ಸೂರ್ಯ ಪ್ರತ್ಯಕ್ಷ ದೇವರು. ಸೌರ ಮಂಡಲದ ರಾಜ. ಉತ್ತಮ ಆರೋಗ್ಯ, ಐಶ್ವರ್ಯ, ಸಮೃದ್ಧಿಗಾಗಿ ಸೂರ್ಯನಿಗೆ ನಿತ್ಯವೂ ಪೂಜೆ, ಪ್ರಾರ್ಥನೆ ಮಾಡುತ್ತೇವೆ. ಸೂರ್ಯ ದೇವ ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಪಥ ಬದಲಾಯಿಸುತ್ತಾನೆ. ಈ ಸಂದರ್ಭದಲ್ಲಿ ವಿಶೇಷವಾಗಿ ಆತನ ಆರಾಧನೆ ನಡೆಯುತ್ತದೆ. ಈ ಹಬ್ಬವನ್ನು “ರಥ ಸಪ್ತಮಿʼʼ (Ratha Saptami 2023) ಎಂದು ಆಚರಿಸಲಾಗುತ್ತದೆ. ಈ ಬಾರಿ ಜನವರಿ 28ರ ಶನಿವಾರದಂದು ಸಪ್ತಮಿ ತಿಥಿ ಇರುವ ಕಾರಣ, ಈ ದಿನ ರಥ ಸಪ್ತಮಿ ಆಚರಣೆ ನಡೆಯಲಿದೆ.
ಸಪ್ತ ಎಂದರೆ ಏಳು. ಸಪ್ತ ಆರವಣಗಳು, ಬಣ್ಣಗಳು, ಲೋಕಗಳು, ಸಮುದ್ರಗಳು, ನದಿಗಳು, ಛಂದಸ್ಸು ಮಾತೃಕೆ ಯರು, ವಾರಗಳು, ಧಾತುಗಳು, ಋಷಿಗಳು, ಮನ್ವಂತರಗಳು, ಸ್ವರಗಳು, ಜ್ವಾಲೆಗಳು, ದೇಹದೊಳು ಚಕ್ರಗಳು, ಪರ್ವತಗಳು ಹೀಗೆ ಸಮಸ್ತ ಏಳು ಸಪ್ತಗಳಿಗೂ ಸೂರ್ಯನೇ ಮೂಲ ಕಾರಕ ಸ್ವಾಮಿ. ಹೀಗಾಗಿಯೇ ಸೂರ್ಯನ ಸಪ್ತಮಿ ತಿಥಿ ಅತ್ಯಂತ ಮುಖ್ಯವಾದದು, ಪೂಜಿತವಾದದು.
ಪೌರಾಣಿಕ ಉಲ್ಲೇಖಗಳ ಪ್ರಕಾರ ಕಶ್ಯಪ ಮಹರ್ಷಿಗಳು ಮತ್ತು ಅದಿತಿ ದೇವಿಯ ಪುತ್ರನಾಗಿ ಸೂರ್ಯದೇವನ ಜನ್ಮವಾದ ದಿನವನ್ನು ರಥ ಸಪ್ತಮಿ ಎಂದು ಕರೆಯುತ್ತಾರೆ. ಹಾಗಾಗಿ ರಥ ಸಪ್ತಮಿಯ ದಿನದಂದು ಸೂರ್ಯನನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆರಾಧನೆ ಮಾಡಿದರೆ ಸಪ್ತ ಜನ್ಮಗಳ ಪಾಪದಿಂದ ಮುಕ್ತಿ ಸಿಗುವುದಲ್ಲದೇ, ಆರೋಗ್ಯ ವೃದ್ಧಿಸುತ್ತದೆ, ಧನ ಸಂಪತ್ತು ನೆಲೆಸುತ್ತದೆ ಮತ್ತು ಸಂತಾನ ಅಪೇಕ್ಷಿಸುವುವರಿಗೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಸೂರ್ಯನ ಪಥ ಬದಲು
ಸೂರ್ಯ ಸಮಭಾಜಕ ರೇಖೆಯನ್ನು ದಾಟುವ ಕಾಲ (ಹಗಲು-ರಾತ್ರಿ ಸಮವಾಗಿರುವ ಕಾಲ) ಇದು. ಮಕರವೃತ್ತದಿಂದ ಉತ್ತರ ಗೋಲಾರ್ಧದೆಡೆಗೆ ಸೂರ್ಯನ ಪಯಣ ಆರಂಭದ ಹೊತ್ತು. ರಥ ಸಪ್ತಮಿಯಿಂದ ಸೂರ್ಯ ರಥಾರೂಢನಾಗಿ ಉತ್ತರ ದಿಕ್ಕಿನೆಡೆಗೆ ಚಲಿಸಲಾರಂಭಿಸುತ್ತಾನೆ. ಪ್ರತಿ ತಿಂಗಳು 30 ಡಿಗ್ರಿಗೆ ಒಂದು ರಾಶಿಯಂತೆ ಆತನ ಚಲನೆ ಇರಲಿದೆ. ಸೂರ್ಯನಿಗೆ ಒಂದು ರಾಶಿ ಚಕ್ರವನ್ನು ಪೂರ್ಣಗೊಳಿಸಲು 365 ದಿನಗಳ ಕಾಲಾವಧಿ ಬೇಕು. ಇದನ್ನೇ ನಾವು ಒಂದು ಸಂವತ್ಸರವೆಂದು ಪರಿಗಣಿಸುತ್ತೇವೆ. ರಥದ ಹನ್ನೆರಡು ಗಾಲಿಗಳು ಹನ್ನೆರಡು ರಾಶಿಗಳನ್ನು ಪ್ರತಿನಿಧಿಸುತ್ತವೆ. ಜಗದಾಧಾರನಾದ ಸೂರ್ಯ ಎಲ್ಲ ಜೀವಿಗಳಿಗೆ ಶಕ್ತಿ ಹಾಗೂ ಪ್ರಕಾಶವನ್ನು ಕರುಣಿಸುವ ಕೃತಜ್ಞತೆಯ ದ್ಯೋತಕವಾಗಿ ಆತನ ಸಂಚಾರ ಬದಲಾದ ಸಂದರ್ಭದಲ್ಲಿ ರಥ ಸಪ್ತಮಿ ಎಂದು ಆತನ ಆರಾಧನೆ ನಡೆಯಲಿದೆ.
ರಥ ಸಪ್ತಮಿಯ ಮುಹೂರ್ತ
ಈ ಹಿಂದೆ ಹೇಳಿದ ಹಾಗೆ ಈ ಬಾರಿ ಶನಿವಾರದಂದು ರಥ ಸಪ್ತಮಿ ಆಚರಿಸಲಾಗುತ್ತದೆ. ರಥ ಸಪ್ತಮಿಯನ್ನು ಸೂರ್ಯ ಸಪ್ತಮಿ, ಸೂರ್ಯ ಜಯಂತಿ, ಅಚಲಾ ಸಪ್ತಮಿ, ವಿಧಾನ ಸಪ್ತಮಿ ಭಾನು ಸಪ್ತಮಿ ಮತ್ತು ಆರೋಗ್ಯ ಸಪ್ತಮಿ ಎಂದು ಸಹ ಕರೆಯುತ್ತಾರೆ. ಈ ದಿನ ಸೂರ್ಯದೇವನ ಉಪಾಸನೆಯ ಜೊತೆಗೆ ಗಂಗಾ ಸ್ನಾನಕ್ಕೆ ಸಹ ವಿಶೇಷ ಮಹತ್ವವಿದೆ. ಸೂರ್ಯೋದಯದ ಸಮಯದಲ್ಲಿ (ಬೆಂಗಳೂರು 06:46) ಸ್ನಾನ ಮಾಡಿ ಅರ್ಘ್ಯ ನೀಡಬೇಕು.
ಆಚರಣೆಯ ಫಲಗಳೇನು?
ರಥ ಸಪ್ತಮಿಯಂದು ಸೂರ್ಯನು ವಜ್ರ ಖಚಿತವಾದ ಬಂಗಾರದ ರಥವನ್ನು ಏರಿ ಬರುತ್ತಾನೆ. ಹಾಗಾಗಿ ಈ ದಿನ ಸೂರ್ಯನ ಉಪಾಸನೆಯಿಂದ ವಿಶೇಷ ಪ್ರಯೋಜನಗಳಿವೆ. ಈ ದಿನದಂದು ಸರಿಯಾದ ವಿಧಾನದಿಂದ ರಥ ಸಪ್ತಮಿ ವ್ರತವನ್ನು ಕೈಗೊಂಡು, ಸೂರ್ಯನನ್ನು ಪೂಜಿಸಿ, ಅರ್ಘ್ಯ ನೀಡುವುದರಿಂದ ಅನೇಕ ತೊಂದರೆ ತಾಪತ್ರಯಗಳಿಂದ ಮುಕ್ತಿ ದೊರಕುತ್ತದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ, ಅಗತ್ಯವಿರುವ ವಸ್ತುಗಳನ್ನು ದಾನ ನೀಡುವುದರಿಂದ ಸಕಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಜಾತಕದಲ್ಲಿ ಸೂರ್ಯ ಗ್ರಹದ ಸ್ಥಾನ ಉತ್ತಮವಾಗಿಲ್ಲ ಎಂದಾದರೆ ಅಂಥವರು ರಥ ಸಪ್ತಮಿಯಂದು ಸೂರ್ಯನ ಆರಾಧನೆ ಮಾಡಿದರೆ ಅವರ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪದೇ ಪದೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರವವರು ಉತ್ತಮ ಆರೋಗ್ಯವನ್ನು ಪಡೆಯಲು ಮ್ತತು ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ರಥ ಸಪ್ತಮಿಯ ದಿನ ಸೂರ್ಯನನ್ನು ಪೂಜಿಸಬೇಕು.
ರಥ ಸಪ್ತಮಿಯಂದು ಉದಯಿಸುತ್ತಿರುವ ಸೂರ್ಯನನ್ನು ನೋಡಿ ಅರ್ಘ್ಯ ನೀಡುವುದರಿಂದ ಸಕಲ ಪಾಪಗಳು ನಾಶವಾಗಿ, ರೋಗ –ರುಜಿನಗಳಿಂದ ಮುಕ್ತಿ ಸಿಗುವುದಲ್ಲದೇ, ಸಕಲ ಇಷ್ಟಾರ್ಥಗಳು ಲಭಿಸುತ್ತವೆ.
ಸೂರ್ಯನ ಪೂಜೆಯಿಂದ ವ್ಯಾಧಿ ದೂರ
ಜ್ಯೋತಿಷ್ಯ ಶಾಸ್ತ್ರ ಮತ್ತು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಸೂರ್ಯನನ್ನು ಆರೋಗ್ಯದಾತನೆಂದು ಉಲ್ಲೇಖಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರವೂ ಸೂರ್ಯನನ್ನು ಆರಾಧಿಸುವುದರಿಂದ ಶರೀರವು ರೋಗ ಮುಕ್ತವಾಗುತ್ತದೆ. ಹಾಗಾಗಿ ರಥ ಸಪ್ತಮಿಯಂದು ಸೂರ್ಯೋದಕ್ಕೂ ಮೊದಲು ಸ್ನಾನಾದಿಗಳನ್ನು ಪೂರ್ಣಗೊಳಿಸಿ, ಉದಯಿಸುತ್ತಿರುವ ಸೂರ್ಯನ ಕಡೆಗೆ ಮುಖ ಮಾಡಿ ಕುಳಿತು ಅರ್ಘ್ಯ ನೀಡುವುದರಿಂದ ಚರ್ಮವ್ಯಾಧಿಗಳು ದೂರವಾಗುತ್ತವೆ.
ಸೂರ್ಯ ಅರ್ಘ್ಯ ಮಂತ್ರ :
ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನು ತಂದೆ ಮತ್ತು ಮಗನ ಬಾಂಧವ್ಯದ ಕಾರಕ ಗ್ರಹವಾಗಿದ್ದಾನೆ. ಹಾಗಾಗಿ ರಥ ಸಪ್ತಮಿಯಂದು ಸೂರ್ಯನನ್ನು ಆರಾಧಿಸಿದರೆ ತಂದೆ ಮತ್ತು ಮಗನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಅಷ್ಟೇ ಅಲ್ಲದೇ ಸೂರ್ಯನ ಮಿತ್ರ ರಾಶಿಗಳಾದ ಮೇಷ, ವೃಶ್ಚಿಕ ಮತ್ತು ಧನು ಲಗ್ನದಲ್ಲಿ ಜನಿಸಿದವರು ರಥ ಸಪ್ತಮಿ ವ್ರತವನ್ನು ಮಾಡುವುದರಿಂದ ಮನೋಕಾಮನೆಗಳು ಪೂರ್ಣವಾಗುವುದಲ್ಲದೇ, ವರ್ಷವಿಡೀ ನೆಮ್ಮದಿಯ ಜೀವನವನ್ನು ಕಾಣಬಹುದಾಗಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಇದನ್ನೂ ಓದಿ : Prerane | ನಿಮ್ಮ ಕಣ್ಣಿಂದ ನೀವೇ ನೋಡುತ್ತಿರುವಿರೋ?