ಶ್ರೀ ಶ್ರೀ ರವಿಶಂಕರ್
ಆರ್ಟ್ ಆಫ್ ಲಿವಿಂಗ್, ಬೆಂಗಳೂರು
ಗುರುಪೂರ್ಣಿಮೆ (Guru Purnima 2023) ಎಂದರೆ ನಾವೆಷ್ಟು ಜ್ಞಾನವನ್ನು ಪಡೆದುಕೊಂಡಿದ್ದೇವೆ ಮತ್ತು ಇನ್ನೆಷ್ಟು ಜ್ಞಾನವನ್ನು ಪಡೆಯಬೇಕಾಗಿದೆ ಎಂದು ಚಿಂತನೆ ನಡೆಸುವ ದಿನ. ನಮ್ಮ ಜೀವನದಲ್ಲಿ ಜ್ಞಾನದ ಪಾತ್ರ ಎಷ್ಟರಮಟ್ಟಿಗಿದೆಯೆಂದು ನೀವು ನಿರ್ಣಯಿಸಿಕೊಳ್ಳುವ ದಿನ. ನಮ್ಮ ಜೀವನದಲ್ಲಿ ಎಷ್ಟು ಜ್ಞಾನ ತುಂಬಿದೆ, ಜ್ಞಾನದಿಂದ ತುಂಬದೆಯಿರುವುದು ಎಷ್ಟು ? ನಮ್ಮ ಜೀವನದಲ್ಲಿ ಜ್ಞಾನವನ್ನು ಎಲ್ಲಿ ಅಂತರ್ಗತವಾಗಿಸಿಕೊಂಡಿದ್ದೇವೆ, ಎಲ್ಲಿ ಜ್ಞಾನವನ್ನು ಸ್ವೀಕರಿಸದೇ ಬಿಟ್ಟಿದ್ದೇವೆ? ಇವುಗಳ ಬಗ್ಗೆ ಚಿಂತನೆ ನಡೆಸುವ ಕಾಲ.
ಗತದಲ್ಲಿ ನಾವು ಸಾಧಿಸಿರುವ ಎಲ್ಲದ್ದರ ಬಗ್ಗೆಯೂ ಕೃತಜ್ಞರಾಗುವ ಮತ್ತು ಮುಂಬರುವ ವರ್ಷಗಳಲ್ಲಿ ನಾವು ಸಾಧಿಸಲು ಬಯಸಿರುವುದರ ಬಗ್ಗೆ ಮತ್ತೆ ಸಂಕಲ್ಪವನ್ನು ತೆಗೆದುಕೊಳ್ಳುವಂತಹ ದಿನವಿದು. ಪಡೆದಿರುವ ಎಲ್ಲಾ ಜ್ಞಾನಕ್ಕೂ ಹಾಗೂ ಆಶೀರ್ವಾದಗಳಿಗೂ ಕೃತಜ್ಞರಾಗುವ ದಿನವಿದು. ಇದನ್ನು ಅರಿತು, ನಿಮ್ಮ ಬಳಿ ಬಂದಿರುವ ಎಲ್ಲದ್ದಕ್ಕಾಗಿಯೂ ಕೃತಜ್ಞರಾಗಿ, ಈ ಜ್ಞಾನವನ್ನು ಸಂರಕ್ಷಿಸಿಕೊಂಡು ಬಂದಂತಹ ಗುರುಗಳ ಪರಂಪರೆಯ ಉತ್ಸವಾಚರಣೆಯೇ ಗುರುಪೂರ್ಣಿಮೆ. ಇಂತಹ ಪ್ರಾರ್ಥನಾಮಯ ಸ್ಥಿತಿಯಲ್ಲಿದ್ದಾಗ, ನೀವು ಏನನ್ನೇ ಬೇಡಿದರೂ, ಅದನ್ನು ನಿಮಗೆ ಕೊಡಲ್ಪಡುತ್ತದೆ ಎಂದು ಹೇಳಲಾಗಿದೆ. ನೀವು ಕೇಳಬಹುದಾದ ಅತೀ ಉನ್ನತವಾದದ್ದು, ಅತೀ ಉತ್ತಮವಾದ್ದು ಎಂದರೆ, ಜ್ಞಾನ ಮತ್ತು ಸ್ವಾತಂತ್ರ್ಯ.
ಒಂದು ವರ್ಷದಲ್ಲಿ ಬರುವ 12 ಅಥವಾ 13 ಹುಣ್ಣಿಮೆಗಳಲ್ಲಿ, ಆಷಾಢದ ಹುಣ್ಣಿಮೆಯನ್ನು ಗುರುಗಳ ಸ್ಮರಣೆಗಾಗಿ ಮುಡುಪಾಗಿಡಲಾಗಿದೆ. ಇಂದಿನ ದಿನ ಶಿಷ್ಯರು ತಮ್ಮ ಪೂರ್ಣತೆಯ ಬಗ್ಗೆ ಜಾಗೃತರಾಗುತ್ತಾರೆ ಮತ್ತು ಆ ಜಾಗೃತ ಸ್ಥಿತಿಯಲ್ಲಿ ಸಹಜವಾಗಿಯೇ ಕೃತಜ್ಞರಾಗುತ್ತಾರೆ. ಈ ಕೃತಜ್ಞತೆಯು ನೀನು, ನಾನು ಎಂಬ ದ್ವೈತದ ಕೃತಜ್ಞತೆಯಾಗಿರದೆ, ಅದ್ವೈತದ, ಎರಡೆಂಬುದಿಲ್ಲವೆಂಬಂತಹ ಸ್ಥಿತಿಯಿಂದ ಬರುವ ಕೃತಜ್ಞತೆಯಾಗಿರುತ್ತದೆ. ನದಿಯು ಒಂದೆಡೆಯಿಂದ ಮತ್ತೊಂದೆಡೆಗೆ ತೆರಳಿದ ರೀತಿಯಲ್ಲಾಗಿರದೆ, ಸಾಗರವು ತನ್ನೊಳಗೇ ಚಲಿಸಿದ ರೀತಿಯಾಗಿರುತ್ತದೆ.
ಗುರುಪೂರ್ಣಿನೆಯ ಕೃತಜ್ಞತೆಯು ಆ ಪೂರ್ಣತೆಯ ಸಂಕೇತವಾಗಿದೆ. ಗುರು ಪೂರ್ಣಿಮದಂದು ನಾವು, “ಈ ಜ್ಞಾನ ಪಡೆಯುವ ಮೊದಲು ನಾನು ಯಾವ ಸ್ಥಿತಿಯಲ್ಲಿದ್ದೆ? ಈಗ ಎಲ್ಲಿದ್ದೇನೆ?” ಎಂದು ಆತ್ಮಪರೀಕ್ಷಣವನ್ನು ಮಾಡಿಕೊಳ್ಳಬೇಕು. ಈ ಜ್ಞಾನವಿಲ್ಲದಿದ್ದ ಸಮಯಗಳಿಗೂ ಈಗಿರುವ ಸ್ಥಿತಿಗೂ ಹೋಲಿಸಿಕೊಂಡಾಗ, ಕೃತಜ್ಞತೆಯು ಸಹಜವಾಗಿಯೇ ಪುಟಿದೇಳುತ್ತದೆ. ನಿಮ್ಮ ಸೀಮಿತವಾದ ದೇಹ-ಮನಸ್ಸಿನ ಸಂಕೀರ್ಣದಲ್ಲಿ ಅನಂತತೆಯನ್ನು ಗ್ರಹಿಸಲು ಸಾಧ್ಯವಾಗಿರುವಂತಹ ಸೌಭಾಗ್ಯ ನಿಮಗೆ ದೊರೆತಿದೆಯೆಂದು ಅರಿಯಿರಿ. ದೇಹ ಮತ್ತು ಮನಸ್ಸು ಸೀಮಿತವಾದವು, ಆದರೆ ಆತ್ಮದ ಅಭಿವ್ಯಕ್ತಿ ಅನಂತವಾದ್ದು. ಸಾಧಕರ ಹೊಸ ವರ್ಷವು ಒಂದು ಗುರು ಪೂರ್ಣಿಮೆಯಂದು ಮತ್ತೊಂದು ಗುರುಪೂರ್ಣಿಮೆಯವರೆಗೆ. ಉಳಿದ ಜಗತ್ತಿಗೆ ಇದು ಅರ್ಧ ವರ್ಷವಾಗಿರುವಾಗ, ಆಧ್ಯಾತ್ಮಿಕ ಪಥದಲ್ಲಿರುವವರು ಒಂದು ವರ್ಷ ಸಂಪೂರ್ಣವಾದುದರ ಸಂಭ್ರಮವನ್ನು ಆಚರಿಸಿಕೊಳ್ಳುತ್ತಾರೆ.
ನಮ್ಮ ಜೀವನದಲ್ಲಿ ದೈವೀ ಪ್ರಕಟಣೆಯ ಒಂದು ವರ್ಷದ ಸಂಭ್ರಮಾಚರಣೆ. ಏಕತೆಯ ಭಾವವನ್ನು ಅನುಭವಿಸಿದ, ಜಗತ್ತನ್ನು ಗುರುಗಳ ದೃಷ್ಟಿಯಿಂದ ಕಂಡ ಒಂದು ವರ್ಷದ ಸಂಭ್ರಮಾಚರಣೆ. ನಮಗೆ ದಾರಿದೀಪವಾಗಿರುವ ಬೆಳಕಿನ ಸಂಭ್ರಮಾಚರಣೆ. ” ಇಂತಹ ಪರಿಸ್ಥಿತಿಯಲ್ಲಿ ಗುರುಗಳು ಏನು ಮಾಡುತ್ತಿದ್ದರೋ ಅದನ್ನೇ ನಾನೂ ಮಾಡುತ್ತೇನೆ” ಎನ್ನುವುದು. ಜ್ಞಾನಿಗಳು ಪ್ರತಿಕ್ರಯಿಸುವುದಿಲ್ಲ, ಪ್ರತಿಸ್ಪಂದಿಸುತ್ತಾರೆ. ಮತ್ತೆ ಮತ್ತೆ ಗುರುಗಳ ಸ್ಥಾನದಲ್ಲಿ ನಿಮ್ಮನ್ನು ಇರಿಸಿಕೊಂಡಾಗ, ಅನಂತ ಸಹನೆ, ಅಪಾರ ಬುದ್ಧಿವಂತಿಕೆ, ಪರಿಪೂರ್ಣ ಕರುಣೆ ಮತ್ತು ಅಕಳಂಕಿತವಾದ ಸಂತೋಷದ ಸ್ಥಿತಿಯಲ್ಲಿ ನಿಮ್ಮನ್ನು ಇರಿಸಿಕೊಂಡಾಗ ಬಹಳ ಕಲಿಯುತ್ತೀರಿ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಪೂರ್ಣಿಮವನ್ನು ” ವ್ಯಾಸ ಪೂರ್ಣಿಮ” ಎಂದೂ ಕರೆಯುತ್ತಾರೆ. ವ್ಯಾಸರು ಇಡೀ ಜ್ಞಾನದ ಅಪಾರ ಭಂಡಾರವನ್ನು 4 ವೇದಗಳಾಗಿ, ಉಪನಿಷತ್ತುಗಳಾಗಿ, ಉಪವೇದಗಳಾಗಿ, 27 ಸ್ಮೃತಿಗಳಾಗಿ, 27 ಉಪಸ್ಮೃತಿಗಳಾಗಿ ವಿಂಗಡಿಸಿದರು. ಇದು ಜೀವನದ ಪ್ರತಿಯೊಂದು ಭಾಗಕ್ಕೂ ವ್ಯಾಪಿಸಿದೆ. ಆಯುರ್ವೇದ, ವಾಸ್ತುಶಿಲ್ಪ, ರಸಾಯನಶಾಸ್ತ್ರ , ವೈದ್ಯಕೀಯವನ್ನೂ ಒಳಗೊಂಡಿದೆ.
ಇದನ್ನೂ ಓದಿ : Guru Purnima 2023 : ʻಗುರುʼ ಎಂದರೆ ʻಲಘುʼ ಅಲ್ಲ; ಗುರುವೇ ದೇವರು
ಮಾನವ ಜನಾಂಗದ ಒಳಿತಿಗಾಗಿ ಈ ಭೂಮಿಗೆ ಬಂದು ತಮ್ಮ ಕಾಣಿಕೆಯನ್ನು ನೀಡಿದವರನ್ನು ಇಂದಿನ ದಿನ ಸ್ಮರಿಸುತ್ತೇವೆ. ಅನೇಕ ಋಷಿಮುನಿಗಳು ಈ ಭೂಮಿಯ ಮೇಲೆ ನಡೆದರು, ಈಗಲೂ ಇದ್ದಾರೆ, ಭವಿಷ್ಯದಲ್ಲೂ ಬಂದು ಜೀವನವನ್ನು ಉತ್ಥಾಪಿಸುವಂತಹ, ಸೃಷ್ಟಿಯನ್ನು ಉತ್ಥಾಪಿಸುವಂತಹ ತಮ್ಮ ಜ್ಞಾನದ ಬೆಳಕನ್ನು ಎಲ್ಲರಿಗೂ ನೀಡಲಿದ್ದಾರೆ. ಗತದ, ವರ್ತಮಾನದ ಹಾಗೂ ಭವಿಷ್ಯತ್ತಿನ ಈ ಮಹಾನುಭಾವರಿಗೆ ನಮ್ಮ ಹೃತ್ಪೂರ್ವ ಕೃತಜ್ಞತೆಗಳು. ಜ್ಞಾನವಿಲ್ಲದೆ ನಾವು ನಿಜವಾದ ಪ್ರೀತಿಯನ್ನು ಅನುಭವಿಸಲು ಅಸಾಧ್ಯ, ಸುಮ್ಮನೆ ಅಸ್ತಿತ್ವದಲ್ಲಿರುತ್ತೇವಷ್ಟೆ. ಜೀವನವು ಜ್ಞಾನದಿಂದ ಪ್ರಾರಂಭವಾಗುತ್ತದೆ.