ಟಿದವ ಎಂದೆಲ್ಲಾ ಹೇಳಿ ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ. ಅಷ್ಟೇ ಏಕೆ ನೀವು ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತೀರು ಚಿತ್ರವನ್ನು ನೋಡಿದರೆ ಅಲ್ಲಿ ಈ ಮಾತುಗಳು ಬರುತ್ತವೆ. ರಾಮನು ಸಂದೇಹದಿಂದ ಸೀತೆಯನ್ನು ಅಗ್ನಿ ಪರೀಕ್ಷೆಗೆ ಗುರಿಪಡಿಸಲಿಲ್ಲ. ಸರ್ವವನ್ನು ತಿಳಿದ ರಾಮನಿಗೆ ಹೆಂಡತಿಯ ಮೇಲೆ ಅನುಮಾನವೇ ? ಕೇವಲ ಮಾತಿನಲ್ಲಿ ಅವಳು ಶ್ರೇಷ್ಟವೆಂದು ಹೇಳದೇ ವಿಶ್ವಕ್ಕೆ ಅವಳು ಮಹಾಪತಿವ್ರತೆ ಎಂದು ಸಾರಲು ಈ ರೀತಿ ಮಾಡಿದನು. ಅವಳನ್ನು ಪರೀಕ್ಷೆಗೆ ಒಳಪಡಿಸದಿದ್ದ. ರಾಮ ಹುಟ್ಟಿದ್ದೇ ರಾವಣನ ಸಂಹರಿಸಲು, ಧರ್ಮ ಮರುಸ್ಥಾಪಿಸಲು. ಹೀಗಾಗಿಯೇ ಸೀತೆಯು ಮಾಯಾಜಿಂಕೆಗೆ ಮೋಹಿತಳಾಗುವುದು, ರಾಮ ಜಿಂಕೆಯನ್ನು ಬೆನ್ನಟ್ಟಿದಾಗ ಸೀತೆಯನ್ನು ರಾವಣ ಅಪಹರಿಸುವುದು ಎಲ್ಲವೂ. ರಾಮ ರಾವಣ ಯುದ್ಧವಾಗುವುದೂ, ಬರುವ ಪಾತ್ರಗಳಾದ ಹನುಮ, ಸುಗ್ರೀವ, ವಾಲಿ, ಶಬರಿ, ಲಕ್ಷ್ಮಣ, ಹೀಗೆ ಎಲ್ಲಾ ಪಾತ್ರಗಳಲ್ಲಿಯೂ ನಾವು ಅನುಸರಿಸಬೇಕಾದ ಒಂದು ಆದರ್ಶ ಗುಣವಿದೆ. ಮೂಲ ರಾಮಾಯಣವನ್ನು ಓದಿದಾಗ ಮಾತ್ರ ತಿಳುವಳಿಕೆ ಸಾಧ್ಯ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ರಾಮನವಮಿ ಆಚರಣೆ ಹೇಗೆ?

ಚೈತ್ರ ಮಾಸದ ಪಾಡ್ಯದಿಂದ ಆರಂಭಿಸಿ ಒಂಬತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ. ಈ ದಿನದಂದು ಉಪವಾಸವನ್ನು, ಅಥವಾ ಫಲಾಹಾರವನ್ನು ಮಾತ್ರ ಸೇವಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕಗಳನ್ನು ಹಂಚುವ ಮೂಲಕ ಸೌಹಾರ್ದತೆಯನ್ನು ಮೆರೆಯುತ್ತಾರೆ.

ಕೆಲವು ಭಾಗಗಳಲ್ಲಿ ಸೀತಾ ಕಲ್ಯಾಣ ಮಾಡುವ ಪದ್ಧತಿಯೂ ಇದೆ . ಕೊನೆಯ ಮಾತು : ಶ್ರೀರಾಮಚಂದ್ರ ಹೇಳುವಂತೆ “ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮಃ” ಅಂದರೆ ‘ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ಕರ್ತವ್ಯ ‘ ಎಂದು ರಾಮನೇ ಹೇಳಿದ್ದಾನೆ. ಅಂತಹ ರಾಮ ನಾಮವನ್ನು ಭಜಿಸುತ್ತಾ, ರಾಮನ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ರಾಮನವಮಿಯನ್ನು ಆಚರಿಸೋಣ.
ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು!

ಇದನ್ನೂ ಓದಿ : Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?

Exit mobile version