Site icon Vistara News

Rama Mandir : ಮಂದಿರ ಉದ್ಘಾಟನೆ ದಿನ ರಜೆ ಹಾಕಿದ್ರೆ 1000 ರೂ. ದಂಡ; ಮಕ್ಕಳಿಗೆ ಕ್ರಿಶ್ಚಿಯನ್‌ ಶಾಲೆ ಫತ್ವಾ!

Chikkamagaluru-Christian-School

ಚಿಕ್ಕಮಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Rama Mandir) ಲೋಕಾರ್ಪಣೆ ನಡೆಯುವ ದಿನ ದೇಶದ ಎಲ್ಲ ಕಡೆ ಕಾರ್ಯಕ್ರಮಗಳು ಆಯೋಜನೆಯಾಗಿವೆ. ದೇವಸ್ಥಾನಗಳಲ್ಲಿ ಭಜನೆ, ಪೂಜೆ, ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆಗಳು ನಡೆಯಲಿವೆ. ಇದನ್ನೆಲ್ಲ ನಡೆಸಲು ಅನುಕೂಲವಾಗುವಂತೆ ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ, ಖಾಸಗಿ ಸಂಸ್ಥೆಗಳಿಗೆ ರಜೆ ಕೊಡಿ ಎಂಬ ಬೇಡಿಕೆ (Demand for public Holiday) ಇದೆ. ಇದಕ್ಕೆ ಸಂಬಂಧಿಸಿ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಅದರ ನಡುವೆ ಚಿಕ್ಕಮಗಳೂರಿನ ‌ ಕ್ರಿಶ್ಚಿಯನ್‌ ಶಾಲೆಯೊಂದರ (Christian School in Chikkamagaluru) ನಡೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ರಾಮಮಂದಿರ ಉದ್ಘಾಟನೆ ದಿನ ಯಾರೂ ಶಾಲೆಗೆ ರಜೆ ಹಾಕುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಸೋಮವಾರ ಶಾಲೆಗೆ ರಜೆ ಹಾಕಿದರೆ 1000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಚಿಕ್ಕಮಗಳೂರಿನ ಶಾಲೆಯೊಂದರ ಆಡಳಿತ ಮಂಡಳಿ ಮಕ್ಕಳಿಗೆ ಎಚ್ಚರಿಕೆ ನೀಡಿದೆ.

ಚಿಕ್ಕಮಗಳೂರು ನಗರದ ಸೆಂಟ್ ಜೋಸೆಫ್ ಶಾಲೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಗೈರು ಹಾಜರಿಗೆ ದುಡ್ಡಿನ ದಂಡ ವಿಧಿಸುವ ಸೆಂಟ್ ಜೋಸೆಫ್ ಶಾಲೆ ವಿರುದ್ಧ ಬಜರಂಗದಳ, ವಿ.ಎಚ್.ಪಿ. ಪ್ರತಿಭಟನೆಗೆ ಇಳಿದಿವೆ.

ಶನಿವಾರ ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಯ ಮುಂದೆ ಜಮಾವಣೆಗೊಂಡ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಈ ಆದೇಶವನ್ನು ಹಿಂದೆ ಪಡೆಯದಿದ್ದರೆ ಚೆನ್ನಾಗಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ʻʻರಾಮಮಂದಿರ ಉದ್ಘಾಟನೆ ನೋಡಲು ಆಸೆ ಇರುವ ಮಕ್ಕಳು ಶಾಲೆಗೆ ರಜೆ ಹಾಕಲಿ, ಲೈವ್ ನೋಡಲಿ. ಅದನ್ನು ತಡೆಯುವ ಅಧಿಕಾರ ಶಾಲೆಯ ಆಡಳಿತ ಮಂಡಳಿಗೆ ಇಲ್ಲʼʼ ಎಂದು ಹೇಳಿರುವ ಹಿಂದು ಸಂಘಟನೆಗಳ ಕಾರ್ಯಕರ್ತರು, ಜಿಲ್ಲೆಯ ಯಾವುದೇ ಶಾಲೆಯ ಯಾವುದೇ ಮಕ್ಕಳಿಗೆ ದಂಡ ಹಾಕಿದ್ರೆ ಚೆನ್ನಾಗಿರಲ್ಲ, ಎಂದಿದ್ದಾರೆ.

ಶನಿವಾರ ನವೋದಯ ಶಾಲೆಗಳ ಪ್ರವೇಶಕ್ಕೆ ಸಂಬಂಧಿಸಿ ಪರೀಕ್ಷೆ ಇರುವುದರಿಂದ ಸೈಂಟ್‌ ಜೋಸೆಫ್‌ ಶಾಲೆಗೆ ರಜೆ ನೀಡಲಾಗಿದೆ. ಬಜರಂಗ ದಳ, ವಿ.ಎಚ್.ಪಿ. ಕಾರ್ಯಕರ್ತರು ಶಾಲೆಯ ಮುಂದೆ ಜಮಾಯಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಧಾವಿಸಿದ್ದಾರೆ. ಸೆಂಟ್ ಜೋಸೆಫ್ ಶಾಲೆಗೆ ಎಎಸ್ಪಿ ಕೃಷ್ಣಮೂರ್ತಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಶಾಲೆಗಳಿಗೆ ರಜೆ ಕೊಡಬೇಕು ಎನ್ನುವುದು ನಮ್ಮ ಮೊದಲ ಬೇಡಿಕೆ, ಅದು ಸಾಧ್ಯವಾಗದೆ ಇದ್ದರೆ ಶಾಲೆಗಳಲ್ಲಿ ಎಲ್‌ಇಡಿ ಹಾಕಿ ಮಂದಿರ ಲೋಕಾರ್ಪಣೆಯನ್ನು ನೋಡುವ ವ್ಯವಸ್ಥೆ ಮಾಡಬಹುದು. ಇಲ್ಲವೇ ಯಾರಿಗೆಲ್ಲ ನೋಡಲು ಮನಸಿದೆಯೇ ಅವರು ರಜೆ ಹಾಕಿ ನೋಡಲಿ. ಅದನ್ನು ಬಿಟ್ಟು ಶಾಲೆಗೆ ಬರದಿದ್ದರೆ ದಂಡ ವಿಧಿಸುತ್ತೇವೆ ಎಂಬ ನಿಲುವು ನಡೆಯುವುದಿಲ್ಲ ಎಂದು ಹೇಳುವ ಮೂಲಕ ಇಡೀ ಜಿಲ್ಲೆಯಲ್ಲಿ ಇಂಥ ಕೃತ್ಯಗಳು ನಡೆಯಬಾರದು ಎಂದು ವಿಹಿಂಪ ಹಾಗೂ ಬಜರಂಗ ದಳ ಎಚ್ಚರಿಸಿವೆ.

ಈ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಜನವರಿ 22ರಂದು ಶಾಲೆ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡುವಂತೆ ಮತ್ತೊಮ್ಮೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Exit mobile version