Site icon Vistara News

Religious Harmony : ಧರ್ಮ ದಂಗಲ್‌ ಕಾಲದಲ್ಲಿ ಸೌಹಾರ್ದತೆ; ಅಯ್ಯಪ್ಪ ಭಕ್ತರಿಗೆ ಮಸೀದಿಯಲ್ಲಿ ಆಸರೆ

Ayyappa Bhaktaru Muslim

ಮಡಿಕೇರಿ: ಧರ್ಮದ ಹೆಸರಿನಲ್ಲಿ ಪರಸ್ಪರ ಕಿತ್ತಾಡುತ್ತ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿರುವ ಇಂತಹ ಸಮಯದಲ್ಲಿ ಕೊಡಗಿನ (Kodagu news) ಮಸೀದಿ ಆಡಳಿತ ಮಂಡಳಿಯೊಂದು (Mosque Management Committee) ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ (Ayyappa Devotees) ಮಸೀದಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕೊಟ್ಟು ಸಂಘರ್ಷದ ಸಮಯದಲ್ಲೂ ಸೌಹಾರ್ದತೆಯನ್ನು (Religious Harmony) ಮೆರೆದಿದೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ವೀರಾಜಪೇಟೆ ತಾಲೂಕಿನ ತಿತಿಮತಿ ಸಮೀಪದ ಎಡತ್ತರ ಗ್ರಾಮದ ಲಿವಾಉಲ್ ಹುದಾ ಜುಮಾ ಮಸೀದಿ ಹಾಗೂ ಮದರಸದಲ್ಲಿ ಮಸೀದಿಯ ಆಡಳಿತ ಆಡಳಿತ ಮಂಡಳಿಯವರು ಅಯ್ಯಪ್ಪ ಭಕ್ತರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ 5 ಮಂದಿ ಅಯ್ಯಪ್ಪ ವ್ರತಧಾರಿಗಳು ಮೋಟಾರ್ ಬೈಕ್‌ನಲ್ಲಿ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ರಾತ್ರಿ ವೀರಾಜಪೇಟೆ ತಾಲೂಕಿನ ತಿತಿಮತಿ ಸಮೀಪದ ಎಡತ್ತರ ಗ್ರಾಮಕ್ಕೆ ತಲುಪಿದ ಇವರುಗಳಿಗೆ ಮಳೆಯ ನಡುವೆ ಕಾಡುಗಳಿಂದ ಕೂಡಿದ, ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮುಂದಕ್ಕೆ ಸಾಗಿದಾಗ ಅಲ್ಲಿ ಲಿವಾಉಲ್ ಹುದಾ ಜುಮಾ ಮಸೀದಿ ಹಾಗೂ ಮದರಸಾ ಕಾಣಸಿಕ್ಕಿದೆ. ಅಲ್ಲಿಗೆ ತೆರಳಿದ ಇವರುಗಳು ತಂಗಲು ಅವಕಾಶ ಕೇಳಿದ್ದಾರೆ.

ಈ ಸಂದರ್ಭ ಮಸೀದಿಯ ಅಧ್ಯಕ್ಷ ಉಸ್ಮಾನ್, ಖತೀಬ್ ಖಮರುದ್ದೀನ್ ಅನ್ವಾರಿ ಹಾಗೂ ಮಸೀದಿಯ ಪದಾಧಿಕಾರಿಗಳು ವ್ರತಧಾರಿಗಳ ಕೋರಿಕೆಗೆ ಸ್ಪಂದಿಸಿ ಎಲ್ಲಾ ಸೌಕರ್ಯವನ್ನು ಒದಗಿಸಿ ಮಸೀದಿ ಬಳಿಯಲ್ಲೇ ಪೂಜೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ ರಾತ್ರಿ ತಂಗಲು ಮದರಸದಲ್ಲಿ ಅವಕಾಶ ಕಲ್ಪಿಸಿದ್ದಾರೆ.

ಬಳಿಕ ಅಲ್ಲಿಯೇ ತಂಗಿದ್ದ ವ್ರತಧಾರಿಗಳಾದ ಕಲಮೇಶ್ ಗೌರಿ, ಭೀಮಪ್ಪ ಸನಾದಿ, ಶಿವಾನಂದ ನವೇದಿ, ಗಂಗಾಧರ್ ಬಾಡಿಗೆ, ಸಿದ್ದರೋದ್ ಸನಾದಿ ಇವರುಗಳು ಬೆಳಿಗ್ಗೆ 6 ಗಂಟೆಗೆ ನಿತ್ಯದ ಪೂಜೆ ನೆರವೇರಿಸಿ ಮಸೀದಿಯವರಿಗೆ ಧನ್ಯವಾದ ಸಲ್ಲಿಸಿ ಶಬರಿಮಲೆಯತ್ತ ತೆರಳಿದ್ದಾರೆ.

ಎಡತ್ತರ ಮಸೀದಿಯಲ್ಲಿ ಯಾವುದೇ ಭಕ್ತರಿಗೆ ಜಾತಿ ಧರ್ಮದ ಭೇದವಿಲ್ಲದೆ ಇಲ್ಲಿ ಬೇಕಾದ ವ್ಯವಸ್ಥೆ ಕಲ್ಪಿಸಲು ನಾವು ಸಿದ್ಧರಿದ್ದೇವೆ. ರಾತ್ರಿ ವೇಳೆ ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಇದೆ. ಯಾತ್ರೆಗೆ ತೆರಳುವವರು ರಾತ್ರಿ ವೇಳೆ ಇಲ್ಲಿಯೇ ಉಳಿದುಕೊಂಡು ಬೆಳಿಗ್ಗೆ ಯಾತ್ರೆ ಕೈಗೊಳ್ಳಬಹುದು ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಇಲ್ಲಿ ಕಲ್ಪಿಸಿಕೊಡುತ್ತೇವೆ. ಎಲ್ಲಾ ದೇವರು ಒಂದೇ, ನಮಗಾಗಿ ಕೂಡಾ ನೀವು ಪ್ರಾರ್ಥಿಸಿ ಎಂದು ಎಡತ್ತರ ಜುಮಾ ಮಸೀದಿ ಅಧ್ಯಕ್ಷ ಉಸ್ಮಾನ್ ತಿಳಿಸಿದ್ದಾರೆ.

ಕೊಪ್ಪಳದಲ್ಲೂ ಸೌಹಾರ್ದತೆಗೆ ಸಾಕ್ಷಿಯಾದ ಶ್ಯಾಮೀದ್‌ ಅಲಿ ದರ್ಗಾ

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿ‌ನ ತಾವರಗೆರೆಯಲ್ಲಿರುವ ಶ್ಯಾಮೀದ್ ಅಲಿ ದರ್ಗಾ ಕೂಡಾ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಇಲ್ಲಿನ ಮುಸ್ಲಿಂ ಬಾಂಧವರು ಪ್ರಸಾದ ಸೇವೆ ನಡೆಸಿದ್ದಾರೆ.

ಹಜರತ್ ರಾಜಾಬಾಗ್ ಸವಾರ್ ನೌಜವಾನ್ ಕಮಿಟಿ ವತಿಯಿಂದ ಶುಕ್ರವಾರ ರಾತ್ರಿ ಉಪಹಾರ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Exit mobile version