ಕೊಡಗು/ಚಿಕ್ಕಬಳ್ಳಾಪುರ: ಹಿಂದೂಗಳಿಗೆ ಕೇವಲ ರಾಮ ಮಾತ್ರ ದೇವರಾ (Rama Mandir)? ಅಯೋಧ್ಯೆಯಲ್ಲಿ ಕಟ್ಟುವುದು ಮಾತ್ರ ರಾಮ ಮಂದಿರವೇ?: ಇಂಥ ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ ಕಾಂಗ್ರೆಸ್ನ ಇಬ್ಬರು ಪ್ರಮುಖ ನಾಯಕರಾದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (Dr MC Sudhakar).
ಕಾಂಗ್ರೆಸ್ನವರಿಗೆ ರಾಮ ಮಂದಿರ ಬೇಕಾಗಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರ ಕೆಲವು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಚಿವರು ಹಿಂದುಗಳಿಗೆ ರಾಮನನ್ನು ಹೊರತುಪಡಿಸಿಯೂ ಹಲವು ದೇವರಿದ್ದಾರೆ, ರಾಮ ಮಂದಿರದ ಅಯೋಧ್ಯೆಯದ್ದು ಮಾತ್ರವಲ್ಲ, ಅಲ್ಲಿ ಕಟ್ಟುವ ರಾಮ ಮಂದಿರಕ್ಕಿಂತ ನಮ್ಮೂರಿನಲ್ಲಿ ಕಟ್ಟುವ ರಾಮ ಮಂದಿರವೇ ಶ್ರೇಷ್ಠ ಎಂಬ ವಾದವನ್ನು ಮಂಡಿಸಿದ್ದಾರೆ.
ರಾಮ ಮಾತ್ರ ದೇವರಲ್ಲ ಎಂದ ಮಧು ಬಂಗಾರಪ್ಪ
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕಾಂಗ್ರೆಸ್ನವರಿಗೆ ರಾಮ ಮಂದಿರ ಬೇಕಾಗಿಲ್ಲ ಎಂಬ ಮಾಜಿ ಸಿಏಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಖಂಡಿಸಿದರು.
ʻʻಬಿಜೆಪಿಯವರಿಗೆ ಚುನಾವಣೆ ಬಂದಾಗ ರಾಮನ ನೆನಪಾಗುತ್ತದೆ. ಭಾವನಾತ್ಮಕವಾಗಿ ಮತ ಪಡೆಯುವ ಯತ್ನ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಪುಲ್ವಾಮಾ ಬಾಂಬ್ ಸ್ಫೋಟದ ವಿಷಯವನ್ನು ತೆಗೆದುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ರಾಮನನ್ನು ಮುಂದಿಟ್ಟುಕೊಂಡಿದ್ದಾರೆ. ಇದು ಅವರಿಗೆ ತಿರುಗುಬಾಣವಾಗಲಿದೆʼʼ ಎಂದು ಮಧು ಬಂಗಾರಪ್ಪ ಅವರು ಹೇಳಿದರು.
ʻʻಹಿಂದುಗಳಿಗೆ ಕೇವಲ ರಾಮ ಮಾತ್ರ ಇರುವುದಾ? ಕೃಷ್ಣ ಇಲ್ವಾ? ಚೌಡಮ್ಮ ಇಲ್ವಾ? ಬೀರಮ್ಮ ಇಲ್ವಾ? ಬೇರೆ ದೇವರುಗಳು ಇಲ್ವಾʼʼ ಎಂದು ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ.
ʻಬಿಜೆಪಿಯವರೆಲ್ಲಾ ಸ್ವಾರ್ಥಿಗಳು. ಡುಪ್ಲಿಕೇಟ್ ಹಿಂದುಗಳು. ಮನುಷ್ಯತ್ವ ಇಟ್ಟುಕೊಂಡು ಹೋದರೆ ಅವರು ಒಳ್ಳೆಯ ಹಿಂದು ಆಗುತ್ತಾರೆʼʼ ಎಂದು ಹೇಳಿದ ಮಧು ಬಂಗಾರಪ್ಪ ಅವರು, ʻʻಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ನಡಿಯತಲ್ಲ. ಆಗ ರಾಮ ಎಲ್ಲಿ ಹೋಗಿದ್ದ ಅಂತೆ? ನಮಗೆ ಆರ್ಶೀವಾದ ಆಗಿದೆಯಲ್ವಾ? ರಾಮನ ಶಾಪ ಯಾರಿಗೆ ಹೋಯಿತು?ʼʼ ಎಂದು ಪ್ರಶ್ನಿಸಿದರು.
ʻʻಸಿದ್ದರಾಮಯ್ಯ ಸರಕಾರದ ಭಾಗ್ಯದಿಂದ ಬಿಜೆಪಿ ಕಾರ್ಯಕರ್ತರ ಬಾಳು ಬಂಗಾರವಾಗಿದೆ. ನಾವು ಇಲ್ಲಿಂದಲೇ ರಾಮನಿಗೆ ಸೆಲ್ಯೂಟ್ ಹೊಡೆಯುತ್ತೇವೆ. ನಾವು ಆ ಕೆಟಗರಿಯವರು. ಅವರು ಅಲ್ಲಿ ಹೋಗಲಿ, ಅವರಿಗೆ ರಾಮ ಶಾಪ ಕೊಡ್ತಾನೆ. ನಾವು ಇಲ್ಲಿಂದ ಕೇಳಿದರೆ ಸಂಪೂರ್ಣ ಸಪೋರ್ಟ್ ಕೊಡ್ತಾನೆʼʼ ಎಂದು ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ : Rama Mandir : ಅಯೋಧ್ಯೆಗೆ ಹೋಗಿಯೇ ಪೂಜೆ ಮಾಡಬೇಕಾ? ನಮ್ಮೂರ ರಾಮ ದೇವರಲ್ವಾ?; ರಾಜಣ್ಣ ಪ್ರಶ್ನೆ
ಅಲ್ಲಿ ರಾಮ ಮಂದಿರ ಆದ್ರೆ ಏನುಪಯೋಗ ಎಂದ ಡಾ. ಸುಧಾಕರ್
ʻʻನಮ್ಮೂರಲ್ಲಿ ರಾಮ ಮಂದಿರ ಸ್ಥಾಪನೆ ಆದ್ರೆ ನಾವ್ ಹಣ ಕೊಡ್ತೀವಿ. ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆ ಆದರೆ ನಮಗೇನು ಉಪಯೋಗʼʼ ಎಂದು ಹೇಳುವ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ʻʻಅಯೋಧ್ಯೆಯಲ್ಲಿ ಒಂದೇನಾ ರಾಮ ಮಂದಿರ ಇರೋದಾ? ಬನ್ನಿ ನಮ್ಮೂರಲ್ಲಿ ಎಷ್ಟಿದ್ದಾವೆ ತೋರಿಸ್ತೀನಿ. ಚಿಂತಾಮಣಿಯಲ್ಲಿ ಹಲವು ರಾಮ ಮಂದಿರಗಳನ್ನು ನಮ್ಮ ತಾತ ನಿರ್ಮಿಸಿದ್ದಾನೆ. ನಾವು ರಾಮ ಮಂದಿರಕ್ಕೆ ಹಣ ಕೊಟ್ಟಿದ್ದೇವೆ. ಚರ್ಚ್ಗೆ ಕೊಟ್ಟಿದ್ದೇವೆ, ಮಸೀದಿಗೂ ಹಣ ಕೊಟ್ಡಿದ್ದೇವೆʼʼ ಎಂದು ಹೇಳಿದ ಅವರು, ನಮ್ಮ ಮನೆಯ ಬಳಿ, ಊರಿನಲ್ಲಿ ರಾಮ ಮಂದಿರ ಇದ್ರೆ ಎಲ್ಲರೂ ದೇವಸ್ಥಾನಕ್ಕೆ ಬರ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಹೇಳಿದರು.
ʻʻನಾವೆಲ್ಲರೂ ಹಿಂದುಗಳು. ಇದು ಜಾತ್ಯತೀತ ರಾಷ್ಟ್ರ. ನಾವೆಲ್ಲ ನಮ್ಮ ಜಾತಿ, ನಮ್ಮ ಧರ್ಮದ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿರುವವರು. ನನ್ನ ಕೊರಳಲ್ಲಿ ವೆಂಕಟರಮಣ ಸ್ವಾಮಿ ಲಾಕೆಟ್ ಇದೆ.”” ಎಂದು ಹೇಳಿದ ಅವರು, ರಾಮ ಮಂದಿರ ವಿಚಾರದಲ್ಲಿ ನಮಗೆಲ್ಲರಿಗೂ ಸಹಮತ ಇದೆ, ಮುಚ್ಚಿ ಹೋಗಿದ್ದ ರಾಮ ಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ. ರಾಮ ಮಂದಿರ ಉದ್ಘಾಟನೆ ವಿಚಾರ ಎಲ್ಲರಿಗೂ ಸಂತೋಷ ಇದೆ ಎಂದು ಹೇಳಿದರು.
ʻʻರಾಮ ಮಂದಿರ ಉದ್ಘಾಟನೆಯ ದಿನ ರಜೆ ಘೊಷಣೆ ಮಾಡಬೇಕು ಅಂತ ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರವೂ ರಜೆ ಘೋಷಣೆ ಮಾಡಲಿʼʼ ಎಂದು ಆಗ್ರಹಿಸಿದ ಅವರು, ಉದ್ಘಾಟನೆ ದಿನ ರಾಜ್ಯದಲ್ಲಿ ಎಲ್ಲರೂ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಮನವಿ ಮಾಡಿದ್ದೇವೆ ಎಂದರು.
ʻʻನಮ್ಮ ಮುಜರಾಯಿ ಇಲಾಖೆ ಮಂತ್ರಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಜರಾಯಿ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಸೂಚಿಸಿದೆ. ಆದರೆ, ಬಿಜೆಪಿ ವಿನಾ ಕಾರಣ ಇದನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿದೆʼʼ ಎಂದು ಬಿಜೆಪಿ ವಿರುದ್ಧ ಸಚಿವ ಡಾ ಎಂ.ಸಿ ಸುಧಾಕರ್ ವಾಗ್ದಾಳಿ ನಡೆಸಿದರು.