ಬೆಂಗಳೂರು: ಹಿಂದೂಗಳು ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಅದೇ ರೀತಿ ಮುಸ್ಲಿಂ ಧರ್ಮದವರು ರಮ್ಜಾನ್ (Ramadan 2023) ಹಬ್ಬವನ್ನು ಎದುರು ನೋಡುತ್ತಿದ್ದಾರೆ. ಯುಗಾದಿ ದಿನವಾದ ಮಾ.22ರಂದೇ ರಮ್ಜಾನ್ ಕೂಡ ಆರಂಭವಾಗಲಿದ್ದು, ಅದಕ್ಕೆಂದು ಮುಸ್ಲಿಮರು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾರಂಭಿಸಿದ್ದಾರೆ. ಹಾಗಾದರೆ ಈ ಹಬ್ಬದ ವಿಶೇಷತೆಯೇನು? ಈ ಸಮಯದಲ್ಲಿ ಉಪವಾಸವನ್ನು ಏಕಾಗಿ ಮಾಡಲಾಗುತ್ತದೆ? ಎನ್ನುವ ಹಲವು ಪ್ರಶ್ನೆಗಳು ನಿಮ್ಮಲ್ಲಿರಬಹುದು. ಅದೆಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.
ಇದನ್ನೂ ಓದಿ: Attica Babu : ಅಟ್ಟಿಕಾ ಬಾಬು ತಂದಿಟ್ಟಿದ್ದ ಲೋಡ್‌ಗಟ್ಟಲೆ ರಂಜಾನ್-ಯುಗಾದಿ ಕಿಟ್ ಸೀಜ್ ಮಾಡಿದ ಪೊಲೀಸರು!
ಇಸ್ಲಾಂ ಕ್ಯಾಲೆಂಡರ್ ಪ್ರಕಾರ ವರ್ಷದ 9ನೇ ತಿಂಗಳು ರಮ್ಜಾನ್. ಇಸ್ಲಾಂ ಕ್ಯಾಲೆಂಡರ್ ಚಂದ್ರನ ಚಲನೆಯನ್ನು ಆಧರಿಸಿರುವುದರಿಂದಾಗಿ ಪ್ರತಿ ವರ್ಷ ರಮ್ಜಾನ್ ಬೇರೆ ಬೇರೆ ಸಮಯದಲ್ಲಿ ಬರುತ್ತದೆ. ಈ ವರ್ಷ ಮಾರ್ಚ್ 22ರಿಂದ ಏಪ್ರಿಲ್ 21ರವರೆಗೆ ರಮ್ಜಾನ್ ಇರಲಿದೆ.
ರಮ್ಜಾನ್ ತಿಂಗಳಲ್ಲಿ ಚಂದ್ರ ದರ್ಶನದ ಮಹತ್ವ
ಚಂದ್ರನ ದರ್ಶನವು ರಮ್ಜಾನ್ ತಿಂಗಳ ಆರಂಭ ಮತ್ತು ಅಂತ್ಯವನ್ನು ಸೂಚಿಸುತ್ತದೆ. ರಮ್ಜಾನ್ ಉಪವಾಸ ಆರಂಭವಾಗುವುದಕ್ಕೂ ಮೊದಲು ಮುಸ್ಲಿಮರು ಮತ್ತು ಅವರ ಧಾರ್ಮಿಕ ಗುರುಗಳು ರಾತ್ರಿ ವೇಳೆ ಅರ್ಧ ಚಂದ್ರನ ದರ್ಶನ ಮಾಡುತ್ತಾರೆ. ಇದು ಮುಸ್ಲಿಂ ಧರ್ಮದಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ರಮ್ಜಾನ್ ತಿಂಗಳಿಗೂ ಮೊದಲು ಬರುವುದು ಶಾಬಾನ್ ತಿಂಗಳು. ಶಾಬಾನ್ ತಿಂಗಳ 29ನೇ ದಿನದಂದು ಚಂದ್ರನನ್ನು ನೋಡುವ ಮೂಲಕ ರಮ್ಜಾನ್ ಆರಂಭಿಸಲಾಗುತ್ತದೆ.
ಉಪವಾಸ ಮಾಡುವುದು ಏಕೆ?
ರಮ್ಜಾನ್ ಎಂದಾಕ್ಷಣ ಅಲ್ಲಿ ಉಪವಾಸವಿರುತ್ತದೆ. ಈ ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯದ ನಂತರ ಮತ್ತು ಸೂರ್ಯ ಮುಳುಗುವುದಕ್ಕೂ ಮೊದಲು ಊಟವನ್ನಾಗಲೀ ಅಥವಾ ಪಾನೀಯವನ್ನಾಗಲೀ ಸೇವಿಸುವುದಿಲ್ಲ. ಈ ಉಪವಾಸವನ್ನು ದೇವರ ಬಗೆಗಿನ ಬಂಬಿಕೆಯ ಪ್ರತಿಬಿಂಬ ಎಂದು ನಂಬಲಾಗುತ್ತದೆ. ಹಾಗೆಯೇ ಹೀಗೆ ಮಾಡುವುದರಿಂದ ದೇವರ ಮೇಲಿನ ಭಕ್ತಿ ಇನ್ನಷ್ಟು ಹೆಚ್ಚುತ್ತದೆ ಎನ್ನಲಾಗುತ್ತದೆ. ಹಾಗೆಯೇ ಜೀವನದಲ್ಲಿ ಸಹಾನುಭೂತಿ, ತಾಳ್ಮೆ ಹೆಚ್ಚಿಸಿಕೊಳ್ಳಲು, ದಾನ ಕಾರ್ಯ ಹೆಚ್ಚಿಸಲು, ಕೆಟ್ಟ ಅಭ್ಯಾಸ ನಿಲ್ಲಿಸುವುದಕ್ಕೆ ಈ ಉಪವಾಸ ಒಂದು ರೀತಿಯ ಜ್ಞಾಪನೆಯಿದ್ದಂತೆ.
ಇದನ್ನೂ ಓದಿ: Ramadan 2023: ರಂಜಾನ್ ವೇಳೆ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿದ ಮುಸ್ಲಿಂ ಮುಖಂಡರು
ಪ್ರತಿ ದಿನ ಬೆಳಗ್ಗೆ ಸೂರ್ಯೋದಕ್ಕೂ ಮೊದಲು ಸುಹೂರ್‌ನಿಂದ ದಿನ ಆರಂಭವಾದರೆ ರಾತ್ರಿ ಸೂರ್ಯ ಮುಳುಗಿದ ನಂತರ ಇಫ್ತಾರ್ ಊಟದೊಂದಿಗೆ ದಿನ ಮುಗಿಸಲಾಗುತ್ತದೆ. ಇದು ರಮ್ಜಾನ್ ಹಬ್ಬದ ವಿಶೇಷತೆಯಾಗಿದೆ.