ಡಾ. ರವಿಕಿರಣ ಪಟವರ್ಧನ, ಶಿರಸಿ
ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಓಡಾಡಿದ 15 ಪುಣ್ಯ ಕ್ಷೇತ್ರಗಳನ್ನು ಒಮ್ಮೆಲೆ ದರ್ಶಿಸಲು ಅವಕಾಶ ಮಾಡಿಕೊಡುವ “ರಾಮಾಯಣ ಸರ್ಕ್ಯೂಟ್” ಎಂಬ ಯೋಜನೆಯನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆ ರೂಪಿಸಿರುವಂತೆಯೇ ನಮ್ಮ ರಾಜ್ಯದಲ್ಲಿಯೂ “ಮಹಾದೇವ ಆತ್ಮಲಿಂಗ (Atmalinga) ದರ್ಶನ ಸರ್ಕ್ಯೂಟ್ʼʼ ರೂಪಿಸಲು ಅವಕಾಶವಿದೆ. ಇದರಿಂದ ಶಿವನ ಭಕ್ತರು ಒಮ್ಮೆಗೆ ಆತ್ಮಲಿಂಗಕ್ಕೆ ಸಂಬಂಧಿಸಿದ ಪಂಚ ದೇಗುಲಗಳಿಗೆ ತರಳಿ ಮಹಾಬಲೇಶ್ವರದ ದರ್ಶನ ಮಾಡಬಹುದಾಗಿದೆ.
ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗ ದರ್ಶನ ಮಾಡಿದವರು ಅದೇ ದಿನ ಸಂಜೆಯೊಳಗೆ ಕಾರವಾರದ ಸಜ್ಜೇಶ್ವರ, ಕುಮಟಾ ತಾಲೂಕಿನ ಧಾರೇಶ್ವರ, ಹೊನ್ನಾವರ ತಾಲೂಕಿನ ಗುಣವಂತೇಶ್ವರ, ಭಟ್ಕಳ ತಾಲೂಕಿನ ಮುರ್ಡೇಶ್ವರ ಈ ಪಂಚ ಕ್ಷೇತ್ರಗಳ ದರ್ಶನ ಪಡೆದರೆ ಸಿದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಬಹುತೇಕ ಭಕ್ತರಿಗೆ ಸದ್ಯ ಒಂದೇ ದಿನ ಈ ಪಂಚ ಕ್ಷೇತ್ರಗಳ ದರ್ಶನ ಸಾಧ್ಯವಾಗುತ್ತಿಲ್ಲ. ಇದಕ್ಕೆ ವ್ಯವಸ್ಥೆ ಮಾಡಿ, ಪ್ರಚಾರ ಮಾಡಿದಲ್ಲಿ ಇಲ್ಲಿಯ ಪ್ರವಾಸೋದ್ಯಮಕ್ಕೂ ಬೂಸ್ಟ್ ದೊರೆಯಲಿದೆ.
ಪಂಚ ಕ್ಷೇತ್ರಗಳ ಇತಿಹಾಸವೇನು?
ಒಂದು ಬಾರಿ ರಾವಣ ಸುದೀರ್ಘ ತಪಸ್ಸಿನ ಮೂಲಕ ಪರಮೇಶ್ವರನನ್ನು ಮೆಚ್ಚಿಸಿ ಆತ್ಮಲಿಂಗವನ್ನು ನೀಡುವಂತೆ ಕೇಳಿಕೊಳ್ಳುತ್ತಾನೆ. ಆತನ ಬೇಡಿಕೆಯನ್ನು ಮನ್ನಿಸಿದ ಶಿವ, ಆತ್ಮಲಿಂಗವನ್ನು ದಾರಿ ಮಧ್ಯದಲ್ಲಿ ಎಲ್ಲಿಯೂ ಭೂಸ್ಪರ್ಷ ಮಾಡದಂತೆ ತಿಳಿಸಿ ಆತನಿಗೆ ನೀಡುತ್ತಾನೆ. ರಾವಣನಿಗೆ ಶಿವ ಆತ್ಮಲಿಂಗವನ್ನು ನೀಡಿದ ವಿಚಾರವನ್ನು ತಿಳಿದ ದೇವತೆಗಳು, ತನ ಬಲ ಹೆಚ್ಚಿ ಇನ್ನೇನು ಕೆಡುಕಾಗುವುದೋ ಎಂದು ಭಯಭೀತರಾಗುತ್ತಾರೆ. ಈ ಸಮಸ್ಯೆಗೆ ಮುಕ್ತಿ ಹಾಡುವಂತೆ ಶಿವ ಪುತ್ರ ಗಣೇಶನ ಮೊರೆ ಹೋಗುತ್ತಾರೆ. ದೇವತೆಗಳ ಕೂಗನ್ನಾಲಿಸಿದ ಗಣೇಶ, ಬಾಲ ಗಣಪತಿಯಾಗಿ ಅವರ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡುತ್ತಾನೆ. ಇತ್ತ ಆತ್ಮಲಿಂಗವನ್ನು ಹೊತ್ತುನಡೆದ ಮಹಾ ಬ್ರಾಹ್ಮಣ ರಾವಣನಿಗೆ ಸಂಧ್ಯಾವಂದನೆಗೆ ಸಮಯವಾಗುತ್ತದೆ.
ಅದೇ ಸಮಯದಲ್ಲಿ ಬಾಲ ಗಣಪತಿ ಅದೇ ಹಾದಿಯಲ್ಲಿ ಬರುತ್ತಾನೆ. ರಾವಣನೂ ಆತ್ಮಲಿಂಗವನ್ನು ಹಿಡಿದು ನಿಲ್ಲುವುದಕ್ಕಾಗಿ ಜನರನ್ನು ಹುಡುಕು ತ್ತಿರುತ್ತಾನೆ. ಗಣಪತಿಯನ್ನು ಕಂಡ ರಾವಣ ಆತನಲ್ಲಿ ಆತ್ಮಲಿಂಗವನ್ನು ನೀಡಿ ತಾನು ಆದಷ್ಟು ಬೇಗ ಸಂಧ್ಯಾವಂದನೆ ಮುಗಿಸಿ ಬರುವುದಾಗಿ ತಿಳಿಸುತ್ತಾನೆ. ಅದಕ್ಕೊಪ್ಪಿದ ಬಾಲ ಗಣಪ ತಾನು ಹತ್ತು ಎಣಿಸುವುದರೊಳಗಾಗಿ ಇಲ್ಲಿರಬೇಕು ಇಲ್ಲವಾದಲ್ಲಿ ಆತ್ಮಲಿಂಗವನ್ನು ಇಲ್ಲಿಯೇ ಇಟ್ಟು ಹೋಗುವುದಾಗಿ ತಿಳಿಸುತ್ತಾನೆ. ಅದಕ್ಕೊಪ್ಪಿದ ರಾವಣ ಸಂಧ್ಯಾವಂದನೆಗೆಂದು ನೀರಿಗಿಳಿಯುತ್ತಾನೆ.
ಇತ್ತ ಗಣಪತಿ ರಾವಣನಿಗೆ ಕೇಳಿಸುವಂತೆ ಸಂಖ್ಯೆಗಳನ್ನು ಎಣಿಸುತ್ತಾನೆ. ಉಪಾಯವಾಗಿ ಕೊನೆಯಲ್ಲಿ ಸಂಖ್ಯೆಯನ್ನು ವೇಗವಾಗಿ ಎಣಿಸಿ ಹತ್ತು ಎನ್ನುತ್ತಾನೆ. ಲಿಂಗವನ್ನು ನೆಲದಲ್ಲಿಟ್ಟು ಅಲ್ಲಿಂದ ತೆರಳುತ್ತಾನೆ. ರಾವಣ ನೀರಿನಿಂದ ಮೇಲೆ ಬಂದು ನೋಡುತ್ತಾನೆ. ಆತ್ಮಲಿಂಗ ಅಲ್ಲಿಯೇ ಪ್ರತಿಷ್ಠಾಪನೆಯಾಗಿದೆ. ಆ ಕ್ಷೇತ್ರವೇ ಗೋಕರ್ಣ. ಆಗ ಪರಮೇಶ್ವರನ ಪರಮಭಕ್ತನಾದಂತಹ ರಾವಣ ಈ ಆತ್ಮ ಲಿಂಗವನ್ನು ಎತ್ತಲು ಪ್ರಯತ್ನಿಸುತ್ತಾನೆ, ಆದರೆ ಸಾಧ್ಯವಾಗುವುದಿಲ್ಲ. ಮಹಾಬಲಶಾಲಿಯಾದ ರಾವಣನ ಪ್ರಯತ್ನದಿಂದಾಗಿ ಕೈಗೆ ಆತ್ಮಲಿಂಗದ ಭಾಗಗಳನ್ನು ಕಾರವಾರದ ಶೇಜವಾಡ, ಕುಮಟಾದ ಧಾರೇಶ್ವರ, ಹೊನ್ನಾವರದ ಗುಣವಂತೆ ಮತ್ತು ಮುರುಡೇಶ್ವರದಲ್ಲಿ ಎಸೆಯುತ್ತಾನೆ. ಹೀಗಾಗಿ ಈ ಐದು ಕ್ಷೇತ್ರಗಳಿಗೂ ಆತ್ಮಲಿಂಗಕ್ಕೂ ಸಂಬಂಧವಿದೆ.
ಇತಿಹಾಸ ಪ್ರಸಿದ್ಧ ಸ್ಥಳ
ನಮ್ಮ ಭಾರತ ದೇಶದಲ್ಲಿನ ಅತ್ಯಂತ ಪ್ರಾಚೀನವಾದ ಶೈವ ಕ್ಷೇತ್ರಗಳಲ್ಲಿ ಗೋಕರ್ಣ ಕೂಡ ಒಂದು. ಪವಿತ್ರವಾದ ಯಾತ್ರಾಸ್ಥಳಗಳಾದ ವಾರಣಾಸಿ ಹಾಗೂ ರಾಮೇಶ್ವರದಷ್ಟೇ ಮಹತ್ವ ಪಡೆದಿದೆ.
ಗೋಕರ್ಣ ಕ್ಷೇತ್ರದ ಸುತ್ತ ಅರೇಬಿಯಾ ಸಮುದ್ರವಿದ್ದು, ಪ್ರಕೃತಿ ರಮಣೀಯತೆಯಿಂದ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಪುಣ್ಯ ಕ್ಷೇತ್ರ ರಾಮಾಯಾಣ ಹಾಗೂ ಮಹಾ ಭಾರತದಲ್ಲಿಯೂ ಉಲ್ಲೇಖಗೊಂಡಿವೆ. ಈ ರೀತಿಯ ಮಹತ್ವದ ದೇವಾಲಯ ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ವಿಷಯ. ಆದರೆ ವಾರಣಾಸಿ ಹಾಗೂ ರಾಮೇಶ್ವರದಷ್ಟು ಈ ಕ್ಷೇತ್ರ ಪ್ರಚಾರ ಪಡೆದಿಲ್ಲ.
ಭೋಲೆನಾಥನ ಈ ಆತ್ಮಲಿಂಗದ ಪಂಚ ಕ್ಷೇತ್ರಗಳ ಪ್ರವಾಸವನ್ನು ಶೇಜವಾಡನಿಂದ ಪ್ರಾರಂಭಿಸಿ ಗೋಕರ್ಣ, ಗುಣವಂತೆ, ಧಾರೇಶ್ವರ, ಮುರುಡೇಶ್ವರ ಹೀಗೆ ಒಟ್ಟು ಐದು ಕ್ಷೇತ್ರಗಳಿಗೆ ಭೇಟಿ ನೀಡಲು 150 ಕಿಲೋ ಮೀಟರ್ ಪ್ರಯಾಣಿಸಬೇಕಾಗುತ್ತದೆ. ಈ ಕೆಲಸವನ್ನು ಮಾಡಲು “ಆತ್ಮಲಿಂಗ ಸರ್ಕ್ಯೂಟ್ʼʼ ರೂಪಿಸುವುದು ಬಹಳ ಅವಶ್ಯವಾಗಿದೆ.
ಪಂಚ ಆತ್ಮಲಿಂಗ ಕ್ಷೇತ್ರಗಳು
1. ಗೋಕರ್ಣ
ಭೂ ಕೈಲಾಸ, ಪರಶುರಾಮ ಭೂಮಿ, ಶ್ರೀ ಕ್ಷೇತ್ರ ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ. ಕಾಶಿ, ರಾಮೇಶ್ವರದಷ್ಟೇ ಪವಿತ್ರ ಸ್ಥಳ ಎಂದು ಭಕ್ತರು ಭಾವಿಸುತ್ತಾರೆ. ಕಡಲತೀರದ ಈ ಸ್ಥಳ ಸುಂದರವಾಗಿದೆ.
2. ಶೆಜ್ಜೇಶ್ವರ
ಕಾರವಾರಕ್ಕೆ ಸಮೀಪದ ಶೇಜವಾಡದ ಶೆಜ್ಜೇಶ್ವರ. ಶಿವನ ಆತ್ಮಲಿಂಗದಿಂದ ರೂಪುತಳೆದ ಪಂಚಲಿಂಗೇಶ್ವರಗಳಲ್ಲಿ ಶೇಜವಾಡದ ಶೆಜ್ಜೇಶ್ವರನೇ ಪ್ರಥಮ ಲಿಂಗವೆಂದು ಹೇಳಲಾಗುತ್ತದೆ. ಹೀಗಾಗಿ ಶೇಜವಾಡವು ಭಕ್ತರ ಪಾಲಿಗೆ ಗೋಕರ್ಣದಷ್ಟೇ ಪವಿತ್ರ ಕ್ಷೇತ್ರವಾಗಿದೆ. ಸಂಪೂರ್ಣ ಕಲ್ಲಿನಿಂದಲೇ ನಿರ್ಮಾಣವಾಗಿರುವ ಗರ್ಭಗುಡಿಯಲ್ಲಿ ಅಂದಾಜು 7 ಅಡಿ ಎತ್ತರದ ಲಿಂಗವಿದೆ. ಆರಂಭದಲ್ಲಿ ಶೆಜ್ಜೇಶ್ವರನನ್ನು ಸಂಪುಟೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಲಿಂಗದ 20 ಅಡಿ ಆಳದಲ್ಲಿ ಆತ್ಮಲಿಂಗದ ಭಾಗವಿದೆ. 20 ಅಡಿ ಕೆಳಗಿಳಿಯಲು ಮೆಟ್ಟಿಲುಗಳೂ ಇವೆ.
3. ಮುರುಡೇಶ್ವರ
ಗೋಕರ್ಣದ ಸುತ್ತಮುತ್ತಲಿನ ಪಂಚಲಿಂಗಂ ದೇವಾಲಯಗಳಲ್ಲಿ ಮುರುಡೇಶ್ವರ ದೇವಾಲಯ ಕೂಡ ಒಂದು. ಕಂಡುಕಾಗಿರಿ ಶಿಖರದಲ್ಲಿರುವ ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯವು ಮೂರು ಕಡೆಗಳಿಂದಲೂ ಸಮುದ್ರದಿಂದ ಸುತ್ತುವರೆದಿದೆ. ಶಿವನಿಗೆ ಅರ್ಪಿತವಾದ 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ ಈ ದೇವಾಲಯದಲ್ಲಿ ನಾವು ಕಾಣಬಹುದು. ಶಿವನ ದೈತ್ಯ ವಿಗ್ರಹವು ಅತ್ಯಂತ ಜನಪ್ರಿಯವಾಗಿದೆ. ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರ ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ ಇದು ಎಂದು ಹೇಳಲಾಗುತ್ತದೆ.
ರಾಜ ಗೋಪುರ ಎಂದರೆ ‘ಕಿಂಗ್ ಆಫ್ ಟವರ್ಸ್’ ಮುರುಡೇಶ್ವರದ ಮತ್ತೊಂದು ಪ್ರಮುಖ ಆಕರ್ಷಣೆ. ರಾಜ ಗೋಪುರದಲ್ಲಿ 20 ಮಹಡಿಗಳಿದ್ದು, ಜನರು ಲಿಫ್ಟ್‌ಗಳನ್ನು ಬಳಸುವ ಮೂಲಕ ಗೋಪುರದ ಮೇಲ್ಭಾಗವನ್ನೂ ತಲುಪಬಹುದು. ಗೋಪುರದ ಕೊನೆಯ ಮಹಡಿಯಲ್ಲಿ ನಿಂತು ನೋಡಿದರೆ ನಾವು ಮುರುಡೇಶ್ವರದ ಸಂಪೂರ್ಣ ಸೌಂದರ್ಯವನ್ನು ಸವಿಯಬಹುದು. ಗೋಪುರದ ತುದಿಗೆ ಹೋಗುತ್ತಿದ್ದಂತೆ ಆಕಾಶದಲ್ಲಿ ಹಾರಾಡುತ್ತಿರುವ ಅನುಭವವಾಗುತ್ತದೆ. ಅತಿ ದೊಡ್ಡ ಶಿವನ ಪ್ರತಿಮೆಯೂ ಕೂಡ ಹತ್ತಿರದಲ್ಲಿರುವಂತೆ ಕಾಣುತ್ತದೆ.
4. ಸಿದ್ಧಿಪ್ರದಾಯಕ ಗುಣವಂತೆ ಶಭುಲಿಂಗೇಶ್ವರ
ಹೊನ್ನಾವರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊನ್ನಾವರ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿ ಈ ಶಂಭುಲಿಂಗೇಶ್ವರ ದೇವಸ್ಥಾನವಿದ್ದು. “ಗುಣವಂತೇಶ್ವರʼʼ ಎಂದೇ ಪ್ರಸಿದ್ಧಿ ಪಡೆದಿದೆ. ಗುಣವಂತೆಯ ಶಂಭುಲಿಂಗೇಶ್ವರ ಅಭಿಷೇಕ ಪ್ರಿಯ. ದೇವರಿಗೆ ಅಭಿಷೇಕ ಮಾಡಿಸಿದರೆ ಕಾರ್ಯ ಸಿದ್ಧ್ದಿಯಾಗುತ್ತದೆ ಎಂಬ ನಂಬಿಕೆ ಭಕ್ತರ ವಲಯದಲ್ಲಿದೆ. ನೀರಿನ ಅಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ ಮುಂತಾದವುಗಳನ್ನು ಭಕ್ತರು ಹರಕೆಯಾಗಿ ಸಲ್ಲಿಸುತ್ತಾರೆ.
ಮನೋಭಿಲಾಷೆಗಳ ಈಡೇರಿಕೆಗೆ ಅಭಿಷೇಕದ ಹರಕೆ ಸಲ್ಲಿಸುವ ಸಂಪ್ರದಾಯ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದ್ದು, ದೇವಾಲಯದ ಮುಂಭಾಗದಲ್ಲಿಕೊಳವಿದೆ. ಇಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಗುಣವಾಗುತ್ತದೆ ಎಂದೂ ಭಕ್ತರು ನಂಬಿದ್ದಾರೆ. ಶಿವರಾತ್ರಿಯಂದು ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದೇವರಿಗೆ ಅಭಿಷೇಕ ಮಾಡಿ ಕೃತಾರ್ಥರಾಗುತ್ತಾರೆ.
5. ಧಾರೇಶ್ವರ
ಧಾರೇಶ್ವರ ಕ್ಷೇತ್ರವೂ ಗೋಕರ್ಣದ ಸಮೀಪದಲ್ಲೇ ಇದೆ. ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ ಕುಮಟಾದಿಂದ ಐದೇ ಕಿಲೋಮೀಟರ್ ದೂರದಲ್ಲಿ ಈ ದೇಗುಲವಿದ್ದು, ಇದು ಜಿಲ್ಲೆಯ ಅತಿ ಪುರಾತನ ದೇವಾಲಯ ಎಂದು ಹೆಸರಾಗಿದೆ. ದೇಗುಲದ ನವರಂಗಕ್ಕೆ ಮೂರು ಕಡೆಯಿಂದಲೂ ಪ್ರವೇಶಿಸಲು ಅನುಕೂಲವಾಗುವಂತೆ ಬಾಗಿಲುಗಳಿವೆ. ಒರಗಿಕೊಳ್ಳಲು ಕಕ್ಷಾಸನ. ಅದನ್ನು ಆಧರಿಸಿದ ಕಿರುಕಂಬಗಳೂ ನವರಂಗವನ್ನು ಅಲಂಕರಿಸಿದ ದೊಡ್ಡಕಂಬಗಳೂ ಸೊಗಸಾದ ಕೆತ್ತನೆಯಿಂದ ಕೂಡಿವೆ. ಬುಡದಲ್ಲಿ ಚಚ್ಚೌಕವಾಗಿರುವ ಕಂಬಗಳನ್ನು ತಿರುಗಣೆಯ ಯಂತ್ರದಲ್ಲಿ ದುಂಡಗೆ ವಿನ್ಯಾಸಗೊಳಿಸಿ ಬಗೆಬಗೆಯ ಚಿತ್ತಾರಗಳನ್ನು ಕೆತ್ತಿರುವ ರೀತಿ ಮನಸೆಳೆಯುತ್ತದೆ.
ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಇದೇ ಧಾರೇಶ್ವರನೆಂಬ ಹೆಸರು ಪಡೆದ ರೂಪ. ಒಳಗುಡಿಯಲ್ಲಿ ಶಿವನಿಗೆ ಅಭಿಮುಖವಾಗಿರುವ ನಂದಿಯಿದೆ. ಇಲ್ಲಿಯೇ ಹಲವು ಪ್ರಾಚೀನ ವಿಗ್ರಹಗಳಿರುವುದನ್ನು ಗಮನಿಸಬಹುದು. ಒಂದೆಡೆ ವೇಣುಗೋಪಾಲನ ವಿಗ್ರಹ. ಕೊಳಲು ನುಡಿಸುತ್ತಿರುವ ಕೃಷ್ಣನ ಸುತ್ತ ಗೋಪಿಕೆಯರೂ ದನಕರುಗಳೂ ಗೊಲ್ಲರೂ ಇದ್ದಾರೆ. ಇನ್ನೊಂದು ಪ್ರತಿಮೆ- ಶಂಖಚಕ್ರಗದಾಧಾರಿಯಾದ ವಿಷ್ಣುವಿನದು. ಪ್ರತ್ಯೇಕ ಗೂಡುಗಳಲ್ಲಿ ಗಣೇಶ, ಸರಸ್ವತಿಯರ ಪ್ರತಿಮೆಗಳಿವೆ. ಎಡತೊಡೆಯನ್ನೂ ಬಲಪಾದವನ್ನೂ ನೆಲಕ್ಕೂರಿ ಕುಳಿತ ಗಣಪತಿಯ ವಿಗ್ರಹ ಮೋಹಕವಾಗಿದೆ. ಗಣಪತಿ ತೊಟ್ಟ ಆಭರಣಗಳು, ಸೊಂಟಕ್ಕೆ ಸುತ್ತಿದ ಹಾವು, ಪಾದದೆಡೆಯ ಇಲಿ- ಎಲ್ಲವೂ ಸೊಗಸಾಗಿ ಚಿತ್ರಿತವಾಗಿವೆ. ಕೈಗಳಲ್ಲಿ ಜಪಮಾಲೆ, ಪುಸ್ತಕಗಳನ್ನು ಹಿಡಿದು ವರದಹಸ್ತೆಯಾಗಿರುವ ಸರಸ್ವತಿಯ ವಿಗ್ರಹವೂ ಸುಂದರವಾಗಿದೆ.ಆ ಕಾಲದ ಶಿಲ್ಪಗಳ ರೂಪರೇಖೆಗಳೇ ಮುಂದಿನ ಹೊಯ್ಸಳಶಿಲ್ಪಗಳಿಗೆ ಮಾದರಿಯಾಗಿದ್ದರೆ ಅಚ್ಚರಿಯಿಲ್ಲ.
ಧಾರೇಶ್ವರ ದೇಗುಲದ ಆವರಣದಲ್ಲಿ ಒಂದು ಕೊಳವೂ ಇದೆ. ಇಲ್ಲೇ ಬದಿಯಲ್ಲಿ ಹಲವು ಶಾಸನಗಳನ್ನೂ ವೀರಗಲ್ಲುಗಳನ್ನೂ ಇರಿಸಿದ್ದು, ಶಾಸನದಲ್ಲಿ ರಾಣಿಯೊಬ್ಬಳು ಗೋದಾನ ನೀಡುತ್ತಿರುವುದರ ಸಚಿತ್ರ ವಿವರಣೆಯಿದೆ. ಬರಹವಲ್ಲದೆ ನಾಲ್ಕು ಸ್ತರದ ಚಿತ್ರಣವಿರುವ ಈ ಶಾಸನದಲ್ಲಿ ಅನುಕ್ರಮವಾಗಿ ರಾಜರಾಣಿಯರು ದೇಗುಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ದೃಶ್ಯ, ರಾಜರಾಣಿಯರು ಪರಿವಾರದೊಡನಿರುವ ಚಿತ್ರ, ಯೋಧರ ಸಾಲು ಹಾಗೂ ರಾಣಿಯು ದನಕರುಗಳನ್ನು ಯಾಚಕರಿಗೆ ದಾನವಾಗಿ ನೀಡುತ್ತಿರುವುದರ ಚಿತ್ರನಿರೂಪಣೆ ಸೊಗಸಾಗಿ ಮೂಡಿಬಂದಿದೆ. ಇಂತಹ ವಿಶಿಷ್ಟ ಶಾಸನ ಬೇರೆಲ್ಲೂ ಕಂಡುಬರುವುದಿಲ್ಲವೆಂಬುದು ವಿಶೇಷ. ಇದಲ್ಲದೆ ಹಲವು ವೀರಗಲ್ಲುಗಳನ್ನೂ ಇಲ್ಲಿ ಕಾಣಬಹುದು.
ಇದನ್ನೂ ಓದಿ | Mahalaya 2022 | ಪಿತೃಕಾರ್ಯಗಳಿಗೆ ಹೆಸರಾದ ರಾಜ್ಯದ ತೀರ್ಥಕ್ಷೇತ್ರಗಳು ಯಾವವು ಗೊತ್ತೇ?