ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸಾರಥ್ಯದಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸತ್ ಭವನ (New Parliament Building) ಉದ್ಘಾಟನೆ ಭಾನುವಾರ (ಮೇ 28) ಅದ್ಧೂರಿಯಾಗಿ ಮತ್ತು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ವಿಶೇಷವೆಂದರೆ ಸಂಸತ್ ಭವನದಲ್ಲಿ ನಡೆಯಲಿರುವ ಉದ್ಘಾಟನೆ ಸಂಬಂಧಿತ ಪೂಜಾ ಕೈಂಕರ್ಯಗಳನ್ನು (Pooja programmes) ನಡೆಸುವ ಜವಾಬ್ದಾರಿ ಹೊತ್ತಿರುವವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ (Shringeri) ಪುರೋಹಿತರು.
ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದಕ್ಕಾಗಿ ಶೃಂಗೇರಿಯ ಪುರೋಹಿತರ ತಂಡ ಆಗಲೇ ದಿಲ್ಲಿ ತಲುಪಿಸಿದ್ದು ಶನಿವಾರ ಸಂಜೆಯಿಂದಲೇ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ಭವನವನ್ನು ಉದ್ಘಾಟಿಸಲಿದ್ದು, ಅದಕ್ಕೆ ಸಂಬಂಧಿಸಿದ ಪೂಜೆಗಳನ್ನು ಶೃಂಗೇರಿಯ ವೇದಪಾರಂಗತ ಪುರೋಹಿತರಾದ ಸೀತಾರಾಮ ಶರ್ಮ, ಶ್ರೀರಾಮ ಶರ್ಮ ಹಾಗೂ ಲಕ್ಷ್ಮೀಶ ತಂತ್ರಿ ಅವರು ನೆರವೇರಿಸಲಿದ್ದಾರೆ.
ಶನಿವಾರದಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿವೆ. ಶನಿವಾರ ರಾತ್ರಿ ವಾಸ್ತು ಹೋಮ ನಡೆಯಲಿದ್ದು, ಭಾನುವಾರ ಬೆಳಗ್ಗೆ ಗಣಪತಿ ಹೋಮ ನಡೆಯಲಿದೆ.
ಅಡಿಗಲ್ಲು ಕಾರ್ಯಕ್ರಮದಲ್ಲೂ ಶೃಂಗೇರಿಯ ಪುರೋಹಿತರಿಂದಲೇ ಪೂಜೆ
2020ರಲ್ಲಿ ಸಂಸತ್ ಭವನಕ್ಕೆ ಅಡಿಗಲ್ಲು ಇಡುವ ಸಂದರ್ಭದಲ್ಲಿ ನಡೆದ ಪೂಜೆಯನ್ನೂ ಶೃಂಗೇರಿಯ ಪುರೋಹಿತರೇ ನಡೆಸಿದ್ದರು. ಆರು ಜನ ಪುರೋಹಿತರಿಂದ ಭೂಮಿ ಪೂಜೆ ನೆರವೇರಿಸಲಾಗಿತ್ತು.
2020ರ ಡಿಸೆಂಬರ್ 10ರಂದು ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ವೈದಿಕ ಪಂಡಿತರಾದ ವೇದಬ್ರಹ್ಮ ಡಾ. ಟಿ. ಶಿವಕುಮಾರ ಶರ್ಮಾ, ವೇದ ಬ್ರಹ್ಮ ಶ್ರೀ ಲಕ್ಷ್ಮೀನಾರಾಯಣ ಸೋಮಯಾಜಿ, ವೇದಬ್ರಹ್ಮ ಶ್ರೀ ಗಣೇಶ ಸೋಮಯಾಜಿ, ನಾಗರಾಜ ಅಡಿಗ, ಋಗ್ವೇದ ಪ್ರಾಧ್ಯಾಪಕರಾಗಿರುವ ರಾಘವೇಂದ್ರ ಭಟ್, ಋಷ್ಯಶೃಂಗ ಭಟ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಬಾರಿ ಏನೇನು ಕಾರ್ಯಕ್ರಮವಿರುತ್ತದೆ?
ನೂತನ ಸಂಸತ್ ಭವನದ ಉದ್ಘಾಟನೆ ಭಾನುವಾರ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲನೆ ಹಂತದಲ್ಲಿ, ಸಂಸತ್ತಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿಯ ಮೇಲಾವರಣದೊಳಗೆ ನಡೆಯುವ ಧಾರ್ಮಿಕ ಕ್ರಿಯೆಯೊಂದಿಗೆ ಸಮಾರಂಭವು ಪ್ರಾರಂಭವಾಗುತ್ತದೆ. ಈ ವೇಳೆ, ಪ್ರಧಾನಿ ಮೋದಿ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಸೇರಿದಂತೆ ಹಿರಿಯ ಸಚಿವರು ಭಾಗವಹಿಸಲಿದ್ದಾರೆ.
ಬಳಿಕ ಲೋಕಸಭೆ ಮತ್ತು ರಾಜ್ಯಸಭೆ ಆವರಣಗಳನ್ನು ಗಣ್ಯರು ಪರಿಶೀಲಿಸಿದ ಬಳಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಲೋಕಸಭೆ ಸ್ಪೀಕರ್ ಪೀಠದ ಮುಂದೆ ಪವಿತ್ರ ರಾಜದಂಡವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಪ್ರತಿಷ್ಠಾಪನೆಯನ್ನು ತಮಿಳುನಾಡಿನಿಂದ ಆಗಮಿಸಿದ ಪುರೋಹಿತರೇ ಮಾಡಲಿದ್ದು, ರಾಜದಂಡವನ್ನು ವಿನ್ಯಾಸ ಮಾಡಿದ ಮೂಲ ಅಕ್ಕಸಾಲಿಗ ಕೂಡ ಈ ವೇಳೆ ಹಾಜರು ಇರಲಿದ್ದಾರೆ. ಮೊದಲನೆ ಹಂತದ ಈ ಕಾರ್ಯಕ್ರಮವು ಬೆಳಗ್ಗೆ 9.30ಕ್ಕೆ ಮುಕ್ತಾಯವಾಗಲಿದೆ.
ಮಧ್ಯಾಹ್ನದ ವೇಳೆ ಎರಡನೇ ಹಂತದ ಕಾರ್ಯಕ್ರಮಗಳು ನಡೆಯಲಿವೆ. ಈ ವೇಳೆ ನಾಯಕರು ಮಾತನಾಡಲಿದ್ದಾರೆ. ಮೊದಲಿಗೆ ರಾಜ್ಯಸಭೆಯ ಡೆಪ್ಯುಟಿ ಚೇರ್ಮನ್ ಹರಿವಂಶ್ ಅವರು, ರಾಜ್ಯಸಭಾ ಚೇರ್ಮನ್ ಆಗಿರುವ ಉಪರಾಷ್ಟ್ರಪತಿಗಳ ಲಿಖಿತ ಸಂದೇಶವನ್ನು ಓದಲಿದ್ದಾರೆ. ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳುಹಿಸಿರುವ ಲಿಖಿತ ಸಂದೇಶವನ್ನೂ ಓದಲಾಗುತ್ತದೆ.
ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಲೋಕಸಭೆ ಪ್ರಧಾನ ಕಾರ್ಯದರ್ಶಿ ಅವರು ವಂದನಾರ್ಪಣೆ ಮಾಡುವುದರೊಂದಿಗೆ ಉದ್ಘಾಟನಾ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ.
ಇದನ್ನೂ ಓದಿ: New Parliament: ಹೊಸ ಸಂಸತ್ ಭವನದ ವಿಡಿಯೊ ಹಂಚಿಕೊಂಡು, ವಿಶೇಷ ಮನವಿ ಮಾಡಿದ ಪ್ರಧಾನಿ ಮೋದಿ