Site icon Vistara News

Ram Mandir: ಮಂದಿರಕ್ಕೆ ಅಳವಡಿಸುವ 18 ಬಾಗಿಲು ಹೈದರಾಬಾದ್‌ನಲ್ಲಿ ಕೆತ್ತನೆ; ವಿಶೇಷ ಏನು?

Ram Mandir

ಅಯೋಧ್ಯೆ/ಹೈದರಾಬಾದ್:‌ ಅಯೋಧ್ಯೆಯಲ್ಲಿ (Ayodhya) ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರಕ್ಕೆ (Ram Mandir) 2024ರ ಜನವರಿ 22ರಂದು ಚಾಲನೆ ನೀಡಲಾಗುತ್ತಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ದೇಶದ ಸುಮಾರು 10-15 ಸಾವಿರ ಗಣ್ಯರು ಪಾಲ್ಗೊಳ್ಳುವ ಕಾರಣ ಅಯೋಧ್ಯೆಯಲ್ಲಿ ಅತ್ಯಾಧುನಿಕ ಮೂಲ ಸೌಕರ್ಯದ ಜತೆಗೆ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಇನ್ನು ಭವ್ಯ ರಾಮಮಂದಿರಕ್ಕೆ 18 ಬಾಗಿಲುಗಳನ್ನು (Ram Mandir Doors) ಅಳವಡಿಸಲಾಗುತ್ತಿದ್ದು, ಎಲ್ಲ ಬಾಗಿಲುಗಳು ಹೈದರಾಬಾದ್‌ನಲ್ಲಿ ತಯಾರಾಗಿವೆ ಎಂಬುದು ವಿಶೇಷವಾಗಿದೆ.

ಹೌದು, ಹೈದರಾಬಾದ್‌ನ ಅನುರಾಧಾ ಟಿಂಬರ್ಸ್‌ ಇಂಟರ್‌ನ್ಯಾಷನಲ್‌ ಎಂಬ ಕಂಪನಿಯೇ ರಾಮಮಂದಿರದ 18 ಬಾಗಿಲುಗಳನ್ನು ತಯಾರಿಸಿದೆ. ರಾಮಮಂದಿರದ ಗರ್ಭಗುಡಿಯ ಬಾಗಿಲು ಸೇರಿ 18 ಬಾಗಿಲುಗಳ ತಯಾರಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅವುಗಳನ್ನು ಅಯೋಧ್ಯೆಗೆ ರವಾನಿಸಲಾಗುತ್ತದೆ. ಗರ್ಭಗುಡಿಯ ಬಾಗಿಲು ಸೇರಿ 18 ಬಾಗಿಲುಗಳು 8 ಅಡಿ ಎತ್ತರ, 12 ಅಡಿ ಅಗಲ ಹಾಗೂ 6 ಇಂಚು ದಪ್ಪ ಇರಲಿವೆ ಎಂದು ಕಂಪನಿಯ ನಿರ್ದೇಶಕ ಶರತ್‌ ಬಾಬು ಮಾಹಿತಿ ನೀಡಿದ್ದಾರೆ.

ಬಾಗಿಲುಗಳ ವಿಶೇಷವೇನು?

ತೇಗದ ಮರಗಳ ತುಂಡುಗಳಿಂದ ರಾಮಮಂದಿರದ ಬಾಗಿಲುಗಳನ್ನು ತಯಾರಿಸಲಾಗಿದೆ. ತಮಿಳುನಾಡಿನ ನುರಿತ ಕುಶಲಕರ್ಮಿಗಳು ಬಾಗಿಲುಗಳನ್ನು ಕೆತ್ತಿದ್ದಾರೆ. ನಾಗರ ಶೈಲಿಯಲ್ಲಿ ಬಾಗಿಲುಗಳನ್ನು ಕೆತ್ತಲಾಗಿದ್ದು, ಅವುಗಳ ಮೇಲೆ ಕಮಲ, ನವಿಲು ಸೇರಿ ಹಲವು ಪಕ್ಷಿಗಳ ಚಿತ್ರಗಳನ್ನು ಕೆತ್ತಲಾಗಿದೆ. ನಾಗರ ಶೈಲಿಯು ಮೂರನೇ ಶತಮಾನದ ಉತ್ತರ ಭಾರತದ ಪ್ರಮುಖ ಕೆತ್ತನೆ ಶೈಲಿಯಾಗಿದೆ. ಎಲ್ಲ ಬಾಗಿಲುಗಳಿಗೆ ಚಿನ್ನದ ಲೇಪನ ಇರಲಿದೆ ಎಂದು ಶರತ್‌ ಬಾಬು ತಿಳಿಸಿದ್ದಾರೆ.

ರಾಜಸ್ಥಾನದ ಅಮೃತಶಿಲೆ ಬಳಕೆ

ರಾಮಮಂದಿರ ನಿರ್ಮಾಣಕ್ಕೆ ರಾಜಸ್ಥಾನದ ಮಕ್ರಾನ ಅಮೃತಶಿಲೆ, ಪಿಂಕ್‌ ಸ್ಯಾಂಡ್‌ಸ್ಟೋನ್‌, ತಮಿಳುನಾಡು ಹಾಗೂ ತೆಲಂಗಾಣದ ಗ್ರಾನೈಟ್‌ ಸ್ಟೋನ್‌, ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಸಿಗುವ ಬಣ್ಣದ ಮಾರ್ಬಲ್‌ಗಳನ್ನು ಬಳಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಸ್ಥಾನದ ಭರತ್‌ಪುರದಿಂದ 4.7 ಲಕ್ಷ ಕ್ಯೂಬಿಕ್‌ ಫೀಟ್‌ ಪಿಂಕ್‌ ಸ್ಯಾಂಡ್‌ಸ್ಟೋನ್‌, 17 ಸಾವಿರ ಬಿಳಿ ಅಮೃತ ಶಿಲೆಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version