ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆಯು ವಿಜೃಂಭಣೆಯಿಂದ ನಡೆಯುತ್ತಿದ್ದು, ವಾಡಿಕೆಯಂತೆ ತಮಿಳುನಾಡಿನ ಶ್ರೀ ಕ್ಷೇತ್ರ ಶ್ರೀರಂಗಂನ ಶ್ರೀರಂಗನಾಥ ದೇಗುಲದ ಹಾಗೂ ಕುಂಭಕೋಣಂನ ಉಪಲಿಯಪ್ಪನ್ ದೇಗುಲದ ಪ್ರತಿನಿಧಿಗಳು, ಅಧಿಕಾರಿಗಳು ಮಂತ್ರಾಲಯಕ್ಕೆ ಆಗಮಿಸಿ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀಗಳಿಗೆ ಒಪ್ಪಿಸಿದ್ದಾರೆ.
ಶ್ರೀರಂಗಂ ದೇಗುಲವು ಮಹಾವಿಷ್ಣುವಿನ ಎಂಟು ಉದ್ಭವ ಕ್ಷೇತ್ರಗಳಲ್ಲಿ ಒಂದಾಗಿದ್ದು, ತಿರುವರಂಗ ತಿರುಪತಿ, ಪೆರಿಯಕೋಯಿಲ್, ಭೂಲೋಕದ ವೈಕುಂಠ ಎಂದೆಲ್ಲಾ ಈ ಕ್ಷೇತ್ರವನ್ನು ಕರೆಯಲಾಗುತ್ತದೆ. ಇಲ್ಲಿಯ ದೇವರ ಶೇಷ ವಸ್ತ್ರವನ್ನು ಪ್ರತಿ ವರ್ಷವೂ ಆರಾಧನೆಯ ಸಂದರ್ಭದಲ್ಲಿ ತಂದು ಗುರು ರಾಯರಿಗೆ ಒಪ್ಪಿಸುವುದು ವಾಡಿಕೆಯಾಗಿ ಬೆಳೆದು ಬಂದಿದೆ.
ಅಂದರಂತೆಯೇ ಶುಕ್ರವಾರ ಮಧ್ಯಾರಾಧನೆಯ ಸಂದರ್ಭದಲ್ಲಿ ಶ್ರೀರಂಗಂನಿಂದ ಆಗಮಿಸಿದ್ದ ದೇಗುಲದ ಅರ್ಚಕ ಸುಂದರ್ ಭಟ್ಟಾಚಾರ್ಯ ಶ್ರೀ ಸುಬುಧೇಂದ್ರ ತೀರ್ಥರಿಗೆ ವಸ್ತ್ರವನ್ನು ಸಮರ್ಪಿಸಿದರಲ್ಲದೆ, ಈ ಸಂದರ್ಭದಲ್ಲಿ ಶ್ರೀಗಳಿಗೆ ದೇಗುಲದ ಪ್ರಸಾದವನ್ನು ನೀಡಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಂಧ್ರದ ಧಾರ್ಮಿಕ ದತ್ತಿ ಇಲಾಖೆಯ ಸಲಹೆಗಾರ ಜಾಲ್ವಕಾಂತ್ ಶ್ರೀಕಾಂತ್, ಶ್ರೀ ಮಠದ ವಿದ್ವಾಂಸರಾದ ಡಾ. ಎನ್. ವಾದಿರಾಜಾಚಾರ್ಯ ಉಪಸ್ಥಿತರಿದ್ದರು.
ಕಳೆದ ಜುಲೈನಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಮಠದೊಂದಿಗೆ ಹಿಂದಿನಿಂದಲೂ ಸಂಬಂಧ ಹೊಂದಿರುವ ಈ ದೇಗುಲಕ್ಕೆ ಭೇಟಿ ನೀಡಿ ಶ್ರೀ ರಂಗನಾಥಸ್ವಾಮಿಯ ದರ್ಶನ ಪಡೆದಿದ್ದರು. ತಮಿಳುನಾಡು ಸರ್ಕಾರವು ನೆರೆ ರಾಜ್ಯದ ದೇಗುಲ ಮತ್ತು ಮಠಗಳಿಗೆ ವಸ್ತ್ರ ಸಮರ್ಪಿಸುವ ಈ ಸಂಪ್ರದಾಯವನ್ನು ಮುಂದುವರಿಸುವಂತೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಧ್ಯಾರಾಧನೆಯ ಸಂದರ್ಭದಲ್ಲಿ ತಿರುಪತಿಯ ತಿರುಮಲ ದೇಗುಲದಿಂದ ಬಂದ ಶ್ರೀವರಿ ಶೇಷ ವಸ್ತ್ರವನ್ನು ಶ್ರೀ ಗುರು ರಾಯರಿಗೆ ಸಮರ್ಪಿಸಲಾಗುತ್ತದೆ. ಈ ಕಾರ್ಯಕ್ರಮ ಶನಿವಾರ ನಡೆಯಲಿದೆ.
ಇದನ್ನೂ ಓದಿ| ರಾಯರ ಆರಾಧನೆ | ಪೂರ್ವಾರಾಧನೆಯತಿ ನಿಮಿತ್ತ ಬೃಂದಾವನಕ್ಕೆ ಪಂಚಾಮೃತಾಭಿಷೇಕ